Drunk driver crashes into hotel wall in Bengaluru; customers escape with a narrow escape!
x

ಅಪಘಾತದಲ್ಲಿ ತಾಜ್ ನಗರದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

Hubballi Tragedy|ರಸ್ತೆಯಲ್ಲಿ ಬಿದ್ದಿದ್ದ ಕೇಬಲ್ ವೈರ್ ಬೈಕ್‌ಗೆ ಸಿಲುಕಿ ಇಬ್ಬರು ಯುವಕರು ಬಲಿ

ಹುಬ್ಬಳ್ಳಿಯ ಗೋಕುಲ್ ರಸ್ತೆಯ ಅರ್ಬನ್ ಓಯಸಿಸ್ ಮಾಲ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಜ್ ನಗರದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.


Click the Play button to hear this message in audio format

ಹುಬ್ಬಳ್ಳಿಯ ಅರ್ಬನ್ ಓಯಸಿಸ್ ಮಾಲ್ ಸಮೀಪದ ಗೋಕುಲ್ ರಸ್ತೆಯಲ್ಲಿ ಕಳೆದ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ದುರ್ಮರಣಕ್ಕೀಡಾಗಿದ್ದಾರೆ. ತಾಜ್ ನಗರದ ನಿವಾಸಿಗಳಾದ ಫಯಾಜ್ (25) ಹಾಗೂ ಮೋಹಿದ್ (27) ಎಂಬುವವರೇ ಮೃತಪಟ್ಟ ದುರ್ದೈವಿಗಳು. ರಸ್ತೆಯ ಮೇಲೆ ತುಂಡಾಗಿ ಬಿದ್ದಿದ್ದ ಕೇಬಲ್ ವೈರ್‌ಗಳು ಈ ಘೋರ ದುರಂತಕ್ಕೆ ನೇರ ಕಾರಣವಾಗಿವೆ.

ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಈ ಯುವಕರು ರಸ್ತೆಯಲ್ಲಿ ಬಿದ್ದಿದ್ದ ವೈರ್ ಗಮನಿಸದೆ ಅದಕ್ಕೆ ಸಿಲುಕಿಕೊಂಡಿದ್ದಾರೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದ ಪರಿಣಾಮ, ಸವಾರರಿಬ್ಬರಿಗೂ ತೀವ್ರ ಸ್ವರೂಪದ ಪೆಟ್ಟು ಬಿದ್ದು ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ಈ ಅವಘಡವು ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದ್ದು, ಸಾರ್ವಜನಿಕ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಎರಡನೇ ಅತಿದೊಡ್ಡ ನಗರ ಎಂಬ ಹೆಗ್ಗಳಿಕೆಯ ಹುಬ್ಬಳ್ಳಿ-ಧಾರವಾಡದಲ್ಲಿ ಸಾರ್ವಜನಿಕರು ದಿನನಿತ್ಯ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರಸ್ತುತ ಅವಳಿ ನಗರದಾದ್ಯಂತ ರಸ್ತೆಗಳಿಗೆ ಬಿದ್ದಿರುವ ಟಿವಿ ಮತ್ತು ಇಂಟರ್ನೆಟ್ ಕೇಬಲ್‌ಗಳು ವಾಹನ ಸವಾರರು ಹಾಗೂ ಪಾದಚಾರಿಗಳ ಪಾಲಿಗೆ ಸಂಚಕಾರ ತಂದೊಡ್ಡುತ್ತಿವೆ. ರಸ್ತೆಯಲ್ಲಿ ಅಪಾಯಕಾರಿಯಾಗಿ ಬಿದ್ದಿರುವ ಈ ಕೇಬಲ್‌ಗಳ ಬಗ್ಗೆ ದೂರು ನೀಡಿದರೂ ಕೇಳುತ್ತಿಲ್ಲ ಎಂದ ದೂರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಕೇಳುಬರುತ್ತಿದೆ.

ಸುಮಾರು 202 ಚದರ ಕಿಲೋಮೀಟರ್ ವ್ಯಾಪ್ತಿಯ 82 ವಾರ್ಡ್‌ಗಳಲ್ಲಿ ಟಿವಿ ಕೇಬಲ್ ಹಾಗೂ ಖಾಸಗಿ ಟೆಲಿಕಾಂ ಕಂಪನಿಗಳ ಅಬ್ಬರ ಮಿತಿಮೀರಿದೆ. ನಿಯಮದ ಪ್ರಕಾರ ಈ ಕೇಬಲ್‌ಗಳು ಸುರಕ್ಷಿತ ಎತ್ತರದಲ್ಲಿರಬೇಕು. ಆದರೆ, ನಗರದ ಬಹುತೇಕ ಕಡೆಗಳಲ್ಲಿ ಇವು ನೆಲದಿಂದ ಕೇವಲ 2 ರಿಂದ 4 ಅಡಿ ಎತ್ತರದಲ್ಲಿ ಅಪಾಯಕಾರಿಯಾಗಿ ಜೋತಾಡುತ್ತಿವೆ. ದ್ವಿಚಕ್ರ ವಾಹನ ಸವಾರರು ಅರಿಯದೇ ಇವುಗಳಿಗೆ ಸಿಲುಕಿ ಬಿದ್ದು ಗಾಯಗೊಂಡಿರುವ ನೂರಾರು ಉದಾಹರಣೆಗಳಿವೆ. ಆದರೂ ಪಾಲಿಕೆಯಾಗಲಿ ಅಥವಾ ಸಂಬಂಧಪಟ್ಟ ಕಂಪನಿಗಳಾಗಲಿ ಇವುಗಳ ನಿರ್ವಹಣೆಗೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Read More
Next Story