ರಕ್ತಸಿಕ್ತ ಬಾಂಗ್ಲಾ: ಕಾಲೇಜು ವಿದ್ಯಾರ್ಥಿ ನಿಗೂಢ ಸಾವು
x
ಕಾಲೇಜು ವಿದ್ಯಾರ್ಥಿ ಅಭಿ

ರಕ್ತಸಿಕ್ತ ಬಾಂಗ್ಲಾ: ಕಾಲೇಜು ವಿದ್ಯಾರ್ಥಿ ನಿಗೂಢ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ಕಳೆದ 46 ದಿನಗಳಲ್ಲಿ 17 ಮಂದಿ ಹತ್ಯೆಗೀಡಾಗಿದ್ದಾರೆ.


ಬಾಂಗ್ಲಾದೇಶದ ನವಗಾಂವ್ ಜಿಲ್ಲೆಯಲ್ಲಿ ಒಂದು ವಾರದಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿ ಅಭಿ ಎಂಬಾತನ ಶವ ಶನಿವಾರ ಮಧ್ಯಾಹ್ನ ಕಾಲಿಟಾಲಾ ಸ್ಮಶಾನದ ಸಮೀಪವಿರುವ ನದಿಯಲ್ಲಿ ಪತ್ತೆಯಾಗಿದೆ. ಈತ ಬೋಗುರಾ ಜಿಲ್ಲೆಯ ಆದಂದಿಗಿ ನಿವಾಸಿ ರಮೇಶ್ ಚಂದ್ರ ಅವರ ಪುತ್ರ.

ಘಟನೆಯ ಹಿನ್ನೆಲೆ

ಜನವರಿ 11 ರಂದು ಮನೆಯಲ್ಲಿ ಸಣ್ಣ ಜಗಳದ ನಂತರ ಅಭಿ ಹೊರಹೋಗಿದ್ದನು. ಏಳು ದಿನಗಳ ಕಾಲ ಕುಟುಂಬಸ್ಥರು ಮತ್ತು ಪೊಲೀಸರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಶನಿವಾರ ನದಿಯಲ್ಲಿ ಶವ ತೇಲುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಡಿದ ತಕ್ಷಣ ಸ್ಥಳಕ್ಕೆ ಬಂದ ಕುಟುಂಬಸ್ಥರು, ಅಭಿ ಧರಿಸಿದ್ದ ಬಟ್ಟೆಗಳ ಆಧಾರದ ಮೇಲೆ ಶವವನ್ನು ಗುರುತಿಸಿ ಕಣ್ಣೀರಿಟ್ಟಿದ್ದಾರೆ. ಅಭಿಯ ಸಾವು ಕೇವಲ ಆಕಸ್ಮಿಕವೇ ಅಥವಾ ಇದರ ಹಿಂದೆ ಕೋಮು ದ್ವೇಷದ ಸಂಚಿದೆಯೇ ಎಂಬ ಪ್ರಶ್ನೆ ಎದ್ದಿದೆ. ನವಗಾಂವ್ ಸದರ್ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ನಂತರವೇ ಸತ್ಯಾಂಶ ತಿಳಿಯಲಿದೆ.

47 ದಿನಗಳಲ್ಲಿ 17 ಹಿಂದೂಗಳ ಹತ್ಯೆ: ರಕ್ತಸಿಕ್ತ ಬಾಂಗ್ಲಾ

ಬಾಂಗ್ಲಾದೇಶದಲ್ಲಿ ರಾಜಕೀಯ ಬದಲಾವಣೆಯ ನಂತರ ಕಳೆದ ಕೇವಲ 46 ದಿನಗಳಲ್ಲಿ ಕನಿಷ್ಠ 17 ಹಿಂದೂಗಳನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಹತ್ಯೆಗಳು ಒಂದು ವ್ಯವಸ್ಥಿತ ಸಂಚಿನಂತೆ ಕಾಣುತ್ತಿದ್ದು, ಹಿಂದೂ ಸಮುದಾಯ ತೀವ್ರ ಆತಂಕದಲ್ಲಿದೆ.

ಭೀಕರ ಕೊಲೆಗಳ ವಿವರ

ಜೀವಂತ ದಹನ: ಮೈಮನ್ ಸಿಂಗ್‌ನಲ್ಲಿ ದೀಪು ಚಂದ್ರ ದಾಸ್ ಎಂಬುವವರನ್ನು ಗುಂಪು ಸೇರಿ ಮನಬಂದಂತೆ ಹೊಡೆದು, ನಂತರ ಅವರ ದೇಹಕ್ಕೆ ಬೆಂಕಿ ಹಚ್ಚಿ ಜೀವಂತವಾಗಿ ಸುಡಲಾಗಿದೆ.

ದಂಪತಿಗಳ ಹತ್ಯೆ: ಸ್ವಾತಂತ್ರ್ಯ ಹೋರಾಟಗಾರ ಯೋಗೇಶ್ ಚಂದ್ರ ರಾಯ್ ಮತ್ತು ಅವರ ಪತ್ನಿ ಸುಬರ್ಣ ರಾಯ್ ಅವರನ್ನು ಅವರ ಮನೆಯೊಳಗೇ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ.

ದರೋಡೆ ನೆಪದಲ್ಲಿ ಹಲ್ಲೆ: ಅಮೃತ್ ಮೊಂಡಲ್ ಮತ್ತು 18 ವರ್ಷದ ಆಟೋ ಚಾಲಕ ಶಾಂತ್ ಚಂದ್ರ ದಾಸ್ ಅವರನ್ನು ದರೋಡೆಕೋರರು ಎಂದು ಸುಳ್ಳು ಆರೋಪ ಹೊರಿಸಿ ಜನಸಮೂಹವೇ ಹೊಡೆದು ಸಾಯಿಸಿದೆ.

ಉದ್ಯಮಿಗಳ ಗುರಿ: ನರಸಿಂಗಡಿಯಲ್ಲಿ ಶರತ್ ಮಣಿ ಚಕ್ರವರ್ತಿ ಮತ್ತು ಜೆಸ್ಸೋರ್‌ನಲ್ಲಿ ಪತ್ರಕರ್ತ ರಾಣಾ ಪ್ರತಾಪ್ ಬೈರಾಗಿ ಅವರನ್ನು ಶೂಟ್ ಮಾಡಿ ಸಾಯಿಸಲಾಗಿದೆ. ಫರೀದ್‌ಪುರದಲ್ಲಿ ಮೀನು ವ್ಯಾಪಾರಿ ಉತ್ಪಲ್ ಸರ್ಕಾರ್ ಅವರನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ.

ವ್ಯವಸ್ಥೆಯ ವೈಫಲ್ಯ ಮತ್ತು ಪೊಲೀಸ್ ಕಸ್ಟಡಿ ಸಾವು

ಬಾಂಗ್ಲಾದೇಶದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರಳಯ್ ಚಾಕಿ ಎಂಬುವವರು ಪೊಲೀಸರ ವಶದಲ್ಲಿದ್ದಾಗ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರಿಗೆ ಸಕಾಲದಲ್ಲಿ ವೈದ್ಯಕೀಯ ನೆರವು ನೀಡದೆ ಸಾಯಿಸಲಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.

17 ಹತ್ಯೆಗಳಿಗೆ ಸಂಬಂಧಿಸಿದಂತೆ ಕೇವಲ 14 ಎಫ್‌ಐಆರ್ ದಾಖಲಾಗಿದ್ದು, ಕೇವಲ 21 ಜನರನ್ನು ಮಾತ್ರ ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಗ್ಗೆ ಪೊಲೀಸರು ಮೌನ ವಹಿಸಿದ್ದಾರೆ.

Read More
Next Story