Trumps image on US 250th Independence Day gold coin: Legal battle begins
x

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರವಿರುವ ಚಿನ್ನದ ನಾಣ್ಯ

ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ಚಿನ್ನದ ನಾಣ್ಯದ ಮೇಲೆ ಟ್ರಂಪ್ ಚಿತ್ರ: ಕಾನೂನು ಸಮರ ಶುರು

ಟ್ರಂಪ್ ಅವರ ಈ ನಡೆ ಅಮೆರಿಕದ ಫೆಡರಲ್ ಕಾನೂನಿಗೆ ವಿರುದ್ಧವಾಗಿದೆ ಎಂದು ವಿರೋಧ ಪಕ್ಷಗಳು ಮತ್ತು ಟೀಕಾಕಾರರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.


Click the Play button to hear this message in audio format

ಅಮೆರಿಕ ಸಂಯುಕ್ತ ಸಂಸ್ಥಾನದ 250ನೇ ಸ್ವಾತಂತ್ರ್ಯೋತ್ಸವದ (ಸೆಮಿಕ್ವಿನ್‌ಸೆಂಟೆನಿಯಲ್) ಸ್ಮರಣಾರ್ಥ ಹೊರತರಲಾಗುತ್ತಿರುವ 24 ಕ್ಯಾರೆಟ್ ಚಿನ್ನದ ನಾಣ್ಯದ ಮೇಲೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರವನ್ನು ಮುದ್ರಿಸಲು ನಿರ್ಧರಿಸಲಾಗಿದೆ. ಅಮೆರಿಕದ ಇತಿಹಾಸದಲ್ಲೇ ಜೀವಂತವಾಗಿರುವ ಅಧ್ಯಕ್ಷರೊಬ್ಬರ ಭಾವಚಿತ್ರವನ್ನು ನಾಣ್ಯದ ಮೇಲೆ ಮುದ್ರಿಸುತ್ತಿರುವುದು ಇದು ಕೇವಲ ಎರಡನೇ ಬಾರಿಯಾಗಿದೆ. (ಇದಕ್ಕೂ ಮುನ್ನ 1926ರಲ್ಲಿ 150ನೇ ಸ್ವಾತಂತ್ರ್ಯೋತ್ಸವದ ವೇಳೆ 30ನೇ ಅಧ್ಯಕ್ಷ ಕಾಲ್ವಿನ್ ಕೂಲಿಡ್ಜ್ ಅವರ ಚಿತ್ರವನ್ನು ಜಾರ್ಜ್ ವಾಷಿಂಗ್ಟನ್ ಅವರೊಂದಿಗೆ ಮುದ್ರಿಸಲಾಗಿತ್ತು).

ಟ್ರಂಪ್ ಅವರ ಈ ನಡೆ ಅಮೆರಿಕದ ಫೆಡರಲ್ ಕಾನೂನಿಗೆ ವಿರುದ್ಧವಾಗಿದೆ ಎಂದು ವಿರೋಧ ಪಕ್ಷಗಳು ಮತ್ತು ಟೀಕಾಕಾರರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ನಾಣ್ಯದ ವಿನ್ಯಾಸ ಮತ್ತು ಸರ್ಕಾರದ ಸಮರ್ಥನೆ

ಮಾರ್ಚ್ 19ರಂದು ನಡೆದ ಯುಎಸ್ ಕಮಿಷನ್ ಆನ್ ಫೈನ್ ಆರ್ಟ್ಸ್ ಸಭೆಯಲ್ಲಿ, ಟ್ರಂಪ್ ಅವರು ಕೈಮುಷ್ಟಿ ಬಿಗಿದು 'ರೆಸೊಲ್ಯೂಟ್ ಡೆಸ್ಕ್' ಮೇಲೆ ಒರಗಿರುವ ಭಂಗಿಯಿರುವ ನಾಣ್ಯದ ವಿನ್ಯಾಸಕ್ಕೆ ಅಧಿಕೃತ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಎಸ್ ಖಜಾಂಚಿ ಬ್ರಾಂಡನ್ ಬೀಚ್, "ದೇಶದ 250ನೇ ಹುಟ್ಟುಹಬ್ಬದ ಸಂಭ್ರಮವನ್ನು ಸಾರುವ ಈ ನಾಣ್ಯದ ಮುಂಭಾಗದಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಅಧ್ಯಕ್ಷರ ಚಿತ್ರಕ್ಕಿಂತ ಬೇರೊಂದು ಸೂಕ್ತ ಆಯ್ಕೆಯಿಲ್ಲ" ಎಂದು ಸಮರ್ಥಿಸಿಕೊಂಡಿದ್ದಾರೆ. ಫೆಡರಲ್ ಕಾನೂನಿನ ಪ್ರಕಾರ ಚಲಾವಣೆಯಲ್ಲಿರುವ ಕರೆನ್ಸಿಗಳ ಮೇಲೆ ಜೀವಂತ ಅಧ್ಯಕ್ಷರ ಚಿತ್ರ ಮುದ್ರಿಸುವಂತಿಲ್ಲ. ಆದರೆ, ಇದು ಕೇವಲ ಸ್ಮರಣಾರ್ಥ ನಾಣ್ಯವಾಗಿದ್ದು, ದೈನಂದಿನ ಚಲಾವಣೆಗೆ ಬರುವುದಿಲ್ಲ, ಹೀಗಾಗಿ ಇದಕ್ಕೆ ಯಾವುದೇ ಕಾನೂನು ಅಡ್ಡಿಯಿಲ್ಲ ಎಂದು ಅವರು ವಾದಿಸಿದ್ದಾರೆ.

'ರಾಜರು ಮತ್ತು ಸರ್ವಾಧಿಕಾರಿಗಳು ಮಾತ್ರ ಹೀಗೆ ಮಾಡುತ್ತಾರೆ'

ಟ್ರಂಪ್ ಅವರ ಈ ನಡೆ ಅಮೆರಿಕದ ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಡೆಮಾಕ್ರಟಿಕ್ ಪಕ್ಷದ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸೆನೆಟರ್ ಜೆಫ್ ಮರ್ಕ್ಲೆ ಅವರು ದಿ ವಾಷಿಂಗ್ಟನ್ ಪೋಸ್ಟ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ, "ಪ್ರಜಾಪ್ರಭುತ್ವ ರಾಷ್ಟ್ರದ ನಾಯಕರು ನಾಣ್ಯಗಳ ಮೇಲೆ ತಮ್ಮ ಮುಖವನ್ನು ಮುದ್ರಿಸಿಕೊಳ್ಳುವುದಿಲ್ಲ, ಕೇವಲ ರಾಜರು ಮತ್ತು ಸರ್ವಾಧಿಕಾರಿಗಳು ಮಾತ್ರ ಇಂತಹ ಕೆಲಸ ಮಾಡುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ. ವಾಷಿಂಗ್ಟನ್ ನಗರದಾದ್ಯಂತ ತಮ್ಮ ಅಸ್ತಿತ್ವವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಟ್ರಂಪ್ ಅವರ ಸರಣಿ ಪ್ರಯತ್ನಗಳ ಮುಂದುವರಿದ ಭಾಗವೇ ಈ ನಾಣ್ಯ ಎಂದು ಟೀಕಾಕಾರರು ವಿಶ್ಲೇಷಿಸಿದ್ದಾರೆ.

ಟ್ರಂಪ್ ಅಸ್ತಿತ್ವದ ಇತರೆ ವಿವಾದಾತ್ಮಕ ಯೋಜನೆಗಳು

ಟ್ರಂಪ್ ಅವರು ಈಗಾಗಲೇ ಅಮೆರಿಕದ ಪ್ರಸಿದ್ಧ 'ಕೆನಡಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್'ಗೆ ತಮ್ಮ ಹೆಸರನ್ನು ಸೇರಿಸಿ 'ಟ್ರಂಪ್-ಕೆನಡಿ ಸೆಂಟರ್' ಎಂದು ಮರುನಾಮಕರಣ ಮಾಡಿದ್ದಾರೆ. ಇದಲ್ಲದೆ 'ಯುಎಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್' ಕಟ್ಟಡಕ್ಕೂ ತಮ್ಮ ಹೆಸರನ್ನು ಸೇರಿಸಿದ್ದಾರೆ. ಇಷ್ಟೇ ಅಲ್ಲದೆ, ವೈಟ್ ಹೌಸ್‌ನ ಈಸ್ಟ್ ವಿಂಗ್ ಅನ್ನು ನೆಲಸಮಗೊಳಿಸಿ ತಮ್ಮ ಬಹುಕಾಲದ ಕನಸಾದ ಭವ್ಯವಾದ 'ಬಾಲ್‌ರೂಮ್' ನಿರ್ಮಿಸಲು ಮತ್ತು ಹೊಸ ಸಂದರ್ಶಕರ ಸ್ಕ್ರೀನಿಂಗ್ ಕೇಂದ್ರವನ್ನು ಸ್ಥಾಪಿಸಲು ಸಹ ಯೋಜನೆ ರೂಪಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಯುಎಸ್ ಮಿಂಟ್ (ಟಂಕಸಾಲೆ) 250ನೇ ವಾರ್ಷಿಕೋತ್ಸವದ ಪ್ರಯುಕ್ತ "1776 ~ 2026" ದಿನಾಂಕವನ್ನು ಹೊಂದಿರುವ ಡೈಮ್, ಕ್ವಾರ್ಟರ್ ಮತ್ತು ಹಾಫ್-ಡಾಲರ್ ನಾಣ್ಯಗಳ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿಯೂ ಘೋಷಿಸಿದೆ.

Read More
Next Story