ಅಮೆರಿಕ ನಮ್ಮ ಮೇಲೆ ದಾಳಿ ಮಾಡಿದರೆ, ನಾವು ಭಾರತಕ್ಕೆ ದಾಳಿ ಮಾಡುತ್ತೇವೆ: ಪಾಕ್ ಮಾಜಿ ರಾಯಭಾರಿಯ ವಿವಾದಾತ್ಮಕ ಹೇಳಿಕೆ
x

'ಅಮೆರಿಕ ನಮ್ಮ ಮೇಲೆ ದಾಳಿ ಮಾಡಿದರೆ, ನಾವು ಭಾರತಕ್ಕೆ ದಾಳಿ ಮಾಡುತ್ತೇವೆ': ಪಾಕ್ ಮಾಜಿ ರಾಯಭಾರಿಯ ವಿವಾದಾತ್ಮಕ ಹೇಳಿಕೆ

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇಸ್ರೇಲ್-ಇರಾನ್ ನಡುವೆ ಭೀಕರ ಯುದ್ಧ ನಡೆಯುತ್ತಿರುವ ಹಾಗೂ ಪಾಕಿಸ್ತಾನ-ಅಫ್ಘಾನಿಸ್ತಾನ ನಡುವೆ ಸಂಘರ್ಷ ತಾರಕಕ್ಕೇರಿವ ಹಿನ್ನೆಲೆಯಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


Click the Play button to hear this message in audio format

ಭಾರತದಲ್ಲಿ ಪಾಕಿಸ್ತಾನದ ಹೈಕಮಿಷನರ್ (ರಾಯಭಾರಿ) ಆಗಿ ಸೇವೆ ಸಲ್ಲಿಸಿದ್ದ ಅಬ್ದುಲ್ ಬಾಸಿತ್, ಇತ್ತೀಚೆಗೆ ನೀಡಿದ ದೂರದರ್ಶನ ಸಂದರ್ಶನವೊಂದರಲ್ಲಿ ತೀವ್ರ ವಿವಾದಾತ್ಮಕ ಹಾಗೂ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. "ಒಂದು ವೇಳೆ ಭವಿಷ್ಯದಲ್ಲಿ ಅಮೆರಿಕವು ಪಾಕಿಸ್ತಾನದ ಮೇಲೆ ಮಿಲಿಟರಿ ದಾಳಿ ನಡೆಸಿದರೆ, ಯಾವುದೇ ಮರುಯೋಚನೆಯಿಲ್ಲದೆ ಪಾಕಿಸ್ತಾನವು ನವದೆಹಲಿ ಮತ್ತು ಮುಂಬೈ ಸೇರಿದಂತೆ ಭಾರತದ ನಗರಗಳ ಮೇಲೆ ಪ್ರತಿದಾಳಿ ನಡೆಸಲಿದೆ" ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇಸ್ರೇಲ್-ಇರಾನ್ ನಡುವೆ ಭೀಕರ ಯುದ್ಧ ನಡೆಯುತ್ತಿರುವ ಹಾಗೂ ಪಾಕಿಸ್ತಾನ-ಅಫ್ಘಾನಿಸ್ತಾನ ನಡುವೆ ಸಂಘರ್ಷ ತಾರಕಕ್ಕೇರಿರುವ ಈ ಸೂಕ್ಷ್ಮ ಸಂದರ್ಭದಲ್ಲಿ, ಮಾಜಿ ರಾಜತಾಂತ್ರಿಕಾಧಿಕಾರಿಯೊಬ್ಬರ ಇಂತಹ ಬೇಜವಾಬ್ದಾರಿಯುತ ಹೇಳಿಕೆಯು ತೀವ್ರ ಸಂಚಲನ ಮೂಡಿಸಿದೆ.

ಅಮೆರಿಕಕ್ಕೆ ತಲುಪದ ಕ್ಷಿಪಣಿಗಳು: ಭಾರತವೇ ಟಾರ್ಗೆಟ್

ತಮ್ಮ ವಿಚಿತ್ರ ತರ್ಕವನ್ನು ಸಮರ್ಥಿಸಿಕೊಂಡಿರುವ ಅಬ್ದುಲ್ ಬಾಸಿತ್, ಪಾಕಿಸ್ತಾನದ ಬಳಿಯಿರುವ ಕ್ಷಿಪಣಿಗಳು ಬಹುದೂರದಲ್ಲಿರುವ ಅಮೆರಿಕದಂತಹ ರಾಷ್ಟ್ರವನ್ನು ತಲುಪುವ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಅಂತಹ ಸನ್ನಿವೇಶ ಎದುರಾದಾಗ, ಭೌಗೋಳಿಕವಾಗಿ ಹತ್ತಿರದಲ್ಲಿರುವ 'ಭಾರತದ ಮೇಲೆ ದಾಳಿ ಮಾಡುವುದು' ಪಾಕಿಸ್ತಾನದ ಪಾಲಿಗೆ ಸಹಜ ಆಯ್ಕೆಯಾಗಲಿದೆ (ಡಿಫಾಲ್ಟ್ ಆಪ್ಷನ್) ಎಂದು ವಾದಿಸಿದ್ದಾರೆ. ಅದೊಂದು ಕೇವಲ ಕಾಲ್ಪನಿಕ (ಹೈಪೊಥೆಟಿಕಲ್) ಸನ್ನಿವೇಶ ಹಾಗೂ ಅಸಂಭವ ಎಂದು ಅವರು ಪದೇ-ಪದೇ ಹೇಳಿಕೊಂಡಿದ್ದರೂ, ಭಾರತದ ಪ್ರಮುಖ ನಗರಗಳನ್ನೇ ಗುರಿಯಾಗಿಸಿ ಪ್ರತಿದಾಳಿ ನಡೆಸುವ ಬಗ್ಗೆ ಬಹಿರಂಗವಾಗಿ ಮಾತನಾಡಿರುವುದು ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೇಳಿಕೆ ಬಗ್ಗೆ ಭಾರತ ಸರ್ಕಾರ ಈವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಯಾರಿವರು ಅಬ್ದುಲ್ ಬಾಸಿತ್? ಭಾರತ ವಿರೋಧಿ ನಿಲುವುಗಳ ಸರದಾರ

ಅಬ್ದುಲ್ ಬಾಸಿತ್ 2014 ರಿಂದ 2017ರ ಅವಧಿಯಲ್ಲಿ ಭಾರತದಲ್ಲಿ ಪಾಕಿಸ್ತಾನದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ಅಧಿಕಾರಾವಧಿಯ ಆರಂಭದಲ್ಲೇ (ಆಗಸ್ಟ್ 2014), ಭಾರತ ಸರ್ಕಾರದ ಎಚ್ಚರಿಕೆಯನ್ನು ಲೆಕ್ಕಿಸದೆ ಅವರು ಕಾಶ್ಮೀರದ ಪ್ರತ್ಯೇಕತಾವಾದಿ 'ಹುರಿಯತ್ ಕಾನ್ಫರೆನ್ಸ್' ನಾಯಕರನ್ನು ಭೇಟಿಯಾಗಿದ್ದರು. ಇದರಿಂದ ಕೆರಳಿದ ಭಾರತವು ಉಭಯ ದೇಶಗಳ ನಡುವಿನ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯನ್ನು ರದ್ದುಗೊಳಿಸಿತ್ತು. 2016ರ ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ಬಾಂಧವ್ಯ ಮತ್ತಷ್ಟು ಹದಗೆಟ್ಟಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೊಡನೆ ರಾಜಿ ಮಾಡಿಕೊಳ್ಳಲು ತಾನು ಸಿದ್ಧನಿರಲಿಲ್ಲ ಎಂದು ಅವರು ತಮ್ಮ 2021ರ ಆತ್ಮಚರಿತ್ರೆ 'ಹೋಸ್ಟಿಲಿಟಿ' (ಶತ್ರುತ್ವ) ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಜರ್ಮನಿ, ಮಾಸ್ಕೋ, ನ್ಯೂಯಾರ್ಕ್ ಮತ್ತು ಲಂಡನ್‌ನಲ್ಲಿಯೂ ರಾಜತಾಂತ್ರಿಕ ಹುದ್ದೆಗಳನ್ನು ನಿಭಾಯಿಸಿದ್ದರು.

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧದ ನಡುವೆ ಹೊಸ ಪ್ರಚೋದನೆ

ಪ್ರಸ್ತುತ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನವು ಭಾರಿ ಸಂಘರ್ಷದಲ್ಲಿ ತೊಡಗಿದ್ದು, ಈದ್ ಅಲ್-ಫಿತ್ರ್ ಹಬ್ಬದ ಪ್ರಯುಕ್ತ ಮಾರ್ಚ್ 18 ರಿಂದ ಕೇವಲ ಐದು ದಿನಗಳ ಕದನ ವಿರಾಮ ಘೋಷಿಸಲಾಗಿದೆ. ಮಾರ್ಚ್ 16-17 ರಂದು ಪಾಕಿಸ್ತಾನಿ ಸೇನೆಯು ಕಾಬೂಲ್ ಮತ್ತು ನಂಗರ್‌ಹಾರ್ ಪ್ರಾಂತ್ಯಗಳಲ್ಲಿ ಭೀಕರ ವೈಮಾನಿಕ ದಾಳಿ ನಡೆಸಿತ್ತು. ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿದ್ದೇವೆ ಎಂದು ಇಸ್ಲಾಮಾಬಾದ್ ಹೇಳಿಕೊಂಡರೆ, ತಾಲಿಬಾನ್ ಸರ್ಕಾರವು ಈ ದಾಳಿಯಲ್ಲಿ 'ಮಾದಕ ವ್ಯಸನ ಮುಕ್ತ ಕೇಂದ್ರ' ನಾಶವಾಗಿದ್ದು, 400ಕ್ಕೂ ಹೆಚ್ಚು ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದೆ. ಫೆಬ್ರವರಿಯಲ್ಲಿ ಪಾಕ್ ಗಡಿ ನೆಲೆಗಳ ಮೇಲೆ ಅಫ್ಘಾನ್ ಪಡೆಗಳ ದಾಳಿಯ ನಂತರ ಪಾಕಿಸ್ತಾನದ ರಕ್ಷಣಾ ಸಚಿವರು ಇದನ್ನು 'ಬಹಿರಂಗ ಯುದ್ಧ' ಎಂದು ಘೋಷಿಸಿದ್ದರು. ಇಂತಹ ಪ್ರಕ್ಷುಬ್ಧ ವಾತಾವರಣದ ನಡುವೆಯೇ, ಅಬ್ದುಲ್ ಬಾಸಿತ್ ಅವರ ಈ ಹೇಳಿಕೆಯು ದಕ್ಷಿಣ ಏಷ್ಯಾದ ಅಸ್ಥಿರತೆಗೆ ಮತ್ತಷ್ಟು ಇಂಧನ ಸುರಿದಂತಾಗಿದೆ.

Read More
Next Story