
ಬಾಂಗ್ಲಾದೇಶ ಚುನಾವಣೆ: ಬಿಎನ್‌ಪಿ ಮುನ್ನಡೆ- ತಾರಿಕ್ ರೆಹಮಾನ್ ಮುಂದಿನ ಪ್ರಧಾನಿ?
ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ತಾರಿಕ್ ರೆಹಮಾನ್ ನೇತೃತ್ವದ ಬಿಎನ್‌ಪಿ ಪಕ್ಷವು 151ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಎನ್ನಲಾಗಿದೆ.
ಬಾಂಗ್ಲಾದೇಶದ ರಾಜಕೀಯದಲ್ಲಿ ಹೊಸ ಯುಗ ಆರಂಭವಾಗಿದ್ದು, ಶುಕ್ರವಾರ (ಫೆಬ್ರವರಿ 13, 2026) ನಡೆದ ಮತ ಎಣಿಕೆಯಲ್ಲಿ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಭರ್ಜರಿ ಜಯದತ್ತ ಮುನ್ನುಗ್ಗುತ್ತಿದೆ. 2024ರ ಆಗಸ್ಟ್‌ನಲ್ಲಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಪತನಗೊಂಡ ನಂತರ ಅಸ್ತಿತ್ವಕ್ಕೆ ಬಂದಿದ್ದ ಮಧ್ಯಂತರ ಸರ್ಕಾರದ ಸ್ಥಾನವನ್ನು ಈಗ ಬಿಎನ್‌ಪಿ ಅಲಂಕರಿಸಲು ಸಜ್ಜಾಗಿದೆ.
ಬಹುಮತದತ್ತ ಬಿಎನ್‌ಪಿ
ಒಟ್ಟು 300 ಸ್ಥಾನಗಳ ಪೈಕಿ ಬಿಎನ್‌ಪಿ ಈಗಾಗಲೇ 151ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದೆ ಎಂದು ಮಾಧ್ಯಮಗಳ ಅಂಕಿಅಂಶಗಳು ತಿಳಿಸಿವೆ. ಚುನಾವಣಾ ಆಯೋಗವು (EC) ಅಧಿಕೃತ ಘೋಷಣೆಯನ್ನು ಇನ್ನಷ್ಟೇ ಮಾಡಬೇಕಿದೆ. ಕಳೆದ 18 ತಿಂಗಳುಗಳಿಂದ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಆಡಳಿತ ನಡೆಸುತ್ತಿತ್ತು. ಈಗ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬರಲಿದೆ.
ಮುಂದಿನ ಪ್ರಧಾನಿ ಯಾರು?
ಚುನಾವಣೆಯಲ್ಲಿ ಗೆದ್ದರೆ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಬಿಎನ್‌ಪಿ ಈಗಾಗಲೇ ಘೋಷಿಸಿದೆ. 17 ವರ್ಷಗಳ ವನವಾಸದ ನಂತರ ಕಳೆದ ಡಿಸೆಂಬರ್‌ನಲ್ಲಿ ಅವರು ದೇಶಕ್ಕೆ ಮರಳಿದ್ದರು.
ಈ ಬಾರಿ ಸಂಸತ್ತಿನ ಚುನಾವಣೆಯ ಜೊತೆಗೆ 'ಜುಲೈ ನ್ಯಾಷನಲ್ ಚಾರ್ಟರ್' ಎಂಬ 84 ಅಂಶಗಳ ಸುಧಾರಣಾ ಪ್ಯಾಕೇಜ್ ಅನುಷ್ಠಾನದ ಕುರಿತು ಜನಾಭಿಪ್ರಾಯ ಸಂಗ್ರಹವನ್ನೂ ನಡೆಸಲಾಯಿತು.
ಯಾರೆಲ್ಲಾ ಕಣದಲ್ಲಿದ್ದಾರೆ?
ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವು ಈಗ ಅಸ್ತಿತ್ವದಲ್ಲಿಲ್ಲದ ಕಾರಣ, ಈ ಚುನಾವಣೆ ಬಿಎನ್‌ಪಿ ಮತ್ತು ಅದರ ಮಾಜಿ ಮಿತ್ರಪಕ್ಷ ಜಮಾತ್-ಎ-ಇಸ್ಲಾಮಿ ನಡುವಿನ ನೇರ ಹಣಾಹಣಿಯಂತಿತ್ತು. ಜಯದ ಮುನ್ಸೂಚನೆ ಸಿಗುತ್ತಿದ್ದಂತೆ ತಾರಿಕ್ ರೆಹಮಾನ್ ಅವರು ತಮ್ಮ ಕಾರ್ಯಕರ್ತರಿಗೆ ವಿಜಯೋತ್ಸವ ಆಚರಿಸುವ ಬದಲು ಶುಕ್ರವಾರದ 'ಜುಮಾ' ಪ್ರಾರ್ಥನೆಯ ನಂತರ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.
ಮತದಾನದ ಪ್ರಮಾಣ ಮತ್ತು ಭದ್ರತೆ
ಚುನಾವಣಾ ಆಯೋಗವು 55-60% ಮತದಾನವಾಗಿದೆ ಎಂದು ಹೇಳಿಕೊಂಡಿದ್ದರೂ, ವಾಸ್ತವದಲ್ಲಿ ಮತದಾನದ ಪ್ರಮಾಣ ಕಡಿಮೆ ಇತ್ತು ಎಂಬ ವಾದಗಳು ಕೇಳಿಬರುತ್ತಿವೆ. ಮಧ್ಯಾಹ್ನ 2 ಗಂಟೆಯವರೆಗೆ ಶೇ. 47.91 ರಷ್ಟು ಮತದಾನವಾಗಿತ್ತು. ಬಾಂಗ್ಲಾದೇಶದ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಸುಮಾರು 10 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಚುನಾವಣೆಯ ವೇಳೆ ಕೆಲವು ಕಡೆ ಹಿಂಸಾಚಾರ ಸಂಭವಿಸಿದ್ದು, ಬಿಎನ್‌ಪಿ ನಾಯಕರೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

