
ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯಾಕಾಂಡ- 24 ಗಂಟೆಯಲ್ಲಿ ಇಬ್ಬರು ಹಿಂದೂಗಳ ಬಲಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ಹಿಂಸಾಚಾರದಲ್ಲಿ ಇಬ್ಬರು ಹಿಂದೂ ಉದ್ಯಮಿಗಳನ್ನು ಹತ್ಯೆ ಮಾಡಲಾಗಿದೆ. 2900ಕ್ಕೂ ಹೆಚ್ಚು ದಾಳಿಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಗಳು ಮಿತಿಮೀರಿದ್ದು, ಕಳೆದ 24 ಗಂಟೆಗಳಲ್ಲಿ ಇಬ್ಬರು ಹಿಂದೂ ವ್ಯಕ್ತಿಗಳನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಬಂದ ನಂತರ ಅಲ್ಪಸಂಖ್ಯಾತರ ಸ್ಥಿತಿ ಗಂಭೀರವಾಗಿದೆ.
24 ಗಂಟೆಗಳಲ್ಲಿ ನಡೆದ ಘಟನೆಗಳ ವಿವರ
ಮಣಿ ಚಕ್ರವರ್ತಿ ಹತ್ಯೆ: ಸೋಮವಾರ ರಾತ್ರಿ ನರಸಿಂಗ್ಡಿ ಜಿಲ್ಲೆಯಲ್ಲಿ ಕಿರಾಣಿ ಅಂಗಡಿ ಮಾಲೀಕ ಮಣಿ ಚಕ್ರವರ್ತಿ ಅವರ ಮೇಲೆ ಕಿರಾತಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
ರಾಣಾ ಪ್ರತಾಪ್ ಹತ್ಯೆ: ಯಶೋರ್ ಜಿಲ್ಲೆಯಲ್ಲಿ ಪತ್ರಿಕೆಯೊಂದರ ಸಂಪಾದಕ ಹಾಗೂ ಐಸ್ ಫ್ಯಾಕ್ಟರಿ ಮಾಲೀಕ 45 ವರ್ಷದ ರಾಣಾ ಪ್ರತಾಪ್ ಅವರನ್ನು ಗುಂಪೊಂದು ಅಡ್ಡಗಟ್ಟಿ ತಲೆಗೆ ಶೂಟ್ ಮಾಡಿ, ನಂತರ ಗಂಟಲು ಸೀಳಿ ಕ್ರೂರವಾಗಿ ಕೊಲೆ ಮಾಡಿದೆ. ಅವರ ದೇಹದ ಬಳಿ 7 ಬುಲೆಟ್ ಸಿಪ್ಪೆಗಳು ಪತ್ತೆಯಾಗಿವೆ.
ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ
ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ದಾಳಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಕಳೆದ ಶನಿವಾರ ಝೆನೈದಾ ಜಿಲ್ಲೆಯಲ್ಲಿ ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಮರಕ್ಕೆ ಕಟ್ಟಿ ಹಾಕಿ ಆಕೆಯ ಕೂದಲು ಕತ್ತರಿಸಿ ಆ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು.
ಜನವರಿ 3 ರಂದು ಖೋಕನ್ ಚಂದ್ರ ದಾಸ್ ಎಂಬ 50 ವರ್ಷದ ವ್ಯಕ್ತಿಯ ಮೇಲೆ ಬೆಂಕಿ ಹಚ್ಚಲಾಗಿತ್ತು, ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನ ಡಿಸೆಂಬರ್ 18 ರಂದು ದೀಪು ಚಂದ್ರ ದಾಸ್ ಎಂಬ ಯುವಕನನ್ನು ಧರ್ಮನಿಂದನೆ ಆರೋಪ ಹೊರಿಸಿ ಜೀವಂತವಾಗಿ ದಹಿಸಲಾಗಿತ್ತು.
ಭಾರತದ ತೀವ್ರ ಕಳವಳ
ಬಾಂಗ್ಲಾದೇಶದ ಈ ಪರಿಸ್ಥಿತಿಯ ಬಗ್ಗೆ ಭಾರತ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, "ಬಾಂಗ್ಲಾದೇಶದಲ್ಲಿ ಹಿಂದೂಗಳು, ಕ್ರೈಸ್ತರು ಮತ್ತು ಬೌದ್ಧರ ಮೇಲೆ ನಡೆಯುತ್ತಿರುವ ನಿರಂತರ ದಾಳಿಗಳು ಆತಂಕಕಾರಿ. ಯೂನಸ್ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಮೇಲೆ 2,900 ಕ್ಕೂ ಹೆಚ್ಚು ಹಿಂಸಾಚಾರದ ಘಟನೆಗಳು ನಡೆದಿವೆ ಎಂದು ದಾಖಲಾಗಿವೆ. ಇದನ್ನು ಕೇವಲ ಮಾಧ್ಯಮಗಳ ಉತ್ಪ್ರೇಕ್ಷೆ ಎಂದು ತಳ್ಳಿಹಾಕಲು ಸಾಧ್ಯವಿಲ್ಲ" ಎಂದು ಕಿಡಿಕಾರಿದ್ದಾರೆ.

