
ಗ್ರೀನ್‌ಲ್ಯಾಂಡ್ ವಶಕ್ಕೆ ಟ್ರಂಪ್ ಮಾಸ್ಟರ್ ಪ್ಲಾನ್! ಯುರೋಪ್ ರಾಷ್ಟ್ರಗಳ ಅಸಹಾಯಕತೆ ಬಯಲು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗ್ರೀನ್‌ಲ್ಯಾಂಡ್ ಸ್ವಾಧೀನದ ಬೆದರಿಕೆ ಜಾಗತಿಕ ಸಂಚಲನ ಮೂಡಿಸಿದೆ. ಯುರೋಪ್‌ನ 'ಆಪರೇಷನ್ ಆರ್ಕ್ಟಿಕ್ ಎಂಡ್ಯೂರೆನ್ಸ್' ವೈಫಲ್ಯ ಮತ್ತು ಫ್ರಾನ್ಸ್, ಜರ್ಮನಿ, ಪೋಲೆಂಡ್‌ನ ಹೊಸ ರಕ್ಷಣಾ ಸಿದ್ಧತೆಗಳ ಸಮಗ್ರ ವರದಿ ಇಲ್ಲಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಅನ್ನು 'ಖರೀದಿಸುವ' ಅಥವಾ ಮಿಲಿಟರಿ ಶಕ್ತಿಯ ಮೂಲಕ ವಶಪಡಿಸಿಕೊಳ್ಳುವ ಬೆದರಿಕೆ ಹಾಕುತ್ತಿರುವುದು ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಇತ್ತೀಚಿನ ಬಂಧನದ ಹಿನ್ನೆಲೆಯಲ್ಲಿ, ಟ್ರಂಪ್ ಅವರ ಈ ಎಚ್ಚರಿಕೆಯನ್ನು ಯುರೋಪ್ ಹಗುರವಾಗಿ ಪರಿಗಣಿಸುವಂತಿಲ್ಲ. ಆದರೆ, ಈ ಬೆದರಿಕೆಗೆ ಯುರೋಪ್ ನೀಡುತ್ತಿರುವ ಪ್ರತಿಕ್ರಿಯೆ ಮಾತ್ರ ಅತ್ಯಂತ ದುರ್ಬಲವಾಗಿದೆ.
'ಆಪರೇಷನ್ ಆರ್ಕ್ಟಿಕ್ ಎಂಡ್ಯೂರೆನ್ಸ್' ಹೆಸರಿಗಷ್ಟೇ?
ಗ್ರೀನ್‌ಲ್ಯಾಂಡ್ ಮೇಲೆ ತನ್ನ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಲು ಡೆನ್ಮಾರ್ಕ್ ನೇತೃತ್ವದಲ್ಲಿ 'ಆಪರೇಷನ್ ಆರ್ಕ್ಟಿಕ್ ಎಂಡ್ಯೂರೆನ್ಸ್' ಎಂಬ ಸಮರಾಭ್ಯಾಸ ನಡೆಯುತ್ತಿದೆ. ಆದರೆ ಇದರಲ್ಲಿ ಪಾಲ್ಗೊಂಡಿರುವ ರಾಷ್ಟ್ರಗಳ ಸೈನಿಕರ ಸಂಖ್ಯೆ ಹಾಸ್ಯಾಸ್ಪದವಾಗಿದೆ.
ಗ್ರೀನ್‌ಲ್ಯಾಂಡ್ ರಕ್ಷಣೆಗಾಗಿ ನಡೆಯುತ್ತಿರುವ ಮಿಲಿಟರಿ ಸಮರಾಭ್ಯಾಸದಲ್ಲಿ ಯುರೋಪಿಯನ್ ರಾಷ್ಟ್ರಗಳ ಭಾಗವಹಿಸುವಿಕೆ ಅತ್ಯಂತ ನಿರಾಸಾದಾಯಕವಾಗಿದೆ. ಬ್ರಿಟನ್ ಈ ಕಾರ್ಯಾಚರಣೆಗೆ ಕೇವಲ ಒಬ್ಬ ಮಿಲಿಟರಿ ಅಧಿಕಾರಿಯನ್ನು ಕಳುಹಿಸಿದ್ದರೆ, ನಾರ್ವೆ, ಫಿನ್ಲ್ಯಾಂಡ್ ಮತ್ತು ನೆದರ್ಲ್ಯಾಂಡ್ಸ್ ರಾಷ್ಟ್ರಗಳು ತಲಾ ಇಬ್ಬರು ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಕೇವಲ ಹೆಸರಿಗಷ್ಟೇ ಬೆಂಬಲ ಸೂಚಿಸಿವೆ.
ಪ್ರಬಲ ರಾಷ್ಟ್ರಗಳಾದ ಫ್ರಾನ್ಸ್ ಮತ್ತು ಜರ್ಮನಿ ಕೂಡ ಹೆಚ್ಚಿನ ಆಸಕ್ತಿ ತೋರದೆ ಕ್ರಮವಾಗಿ 15 ಮತ್ತು 13 ಸೈನಿಕರನ್ನು ಮಾತ್ರ ಕಳುಹಿಸಿಕೊಟ್ಟಿವೆ. ಇನ್ನುಳಿದ ಪ್ರಮುಖ ನ್ಯಾಟೋ ಸದಸ್ಯ ರಾಷ್ಟ್ರಗಳಾದ ಇಟಲಿ, ಪೋಲೆಂಡ್ ಮತ್ತು ಟರ್ಕಿ ಈ ಸಮರಾಭ್ಯಾಸಕ್ಕೆ ಸೈನಿಕರನ್ನು ಕಳುಹಿಸಲು ಸಂಪೂರ್ಣವಾಗಿ ನಿರಾಕರಿಸುವ ಮೂಲಕ ಗ್ರೀನ್‌ಲ್ಯಾಂಡ್ ರಕ್ಷಣೆಯ ವಿಚಾರದಲ್ಲಿ ಯುರೋಪ್‌ನ ಒಗ್ಗಟ್ಟಿನ ಕೊರತೆಯನ್ನು ಎತ್ತಿ ತೋರಿಸಿವೆ.
ಡೆನ್ಮಾರ್ಕ್ ಸದ್ಯ 150 ಸೈನಿಕರು ಮತ್ತು ಕೇವಲ 14 ಸದಸ್ಯರ 'ಸಿರಿಯಸ್ ಡಾಗ್ ಸ್ಲೆಡ್ ಪೆಟ್ರೋಲ್' ಎಂಬ ಸಣ್ಣ ತಂಡದ ಮೂಲಕ ಈ ಬೃಹತ್ ದ್ವೀಪವನ್ನು ರಕ್ಷಿಸುತ್ತಿದೆ.
ಶೀತಲ ಸಮರದ ನಂತರದ ಮಿಲಿಟರಿ ಶಕ್ತಿ ಕುಸಿತ
ಶೀತಲ ಸಮರದ ಅಂತ್ಯದ ನಂತರ, ಯುರೋಪಿಯನ್ ರಾಷ್ಟ್ರಗಳು ಇನ್ನು ಮುಂದೆ ದೊಡ್ಡ ಯುದ್ಧಗಳು ಬರುವುದಿಲ್ಲ ಎಂಬ ಭ್ರಮೆಯಲ್ಲಿ ತಮ್ಮ ಮಿಲಿಟರಿ ಬಜೆಟ್ ಅನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದ್ದವು. ಈ ಪ್ರಕ್ರಿಯೆಯಿಂದಾಗಿ ಯುರೋಪ್ ತನ್ನ ರಕ್ಷಣೆಗಾಗಿ ಸಂಪೂರ್ಣವಾಗಿ ಅಮೆರಿಕದ ಮೇಲೆ ಅವಲಂಬಿತವಾಯಿತು. 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದಾಗ ಮಾತ್ರ ಯುರೋಪ್‌ಗೆ ತನ್ನ ಅಸಹಾಯಕತೆಯ ಅರಿವಾಯಿತು.
ಯುರೋಪ್‌ನ ಹೊಸ ರಕ್ಷಣಾ ಸಿದ್ಧತೆ
ವಾಸ್ತವವನ್ನು ಅರಿತ ಯುರೋಪ್ ರಾಷ್ಟ್ರಗಳು ಈಗ ತಮ್ಮ ಮಿಲಿಟರಿಯನ್ನು ಆಧುನೀಕರಿಸಲು ಮುಂದಾಗಿವೆ.
• ಫ್ರಾನ್ಸ್: 2027ರ ವೇಳೆಗೆ ತನ್ನ ರಕ್ಷಣಾ ಬಜೆಟ್ ಅನ್ನು 64 ಬಿಲಿಯನ್ ಯುರೋಗಳಿಗೆ (ಜಿಡಿಪಿಯ ಶೇ. 3) ದ್ವಿಗುಣಗೊಳಿಸುತ್ತಿದೆ.
• ಪೋಲೆಂಡ್: 2026ರಲ್ಲಿ ತನ್ನ ರಕ್ಷಣಾ ವೆಚ್ಚವನ್ನು ಜಿಡಿಪಿಯ ಶೇ. 5ಕ್ಕೆ ಏರಿಸಲು ಮತ್ತು ಸೈನ್ಯದ ಸಂಖ್ಯೆಯನ್ನು 5 ಲಕ್ಷಕ್ಕೆ ಹೆಚ್ಚಿಸಲು ಯೋಜಿಸಿದೆ.
• ಜರ್ಮನಿ: 2026ರಿಂದ ಆಯ್ದ ಮಿಲಿಟರಿ ಕಡ್ಡಾಯ ಸೇವೆಯನ್ನು ಜಾರಿಗೊಳಿಸುತ್ತಿದೆ.
• ಫಿನ್ಲ್ಯಾಂಡ್: ಮೊದಲಿನಿಂದಲೂ ಸನ್ನದ್ಧವಾಗಿರುವ ಏಕೈಕ ರಾಷ್ಟ್ರವಾಗಿದ್ದು, 2.8 ಲಕ್ಷ ಸೈನಿಕರು ಮತ್ತು 9 ಲಕ್ಷ ಮೀಸಲು ಸೈನಿಕರನ್ನು ಹೊಂದಿದೆ.
ಮುಂದಿರುವ ಕಠಿಣ ಹಾದಿ
ಅಮೆರಿಕದ ಮಿಲಿಟರಿ ಸಾಮರ್ಥ್ಯಕ್ಕೆ ಪರ್ಯಾಯವಾಗಿ ಯುರೋಪ್ ಸಿದ್ಧವಾಗಬೇಕೆಂದರೆ ಕನಿಷ್ಠ ಒಂದು ಟ್ರಿಲಿಯನ್ ಡಾಲರ್ ವೆಚ್ಚ ಮಾಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಅಮೆರಿಕವು 2027ರ ಗಡುವು ನೀಡಿದ್ದು, ಅಲ್ಲಿಯವರೆಗೆ ಯುರೋಪ್ ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕಿದೆ.

