ತಾರಿಕ್ ರೆಹಮಾನ್ 2.0: ಬಾಂಗ್ಲಾ ಡಾರ್ಕ್ ಪ್ರಿನ್ಸ್ ಗೆಲುವು ಭಾರತದ ಮೇಲೆ ಪರಿಣಾಮ ಬೀರುತ್ತಾ?
x
ಬಾಂಗ್ಲಾದೇಶದಲ್ಲಿ ತಾರಿಕ್ ರೆಹಮಾನ್ ಭರ್ಜರಿ ಗೆಲುವು

ತಾರಿಕ್ ರೆಹಮಾನ್ 2.0: ಬಾಂಗ್ಲಾ 'ಡಾರ್ಕ್ ಪ್ರಿನ್ಸ್' ಗೆಲುವು ಭಾರತದ ಮೇಲೆ ಪರಿಣಾಮ ಬೀರುತ್ತಾ?

ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ತಾರಿಕ್ ರೆಹಮಾನ್ ನೇತೃತ್ವದ ಬಿಎನ್‌ಪಿ ಭರ್ಜರಿ ಜಯ ಸಾಧಿಸಿದೆ. 'ಡಾರ್ಕ್ ಪ್ರಿನ್ಸ್' ಭಾರತದೊಂದಿಗೆ ಹೊಸ ಅಧ್ಯಾಯ ಆರಂಭಿಸುವರೇ?


Click the Play button to hear this message in audio format

ಬಾಂಗ್ಲಾದೇಶದ ರಾಜಕಾರಣದಲ್ಲಿ ಒಂದು ಕಾಲದಲ್ಲಿ 'ಡಾರ್ಕ್ ಪ್ರಿನ್ಸ್' ಎಂದು ಕರೆಯಲ್ಪಡುತ್ತಿದ್ದ, ತಾರಿಕ್ ರೆಹಮಾನ್ ಅವರ ಬಿಎನ್‌ಪಿ (BNP) ಪಕ್ಷವು ಶುಕ್ರವಾರ ನಡೆದ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದೆ. 17 ವರ್ಷಗಳ ಲಂಡನ್ ವಾಸದ ನಂತರ ಮರಳಿರುವ ತಾರಿಕ್, ಈಗ ದೇಶದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ಸಂಬಂಧದಲ್ಲಿ ಇದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆಯೇ?

2024ರಲ್ಲಿ ಶೇಖ್ ಹಸೀನಾ ಪದಚ್ಯುತಿಯ ನಂತರ ಭಾರತ ಮತ್ತು ಬಾಂಗ್ಲಾದೇಶದ ಸಂಬಂಧವು ಸಾಕಷ್ಟು ತಳಮಟ್ಟಕ್ಕೆ ಕುಸಿದಿತ್ತು. ಆದರೆ, ಈಗ ಫಲಿತಾಂಶ ಪ್ರಕಟವಾಗುತ್ತಲೇ ಭಾರತವು ತಾರಿಕ್ ಅವರಿಗೆ ಅಭಿನಂದನೆ ಸಲ್ಲಿಸಿರುವುದು, ಉಭಯ ದೇಶಗಳ ಸಂಬಂಧವನ್ನು ಮತ್ತೆ ಹಳಿಗೆ ತರಲು ಭಾರತ ಎಷ್ಟು ಉತ್ಸುಕವಾಗಿದೆ ಎಂಬುದನ್ನು ತೋರಿಸುತ್ತದೆ.

ಭಾರತದ ದೃಷ್ಟಿಕೋನ

ಮೂಲಭೂತವಾದಿ 'ಜಮಾತ್-ಎ-ಇಸ್ಲಾಮಿ'ಗಿಂತ ಬಿಎನ್‌ಪಿ (BNP) ಪಕ್ಷವು ಹೆಚ್ಚು ಪ್ರಜಾಪ್ರಭುತ್ವವಾದಿ ಮತ್ತು ಉದಾರವಾದಿ ಎಂಬುದು ಭಾರತದ ನಂಬಿಕೆ. ತಾರಿಕ್ ಅವರು "ಬಾಂಗ್ಲಾದೇಶ ಮೊದಲು" ಎನ್ನುವ ಅಜೆಂಡಾ ಹೊಂದಿದ್ದು, ಭಾರತ, ಚೀನಾ ಮತ್ತು ಪಾಕಿಸ್ತಾನದಿಂದ ಸಮಾನ ದೂರ ಕಾಯ್ದುಕೊಳ್ಳುವ ಭರವಸೆ ನೀಡಿದ್ದಾರೆ. ಇದು ಭಾರತಕ್ಕೆ ಸಮಾಧಾನ ತಂದಿದೆ.

ಸಂಬಂಧ ಸುಧಾರಣೆಗೆ ಭಾರತದ ಕ್ರಮಗಳು

ಭಾರತವು ಈ ಬದಲಾವಣೆಯನ್ನು ಮೊದಲೇ ಗ್ರಹಿಸಿತ್ತು. ಹೀಗಾಗಿ ಈ ಹಿಂದೆಯೇ ಭಾರತ ಅದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಂಡಿತ್ತು. ಹೀಗಾಗಿ ಉಭಯ ರಾಷ್ಟ್ರಗಳ ನಡುವೆ ಕಳೆದೊಂದು ವರ್ಷದಿಂಗ ತೀವ್ರವಾಗೊ ಹದಗೆಟ್ಟಿದ್ದ ಸಂಬಂಧ ಸುಧಾರಿಸುವ ಪ್ರಯತ್ನ ನಡೆಯುತ್ತಲೇ ಇತ್ತು.

ಖಲೀದಾ ಜಿಯಾ ಆರೋಗ್ಯಕ್ಕೆ ಸ್ಪಂದನೆ

ಕಳೆದ ವರ್ಷ ತಾರಿಕ್ ಅವರ ತಾಯಿ ಖಲೀದಾ ಜಿಯಾ ಅನಾರೋಗ್ಯದಲ್ಲಿದ್ದಾಗ ಪ್ರಧಾನಿ ಮೋದಿ ಕಾಳಜಿ ವ್ಯಕ್ತಪಡಿಸಿ ಬೆಂಬಲ ನೀಡಿದ್ದರು. ಖಲೀದಾ ಜಿಯಾ ನಿಧನದ ನಂತರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಢಾಕಾಗೆ ಭೇಟಿ ನೀಡಿ ತಾರಿಕ್ ಅವರನ್ನು ಭೇಟಿಯಾಗಿ ಮೋದಿಯವರ ವೈಯಕ್ತಿಕ ಪತ್ರವನ್ನು ಹಸ್ತಾಂತರಿಸಿದ್ದರು. ಶುಕ್ರವಾರ ಫಲಿತಾಂಶ ಬರುತ್ತಿದ್ದಂತೆ ಪ್ರಧಾನಿ ಮೋದಿ ಅವರು, "ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.

ಭಾರತ-ಬಾಂಗ್ಲಾ ಸಂಬಂಧದ ಮುಂದಿರುವ ಸವಾಲುಗಳು

ತಾರಿಕ್ ರೆಹಮಾನ್ ಅವರ ಮುಂದೆ ಎರಡು ಪ್ರಮುಖ ಸವಾಲುಗಳಿವೆ. ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದಿರುವುದು ಬಾಂಗ್ಲಾದೇಶದ ಯುವ ಪೀಳಿಗೆಯಲ್ಲಿ (Gen Z) ಭಾರತದ ವಿರುದ್ಧ ಅಸಮಾಧಾನ ಮೂಡಿಸಿದೆ. ಹಸೀನಾ ಅವರ ಹಸ್ತಾಂತರದ ಬಗ್ಗೆ ಬಾಂಗ್ಲಾ ಜನರ ಒತ್ತಡ ಹೆಚ್ಚಿದೆ.

ತೀಸ್ತಾ ನದಿ ವಿವಾದ: ಬಿಎನ್‌ಪಿ ಪ್ರಣಾಳಿಕೆಯಲ್ಲಿ ಭಾರತದ ಉಲ್ಲೇಖವಿಲ್ಲದಿದ್ದರೂ, ತೀಸ್ತಾ ಮತ್ತು ಪದ್ಮಾ ನದಿಗಳ ನೀರಿನ ಹಂಚಿಕೆ ಹಾಗೂ ಗಡಿ ಹತ್ಯೆಗಳನ್ನು ನಿಲ್ಲಿಸುವ ಬಗ್ಗೆ ತಾರಿಕ್ ಕಠಿಣ ನಿಲುವು ಹೊಂದಿದ್ದಾರೆ.

'ಡಾರ್ಕ್ ಪ್ರಿನ್ಸ್' ಎಂಬ ಕರಾಳ ಇತಿಹಾಸ

ತಾರಿಕ್ ರೆಹಮಾನ್ ಅವರ ಹಳೆಯ ಇತಿಹಾಸವು ಭಾರತಕ್ಕೆ ಸ್ವಲ್ಪ ಆತಂಕಕಾರಿ ಕೂಡ ಆಗಿದೆ. 2001-2006ರ ಅವಧಿಯಲ್ಲಿ ತಾರಿಕ್ ಅವರು 'ಹವಾ ಭವನ' ಎಂಬ ಪರ್ಯಾಯ ಶಕ್ತಿ ಕೇಂದ್ರದ ಮೂಲಕ ಭಾರತ ವಿರೋಧಿ ಪಿತೂರಿಗಳನ್ನು ನಡೆಸುತ್ತಿದ್ದರು ಎಂಬ ಆರೋಪವಿತ್ತು. ಆ ಸಮಯದಲ್ಲಿ ಈಶಾನ್ಯ ಭಾರತದ ಉಗ್ರಗಾಮಿಗಳಿಗೆ (ULFA) ಬಾಂಗ್ಲಾದೇಶದಲ್ಲಿ ಆಶ್ರಯ ನೀಡಲಾಗಿತ್ತು ಎಂದು ಭಾರತ ಆರೋಪಿಸಿತ್ತು. 2004ರ ಚಿತ್ತಗಾಂಗ್ ಶಸ್ತ್ರಾಸ್ತ್ರ ಸಾಗಣೆ ಪ್ರಕರಣದಲ್ಲೂ ಇವರ ಹೆಸರಿತ್ತು.

ತಾರಿಕ್ ರೆಹಮಾನ್ 2.0

17 ವರ್ಷಗಳ ವನವಾಸದ ನಂತರ ಮರಳಿರುವ ತಾರಿಕ್ ರೆಹಮಾನ್ ಈಗ ಬದಲಾಗಿದ್ದಾರೆ ಎನ್ನಲಾಗುತ್ತಿದೆ. "ಧರ್ಮ ವ್ಯಕ್ತಿಗೆ ಸೇರಿದ್ದು, ರಾಷ್ಟ್ರ ಎಲ್ಲರಿಗೂ ಸೇರಿದ್ದು" ಎನ್ನುವ ಮೂಲಕ ಹಿಂದೂ ಅಲ್ಪಸಂಖ್ಯಾತರ ರಕ್ಷಣೆಯ ಭರವಸೆ ನೀಡಿದ್ದಾರೆ. ಹಳೆಯ ಕಹಿಯನ್ನು ಮರೆತು, ಅಭಿವೃದ್ಧಿಯತ್ತ ಗಮನ ಹರಿಸುವ ಹಂಬಲವನ್ನು ಅವರು ವ್ಯಕ್ತಪಡಿಸಿದ್ದಾರೆ.

'ಮೈತ್ರಿ ಎಕ್ಸ್‌ಪ್ರೆಸ್' ಸುಗಮವಾಗಿ ಸಾಗಬೇಕಾದರೆ, ತಾರಿಕ್ ರೆಹಮಾನ್ ಅವರು ಭಾರತದ ಭದ್ರತಾ ಕಾಳಜಿಗಳನ್ನು ಗೌರವಿಸಬೇಕಾಗುತ್ತದೆ ಮತ್ತು ಭಾರತವು ಬಾಂಗ್ಲಾದೇಶದ ಬದಲಾದ ರಾಜಕೀಯ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗುತ್ತದೆ.

Read More
Next Story