
ಯುವಕನನ್ನು ಮರಕ್ಕೆ ಕಟ್ಟಿ ದಹನ- ಬಾಂಗ್ಲಾದಲ್ಲಿ ಏನಾಗ್ತಿದೆ? ಮತ್ತೆ ಹಿಂದೂಗಳೇ ಟಾರ್ಗೆಟ್?
ಬಾಂಗ್ಲಾದಲ್ಲಿ ಪ್ರತಿಭಟನೆ ಭುಗಿಲೇಳುತ್ತಿದ್ದಂತೆ ಪತ್ರಿಕಾ ಕಚೇರಿಗಳು, ಕಟ್ಟಟಗಳಿಗೆ, ವಾಹನಗಳಿಗೆ ಬೆಂಕಿ ಹಚ್ಚಿ ದುರ್ಷರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂಸಾಚಾರದ ಕಾವು ಕ್ಷಣ ಕ್ಷಣಕ್ಕೂ ವಿಕೋಪಕ್ಕೆ ತಿರುತ್ತಿದೆ. ಮತ್ತೆ ಬಾಂಗ್ಲಾದ ಬೀದಿ ಬೀದಿಯಲ್ಲಿ ಜನ ಉದ್ರಿಕ್ತರಾಗಿದ್ದು, ಹಿಂಸಾತ್ಮಕ ಕೃತ್ಯಗಳು ಹೆಚ್ಚಾಗಿದ್ದು, ಪೊಲೀಸರಿಗೆ ಉದ್ರಿಕ್ತರನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ಇನ್ನೇನು ಮೂರು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸುತ್ತಿರುವ ಬಾಂಗ್ಲಾದೇಶದಲ್ಲಿ ಈಗ ಮತ್ತೆ ಭುಗಿಲೆದ್ದಿರುವ ಹಿಂಸಾಚಾರ ಹಂಗಾಮಿ ಸರ್ಕಾರಕ್ಕೆ ದೊಡ್ಡ ಸಂಕಷ್ಟವನ್ನು ತಂದಿದೆ.
ಹಿಂಸಾಚಾರಕ್ಕೆ ಕಾರಣ ಏನು?
ಹಾಗಿದ್ದರೆ ಕೆಲವು ದಿನಗಳಿಂದ ತಣ್ಣಗಿದ್ದ ಬಾಂಗ್ಲಾ ಒಮ್ಮಿಂದೊಮ್ಮೆಗೆ ಧಗ ಧಗಿಸಲು ಕಾರಣ ಏನು? ಇದಕ್ಕೆ ಮೂಲ ಕಾರಣ ವಿದ್ಯಾರ್ಥಿ ನಾಯಕನ ಹತ್ಯೆ. ಕಳೆದ ವಾರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹದಿಯ ಮೇಲೆ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ತಲೆಗೆ ಗುಂಡೇಟು ಬಿದ್ದ ಆತನನ್ನು ಸಿಂಗಾಪುರಕ್ಕೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ನಿನ್ನೆ ಕೊನೆಯುಸಿರೆಳೆದಿದ್ದಾನೆ. ಇದರ ಬೆನ್ನಲ್ಲೇ ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಉಸ್ಮಾನ್ ಹದಿ ಯಾರು?
ಜುಲೈ 2024 ರ ದಂಗೆಯ ನಂತರ ಸ್ಥಾಪಿಸಲಾದ ಬಾಂಗ್ಲಾದೇಶದ ಸಾಮಾಜಿಕ-ಸಾಂಸ್ಕೃತಿಕ ವೇದಿಕೆಯಾದ ಇಂಕ್ವಿಲಾಬ್ ಮಂಚ ವೇದಿಕೆಯ ವಕ್ತಾರನಾಗಿದ್ದವನು ಈ ಉಸ್ಮಾನ್ ಹದಿ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿಯೂ 32 ವರ್ಷದ ಈತ ಅಭ್ಯರ್ಥಿಯಾಗಿದ್ದ. ಆತ ಢಾಕಾದಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸುತ್ತಿದ್ದಾಗ, ಕಳೆದ ಶುಕ್ರವಾರ ಮುಸುಕುಧಾರಿ ದಾಳಿಕೋರರು ಆತನ ಮೇಲೆ ಗುಂಡು ಹಾರಿಸಿದರು. ಸುದ್ದಿ ಸಂಸ್ಥೆ ANI ಪ್ರಕಾರ, ಹಾದಿ ಬಿಜೋಯ್‌ನಗರದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಚಲಿಸುವ ಮೋಟಾರ್‌ಸೈಕಲ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಹದಿ ಮೇಲೆ ದಾಳಿ ನಡೆಸಿದ್ದ.
2024 ರ ಬಾಂಗ್ಲಾದೇಶದ ದಂಗೆಯಲ್ಲಿ ಹದಿ ಪ್ರಮುಖ ಪಾತ್ರವಹಿಸಿದ್ದ. ಇದು ಆಗಿನ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಲು ಕಾರಣವಾಯಿತು. ನಂತರ ಅವರು ಭಾರತಕ್ಕೆ ಪಲಾಯನ ಮಾಡಿದರು. ಈತ ಭಾರತದ ವಿರುದ್ಧ ನಿರಂತರವಾಗಿ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದ.
ಬಾಂಗ್ಲಾದಲ್ಲಿ ಹಿಂದೂಗಳೇ ಟಾರ್ಗೆಟ್
ಉಸ್ಮಾನ್ ಹದಿ ಸಾವಿನ ಸುದ್ದಿ ಕಿಚ್ಚಿನಂತೆ ಹಬ್ಬಿದೆ. ದೇಶದ ಮೂಲೆ ಮೂಲೆಗಳಲ್ಲಿ ಪ್ರತಿಭಟನಾಕರರು ಬೀದಿಗಿಳಿದು ವಿಧ್ವಂಸಕ ಕೃತ್ಯ ನಡೆಸುತ್ತಿದ್ದಾರೆ. ಇನ್ನು ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದ ಕೂಡಲೇ ಅದಕ್ಕೆ ಮೊದಲು ಬಲಿಯಾಗುವವರು ಹಿಂದೂಗಳು ಮತ್ತು ಹಿಂದೂ ದೇಗುಲಗಳು. ಪ್ರತಿಭಟನೆ ಭುಗಿಲೇಳುತ್ತಿದ್ದಂತೆ ಪತ್ರಿಕಾ ಕಚೇರಿಗಳು, ಕಟ್ಟಟಗಳಿಗೆ, ವಾಹನಗಳಿಗೆ ಬೆಂಕಿ ಹಚ್ಚಿ ದುರ್ಷರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.
ಮೈಮೆನ್ ಸಿಂಗ್ ನ ಭಲುಕಾದಲ್ಲಿ ಹಿಂದೂ ಯುವಕನನ್ನು ಥಳಿಸಿ ಕೊಂದಿರುವ ಘಟನೆ ವರದಿಯಾಗಿದ್ದಾರೆ. ಭಾಲುಕಾ ಉಪಜಿಲ್ಲೆಯ ಸ್ಕ್ವೇರ್ ಮಾಸ್ಟರ್ ಬಾರಿ ದುಬಾಲಿಯಾ ಪಾರಾ ಪ್ರದೇಶದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಹೊಡೆದ ನಂತರ, ದಾಳಿಕೋರರು ಯುವಕನ ದೇಹವನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದರು ಎಂದು ಭಾಲುಕಾ ಪೊಲೀಸ್ ಠಾಣೆಯ ಕರ್ತವ್ಯ ಅಧಿಕಾರಿ ರಿಪ್ಪನ್ ಮಿಯಾ ಬಿಬಿಸಿ ಬಾಂಗ್ಲಾಗೆ ತಿಳಿಸಿದ್ದಾರೆ. ಮೃತರನ್ನು ದೀಪು ಚಂದ್ರ ದಾಸ್ ಎಂದು ಪೊಲೀಸರು ಗುರುತಿಸಿದ್ದಾರೆ. ಅವರು ಸ್ಥಳೀಯ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಈ ಪ್ರದೇಶದಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೋಥೋಮ್ ಅಲೋ ಮತ್ತು ಡೈಲಿ ಸ್ಟಾರ್‌ನಂತಹ ಬಾಂಗ್ಲಾದೇಶದ ಪ್ರಮುಖ ಪತ್ರಿಕೆಗಳ ಕಚೇರಿಗಳನ್ನು ಸಿಬ್ಬಂದಿ ಒಳಗೆ ಇರುವಾಗಲೇ ಕೋಪಗೊಂಡ ಜನಸಮೂಹ ಸುಟ್ಟುಹಾಕಿತು. ಡೈಲಿ ಸ್ಟಾರ್ ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯನ್ನು ಬೆಳಗಿನ ಜಾವ 1:40 ಕ್ಕೆ (ಗುರುವಾರ 1940 GMT) ನಿಯಂತ್ರಣಕ್ಕೆ ತರಲಾಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳನ್ನು ಉಲ್ಲೇಖಿಸಿ AFP ವರದಿ ಮಾಡಿದೆ.
ಮುಜಿಬುರ್ ರೆಹಮಾನ್ ಮನೆ ಮತ್ತೆ ಧ್ವಂಸ
ದೇಶದ ಮೊದಲ ಅಧ್ಯಕ್ಷ ಶೇಖ್ ಮುಜಿಬುರ್ ರೆಹಮಾನ್ ಅವರ ಮನೆ, ಶೇಖ್ ಹಸೀನಾ ಅವರ ತಂದೆ, ಕಳೆದ ವರ್ಷ ಫೆಬ್ರವರಿ ಮತ್ತು ಆಗಸ್ಟ್‌ನಲ್ಲಿ ಎರಡು ಬಾರಿ ದಾಳಿ ನಡೆಸಲಾಗಿತ್ತು. ಇದೀಗ ಮತ್ತೆ ಅವರ ಮನೆಯನ್ನು ಧ್ವಂಸಗೊಳಿಸಿ ಮತ್ತೊಮ್ಮೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳು
ಹದಿ ಸಾವಿನ ನಂತರ, ಪ್ರತಿಭಟನಾಕಾರರ ಗುಂಪೊಂದು ಚಟ್ಟೋಗ್ರಾಮ್‌ನಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್ ಹೊರಗೆ ಕಲ್ಲು ತೂರಾಟ ನಡೆಸಿ ಧರಣಿ ನಡೆಸಿದೆ ಎಂದು ಬಾಂಗ್ಲಾದೇಶ ಮಾಧ್ಯಮ ಸಂಸ್ಥೆ ಬಿಡಿ ನ್ಯೂಸ್ ವರದಿ ಮಾಡಿದೆ.
ಯೂನಸ್ ಏನಂದ್ರು?
ಇನ್ನು ಈ ಬಗ್ಗೆ ಬಾಂಗ್ಲಾದೇಶ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ದೇಶವನ್ನುದ್ಧೇಶಿಸಿ ಮಾತನಾಡಿದ್ದು, ಉಸ್ಮಾನ್ ಹದಿ ಹಂತಕರನ್ನು ಹಿಡಿಯಲು ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. “ಈ ಕ್ರೂರ ಹತ್ಯೆಯಲ್ಲಿ ಭಾಗಿಯಾಗಿರುವವರ ಮೇಲೆ ಯಾವುದೇ ದಯೆ ತೋರಿಸಲಾಗುವುದಿಲ್ಲ. ನಾನು ಎಲ್ಲಾ ನಾಗರಿಕರಿಗೆ ಪ್ರಾಮಾಣಿಕವಾಗಿ ಕರೆ ನೀಡುತ್ತೇನೆ. ನಿಮ್ಮ ತಾಳ್ಮೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳಿ" ಎಂದು ಅವರು ಹೇಳಿದರು.
ಈ ಹಿಂದೆಯೂ ನಡೆದಿತ್ತು ಹಿಂದೂ ದೇಗುಲಗಳ ಧ್ವಂಸ
ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡುತ್ತಿದ್ದಂತೆ ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರಗಳು ಅದೆಷ್ಟೋ ಹಿಂದೂಗಳನ್ನು ಮತ್ತು ದೇಗುಲಗಳನ್ನು ಬಲಿ ತೆಗೆದುಕೊಂಡಿತ್ತು.ದುರ್ಗಾ ಪೆಂಡಾಲ್‌ಗೆ ನುಗ್ಗಿದ್ದ ದುಷ್ಕರ್ಮಿಗಳು ಮೂರ್ತಿಗಳನ್ನು ಧ್ವಂಸಗೊಳಿಸಿದ್ದರು. ಅಲ್ಲದೇ ಸಿಕ್ಕ ಸಿಕ್ಕ ಹಿಂದೂಗಳ ನರಮೇಧ ನಡೆಸಿದ್ದರು. ಅಷ್ಟೇ ಅಲ್ಲದೇ ಬಾಂಗ್ಲಾದೇಶದಲ್ಲಿ ಹಿಂದೂ ಧಾರ್ಮಿಕ ಮುಖಂಡ ಹಾಗೂ ಇಸ್ಕಾನ್ ಸದಸ್ಯ ಚಿನ್ಮಯ ಕೃಷ್ಣದಾಸ್ ಪ್ರಭು ಅವರ ಬಂಧನವೂ ನಡೆದಿತ್ತು.

