ಶೇಖ್‌ ಹಸೀನಾ ಪದಚ್ಯುತಿಗೆ ಕಾರಣನಾಗಿದ್ಧ ವಿದ್ಯಾರ್ಥಿ ನಾಯಕನ ಹತ್ಯೆ; ಬಾಂಗ್ಲಾ ಮತ್ತೆ ಧಗ ಧಗ!
x
ಬಾಂಗ್ಲಾದೇಶ ಹಿಂಸಾಚಾರ

ಶೇಖ್‌ ಹಸೀನಾ ಪದಚ್ಯುತಿಗೆ ಕಾರಣನಾಗಿದ್ಧ ವಿದ್ಯಾರ್ಥಿ ನಾಯಕನ ಹತ್ಯೆ; ಬಾಂಗ್ಲಾ ಮತ್ತೆ ಧಗ ಧಗ!

ಶರೀಫ್ ಓಸ್ಮಾನ್ ಹದಿ ವಿದ್ಯಾರ್ಥಿ ಪ್ರತಿಭಟನೆ ನಡೆಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ. ಅದೇ ಬಂಡಾಯವು ಕೊನೆಗೆ ಅಂದಿನ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಕ್ಕೂ ಕಾರಣವಾಯಿತು.


Click the Play button to hear this message in audio format

ಕೆಲವು ತಿಂಗಳಿನಿಂದ ಸಹಜ ಸ್ಥಿತಿಗೆ ಮರಳುತ್ತಿದ್ದ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ತೀವ್ರವಾದ ಭಾರತ ವಿರೋಧಿ ನಿಲುವಿಗಾಗಿ ಪರಿಚಿತನಾಗಿದ್ದ ವಿವಾದಾತ್ಮಕ ವಿದ್ಯಾರ್ಥಿ ನಾಯಕ ಶರೀಫ್ ಓಸ್ಮಾನ್ ಹದಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಇದರ ಬೆನ್ನಲ್ಲೇ ದೇಶದ ಹಲವು ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. 32 ವರ್ಷದ ಹದಿ, 2024ರಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ. ಅದೇ ಬಂಡಾಯವು ಕೊನೆಗೆ ಅಂದಿನ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಕ್ಕೂ ಕಾರಣವಾಯಿತು.

ಇನ್‌ಕಿಲಾಬ್ ಮಂಚಾ ವೇದಿಕೆಯ ವಕ್ತಾರರಾಗಿದ್ದ ಹದಿ ಸ್ಥಳೀಯ ಚುನಾವಣೆಗೆ ಸ್ಪರ್ಧಿಸಿದ್ದ. ಕಳೆದ ಶುಕ್ರವಾರ ಢಾಕಾದಲ್ಲಿ ತನ್ನ ಚುನಾವಣಾ ಅಭಿಯಾನ ಆರಂಭಿಸುವ ವೇಳೆ ಮುಸುಕುಧಾರಿ ದುಷ್ಕರ್ಮಿಗಳಿಂದ ತಲೆಗೆ ಗುಂಡೇಟು ತಗುಲಿ ಗಾಯಗೊಂಡಿದ್ದ. ನಂತರ ಚಿಕಿತ್ಸೆಗಾಗಿ ಸಿಂಗಾಪುರದ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ ಎಂಬ ವಿಚಾರ ಬಯಲಾಗಿದೆ.

ಪತ್ರಿಕಾ ಕಚೇರಿಗಳಿಗೆ ಬೆಂಕಿ

ಹದಿ ಸಾವಿನ ಸುದ್ದಿ ಹೊರಬಿದ್ದ ತಕ್ಷಣ, ಢಾಕಾ ಸೇರಿದಂತೆ ಹಲವು ನಗರಗಳಲ್ಲಿ ಸಾವಿರಾರು ಮಂದಿ ಬೀದಿಗೆ ಇಳಿದು, ಹದಿಯ ಹಂತಕರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು. ಅಧಿಕಾರಿಗಳ ಪ್ರಕಾರ, ಬಾಂಗ್ಲಾದೇಶದ ರಾಜಧಾನಿಯಲ್ಲಿ ದೇಶದ ಎರಡು ಪ್ರಮುಖ ಪತ್ರಿಕೆಗಳಾದ ʻದಿ ಡೇಲಿ ಸ್ಟಾರ್ʼ ಮತ್ತು ʻಪ್ರಥಮ್ ಆಲೋʼ ಕಚೇರಿಗಳು ಇರುವ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆಗಳಲ್ಲಿ ಹದಿ ಪರ ಘೋಷಣೆಗಳು ಕೇಳಿಬಂದವು.

ಹಿಂಸಾಚಾರದ ವಿಡಿಯೊ ಇಲ್ಲಿದೆ



ರಾತ್ರಿ ತಡವಾಗುವವರೆಗೂ ಹಲವು ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಹೆಚ್ಚಿನ ಹಿಂಸಾಚಾರವನ್ನು ತಡೆಯಲು ಪೊಲೀಸರು ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಯಿತು. ಪೊಲೀಸರು ತಕ್ಷಣ ಪ್ರತಿಕ್ರಿಯೆ ನೀಡದಿದ್ದರೂ, ಅಗ್ನಿಶಾಮಕ ದಳವು ದಿ ಡೇಲಿ ಸ್ಟಾರ್ ಕಚೇರಿಯಲ್ಲಿ ಸಂಭವಿಸಿದ ಬೆಂಕಿ ನಿಯಂತ್ರಣದಲ್ಲಿದೆ ಎಂದು ತಿಳಿಸಿತು.

ಬಾಂಗ್ಲಾದೇಶದ ಇತರೆ ನಗರಗಳಲ್ಲೂ ಹಿಂಸಾಚಾರ ವರದಿಯಾಗಿದ್ದು, ಬಂದರು ನಗರ ಚಿಟಗಾಂಗ್‌ನಲ್ಲಿ ಪ್ರತಿಭಟನಾಕಾರರು ಭಾರತದ ಸಹಾಯಕ ಹೈ ಕಮಿಷನ್ ಮುಂದೆ ಸೇರಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು. ರಾಜಶಾಹಿಯಲ್ಲಿ, ಪ್ರತಿಭಟನಾಕಾರರು ಬಂಗಬಂಧು ಶೇಖ್ ಮುಜಿಬುರ್ ರಹ್ಮಾನ್ ಅವರ ನಿವಾಸ ಹಾಗೂ ಅವಾಮಿ ಲೀಗ್ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿ ವ್ಯಾಪಕ ಹಾನಿ ಉಂಟುಮಾಡಿದರು.

ಭಾರತ ವಿರೋಧಿ ಭಾವನೆ ಹೆಚ್ಚಳ

ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ ಬಳಿಕ ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧಗಳು ಹದಗೆಟ್ಟಿವೆ. ಬುಧವಾರ, “ಜುಲೈ ಓಕ್ಯಾ” (ಜುಲೈ ಏಕತೆ) ಬ್ಯಾನರ್ ಅಡಿಯಲ್ಲಿ ನೂರಾರು ಮಂದಿ ಢಾಕಾದಲ್ಲಿನ ಭಾರತೀಯ ಹೈ ಕಮಿಷನ್ ಕಡೆಗೆ ಮೆರವಣಿಗೆ ನಡೆಸಿ, ಭಾರತ ವಿರೋಧಿ ಘೋಷಣೆಗಳನ್ನು ಕೂಗುವುದರ ಜೊತೆಗೆ ಹಸೀನಾರನ್ನು ಹಿಂದಿರುಗಿಸುವಂತೆ ಆಗ್ರಹಿಸಿದರು.

2024ರ ಆಗಸ್ಟ್‌ನಿಂದ ಬಾಂಗ್ಲಾದೇಶವನ್ನು ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಆಡಳಿತ ನಡೆಸುತ್ತಿದೆ. ವಿದ್ಯಾರ್ಥಿ ನೇತೃತ್ವದ ಬಂಡಾಯದ ನಂತರ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು.

ಹದಿಯ ಸಾವಿಗೆ ಯೂನಸ್‌ ಸಂತಾಪ

ಹದಿಯ ಸಾವಿನ ನಂತರ ರಾಷ್ಟ್ರವನ್ನು ಉದ್ದೇಶಿಸಿ ದೂರದರ್ಶನದಲ್ಲಿ ಮಾತನಾಡಿದ ಯೂನಸ್, “ಅವರ ಅಗಲಿಕೆ ದೇಶದ ರಾಜಕೀಯ ಮತ್ತು ಪ್ರಜಾಸತ್ತಾತ್ಮಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಹೇಳಿದರು. ನಾಗರಿಕರು ಶಾಂತವಾಗಿರಬೇಕು ಎಂದು ಮನವಿ ಮಾಡಿದ ಅವರು, “ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರನ್ನು ನ್ಯಾಯದ ಮುಂದೆ ತರಲು ಸರ್ಕಾರ ಬದ್ಧವಾಗಿದೆ” ಎಂದು ತಿಳಿಸಿದರು.

Read More
Next Story