ಬಾಂಗ್ಲಾ ಚುನಾವಣೆ: ಖಲೀದಾ ಜಿಯಾ ಪುತ್ರ ತಾರಿಕ್ ರೆಹಮಾನ್ ಪ್ರಧಾನಿ ಪಟ್ಟಕ್ಕೆ!
x
ಬಾಂಗ್ಲಾದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿದ ತಾರಿಕ್ ರೆಹಮಾನ್

ಬಾಂಗ್ಲಾ ಚುನಾವಣೆ: ಖಲೀದಾ ಜಿಯಾ ಪುತ್ರ ತಾರಿಕ್ ರೆಹಮಾನ್ ಪ್ರಧಾನಿ ಪಟ್ಟಕ್ಕೆ!

ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ತಾರಿಕ್ ರೆಹಮಾನ್ ನೇತೃತ್ವದ ಬಿಎನ್‌ಪಿ (BNP) 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ.


Click the Play button to hear this message in audio format

ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಇದೊಂದು ಮಹತ್ವದ ತಿರುವು. 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ಶೇಖ್ ಹಸೀನಾ ಅವರ ಪತನದ ನಂತರ, ಈಗ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುತ್ತಿದೆ.

2024ರ ಜುಲೈನಲ್ಲಿ ನಡೆದ ವಿದ್ಯಾರ್ಥಿ ಹೋರಾಟದ ಫಲವಾಗಿ ಶೇಖ್ ಹಸೀನಾ ಸರ್ಕಾರ ಪತನಗೊಂಡ 18 ತಿಂಗಳ ನಂತರ ಬಾಂಗ್ಲಾದೇಶದಲ್ಲಿ ಚುನಾವಣೆ ನಡೆದಿದೆ. ಒಟ್ಟು 300 ಸ್ಥಾನಗಳಿರುವ ಬಾಂಗ್ಲಾದೇಶದ ಸಂಸತ್‌ನಲ್ಲಿ ಬಿಎನ್‌ಪಿ ಪಕ್ಷವು ಈಗಾಗಲೇ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಇದರೊಂದಿಗೆ ಬಿಎನ್‌ಪಿ ಅಧ್ಯಕ್ಷ ತಾರಿಕ್ ರೆಹಮಾನ್ ಅವರು ದೇಶದ ಮುಂದಿನ ಪ್ರಧಾನಿಯಾಗುವುದು ಖಚಿತವಾಗಿದೆ.

ಯಾರು ಈ ತಾರಿಕ್ ರೆಹಮಾನ್?

ತಾರಿಕ್ ರೆಹಮಾನ್ ಅವರ ರಾಜಕೀಯ ಜೀವನವು ಏಳುಬೀಳುಗಳಿಂದ ಕೂಡಿದೆ. ಅವರ ಬಗ್ಗೆ ನೀವು ತಿಳಿಯಲೇಬೇಕಾದ ಪ್ರಮುಖ ಅಂಶಗಳು ಇಲ್ಲಿವೆ. ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ. ಇವರು 1965ರ ನವೆಂಬರ್ 20 ರಂದು ಢಾಕಾದಲ್ಲಿ ಜನಿಸಿದರು.

17 ವರ್ಷಗಳ ವನವಾಸ

ಭ್ರಷ್ಟಾಚಾರದ ಆರೋಪದ ಮೇಲೆ 2008ರಲ್ಲಿ ಮಿಲಿಟರಿ ಬೆಂಬಲಿತ ಸರ್ಕಾರ ಇವರನ್ನು ಬಂಧಿಸಿತ್ತು. ನಂತರ ಅವರು ದೇಶ ಬಿಟ್ಟು ಲಂಡನ್‌ಗೆ ತೆರಳಿ, ಅಲ್ಲಿ ಸುಮಾರು 17 ವರ್ಷಗಳ ಕಾಲ ಸ್ವಯಂ-ಘೋಷಿತ ದೇಶಭ್ರಷ್ಟರಾಗಿ ವಾಸವಿದ್ದರು. ಶೇಖ್ ಹಸೀನಾ ಅವರ ಆಡಳಿತಾವಧಿಯಲ್ಲಿ ತಾರಿಕ್ ಮೇಲೆ ಹಲವು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ, ಇವೆಲ್ಲವೂ "ರಾಜಕೀಯ ಪ್ರೇರಿತ" ಎಂದು ತಾರಿಕ್ ಸದಾ ವಾದಿಸುತ್ತಿದ್ದರು.

ನಾಯಕತ್ವದ ಹಸ್ತಾಂತರ

ತಾರಿಕ್ ಅವರ ತಾಯಿ ಖಲೀದಾ ಜಿಯಾ ಅವರು ಬಾಂಗ್ಲಾ ರಾಜಕೀಯದ ದೈತ್ಯ ಶಕ್ತಿ. ಅವರು ಕಳೆದ ಡಿಸೆಂಬರ್‌ನಲ್ಲಿ ನಿಧನರಾದರು. ತಾಯಿ ನಿಧನರಾಗುವ ಕೇವಲ ಐದು ದಿನಗಳ ಮೊದಲು ತಾರಿಕ್ ಲಂಡನ್‌ನಿಂದ ಬಾಂಗ್ಲಾಕ್ಕೆ ಮರಳಿದ್ದರು. 2024ರ ಆಗಸ್ಟ್‌ನಲ್ಲಿ ಹಸೀನಾ ಸರ್ಕಾರ ಪತನಗೊಂಡ ನಂತರ, ಡಿಸೆಂಬರ್‌ನಲ್ಲಿ ತಾರಿಕ್ ಸ್ವದೇಶಕ್ಕೆ ಮರಳಿದಾಗ ಲಕ್ಷಾಂತರ ಬೆಂಬಲಿಗರು ಅವರಿಗೆ ಅದ್ಧೂರಿ ಸ್ವಾಗತ ಕೋರಿದ್ದರು.

ಪಕ್ಷದ ಮೇಲೆ ಹಿಡಿತ

ದೇಶಕ್ಕೆ ಮರಳಿದ ತಕ್ಷಣ ಇವರ ಮೇಲಿದ್ದ ಹಳೆಯ ಪ್ರಕರಣಗಳಿಂದ ಇವರು ಮುಕ್ತರಾದರು. ನಂತರ ಚುನಾವಣಾ ಪ್ರಚಾರ, ಅಭ್ಯರ್ಥಿಗಳ ಆಯ್ಕೆ ಮತ್ತು ಮೈತ್ರಿ ತಂತ್ರಗಳನ್ನು ಸ್ವತಃ ತಾರಿಕ್ ಅವರೇ ನಿಭಾಯಿಸಿದರು. ಇವರ ಸಮರ್ಥ ನಾಯಕತ್ವದಿಂದಲೇ ಬಿಎನ್‌ಪಿ ಇಂದು 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ದೇಶದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.

ಬಾಂಗ್ಲಾದೇಶದಲ್ಲಿ ಕಳೆದ ಒಂದೂವರೆ ದಶಕದಿಂದ ಒಂದು ಪಕ್ಷದ (ಅವಾಮಿ ಲೀಗ್) ಹಿಡಿತವಿತ್ತು. ಆದರೆ ಈಗ ಬಿಎನ್‌ಪಿ ಅಧಿಕಾರಕ್ಕೆ ಬರುತ್ತಿರುವುದು ದಕ್ಷಿಣ ಏಷ್ಯಾದ ರಾಜಕೀಯ ಸಮೀಕರಣಗಳನ್ನು ಬದಲಿಸಲಿದೆ. ತಾರಿಕ್ ರೆಹಮಾನ್ ಅವರ ಮುಂದಿರುವ ದೊಡ್ಡ ಸವಾಲೆಂದರೆ ದೇಶದ ಆರ್ಥಿಕತೆಯನ್ನು ಸುಧಾರಿಸುವುದು ಮತ್ತು ಹದಗೆಟ್ಟಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರುಸ್ಥಾಪಿಸುವುದು.

Read More
Next Story