Vivek Katju

ಹಸೀನಾ ಭಾರತದಲ್ಲಿರಲಿ! ಆದರೆ ಈ ನೆಲದಿಂದ ರಾಜಕೀಯ ಮಾಡದಿರಲಿ


ಹಸೀನಾ ಭಾರತದಲ್ಲಿರಲಿ! ಆದರೆ ಈ ನೆಲದಿಂದ ರಾಜಕೀಯ ಮಾಡದಿರಲಿ
x
ಹಸೀನಾ ಅವರ ವಿಷಯವು ಉಭಯ ನೆರೆಹೊರೆಯ ದೇಶಗಳ ನಡುವೆ ಒಂದು ಬಿಕ್ಕಟ್ಟಿನ ವಿಷಯವಾಗಿಯೇ ಉಳಿಯಲಿದೆ.
Click the Play button to hear this message in audio format

ಬಾಂಗ್ಲಾದೇಶವು ಆಂತರಿಕ ಅರಾಜಕತೆಯ ಕುಲುಮೆಯಲ್ಲಿ ಕುದಿಯುತ್ತಿರುವ ಈ ಹೊತ್ತಿನಲ್ಲಿ ಭಾರತವು ಹೆಚ್ಚಿನ ಸಂಯಮ ಪ್ರದರ್ಶಿಸಬೇಕು ಮತ್ತು ಬೇರೆ ಯಾವುದೇ ಆಯ್ಕೆಗಳಿಲ್ಲದ ಹೊರತು ಬಲವಂತದ ತಂತ್ರಗಳನ್ನು ಬಳಸಬಾರದು.

ನೆರೆಯ ಬಾಂಗ್ಲಾದೇಶದೊಂದಿಗೆ ಭಾರತದ ಸಂಬಂಧಗಳು ಅತ್ಯಂತ ಸವಾಲಿನ ಹಂತವನ್ನು ಎದುರಿಸುತ್ತಿವೆ. ಆಗಸ್ಟ್ 2024 ರಲ್ಲಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರ್ಕಾರದ ಪತನದೊಂದಿಗೆ ಈ ಅವಧಿಯು ಪ್ರಾರಂಭವಾಯಿತು. ಹಸೀನಾ ಭಾರತಕ್ಕೆ ಬಂದರು, ಭಾರತವು ಅವರಿಗೆ ಮತ್ತು ಅವರ ಕುಟುಂಬಕ್ಕೆ ಇಲ್ಲಿ ತಂಗಲು ಅನುಮತಿ ನೀಡಿದೆ. ಈ ನಡುವೆ ಅಸ್ತಿತ್ವಕ್ಕೆ ಬಂದ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಆಡಳಿತವು ಭಾರತದೊಂದಿಗೆ ನಿಕಟ ಸಹಕಾರ ಹೊಂದಿದ್ದ ಅವಾಮಿ ಲೀಗ್‌ನ ನೀತಿಯನ್ನು ಕೈಬಿಟ್ಟಿದೆ.

ಇತರ ಅವಾಮಿ ಲೀಗ್ ವಿರೋಧಿ ಪಕ್ಷಗಳು ಮತ್ತು ಗುಂಪುಗಳೊಂದಿಗೆ ಸೇರಿ, ಭಾರತವು ಹಸೀನಾಗೆ ಆಶ್ರಯ ನೀಡಬಾರದು ಎಂಬುದು ಈ ಆಡಳಿತದ ಒತ್ತಾಯವಾಗಿದೆ. ನವೆಂಬರ್‌ನಲ್ಲಿ ಬಾಂಗ್ಲಾದೇಶದ ಅಂತರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಅವರಿಗೆ ಮರಣದಂಡನೆ ವಿಧಿಸಿದ ನಂತರ, ಹಸೀನಾ ನ್ಯಾಯಾಂಗ ವಿಚಾರಣೆಯನ್ನು ಎದುರಿಸಲು ಭಾರತವು ಅವರನ್ನು ಆ ದೇಶಕ್ಕೆ ಹಸ್ತಾಂತರಿಸಬೇಕು ಎಂದು ಯೂನಸ್ ಆಡಳಿತವು ಒತ್ತಾಯಿಸುತ್ತಿದೆ.

ಆದರೆ, ಭಾರತವು ಹಾಗೆ ಮಾಡಲು ಸಾಧ್ಯವಿಲ್ಲ. ಸ್ವಾಭಾವಿಕವಾಗಿ, ನೆರೆಹೊರೆಯಲ್ಲಿ ಮತ್ತು ಹೊರಗೆ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳದೆ ಇಂತಹ ಕ್ರಮಗಳನ್ನು ಕೈಗೊಳ್ಳಲಾಗದು. ಯಾಕೆಂದರೆ, ಸಂಕಷ್ಟದ ಸಮಯದಲ್ಲಿ ತನ್ನೊಂದಿಗೆ ನಿಕಟ ಸಂಬಂಧ ಹೊಂದಿದ್ದವರ ಪರವಾಗಿ ಭಾರತ ನಿಲ್ಲುವುದಿಲ್ಲ ಎಂಬ ಸಂದೇಶವನ್ನು ಅದು ಜಗತ್ತಿಗೆ ನೀಡಿದಂತಾಗುತ್ತದೆ.

ನಮ್ಮ ನೆಲದಿಂದ ರಾಜಕೀಯ ಮಾಡದಿರಲಿ

ಹಸೀನಾ ಅವರ ವಿಷಯವು ಉಭಯ ನೆರೆಹೊರೆಯ ದೇಶಗಳ ನಡುವೆ ಒಂದು ಬಿಕ್ಕಟ್ಟಿನ ವಿಷಯವಾಗಿಯೇ ಉಳಿಯಲಿದೆ. ಈ ಹಂತದಲ್ಲಿ ಭಾರತವು ಮಾಡಬೇಕಾದ್ದೇನೆಂದರೆ, ಅವರಿಗೆ ಮತ್ತು ಅವರ ಕುಟುಂಬಕ್ಕೆ ತನ್ನ ನೆಲದಲ್ಲಿ ವಾಸಿಸಲು ಅನುಮತಿ ನೀಡುವುದನ್ನು ಮುಂದುವರಿಸಬೇಕು, ಆದರೆ ಇಲ್ಲಿಂದ ಯಾವುದೇ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಅವರಿಗೆ ಅವಕಾಶ ನೀಡಬಾರದು. ಬಾಂಗ್ಲಾದೇಶದ ಜನರು ತಮ್ಮ ವ್ಯವಹಾರಗಳನ್ನು ತಮಗೆ ಸೂಕ್ತವೆನಿಸುವ ರೀತಿಯಲ್ಲಿ ನಡೆಸಿಕೊಳ್ಳಲಿ ಮತ್ತು ಅವರ ಆಯ್ಕೆಗಳನ್ನು ಭಾರತವು ಗೌರವಿಸುತ್ತದೆ ಎಂಬ ಸಂದೇಶವನ್ನು ಢಾಕಾಗೆ ರವಾನಿಸಬೇಕು. ಗಡಿಯ ಎರಡೂ ಬದಿಯಲ್ಲಿ ಭಾವಾವೇಶಗಳು ತಾರಕ ಸ್ಥಿತಿ ತಲುಪಿರುವ ಇಂದಿನ ಸಂದರ್ಭದಲ್ಲೂ ಈ ಸಂದೇಶವನ್ನು ಸ್ಪಷ್ಟವಾಗಿ ನೀಡಲು ಸಾಧ್ಯವಿದೆ.

ಬಾಂಗ್ಲಾದೇಶದ ರಾಷ್ಟ್ರೀಯ ಚುನಾವಣೆಗಳು 2026ರ ಫೆಬ್ರವರಿ ತಿಂಗಳಿನಲ್ಲಿ ನಿಗದಿಯಾಗಿದ್ದರೂ, ಡಿಸೆಂಬರ್ 12 ರಂದು ಢಾಕಾದಲ್ಲಿ ಶರೀಫ್ ಉಸ್ಮಾನ್ ಹಾದಿ ಅವರ ಮೇಲೆ ನಡೆದ ಗುಂಡಿನ ದಾಳಿಯಿಂದಾಗಿ ಬಾಂಗ್ಲಾದೇಶದ ಒಟ್ಟಾರೆ ಪರಿಸ್ಥಿತಿ ಕೈಮೀರಿ ಹೋಗಿದೆ. ತೀವ್ರವಾಗಿ ಗಾಯಗೊಂಡ ಹಾದಿ ಡಿಸೆಂಬರ್ 18 ರಂದು ಸಿಂಗಾಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಜುಲೈ 2024 ರಲ್ಲಿ ಪ್ರಾರಂಭವಾದ ಹಸೀನಾ ವಿರೋಧಿ ಪ್ರತಿಭಟನೆಗಳು ಮತ್ತು ದಂಗೆಗಳಲ್ಲಿ ಹಾದಿ ಮುಂಚೂಣಿಗೆ ಬಂದಿದ್ದರು. ಇದರಿಂದ ಅಂತಿಮವಾಗಿ ಹಸೀನಾ ಅವರ ರಾಜೀನಾಮೆಗೆ ಕಾರಣವಾಯಿತು.

ಹಾದಿ ಅವರು ಇಂಕ್ವಿಲಾಬ್ ಮಂಚ್‌ನ ಸಂಸ್ಥಾಪಕ ಮತ್ತು ವಕ್ತಾರರಾಗಿದ್ದರು. ಅವರು ಬಹಿರಂಗವಾಗಿಯೇ ಭಾರತ ವಿರೋಧಿಯಾಗಿ ಹೊರಹೊಮ್ಮಿದ್ದರು. ಅವರ ಸಾವಿನಿಂದ ಈ ಭಾವನೆಗಳನ್ನು ಮತ್ತಷ್ಟು ಕೆರಳಿಸಿದೆ ಎಂಬುದು ಸ್ಪಷ್ಟ. ಪ್ರತಿಭಟನೆಗಳ ಸಂದರ್ಭದಲ್ಲಿ, ಡಿಸೆಂಬರ್ 18 ರಂದು (ಹಾದಿ ಸಾವನ್ನಪ್ಪಿದ ದಿನವೇ) ಮೈಮನ್ಸಿಂಗ್‌ನಲ್ಲಿ ದೀಪು ಚಂದ್ರ ದಾಸ್ ಎಂಬ ಕಾರ್ಖಾನೆ ಕಾರ್ಮಿಕನನ್ನು ಗುಂಪೊಂದು ದೇವನಿಂದನೆಯ ಆರೋಪ ಹೊರಿಸಿ ಹತ್ಯೆ ಮಾಡಿತು. ನಂತರ, ಅವರ ದೇಹವನ್ನು ನೇತುಹಾಕಿ ಬೆಂಕಿ ಹಚ್ಚಿತು. ಇದೇ ಸಮಯದಲ್ಲಿ, ಚಿತ್ತಗಾಂಗ್‌ನಲ್ಲಿರುವ ಭಾರತೀಯ ಸಹಾಯಕ ಹೈಕಮಿಷನರ್ ಕಚೇರಿಯ ವಿರುದ್ಧ ಆಕ್ರೋಶದ ಪ್ರತಿಭಟನೆಗಳು ನಡೆದವು. ಸುರಕ್ಷತೆಯ ಕಾರಣಗಳಿಗಾಗಿ, ಭಾರತವು ಚಿತ್ತಗಾಂಗ್‌ನಲ್ಲಿ ವೀಸಾ ನೀಡುವುದನ್ನು ಸ್ಥಗಿತಗೊಳಿಸಿದೆ.

ಹಿಂದೂ ಸಂಘಟನೆಗಳ ಅಸಮಾಧಾನ

ಬಾಂಗ್ಲಾದಲ್ಲಿ ಪ್ರತಿಭಟನಾಕಾರರು ವ್ಯಕ್ತಪಡಿಸಿದ ಭಾರತ ವಿರೋಧಿ ಭಾವನೆಗಳಿಂದಾಗಿ ಸ್ವಾಭಾವಿಕವಾಗಿಯೇ ಭಾರತದಲ್ಲಿ ಅಸಮಾಧಾನ ಮೂಡಿಸಿದೆ. ಇದಲ್ಲದೆ, ದೀಪು ಚಂದ್ರ ದಾಸ್ ಅವರ ಸಾವು, ವಿಶೇಷವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಂತಹ ಸಂಘ ಪರಿವಾರದ ಗುಂಪುಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅವರು ದೆಹಲಿಯಲ್ಲಿರುವ ಬಾಂಗ್ಲಾದೇಶದ ಹೈಕಮಿಷನ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಬಾಂಗ್ಲಾದೇಶವು ತನ್ನ ರಾಯಭಾರ ಕಚೇರಿಗಳಿಗೆ ಭಾರತವು ಭದ್ರತೆ ನೀಡುತ್ತಿಲ್ಲ ಎಂದು ಆರೋಪಿಸಿದೆ ಮತ್ತು ವೀಸಾ ನೀಡುವುದನ್ನು ಸ್ಥಗಿತಗೊಳಿಸಿದೆ.

ಉಭಯ ದೇಶಗಳು ಪರಸ್ಪರರ ಹೈಕಮಿಷನರ್ಗಳಿಗೆ ಸಮನ್ಸ್ ನೀಡಿ ಕರೆಸಿಕೊಂಡಿವೆ. ಈ ರಾಜತಾಂತ್ರಿಕ ನಡೆಗಳು ವಾತಾವರಣವನ್ನು ಮತ್ತಷ್ಟು ಹದಗೆಡಿಸುವಂತೆ ಮಾಡಿವೆ.

ಬಾಂಗ್ಲಾ ಇವೆಲ್ಲವನ್ನೂ ವಾಸ್ತವಿಕ ದೃಷ್ಟಿಕೋನದಿಂದ ನೋಡುವುದು ಅಗತ್ಯವಾಗಿದೆ, ಆದರೆ ಯೂನಸ್ ಅವರು ಬಾಂಗ್ಲಾದೇಶದ ಮಧ್ಯಂತರ ಆಡಳಿತದ ಮುಖ್ಯಸ್ಥರಾದ ಕಾಲದಿಂದ ಭಾರತದ ಕಳಕಳಿಗಳಿಗೆ ಯಾವುದೇ ಮಾನ್ಯತೆ ನೀಡಿಲ್ಲ. ಬಾಂಗ್ಲಾದೇಶದಲ್ಲಿ ಭಾರತದ ವಿರುದ್ಧ ಇರುವ ಭಾವನೆಗಳನ್ನು ಹತ್ತಿಕ್ಕಲು ಅವರು ಈಗ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ನರೇಂದ್ರ ಮೋದಿ ಸರ್ಕಾರವು ನವದೆಹಲಿಯ ಬಾಂಗ್ಲಾದೇಶ ಹೈಕಮಿಷನ್ ಮುಂದೆ ಪ್ರತಿಭಟನೆ ನಡೆಸಲು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳಕ್ಕೆ ಅವಕಾಶ ನೀಡಿದೆ.

ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಮುಖ ಪ್ರಶ್ನೆಯೆಂದರೆ, ಫೆಬ್ರವರಿಯಲ್ಲಿ ಚುನಾವಣೆಗಳು ನಡೆಯುವುದು ಸಾಧ್ಯವೇ ಎಂಬುದು. ಈಗಿನ ಅರಾಜಕ ಸ್ಥಿತಿ ಮುಂದುವರಿದರೆ, ಚುನಾವಣೆಗಳು ಹೇಗೆ ನಡೆಯಲು ಸಾಧ್ಯ ಎಂದು ಊಹಿಸುವುದು ಕಷ್ಟ. ಚುನಾವಣೆಯನ್ನು ಮುಂದೂಡುವುದನ್ನು ಖಚಿತಪಡಿಸಿಕೊಳ್ಳಲು ಈ ಪರಿಸ್ಥಿತಿಯ ಲಾಭ ಪಡೆಯಲು ಬಯಸುವ ತೀವ್ರಗಾಮಿ ಇಸ್ಲಾಮಿಸ್ಟ್ ಗುಂಪುಗಳಿವೆ. ಅವರು ಬಾಂಗ್ಲಾದೇಶದ ಬೀದಿಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ ಮತ್ತು ಭಾರತದ ವಿರುದ್ಧ ವಿಷ ಕಾರುತ್ತಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶದ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಮದ್‌ ಯೂನಸ್‌ ಅವರು ಶಾಂತಿಯುತ ಸಂಬಂಧಗಳನ್ನು ಕಾಯ್ದುಕೊಳ್ಳುವಲ್ಲಿ ಸವಾಲಿನ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಸದಾ ಭಾರತ ವಿರೋಧಿ ಅಜೆಂಡಾವನ್ನೇ ಹೊಂದಿರುವ ಜಮಾತ್-ಎ-ಇಸ್ಲಾಮಿ ಪಕ್ಷವು, ಚುನಾವಣೆಗಳನ್ನು ಮುಂದೂಡಬೇಕು ಎಂದು ಇದುವರೆಗೆ ದನಿ ಎತ್ತಿಲ್ಲ. ಬೇಗಂ ಖಲೀದಾ ಜಿಯಾ ನೇತೃತ್ವದ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಬಹುಮಟ್ಟಿಗೆ ಚುನಾವಣೆ ನಡೆಯುವುದನ್ನೇ ಬಯಸುತ್ತದೆ. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖಲೀದಾ ಜಿಯಾ ಅವರು ನಿಧನರಾಗಿದ್ದಾರೆ. ಅವರ ಪುತ್ರ ತಾರಿಕ್ ರೆಹಮಾನ್ ಅವರು 17 ವರ್ಷಗಳ ವಿದೇಶಿ ವಾಸದ ನಂತರ ಈಗಷ್ಟೇ ದೇಶಕ್ಕೆ ಮರಳಿದ್ದಾರೆ. ಪರಿಸ್ಥಿತಿಯನ್ನು ಅರಿಯಲು ಅವರಿಗೆ ಸ್ವಲ್ಪ ಸಮಯ ಬೇಕಾದೀತು. ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಯಾವುದೇ ಆಸಕ್ತಿಯನ್ನು ಬಾಂಗ್ಲಾದೇಶದ ಭದ್ರತಾ ಪಡೆಗಳು ತೋರಿಸುತ್ತಿಲ್ಲ. ಅವರು ಪರಿಸ್ಥಿತಿಯನ್ನು ಯೂನಸ್ ಆಡಳಿತವೇ ನಿಭಾಯಿಸಲಿ ಎಂಬುದು ಅದರ ಇರಾದೆಯಾಗಿದೆ.

ಚುನಾವಣೋತ್ತರ ಸನ್ನಿವೇಶಕ್ಕಾಗಿ ಕಾಯುತ್ತಿದೆ ಭಾರತ

ಚುನಾವಣೆಗಳು ನಡೆಯುತ್ತವೆ ಮತ್ತು ಅದರ ನಂತರ ಉಂಟಾಗುವ ಹೊಸ ರಾಜಕೀಯ ಸ್ಥಿತಿಯೊಂದಿಗೆ ಬಾಂಗ್ಲಾದೇಶದ ಜೊತೆ ಸಂಬಂಧವನ್ನು ತಹಬಂದಿಗೆ ತರುವ ಕೆಲಸವನ್ನು ಪ್ರಾರಂಭಿಸಬಹುದು ಎಂಬ ಕಲ್ಪನೆ ಮೇಲೆ ಭಾರತದ ನೀತಿಯು ನಿಂತಿರುವಂತೆ ಕಾಣುತ್ತಿದೆ. ತನ್ನ ಭದ್ರತಾ ಕಾಳಜಿಗಳ ಬಗ್ಗೆ ಯೂನಸ್ ಆಡಳಿತವು ತೋರಿಸುತ್ತಿರುವ ನಕಾರಾತ್ಮಕ ಧೋರಣೆಯಿಂದ ಭಾರತ ಅಸಮಾಧಾನಗೊಂಡಿದೆ. ಪಾಕಿಸ್ತಾನದೊಂದಿಗೆ ಬಾಂಗ್ಲಾ ಬೆಳೆಸುತ್ತಿರುವ ನಿಕಟ ಸಂಬಂಧ ಇದಕ್ಕೆ ಸಾಕ್ಷಿಯಾಗಿದೆ. ಪಾಕಿಸ್ತಾನದ ಸೇನಾ ಜನರಲ್ಗಳು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದಾರೆ. ಪಾಕಿಸ್ತಾನದೊಂದಿಗಿನ ತನ್ನ ಸಂಬಂಧವನ್ನು ಹೇಗೆ ನೋಡಬೇಕು ಎಂಬುದು ನಿಸ್ಸಂದೇಹವಾಗಿ ಬಾಂಗ್ಲಾದೇಶಕ್ಕೆ ಬಿಟ್ಟ ನಿರ್ಧಾರವಾಗಿದೆ.

ಆದರೆ, ಭಾರತದ ಆತಂಕಗಳು ಸಮಂಜಸವಾಗಿವೆ. ಏಕೆಂದರೆ ಹಿಂದೆ ಬಿಎನ್ಪಿ ಸರ್ಕಾರವು ಭಾರತ ವಿರೋಧಿ ಗುಂಪುಗಳಿಗೆ ತನ್ನ ಭೂಪ್ರದೇಶದಲ್ಲಿ ವಾಸಿಸಲು ಅವಕಾಶ ನೀಡಿತ್ತು ಮತ್ತು ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI) ನೊಂದಿಗೆ ನಿಕಟ ಸಂಪರ್ಕ ಹೊಂದಲು ಬಿಟ್ಟಿತ್ತು. ಆ ಸಮಯದಲ್ಲಿ ಬಾಂಗ್ಲಾದೇಶವನ್ನು ಭಾರತದ ವಿರುದ್ಧ ನೆಲೆಯಾಗಿ ಬಳಸಿಕೊಳ್ಳಲಾಗಿತ್ತು. ಆದರೆ ಹಸೀನಾ ಭಾರತದ ಭದ್ರತಾ ಕಾಳಜಿಗಳ ಬಗ್ಗೆ ಕಾಳಜಿ ವಹಿಸಿದ್ದರು ಮತ್ತು ಪಾಕಿಸ್ತಾನದಂತಹ ದೇಶಗಳು ಭಾರತದ ವಿರುದ್ಧ ತನ್ನ ನೆಲವನ್ನು ಬಳಸಲು ಅವಕಾಶ ನೀಡಿರಲಿಲ್ಲ.

ಅಮೆರಿಕದ ನಿಲುವೇನು?

ಟರ್ಕಿ ಮತ್ತು ಕತಾರ್ನಂತಹ ಇಸ್ಲಾಮಿಕ್ ದೇಶಗಳು ಬಾಂಗ್ಲಾದೇಶದ ವ್ಯವಹಾರಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿವೆ. ಅಮೆರಿಕ ಕೂಡ ಇದೇ ಹಾದಿಯಲ್ಲಿದೆ. ಫೆಬ್ರವರಿ ಚುನಾವಣೆಯನ್ನು ಮುಂದೂಡಲು ಅವು ಕೂಡ ಬಯಸುತ್ತವೆಯೇ ಎಂಬುದು ಸದ್ಯಕ್ಕೆ ಅಸ್ಪಷ್ಟ. ಜೊತೆಗೆ ಬೀದಿಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಭಾರತ ವಿರೋಧಿ ಗುಂಪುಗಳನ್ನು ನಿಯಂತ್ರಿಸುವಂತೆ ಅಮೆರಿಕವು ಯೂನಸ್ ಆಡಳಿತ ಮತ್ತು ಸೇನೆಗೆ ಸಲಹೆ ನೀಡುತ್ತಿದೆಯೇ ಎಂಬುದು ಕೂಡ ತಿಳಿದಿಲ್ಲ. ಹಸೀನಾ ಅವರ ಪತನದ ಬಗ್ಗೆ ಅಮೆರಿಕಕ್ಕೆ ಅಸಮಾಧಾನವೇನೂ ಇರಲಿಲ್ಲ ಎಂಬುದು ವ್ಯಾಪಕ ನಂಬಿಕೆ. ಹಸೀನಾ ವಿರುದ್ಧದ ಪ್ರತಿಭಟನೆಗಳಿಗೆ ಅಮೆರಿಕವೇ ಸಹಾಯ ಮಾಡಿದೆ ಎಂದು ಕೆಲವರು ಹೇಳುವಷ್ಟರ ಮಟ್ಟಿಗೆ ಈ ಚರ್ಚೆ ಇದೆ.

ಭಾರತವನ್ನು ಎದುರು ಹಾಕಿಕೊಳ್ಳದಿರುವುದು ಬಾಂಗ್ಲಾದೇಶದ ಹಿತದೃಷ್ಟಿಯಿಂದ ಅಗತ್ಯ ಎಂಬ ಸಲಹೆಯನ್ನು ಅಮೆರಿಕ ಮತ್ತು ಇತರ ಪ್ರಮುಖ ರಾಷ್ಟ್ರಗಳು ಯೂನಸ್ ಆಡಳಿತಕ್ಕೆ ನೀಡಬೇಕು. ವಾಸ್ತವವಾಗಿ, ಭೂಪಟವನ್ನು ಗಮನಿಸಿದರೆ ಬಾಂಗ್ಲಾದೇಶವು ಭಾರತದಿಂದ ತನ್ನನ್ನು ತಾನು ಪ್ರತ್ಯೇಕಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ.

ಭಾರತದೊಂದಿಗೆ ಆರ್ಥಿಕ ಏಕೀಕರಣ ಮತ್ತು ಪೂರ್ಣ ಸಂಪರ್ಕವನ್ನು ಬಾಂಗ್ಲಾದೇಶ ವಿರೋಧಿಸುತ್ತಾ ಬಂದಿದ್ದರೂ, ಪಾಕಿಸ್ತಾನದಂತಹ ಭಾರತ ವಿರೋಧಿ ದೇಶಗಳ ಸಹಕಾರದೊಂದಿಗೆ ಭಾರತದ ಈಶಾನ್ಯ ಪ್ರದೇಶದಲ್ಲಿ ತೊಂದರೆ ಸೃಷ್ಟಿಸಬಹುದು ಎಂದು ನಂಬುವ ಬಾಂಗ್ಲಾದೇಶದ ಗುಂಪುಗಳು, ಭವಿಷ್ಯದಲ್ಲಿ ಆ ದೇಶಕ್ಕೆ ಅಂತಿಮವಾಗಿ ಹಾನಿಯನ್ನೇ ಉಂಟುಮಾಡಲಿವೆ.

ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಭಾರತಕ್ಕಿದೆ ಎಂಬುದು ಅವರಿಗೆ ತಿಳಿದಿರಲಿ. ಭಾರತದ ವಿಷಯಕ್ಕೆ ಬಂದರೆ, ಅದು ಸದ್ಯಕ್ಕೆ ಹೆಚ್ಚಿನ ಸಂಯಮ ಪ್ರದರ್ಶಿಸಬೇಕು ಮತ್ತು ಬೇರೆ ಯಾವುದೇ ಆಯ್ಕೆಯಿಲ್ಲದ ಹೊರತು ಬಲವಂತದ ತಂತ್ರಗಳನ್ನು ಬಳಸಬಾರದು. ಆ ಹಂತ ಇನ್ನೂ ಬಂದಿಲ್ಲ.

ಚತುರ ನಿಷ್ಕ್ರಿಯತೆ-ಮುಂಚೂಣಿ ನೀತಿ

ಭಾರತ ಮತ್ತು ಬಾಂಗ್ಲಾದೇಶದ ಸಂಬಂಧಗಳ ಈಗಿನ ಸ್ಥಿತಿ, ತನ್ನ ನೆರೆಹೊರೆಯ ದೇಶಗಳೊಂದಿಗೆ ಸಂಬಂಧವನ್ನು ಮುಂದುವರಿಸುವಲ್ಲಿ ಭಾರತವು ಹೊಂದಿರಬೇಕಾದ ರಾಜತಾಂತ್ರಿಕ ಸಂರಚನೆಯ ಬಗ್ಗೆ ಮತ್ತೊಮ್ಮೆ ಗಮನ ಸೆಳೆಯುತ್ತದೆ. ಈ ಸಂದರ್ಭದಲ್ಲಿ, ಬ್ರಿಟಿಷ್ ಇಂಡಿಯಾವು ಅಫ್ಘಾನಿಸ್ತಾನದೊಂದಿಗೆ ಹೊಂದಿದ್ದ ಸಂಬಂಧಗಳನ್ನು ಅವಲೋಕಿಸುವುದು ಬುದ್ಧಿವಂತಿಕೆಯ ಲಕ್ಷಣವಾಗಿದೆ. ಅಫ್ಘಾನಿಸ್ತಾನದ ಜೊತೆಗಿನ ವ್ಯವಹಾರಗಳ ವಿಚಾರದಲ್ಲಿ ಬ್ರಿಟಿಷ್ ಇಂಡಿಯಾದಲ್ಲಿ ವಿಶಾಲವಾಗಿ ಎರಡು ಚಿಂತನಾ ಪಂಥಗಳಿದ್ದವು. ಮೊದಲನೆಯದು 'ಮಾಸ್ಟರ್ಲಿ ಇನ್ಆಕ್ಟಿವಿಟಿ' (ಚತುರ ನಿಷ್ಕ್ರಿಯತೆ). ಇದರರ್ಥ, ಆ ದೇಶದ ಆಂತರಿಕ ವ್ಯವಹಾರಗಳಿಂದ ದೂರವಿರುವುದು ಮತ್ತು ಕಾಬೂಲ್ನಲ್ಲಿ ಯಾರು ಅಧಿಕಾರದಲ್ಲಿದ್ದಾರೋ ಅವರೊಂದಿಗೆ ವ್ಯವಹರಿಸುವುದು.

ಅದೇ ವೇಳೆ, ಅವರ ಚಟುವಟಿಕೆಗಳ ಮೇಲೆ ಕಣ್ಣಿಡುವುದು ಮತ್ತು ಬ್ರಿಟಿಷ್ ಇಂಡಿಯಾದ 'ಲಕ್ಷ್ಮಣ ರೇಖೆ'ಗಳ ಬಗ್ಗೆ ಅವರಿಗೆ ಅರಿವು ಮೂಡಿಸುವುದು. ಒಂದು ವೇಳೆ ಈ ರೇಖೆಗಳನ್ನು ದಾಟಿದರೆ, ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು.

ಎರಡನೇ ಪಂಥವು 'ಫಾರ್ವರ್ಡ್ ಪಾಲಿಸಿ' (ಮುಂಚೂಣಿ ನೀತಿ)ಯನ್ನು ಬೆಂಬಲಿಸುತ್ತಿತ್ತು. ಇದು ಅಗತ್ಯ ಅನಿಸಿದ ಸಂದರ್ಭದ್ದಲ್ಲಿ ಬ್ರಿಟಿಷ್ ಇಂಡಿಯಾದ ಶಸ್ತ್ರಾಸ್ತ್ರ ಬಲದ ಮೂಲಕ ತನಗೆ ಬೇಕಾದ ಆಡಳಿತಗಾರನನ್ನು ಕಾಬೂಲ್ನಲ್ಲಿ ಕೂರಿಸುವುದು. ಇದು ಸಹಜವಾಗಿಯೇ ಆ ದೇಶದ ಆಂತರಿಕ ವ್ಯವಹಾರಗಳಲ್ಲಿ ಸಕ್ರಿಯವಾಗಿ ಹಸ್ತಕ್ಷೇಪ ಮಾಡುವುದಾಗಿತ್ತು. ಬ್ರಿಟಿಷ್ ಇಂಡಿಯಾವು 'ಫಾರ್ವರ್ಡ್ ಪಾಲಿಸಿ'ಯನ್ನು ಅನುಸರಿಸಿದ ಎರಡು ಸಂದರ್ಭಗಳಲ್ಲೂ ಭಾರೀ ಹಿನ್ನಡೆಯನ್ನು ಅನುಭವಿಸಿತು.

ತನ್ನ ನೆರೆಹೊರೆಯ ದೇಶಗಳಿಗೆ (ಪಾಕಿಸ್ತಾನ ಇದಕ್ಕೆ ಅಪವಾದ) ಅವರ ದೇಶದ ವಿಷಯಗಳನ್ನು ನಿರ್ಧರಿಸುವುದು ಅಲ್ಲಿನ ಜನರಿಗೆ ಬಿಟ್ಟದ್ದು, ಆದರೆ ಅವರು ಭಾರತದ 'ಲಕ್ಷ್ಮಣ ರೇಖೆ'ಗಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಭಾರತವು ಸ್ಪಷ್ಟವಾಗಿ ತಿಳಿಸಿಬಿಡಬೇಕು. ಈ ಲಕ್ಷ್ಮಣ ರೇಖೆಗಳು ಭದ್ರತೆ ಮತ್ತು ಕಾನೂನಿನ ಆಡಳಿತಕ್ಕೆ ಸಂಬಂಧಿಸಿರಬೇಕೇ ಹೊರತು 'ಗುಂಪು ಆಳ್ವಿಕೆ'ಗೆ ಸಂಬಂಧಿಸಿದ್ದಲ್ಲ. ಇದರರ್ಥ ಭಾರತವು ದೇಶಗಳೊಂದಿಗೆ ವ್ಯವಹರಿಸಬೇಕೇ ಹೊರತು ವ್ಯಕ್ತಿಗಳೊಂದಿಗೆ ಅಲ್ಲ ಮತ್ತು ತನ್ನ 'ಮೆಚ್ಚಿನ' ವ್ಯಕ್ತಿಗಳನ್ನು ಬಿಂಬಿಸುವುದನ್ನು ತಪ್ಪಿಸಬೇಕು. ಅಲ್ಲದೆ, ಈ ಪ್ರದೇಶದಲ್ಲಿ ಇತರ ಪ್ರಮುಖ ರಾಷ್ಟ್ರಗಳ ನಡೆಯನ್ನು ತಾನು ಎದುರಿಸುವುದಾಗಿ ಮತ್ತು ಆಯಾ ದೇಶಗಳು ಸ್ವತಂತ್ರವಾಗಿ ತಮ್ಮ ಆಯ್ಕೆಗಳನ್ನು ಮಾಡುವಂತೆ ಬಿಡಬೇಕೆಂದು ದೊಡ್ಡ ರಾಷ್ಟ್ರಗಳಿಗೆ ತಿಳಿಸುವುದು ಕೂಡ ಮುಖ್ಯವಾಗಿದೆ.

ಈ ರಾಜತಾಂತ್ರಿಕ ಸಂರಚನೆಯು ಸವಾಲುಗಳನ್ನು ಒಡ್ಡಬಹುದು, ಆದರೆ ಇಂತಹ ನೀತಿಯನ್ನು ಪ್ರಯತ್ನಿಸಲೇಬೇಕು. ಇದರಿಂದ ಭಾರತದ ನೆರೆಹೊರೆಯ ನೀತಿಯು ದೃಢವಾಗಿ ರಾಜತಾಂತ್ರಿಕ ನಿಯಂತ್ರಣದಲ್ಲಿದೆ ಎಂದು ಅರ್ಥೈಸುತ್ತದೆ. ಪ್ರಸ್ತುತ ಪರಿಸ್ಥಿತಿ ಹಾಗಿದೆಯೇ? ಬಾಂಗ್ಲಾದೇಶದೊಂದಿಗೆ ಇಷ್ಟೊಂದು ಉದ್ವಿಗ್ನತೆ ಇರುವ ಸಮಯದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದಾರೆ. ಇದನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು?


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story