
ಬಾಂಗ್ಲಾದೇಶದಲ್ಲಿ ಮತ್ತೆ ರಕ್ತಪಾತ: ಎರಡು ವಾರಗಳಲ್ಲಿ ಮೂರನೇ ಹಿಂದೂವಿನ ಹತ್ಯೆ
ಸತತವಾಗಿ ಕೊಲೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲವೆ ಎಂಬ ಪ್ರಶ್ನೆಗಳು ಎದ್ದಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗಳು ವ್ಯಕ್ತಗೊಂಡಿವೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ ಚಿಂತೆಯಾಗಿಯೇ ಕಾಡುತ್ತಲೇ ಇದೆ. ಮೈಮೆನ್ಸಿಂಗ್ ಜಿಲ್ಲೆಯ ಭಾಲುಕಾ ಉಪಜಿಲ್ಲೆಯಲ್ಲಿರುವ 'ಸುಲ್ತಾನಾ ಸ್ವೆಟರ್ಸ್ ಲಿಮಿಟೆಡ್' ಎಂಬ ಕಾರ್ಖಾನೆಯಲ್ಲಿ ಸೋಮವಾರ ಸಂಜೆ ನಡೆದ ಗುಂಡಿನ ದಾಳಿಗೆ ಹಿಂದೂ ಧರ್ಮಕ್ಕೆ ಸೇರಿದ ಭದ್ರತಾ ಸಿಬ್ಬಂದಿಯೊಬ್ಬರು ಬಲಿಯಾಗಿದ್ದಾರೆ. ಇದು ಕಳೆದ 14 ದಿನಗಳಲ್ಲಿ ಬಾಂಗ್ಲಾದಲ್ಲಿ ವರದಿಯಾಗಿರುವ ಮೂರನೇ ಹಿಂದೂ ಹತ್ಯೆ ಪ್ರಕರಣವಾಗಿದೆ.
ಮೃತರನ್ನು ಅನ್ಸಾರ್ ಪಡೆಯ ಸದಸ್ಯರಾದ ಬಜೇಂದ್ರ ಬಿಸ್ವಾಸ್ (42) ಎಂದು ಗುರುತಿಸಲಾಗಿದೆ. ಆರೋಪಿ ನೋಮನ್ ಮಿಯಾ (29) ಎಂಬಾತ ಬಜೇಂದ್ರ ಅವರೊಂದಿಗೆ ಭದ್ರತಾ ಕರ್ತವ್ಯದಲ್ಲಿದ್ದ ಸಹೋದ್ಯೋಗಿ. ಸೋಮವಾರ ಸಂಜೆ ಸುಮಾರು 6.45ರ ಸುಮಾರಿಗೆ ಕಾರ್ಖಾನೆಯ ಆವರಣದಲ್ಲಿರುವ ಬ್ಯಾರಕ್‌ನಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ನೋಮನ್ ಮಿಯಾ ತಮಾಷೆಯಾಗಿ ಅಥವಾ ಅಚಾತುರ್ಯದಿಂದ ಸರ್ಕಾರಿ ರೈಫಲ್ ಅನ್ನು ಬಜೇಂದ್ರ ಅವರತ್ತ ಗುರಿ ಇಟ್ಟಿದ್ದ ಎನ್ನಲಾಗಿದೆ. ಈ ವೇಳೆ ರೈಫಲ್‌ನಿಂದ ಗುಂಡು ಸಿಡಿದು ಬಜೇಂದ್ರ ಅವರ ಎಡ ತೊಡೆಗೆ ತಗುಲಿದೆ. ತೀವ್ರ ರಕ್ತಸ್ರಾವವಾಗುತ್ತಿದ್ದ ಅವರನ್ನು ಕೂಡಲೇ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಆರೋಪಿಯ ಬಂಧನ
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಠಾಣಾ ಅಧಿಕಾರಿ ಮೊಹಮ್ಮದ್ ಜಾಹಿದುಲ್ ಇಸ್ಲಾಂ, "ಆರೋಪಿ ನೋಮನ್ ಮಿಯಾನನ್ನು ಬಂಧಿಸಲಾಗಿದ್ದು, ಘಟನೆಗೆ ಬಳಸಿದ ಸರ್ಕಾರಿ ಶೂಟ್‌ಗನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಮೆನ್ಸಿಂಗ್ ಮೆಡಿಕಲ್ ಕಾಲೇಜಿಗೆ ಕಳುಹಿಸಿಕೊಡಲಾಗಿದೆ," ಎಂದು ತಿಳಿಸಿದ್ದಾರೆ.
ಸತತ ಹತ್ಯೆಗಳಿಂದ ಹೆಚ್ಚಿದ ಆತಂಕ
ಕಳೆದ ಎರಡು ವಾರಗಳಲ್ಲಿ ಹಿಂದೂ ಸಮುದಾಯದ ಮೇಲೆ ನಡೆದ ಮೂರನೇ ಮಾರಣಾಂತಿಕ ದಾಳಿ ಇದಾಗಿದೆ: ಡಿಸೆಂಬರ್ 18ರಂದು ಭಾಲುಕಾದಲ್ಲಿ ದೀಪು ಚಂದ್ರ ದಾಸ್ ಎಂಬುವವರನ್ನು ಧರ್ಮನಿಂದನೆ ಆರೋಪದ ಮೇಲೆ ಗುಂಪು ಹಲ್ಲೆ ನಡೆಸಿ, ಬಟ್ಟೆ ಬಿಚ್ಚಿಸಿ ಸಜೀವ ದಹನ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ:ಮೈಮೆನ್ಸಿಂಗ್ ಹೊರವಲಯದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಬಡಿದು ಕೊಲ್ಲಲಾಗಿತ್ತು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡನೆ
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಈ ಸರಣಿ ಹತ್ಯೆಗಳು ಭಾರತ ಸೇರಿದಂತೆ ಅಂತರಾಷ್ಟ್ರೀಯ ಸಮುದಾಯದ ಕಳವಳಕ್ಕೆ ಕಾರಣವಾಗಿವೆ. ಭಾರತ ಸರ್ಕಾರವು ಈಗಾಗಲೇ ಬಾಂಗ್ಲಾ ಸರ್ಕಾರದೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದು, ಅಲ್ಪಸಂಖ್ಯಾತರ ಸುರಕ್ಷತೆ ಖಚಿತಪಡಿಸುವಂತೆ ಆಗ್ರಹಿಸಿದೆ. ಇತ್ತ ಢಾಕಾ ಮತ್ತು ಚಿತ್ತಗಾಂಗ್ ನಗರಗಳಲ್ಲಿ ಸಾವಿರಾರು ಹಿಂದೂಗಳು ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರರು ಬೀದಿಗಿಳಿದು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಅಧಿಕಾರಿಗಳು ಇವುಗಳನ್ನು 'ಪ್ರತ್ಯೇಕ ಅಪರಾಧ ಪ್ರಕರಣಗಳು' ಎಂದು ಕರೆದಿದ್ದರೂ, ಸತತವಾಗಿ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳು ಅಲ್ಲಿನ ಅಲ್ಪಸಂಖ್ಯಾತರಲ್ಲಿ ತೀವ್ರ ಭೀತಿ ಹುಟ್ಟಿಸಿವೆ.

