
Bangladesh Bus Accident| ಬಾಂಗ್ಲಾದೇಶದಲ್ಲಿ ನದಿಗೆ ಉರುಳಿದ ಬಸ್, 23 ಪ್ರಯಾಣಿಕರ ಸಾವು
ಬಾಂಗ್ಲಾದೇಶದ ರಾಜಬರಿ ಜಿಲ್ಲೆಯ ಪದ್ಮಾ ನದಿಗೆ ಬಸ್ ಉರುಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 23 ಜನರು ಸಾವನ್ನಪ್ಪಿದ್ದಾರೆ. ಈದ್ ರಜೆ ಮುಗಿಸಿ ಮರಳುತ್ತಿದ್ದ ಪ್ರಯಾಣಿಕರಿದ್ದ ಬಸ್ ಫೆರಿ ಏರುವಾಗ ಸಂಭವಿಸಿದ ಈ ದುರಂತದ ವಿವರ ಇಲ್ಲಿದೆ.
ಈದ್ ರಜೆ ಮುಗಿಸಿ ಢಾಕಾಗೆ ಮರಳುತ್ತಿದ್ದ ಪ್ರಯಾಣಿಕರಿದ್ದ ಬಸ್ಸೊಂದು ಸಾರಿಗೆ ನೌಕೆ (Ferry) ಏರುವ ಸಾಹಸದಲ್ಲಿ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಘಟನೆ ಬಾಂಗ್ಲಾದೇಶದ ರಾಜಬರಿ ಜಿಲ್ಲೆಯಲ್ಲಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದು, ಹಲವರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಬುಧವಾರ ಸಂಜೆ ಸುಮಾರು 5:15ರ ವೇಳೆಗೆ ರಾಜಬರಿ ಜಿಲ್ಲೆಯ ದೌಲದಿಯಾ ಟರ್ಮಿನಲ್‌ನಲ್ಲಿ ಈ ಘಟನೆ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳು ಮತ್ತು ಟರ್ಮಿನಲ್ ಮೇಲ್ವಿಚಾರಕ ಮೊನೀರ್ ಹೊಸೈನ್ ನೀಡಿರುವ ಮಾಹಿತಿಯ ಪ್ರಕಾರ ಢಾಕಾ ಕಡೆಗೆ ತೆರಳುತ್ತಿದ್ದ ಬಸ್, ಪದ್ಮಾ ನದಿಯನ್ನು ದಾಟಲು ಫೆರಿ ನೌಕೆಯ ಪಾಂಟೂನ್ (Pontoon) ಮೇಲೆ ಏರುತ್ತಿತ್ತು. ಅದೇ ಸಮಯದಲ್ಲಿ ಮತ್ತೊಂದು ಸಣ್ಣ ಯುಟಿಲಿಟಿ ಫೆರಿ ಬಂದು ಪಾಂಟೂನ್‌ಗೆ ಡಿಕ್ಕಿ ಹೊಡೆದಿದೆ. ಈ ಹಠಾತ್ ಡಿಕ್ಕಿಯಿಂದಾಗಿ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದು, ಸುಮಾರು 40 ಪ್ರಯಾಣಿಕರಿದ್ದ ಬಸ್ ನೇರವಾಗಿ ಆಳವಾದ ಪದ್ಮಾ ನದಿಗೆ ಉರುಳಿದೆ.
ರಕ್ಷಣಾ ಕಾರ್ಯಾಚರಣೆ ಮತ್ತು ಸಾವು-ನೋವು
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ರಕ್ಷಣೆಗೆ ಧಾವಿಸಿದರಾದರೂ, ಹವಾಮಾನ ವೈಪರೀತ್ಯ ಮತ್ತು ನದಿಯ ರಭಸದ ಹರಿವು ಕಾರ್ಯಾಚರಣೆಗೆ ತೀವ್ರ ಅಡ್ಡಿಯುಂಟುಮಾಡಿತು. ಸತತ ಆರು ಗಂಟೆಗಳ ಕಾಲ ನಡೆದ ಹರಸಾಹಸದ ನಂತರ, 'ಹಮ್ಜಾ' ಎಂಬ ಬೃಹತ್ ರಕ್ಷಣಾ ನೌಕೆಯ ಕ್ರೇನ್ ಬಳಸಿ ಬುಧವಾರ ಮಧ್ಯರಾತ್ರಿ ಬಸ್ಸನ್ನು ನದಿಯಿಂದ ಹೊರತೆಗೆಯಲಾಯಿತು.
ಈ ವೇಳೆ ಬಸ್ಸಿನ ಒಳಗಡೆ 14 ಮೃತದೇಹಗಳು ಪತ್ತೆಯಾಗಿದ್ದು, ಇದಕ್ಕೂ ಮುನ್ನ ಮುಳುಗುತಜ್ಞರು ಇಬ್ಬರು ವಯಸ್ಸಾದ ಮಹಿಳೆಯರ ಶವಗಳನ್ನು ಹೊರತೆಗೆದಿದ್ದರು. ಈ ದುರಂತದಲ್ಲಿ ಒಟ್ಟು ಸಾವಿನ ಸಂಖ್ಯೆ 23ಕ್ಕೆ ಏರಿಕೆಯಾಗಿದ್ದು, ಸುಮಾರು 11 ಪ್ರಯಾಣಿಕರು ಈಜಿ ದಡ ಸೇರುವಲ್ಲಿ ಅಥವಾ ಸ್ಥಳೀಯರಿಂದ ರಕ್ಷಿಸಲ್ಪಡುವಲ್ಲಿ ಯಶಸ್ವಿಯಾಗಿದ್ದಾರೆ. ಬದುಕುಳಿದವರಲ್ಲಿ ಒಬ್ಬರು ಮಹಿಳಾ ವೈದ್ಯರಾಗಿದ್ದು, ಅವರಿಗೆ ಪ್ರಸ್ತುತ ದೌಲದಿಯಾ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಹೆಚ್ಚಿನವರು ಈದ್ ಹಬ್ಬ ಮುಗಿಸಿ ಢಾಕಾಕ್ಕೆ ಕೆಲಸಕ್ಕೆ ಮರಳುತ್ತಿದ್ದವರಾಗಿದ್ದರು. ಮೃತರ ಪೈಕಿ ಹಲವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಕುಟುಂಬದ ಕೆಲವರು ಬಸ್ಸಿನ ಹೊರಗೆ ನಿಂತಿದ್ದರಿಂದ ಬದುಕುಳಿದಿದ್ದರೆ, ಬಸ್ಸಿನ ಒಳಗಿದ್ದ ಅವರ ಸಂಬಂಧಿಕರು ಜಲಸಮಾಧಿಯಾಗಿದ್ದಾರೆ.
ಸರ್ಕಾರದ ಕ್ರಮ ಮತ್ತು ತನಿಖೆ
ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಬಾಂಗ್ಲಾದೇಶದ ಪ್ರಧಾನ ಮಂತ್ರಿ ತಾರಿಕ್ ರೆಹಮಾನ್, ರಾಜಬರಿ ಜಿಲ್ಲಾಡಳಿತದೊಂದಿಗೆ ದೂರವಾಣಿ ಮೂಲಕ ಮಾತನಾಡಿ ರಕ್ಷಣಾ ಕಾರ್ಯಾಚರಣೆಯ ಅಪ್‌ಡೇಟ್ ಪಡೆದಿದ್ದಾರೆ. ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಅವರು ಆದೇಶಿಸಿದ್ದಾರೆ. ಸದ್ಯ ಅಗ್ನಿಶಾಮಕ ದಳ, ಕೋಸ್ಟ್‌ಗಾರ್ಡ್, ಮಿಲಿಟರಿ ಮತ್ತು ಪೊಲೀಸರು ಜಂಟಿಯಾಗಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

