5.5-Magnitude Earthquake in Bangladesh Shakes Kolkata and Northeast India
x

ಸಾಂದರ್ಭಿಕ ಚಿತ್ರ

ಬಾಂಗ್ಲಾದೇಶದಲ್ಲಿ 5.5 ತೀವ್ರತೆಯ ಭೂಕಂಪ: ಕೋಲ್ಕತ್ತಾ, ಈಶಾನ್ಯ ರಾಜ್ಯಗಳಲ್ಲೂ ನಡುಕ

ಕೋಲ್ಕತ್ತಾ ಮಾತ್ರವಲ್ಲದೆ, ಪಶ್ಚಿಮ ಬಂಗಾಳದ ಕೂಚ್ ಬೆಹಾರ್, ದಕ್ಷಿಣ ಮತ್ತು ಉತ್ತರ ದಿನಾಜ್‌ಪುರ ಜಿಲ್ಲೆಗಳಲ್ಲಿಯೂ ಕಂಪನದ ಅನುಭವವಾಗಿದೆ


Click the Play button to hear this message in audio format

ಬಾಂಗ್ಲಾದೇಶದ ರಾಜಧಾನಿ ಢಾಕಾ ಬಳಿ ಶುಕ್ರವಾರ ಬೆಳಿಗ್ಗೆ (ನವೆಂಬರ್ 21) ಸಂಭವಿಸಿದ 5.5 ತೀವ್ರತೆಯ ಭೂಕಂಪನದ ಪರಿಣಾಮವಾಗಿ ಕೋಲ್ಕತ್ತಾ ಮತ್ತು ಈಶಾನ್ಯ ಭಾರತದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, ಬೆಳಿಗ್ಗೆ 10:10ರ ಸುಮಾರಿಗೆ ಸಂಭವಿಸಿದ ಈ ಭೂಕಂಪನದ ಕೇಂದ್ರಬಿಂದು ಢಾಕಾದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ನರಸಿಂಗಡಿ ಎಂಬಲ್ಲಿದ್ದು, ಭೂಮಿಯ 10 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದೆ.

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಬೆಳಿಗ್ಗೆ ಸುಮಾರು 10. 10ಕ್ಕೆ ಕೆಲವು ಸೆಕೆಂಡುಗಳ ಕಾಲ ಭೂಮಿ ನಡುಗಿದ ಅನುಭವವಾಯಿತು. ಇದರಿಂದ ಗಾಬರಿಗೊಂಡ ಜನರು ಮನೆ ಮತ್ತು ಕಚೇರಿಗಳಿಂದ ಹೊರಗೆ ಓಡಿ ಬಂದು ರಸ್ತೆಯಲ್ಲಿ ಜಮಾಯಿಸಿದರು. "ನನ್ನ ಜೀವನದಲ್ಲೇ ಅನುಭವಿಸಿದ ಅತಿ ಹೆಚ್ಚು ತೀವ್ರತೆಯ ಭೂಕಂಪ ಇದಾಗಿದೆ," ಎಂದು ಕೋಲ್ಕತ್ತಾದ ನಿವಾಸಿಯೊಬ್ಬರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳಲ್ಲಿ, ಭೂಕಂಪದ ತೀವ್ರತೆಗೆ ಫ್ಯಾನ್‌ಗಳು ಮತ್ತು ಮನೆಯ ಸಾಮಗ್ರಿಗಳು ಅಲುಗಾಡುತ್ತಿರುವುದು ಕಂಡುಬಂದಿದೆ.

ಹಬ್ಬಿದ ಕಂಪನ

ಕೋಲ್ಕತ್ತಾ ಮಾತ್ರವಲ್ಲದೆ, ಪಶ್ಚಿಮ ಬಂಗಾಳದ ಕೂಚ್ ಬೆಹಾರ್, ದಕ್ಷಿಣ ಮತ್ತು ಉತ್ತರ ದಿನಾಜ್‌ಪುರ ಜಿಲ್ಲೆಗಳಲ್ಲಿಯೂ ಕಂಪನದ ಅನುಭವವಾಗಿದೆ. ಇದಲ್ಲದೆ, ಈಶಾನ್ಯ ಭಾರತದ ಪ್ರಮುಖ ನಗರಗಳಾದ ಗುವಾಹಟಿ, ಅಗರ್ತಲಾ ಮತ್ತು ಶಿಲ್ಲಾಂಗ್‌ನಲ್ಲೂ ಭೂಮಿ ನಡುಗಿದ ವರದಿಯಾಗಿದೆ.

ಕ್ರಿಕೆಟ್ ಪಂದ್ಯಕ್ಕೂ ತಟ್ಟಿದ ಬಿಸಿ

ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ, ಢಾಕಾದಲ್ಲಿ ನಡೆಯುತ್ತಿದ್ದ ಬಾಂಗ್ಲಾದೇಶ ಮತ್ತು ಐರ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೂ ಅಲ್ಪಕಾಲ ಅಡ್ಡಿಯಾಯಿತು. ಆಟಗಾರರು ಮತ್ತು ಸಿಬ್ಬಂದಿ ಸುರಕ್ಷತೆಗಾಗಿ ಮೈದಾನದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಪರಿಸ್ಥಿತಿ ತಿಳಿಯಾದ ಬಳಿಕ ಪಂದ್ಯ ಮುಂದುವರಿಯಿತು.

ಅದೃಷ್ಟವಶಾತ್, ಈ ಭೂಕಂಪನದಿಂದ ಭಾರತ ಅಥವಾ ಬಾಂಗ್ಲಾದೇಶದಲ್ಲಿ ಯಾವುದೇ ಜೀವ ಹಾನಿ ಅಥವಾ ಆಸ್ತಿ ಪಾಸ್ತಿ ನಷ್ಟವಾದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ. ಆದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ.

Read More
Next Story