
ಇಂದು ಬಾಂಗ್ಲಾದೇಶ ಚುನಾವಣೆ- ಹಸೀನಾ ಸರ್ಕಾರ ಪತನದ ನಂತರ ಮೊದಲ ಹೈವೋಲ್ಟೇಜ್ ಫೈಟ್!
ಶೇಖ್ ಹಸೀನಾ ಆಡಳಿತ ಪತನದ 18 ತಿಂಗಳ ನಂತರ ಬಾಂಗ್ಲಾದೇಶದಲ್ಲಿ ಇಂದು ಮತದಾನ ನಡೆಯುತ್ತಿದೆ. ಬಿಎನ್‌ಪಿಯ ತಾರಿಕ್ ರೆಹಮಾನ್ ಪ್ರಧಾನಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಶೇಖ್ ಹಸೀನಾ ಅವರ ಆಡಳಿತ ಪತನದ 18 ತಿಂಗಳುಗಳ ನಂತರ ಬಾಂಗ್ಲಾದೇಶದಲ್ಲಿ ಇಂದು (ಫೆಬ್ರವರಿ 12, 2026) ಐತಿಹಾಸಿಕ ಸಂಸತ್ತಿನ ಚುನಾವಣೆ ನಡೆಯುತ್ತಿದೆ. 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ಶೇಖ್ ಹಸೀನಾ ಅವರ ಸರ್ಕಾರ 2024ರ ಆಗಸ್ಟ್‌ನಲ್ಲಿ ಬೃಹತ್ ಪ್ರತಿಭಟನೆಯಿಂದಾಗಿ ಪತನಗೊಂಡಿತ್ತು. ಆನಂತರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಆಡಳಿತ ನಡೆಸಿತ್ತು. ಈ ಅವಧಿಯಲ್ಲಿ ದೇಶವು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಇಸ್ಲಾಮಿಕ್ ಮೂಲಭೂತವಾದಿಗಳ ಏರಿಕೆ ಮತ್ತು ಭಾರತದಿಂದ ದೂರವಾಗಿ ಪಾಕಿಸ್ತಾನ-ಚೀನಾಕ್ಕೆ ಹತ್ತಿರವಾಗುವಂತಹ ವಿದೇಶಾಂಗ ನೀತಿಯ ಬದಲಾವಣೆಗಳಿಗೆ ಸಾಕ್ಷಿಯಾಗಿತ್ತು.
ಚುನಾವಣಾ ಕಣ
ಬಾಂಗ್ಲಾದೇಶದ ಈ ಬಾರಿಯ ಚುನಾವಣಾ ಕಣದಲ್ಲಿ ತೀವ್ರ ಬದಲಾವಣೆಗಳು ಕಂಡುಬರುತ್ತಿದ್ದು, ಬಿಎನ್‌ಪಿ ಪಕ್ಷವು ಇತ್ತೀಚೆಗೆ ನಿಧನರಾದ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ನೇತೃತ್ವದಲ್ಲಿ ಪುಟಿದೇಳುತ್ತಿದೆ. ಸುಮಾರು 17 ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿದ್ದ ತಾರಿಕ್ ಅವರು ಈಗ ಪ್ರಧಾನಿ ಹುದ್ದೆಯ ಪ್ರಬಲ ಅಭ್ಯರ್ಥಿಯಾಗಿ ದೇಶಾದ್ಯಂತ ಮಿಂಚುತ್ತಿದ್ದಾರೆ. ಆದರೆ ಅವರಿಗೆ ಈ ಬಾರಿ ಹಾರ್ಡ್‌ಲೈನ್ ಇಸ್ಲಾಮಿಕ್ ಸಿದ್ಧಾಂತ ಹೊಂದಿರುವ ಜಮಾತ್-ಎ-ಇಸ್ಲಾಮಿ ಪಕ್ಷವು ಪ್ರಬಲ ಸವಾಲಾಗಿ ಪರಿಣಮಿಸಿದ್ದು, ಬಿಎನ್‌ಪಿಯ ಸಾಂಪ್ರದಾಯಿಕ ವೋಟ್ ಬ್ಯಾಂಕ್‌ಗೆ ಲಗ್ಗೆ ಹಾಕುವ ಲಕ್ಷಣಗಳು ಗೋಚರಿಸುತ್ತಿವೆ.
ಮತ್ತೊಂದೆಡೆ, ಕಳೆದ 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವನ್ನು ಚುನಾವಣೆಯಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು "ಮೋಸದ ಚುನಾವಣೆ" ಎಂದು ಕರೆದಿರುವ ಅವಾಮಿ ಲೀಗ್, ಈ ಪ್ರಕ್ರಿಯೆಯನ್ನು ಬಹಿಷ್ಕರಿಸುವಂತೆ ಜನರಿಗೆ ಕರೆ ನೀಡುವುದರ ಮೂಲಕ ರಾಜಕೀಯ ಸಂಘರ್ಷಕ್ಕೆ ಹೊಸ ಆಯಾಮ ನೀಡಿದೆ.
ಮತದಾನದ ಅಂಕಿಅಂಶಗಳು
ಬಾಂಗ್ಲಾದೇಶದ ಒಟ್ಟು 12.7 ಕೋಟಿ ಮತದಾರರಲ್ಲಿ 18 ರಿಂದ 37 ವರ್ಷದೊಳಗಿನ ಯುವ ಮತದಾರರು ಶೇ. 44 ರಷ್ಟಿದ್ದಾರೆ. 299 ಸಂಸದೀಯ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಸುಮಾರು 50 ರಾಜಕೀಯ ಪಕ್ಷಗಳು ಕಣದಲ್ಲಿವೆ. ಪಾರದರ್ಶಕ ಮತಪೆಟ್ಟಿಗೆ ಮತ್ತು ಪೇಪರ್ ಬ್ಯಾಲೆಟ್ ಮೂಲಕ ಬೆಳಿಗ್ಗೆ 7.30 ರಿಂದ ಸಂಜೆ 4.30 ರವರೆಗೆ ಮತದಾನ ನಡೆಯಲಿದೆ.
ಬೃಹತ್ ಭದ್ರತಾ ವ್ಯವಸ್ಥೆ
9.58 ಲಕ್ಷ ಭದ್ರತಾ ಸಿಬ್ಬಂದಿ ಹಾಗೂ 1 ಲಕ್ಷ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೊದಲ ಬಾರಿಗೆ ಭದ್ರತೆಗಾಗಿ ಡ್ರೋನ್ (UAV) ಮತ್ತು ಬಾಡಿ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. 42,659 ಮತಗಟ್ಟೆಗಳ ಪೈಕಿ ಶೇ. 90 ರಷ್ಟು ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಪಾಕಿಸ್ತಾನ, ಭೂತಾನ್, ಶ್ರೀಲಂಕಾ, ನೇಪಾಳ, ಚೀನಾ ಮತ್ತು ಯುರೋಪಿಯನ್ ಯೂನಿಯನ್‌ನಿಂದ ಸುಮಾರು 100 ವಿದೇಶಿ ವೀಕ್ಷಕರು ಬಂದಿದ್ದಾರೆ. ಗಮನಾರ್ಹವಾಗಿ ಈ ಬಾರಿ ಭಾರತವು ಯಾವುದೇ ಚುನಾವಣಾ ವೀಕ್ಷಕರನ್ನು ಕಳುಹಿಸಿಲ್ಲ. 197 ವಿದೇಶಿ ಪತ್ರಕರ್ತರು ಈ ಚುನಾವಣೆಯನ್ನು ವರದಿ ಮಾಡುತ್ತಿದ್ದಾರೆ. ಅವಾಮಿ ಲೀಗ್ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಈ ಚುನಾವಣೆ ಎಷ್ಟು ಪಾರದರ್ಶಕವಾಗಿರಲಿದೆ ಎಂಬ ಪ್ರಶ್ನೆಗಳ ನಡುವೆಯೇ, ಬಾಂಗ್ಲಾದೇಶವು ಹೊಸ ಪ್ರಜಾಪ್ರಭುತ್ವದ ಹಾದಿಯತ್ತ ಹೆಜ್ಜೆ ಹಾಕುತ್ತಿದೆ.

