
ಬಾಂಗ್ಲಾದಲ್ಲಿ ಹಿಂದೂಗಳು ತೆರಬೇಕಿದೆ ʻರಕ್ಷಣಾ ತೆರಿಗೆʼ; ಆದರೂ ಪ್ರಾಣಕ್ಕಿಲ್ಲ ಗ್ಯಾರಂಟಿ!
ಬಾಂಗ್ಲಾದೇಶದ ಜೆಸ್ಸೋರ್ ಜಿಲ್ಲೆಯಲ್ಲಿ ಪತ್ರಕರ್ತ ರಾಣಾ ಪ್ರತಾಪ್ ಬೈರಾಗಿ ಅವರನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ಜೀವ ರಕ್ಷಣೆಗಾಗಿ 3 ಲಕ್ಷ ಟಾಕಾ ನೀಡಿದ್ದರೂ ನಡೆದ ಈ ಹತ್ಯೆ ಬಾಂಗ್ಲಾ ಹಿಂದೂಗಳಲ್ಲಿ ತಲ್ಲಣ ಮೂಡಿಸಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಸ್ಥಿತಿ ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದೆ. ಜೆಸ್ಸೋರ್ ಜಿಲ್ಲೆಯ ಕೇಶಬ್‌ಪುರದಲ್ಲಿ ಐಸ್ ಫ್ಯಾಕ್ಟರಿ ಮಾಲೀಕ ಮತ್ತು ಪತ್ರಕರ್ತರಾಗಿದ್ದ ರಾಣಾ ಪ್ರತಾಪ್ ಬೈರಾಗಿ (37) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಚ್ಚರಿ ಎಂಬಂತೆ, ಬೈರಾಗಿ ಅವರು ತಮ್ಮ ಪ್ರಾಣ ರಕ್ಷಣೆಗಾಗಿ ಸ್ಥಳೀಯ ಮೂಲಭೂತವಾದಿಗಳಿಗೆ ಲಕ್ಷಾಂತರ ರೂಪಾಯಿ 'ಪ್ರೊಟೆಕ್ಷನ್ ಮನಿ' (ರಕ್ಷಣಾ ತೆರಿಗೆ) ನೀಡುತ್ತಿದ್ದರೂ ಅವರನ್ನು ಬರ್ಬರವಾಗಿ ಕೊಲ್ಲಲಾಗಿದೆ.
ಯಾರು ಈ ರಾಣಾ ಪ್ರತಾಪ್ ಬೈರಾಗಿ?
37 ವರ್ಷದ ರಾಣಾ ಪ್ರತಾಪ್ ಬೈರಾಗಿ ಜೆಸ್ಸೋರ್ ಜಿಲ್ಲೆಯ ಅರುವಾ ಗ್ರಾಮದ ನಿವಾಸಿ. ಇವರು ಕೇವಲ ಐಸ್ ಫ್ಯಾಕ್ಟರಿ ಮಾಲೀಕರಷ್ಟೇ ಅಲ್ಲದೆ, ವೃತ್ತಿಯಿಂದ ಪತ್ರಕರ್ತರೂ ಆಗಿದ್ದರು. ತಮ್ಮ ಗ್ರಾಮದ 100ಕ್ಕೂ ಹೆಚ್ಚು ಹಿಂದೂ ಕುಟುಂಬಗಳ ಧ್ವನಿಯಾಗಿದ್ದ ಇವರು, ಅಲ್ಪಸಂಖ್ಯಾತರು ಎದುರಿಸುತ್ತಿದ್ದ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದರು. ರಾಜಕೀಯವಾಗಿ ಇವರು ಹಸೀನಾ ನೇತೃತ್ವದ 'ಅವಾಮಿ ಲೀಗ್' ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು.
'ರಕ್ಷಣಾ ತೆರಿಗೆ' ನೀಡಿದರೂ ಸಿಗದ ಜೀವದಾನ
ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಹಿಂದೂಗಳು ಜೀವ ಉಳಿಸಿಕೊಳ್ಳಲು ಮೂಲಭೂತವಾದಿಗಳಿಗೆ ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.
ಏನಿದು 'ಪ್ರೊಟೆಕ್ಷನ್ ಮನಿ' ದಂಧೆ?
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ (ಆಗಸ್ಟ್ 2025), ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಈ ಸಂದರ್ಭವನ್ನು ಬಳಸಿಕೊಳ್ಳುತ್ತಿರುವ ಮೂಲಭೂತವಾದಿ ಸಂಘಟನೆಗಳು (ಪ್ರಮುಖವಾಗಿ ಜಮಾತ್-ಎ-ಇಸ್ಲಾಮಿ ಮತ್ತು ಕೆಲವು ಸ್ಥಳೀಯ ಗ್ಯಾಂಗ್‌ಗಳು) ಹಿಂದೂ ಕುಟುಂಬಗಳನ್ನು ಗುರಿಯಾಗಿಸಿಕೊಂಡಿವೆ. ಮೂಲಭೂತವಾದಿಗಳು ಹಿಂದೂಗಳ ಮನೆ ಅಥವಾ ವ್ಯಾಪಾರ ಕೇಂದ್ರಗಳಿಗೆ ಭೇಟಿ ನೀಡಿ, "ನಿಮ್ಮ ಆಸ್ತಿ ಮತ್ತು ಜೀವಕ್ಕೆ ನಾವು ರಕ್ಷಣೆ ನೀಡುತ್ತೇವೆ, ಅದಕ್ಕೆ ಪ್ರತಿಯಾಗಿ ಇಂತಿಷ್ಟು ಹಣ ನೀಡಬೇಕು" ಎಂದು ಬೇಡಿಕೆ ಇಡುತ್ತಾರೆ. ಇದನ್ನು ನಿರಾಕರಿಸಿದರೆ ಹಲ್ಲೆ, ಲೂಟಿ ಅಥವಾ ಕೊಲೆ ಮಾಡಲಾಗುತ್ತಿದೆ.
ಮೊತ್ತದ ವಿವರ
ವರದಿಗಳ ಪ್ರಕಾರ, ಸಾಮಾನ್ಯ ಕುಟುಂಬಗಳಿಂದ ಸಾವಿರಾರು ಟಾಕಾಗಳನ್ನು ವಸೂಲಿ ಮಾಡಿದರೆ, ಉದ್ಯಮಿಗಳು ಅಥವಾ ಪತ್ರಕರ್ತ ರಾಣಾ ಪ್ರತಾಪ್ ಬೈರಾಗಿ ಅವರಂತಹ ಪ್ರಭಾವಿ ವ್ಯಕ್ತಿಗಳಿಂದ ಲಕ್ಷಾಂತರ ಟಾಕಾಗಳನ್ನು (ಉದಾಹರಣೆಗೆ 3 ಲಕ್ಷ ಟಾಕಾದವರೆಗೆ) ಪೀಕಲಾಗುತ್ತಿದೆ.
ಹಣ ನೀಡಿದರೂ ಇಲ್ಲ ಗ್ಯಾರಂಟಿ
ರಾಣಾ ಪ್ರತಾಪ್ ಬೈರಾಗಿ ಅವರ ಪ್ರಕರಣವು ಈ ದಂಧೆಯ ಅತ್ಯಂತ ಕ್ರೂರ ಮುಖವನ್ನು ತೋರಿಸಿದೆ. ಅವರು 3 ಲಕ್ಷ ಟಾಕಾ ನೀಡಿದ್ದರೂ ಸಹ, ಅವರನ್ನು 7 ಗುಂಡುಗಳನ್ನು ಹೊಡೆದು ಕೊಲ್ಲಲಾಯಿತು. ಅಂದರೆ, ಹಣ ನೀಡಿದ ಮೇಲೂ ಹಿಂದೂಗಳ ಜೀವಕ್ಕೆ ಅಲ್ಲಿ ಯಾವುದೇ ಭರವಸೆ ಇಲ್ಲದಂತಾಗಿದೆ.
ಸೋಮವಾರ ದುಷ್ಕರ್ಮಿಗಳು ಅವರನ್ನ ಫ್ಯಾಕ್ಟರಿ ಬಳಿ ಕರೆಸಿಕೊಂಡು, ಅತಿ ಸಮೀಪದಿಂದ 7 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಹಣ ಪಡೆದ ಮೇಲೂ ಅವರನ್ನು ಕೊಂದಿರುವುದು ಅಲ್ಲಿನ ಅಲ್ಪಸಂಖ್ಯಾತರಲ್ಲಿ ತೀವ್ರ ಆತಂಕ ಮೂಡಿಸಿದೆ.
ಇದರ ಹಿಂದಿರುವ ಉದ್ದೇಶವೇನು?
ಬೈರಾಗಿ ಹತ್ಯೆಯ ಹಿಂದೆ ಕೇವಲ ರಾಜಕೀಯ ದ್ವೇಷ ಅಡಗಿಲ್ಲ, ಬದಲಿಗೆ ಇದೊಂದು ದೊಡ್ಡ 'ಸಂದೇಶ' ಎಂದು ಅವರ ಕುಟುಂಬ ನಂಬಿದೆ. ಅಲ್ಪಸಂಖ್ಯಾತರ ಪರ ಮಾತನಾಡುವ ಬೈರಾಗಿ ಅವರಂತಹ ಪ್ರಭಾವಿ ನಾಯಕನನ್ನೇ ಕೊಂದರೆ, ಉಳಿದ ಸಾಮಾನ್ಯ ಹಿಂದೂಗಳು ಭಯಭೀತರಾಗಿ ದೇಶ ಬಿಟ್ಟು ಹೋಗುತ್ತಾರೆ ಎಂಬುದು ಉಗ್ರಗಾಮಿಗಳ ಲೆಕ್ಕಾಚಾರ.
ಜಮಾತ್-ಎ-ಇಸ್ಲಾಮಿ ಮತ್ತು ಸುಲಿಗೆ ಜಾಲ
ವರದಿಗಳ ಪ್ರಕಾರ, 'ಜಮಾತ್-ಎ-ಇಸ್ಲಾಮಿ' ಸಂಘಟನೆಗೆ ಸೇರಿದ ಹೊರಗಿನ ಗ್ಯಾಂಗ್‌ಗಳು ಪ್ರತಿ ತಿಂಗಳು ಹಿಂದೂಗಳ ಮನೆಗೆ ಭೇಟಿ ನೀಡುತ್ತಿವೆ. "ನಿಮಗೆ ರಕ್ಷಣೆ ಬೇಕೆಂದರೆ ಹಣ ಕೊಡಿ, ಇಲ್ಲದಿದ್ದರೆ ಸಾವು ಖಚಿತ" ಎಂದು ಬೆದರಿಸಲಾಗುತ್ತಿದೆ. ಇದನ್ನು ಅನೇಕರು ಮಧ್ಯಕಾಲೀನ ಕಾಲದ 'ಜಿಸಿಯಾ' ತೆರಿಗೆಗೆ ಹೋಲಿಸುತ್ತಿದ್ದಾರೆ. ಈ ಸರಣಿ ಹತ್ಯೆಗಳಿಂದ ಬೆದರಿರುವ ಗ್ರಾಮಸ್ಥರು ಈಗ ತಮ್ಮ ಜಮೀನು, ಮನೆಗಳನ್ನು ಅಲ್ಪ ಬೆಲೆಗೆ ಮಾರಿ, ಭಾರತಕ್ಕೆ ವಲಸೆ ಬರಲು ವೀಸಾಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ.

