
ಕಾಶಿ ಯಾತ್ರೆಗೆ ಹೊರಟಿದ್ದ ತಿಪಟೂರಿನ ಮಹಿಳೆಯರು.
ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರ ದುರ್ಮರಣ
ತಿಪಟೂರಿನ ವಿದ್ಯಾನಗರದ ಒಂದೇ ಬಡಾವಣೆಯ 12 ಮಂದಿ ಮಹಿಳಾ ಸ್ವಸಹಾಯ ಸಂಘದ ಮೂಲಕ ಹಣ ಹೊಂದಿಸಿಕೊಂಡು 15 ದಿನಗಳ ಕಾಶಿ ಯಾತ್ರೆಗೆ ಯೋಜನೆ ರೂಪಿಸಿದ್ದರು.
ತುಮಕೂರು ಜಿಲ್ಲೆಯ ತಿಪಟೂರಿನಿಂದ ವಾರಾಣಸಿಗೆ (ಕಾಶಿ) ಧಾರ್ಮಿಕ ಪ್ರವಾಸಕ್ಕೆಂದು ಸಂತಸದಿಂದ ಹೊರಟಿದ್ದ ತಂಡವೊಂದು ಭೀಕರ ರಸ್ತೆ ಅಪಘಾತಕ್ಕೆ ಸಿಲುಕಿದ್ದು, ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದೇವನಹಳ್ಳಿ ಬಳಿ ಶನಿವಾರ ತಡರಾತ್ರಿ ಸಂಭವಿಸಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಾಶಿಗೆ ತೆರಳಲು ಟೆಂಪೊ ಟ್ರಾವೆಲರ್ (ಟಿಟಿ) ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ, ರಾಣಿ ಕ್ರಾಸ್ ಬಳಿ ವೇಗವಾಗಿ ಬಂದ ಕ್ಯಾಂಟರ್ (ಟ್ರಕ್) ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಗೂಗಲ್ ಮ್ಯಾಪ್ ದಾರಿ ತಪ್ಪಿಸಿದ ಅವಘಡ
ತಿಪಟೂರಿನ ವಿದ್ಯಾನಗರದ ಒಂದೇ ಬಡಾವಣೆಯ 12 ಮಂದಿ ಮಹಿಳಾ ಸ್ವಸಹಾಯ ಸಂಘದ ಮೂಲಕ ಹಣ ಹೊಂದಿಸಿಕೊಂಡು 15 ದಿನಗಳ ಕಾಶಿ ಯಾತ್ರೆಗೆ ಯೋಜನೆ ರೂಪಿಸಿದ್ದರು. ಭಾನುವಾರ ಬೆಳಿಗ್ಗೆ 6 ಗಂಟೆಗೆ ವಿಮಾನವಿದ್ದ ಕಾರಣ, ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಟಿಟಿ ವಾಹನದಲ್ಲಿ ತಿಪಟೂರಿನಿಂದ ವಿಮಾನ ನಿಲ್ದಾಣಕ್ಕೆ ಹೊರಟಿದ್ದರು. ದೇವನಹಳ್ಳಿ ಬಳಿ ಬಂದಾಗ ಚಾಲಕ ಗೂಗಲ್ ಮ್ಯಾಪ್ ನೋಡಿಕೊಂಡು ವಾಹನ ಚಲಾಯಿಸುತ್ತಿದ್ದ. ದಾರಿ ತಪ್ಪಿ ಸರ್ವೀಸ್ ರಸ್ತೆಯ ತಿರುವನ್ನು ತಪ್ಪಿಸಿಕೊಂಡಿದ್ದ ಚಾಲಕ, ಮುಂದಿನ ಜಂಕ್ಷನ್‌ನಲ್ಲಿ ಯು-ಟರ್ನ್ ಪಡೆಯಲು ಮುಂದಾಗಿದ್ದ. ಈ ವೇಳೆ ವಾಹನ ರಸ್ತೆಯ ಮಧ್ಯಕ್ಕೆ ಬರುತ್ತಿದ್ದಂತೆಯೇ, ವೇಗವಾಗಿ ಬಂದ ಲಾರಿ ಟಿಟಿ ವಾಹನದ ಎಡಭಾಗಕ್ಕೆ ಅಪ್ಪಳಿಸಿದೆ.
ಸ್ಥಳದಲ್ಲೇ ಮೂವರು ಮಹಿಳೆಯರ ಸಾವು, ಹಲವರಿಗೆ ಗಾಯ
ಅಪಘಾತದ ರಭಸಕ್ಕೆ ಟಿಟಿ ವಾಹನದ ಎಡಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಆ ಬದಿಯ ಸಿಂಗಲ್ ಸೀಟಿನಲ್ಲಿ ಕುಳಿತಿದ್ದ ಜಯಮ್ಮ (60), ಯಶೋದಮ್ಮ (60) ಹಾಗೂ ಗಂಗಮ್ಮ (38) ಎಂಬ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಹನದಲ್ಲಿದ್ದ ಚಾಲಕ ಸೇರಿದಂತೆ ಒಟ್ಟು ಎಂಟು ಮಂದಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳ ಪೈಕಿ ಕೆಂಪಮ್ಮ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಬೆನ್ನಲ್ಲೇ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ದೇವನಹಳ್ಳಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

