ಬಲೂಚಿಸ್ತಾನದಲ್ಲಿ 145 ಉಗ್ರರ ಹತ್ಯೆ ಮಾಡಿದ ಪಾಕ್ ಸೇನೆ
x
ಬಲೂಚಿಸ್ತಾನದಲ್ಲಿ ಪಾಕ್‌ ಸೇನೆ ದಾಳಿ

ಬಲೂಚಿಸ್ತಾನದಲ್ಲಿ 145 ಉಗ್ರರ ಹತ್ಯೆ ಮಾಡಿದ ಪಾಕ್ ಸೇನೆ

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ 145 ಬಲೂಚ್ ಲಿಬರೇಶನ್ ಆರ್ಮಿ (BLA) ಉಗ್ರರನ್ನು ಪಾಕಿಸ್ತಾನ ಸೇನೆ ಹತ್ಯೆ ಮಾಡಿದೆ.


ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಕಳೆದ 40 ಗಂಟೆಗಳಿಂದ ನಡೆಯುತ್ತಿದ್ದ ಭೀಕರ ಸಂಘರ್ಷ ಅಂತ್ಯಗೊಂಡಿದ್ದು, ಭದ್ರತಾ ಪಡೆಗಳು ಒಟ್ಟು 145 ಉಗ್ರರನ್ನು ಹೊಡೆದುರುಳಿಸಿವೆ ಎಂದು ಪ್ರಾಂತ್ಯದ ಮುಖ್ಯಮಂತ್ರಿ ಸರ್ಫರಾಜ್ ಬುಗ್ಗಿ ಭಾನುವಾರ (ಫೆಬ್ರವರಿ 1, 2026) ಘೋಷಿಸಿದ್ದಾರೆ.

ಸಂಘರ್ಷದ ಹಿನ್ನೆಲೆ ಮತ್ತು ಘಟನೆ

ಉಗ್ರರು ಸಾಮಾನ್ಯ ನಾಗರಿಕರಂತೆ ವೇಷ ಧರಿಸಿ ಆಸ್ಪತ್ರೆಗಳು, ಶಾಲೆಗಳು, ಬ್ಯಾಂಕ್ ಮತ್ತು ಮಾರುಕಟ್ಟೆಗಳಿಗೆ ನುಗ್ಗಿ ಅಂಧಾಭಿಮಾನದಿಂದ ಗುಂಡು ಹಾರಿಸಿದ್ದಾರೆ. ಅಷ್ಟೇ ಅಲ್ಲದೆ, ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಅಮಾಯಕ ಜನರನ್ನು 'ಮಾನವ ಗುರಾಣಿ'ಗಳನ್ನಾಗಿ ಬಳಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಷೇಧಿತ ಪ್ರತ್ಯೇಕತಾವಾದಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ (BLA) ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಇದನ್ನು ಅವರು 'ಆಪರೇಷನ್ ಹೆರೋಫ್' ಎಂದು ಕರೆದಿದ್ದಾರೆ. ಪ್ರಾಂತ್ಯದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹೆಚ್ಚಿನ ಹಕ್ಕು ಮತ್ತು ಸ್ವಾಯತ್ತತೆಗಾಗಿ ಈ ಗುಂಪು ದಶಕಗಳಿಂದ ಪಾಕ್ ಸರ್ಕಾರದ ವಿರುದ್ಧ ಹೋರಾಡುತ್ತಿದೆ.

ಕ್ವೆಟ್ಟಾ, ಗ್ವಾದರ್, ಮಸ್ತುಂಗ್ ಮತ್ತು ನೋಶ್ಕಿ ಜಿಲ್ಲೆಗಳಲ್ಲಿ ದಾಳಿಗಳು ನಡೆದಿದ್ದು, ಪೊಲೀಸ್ ಠಾಣೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಜನರಲ್ಲಿ ಆತಂಕ ಸೃಷ್ಟಿಸಲಾಗಿತ್ತು.

ಭಾರತದ ವಿರುದ್ಧದ ಆರೋಪಕ್ಕೆ ತಿರುಗೇಟು

ಯಥಾಪ್ರಕಾರ ಪಾಕಿಸ್ತಾನವು ಈ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಪುರಾವೆಯಿಲ್ಲದ ಆರೋಪ ಮಾಡಿದೆ. ಆದರೆ ಭಾರತದ ವಿದೇಶಾಂಗ ಸಚಿವಾಲಯವು ಇದನ್ನು ಕಟುವಾಗಿ ತಿರಸ್ಕರಿಸಿದ್ದು, "ತನ್ನ ಆಂತರಿಕ ಸಮಸ್ಯೆಗಳಿಂದ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕಿಸ್ತಾನ ಈ ರೀತಿ ಸುಳ್ಳು ಆರೋಪ ಮಾಡುತ್ತಿದೆ. ಮೊದಲು ತನ್ನ ಜನರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ," ಎಂದು ಖಡಕ್ ಉತ್ತರ ನೀಡಿದೆ.

ಅಮೇರಿಕಾ ಕೂಡ ಈ ದಾಳಿಯನ್ನು 'ಭಯೋತ್ಪಾದಕ ಕೃತ್ಯ' ಎಂದು ಕರೆದು ಖಂಡಿಸಿದ್ದು, ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯನ್ನು ಈಗಾಗಲೇ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.

ಬಲೂಚಿಸ್ತಾನದಲ್ಲಿ ಸಂಘರ್ಷ

ಪಾಕಿಸ್ತಾನದ ಅತಿದೊಡ್ಡ ಮತ್ತು ಅತ್ಯಂತ ಬಡ ಪ್ರಾಂತ್ಯವಾದ ಬಲೂಚಿಸ್ತಾನ್, ದಶಕಗಳಿಂದ ಜನಾಂಗೀಯ ಬಲೂಚ್ ಪ್ರತ್ಯೇಕತಾವಾದಿಗಳ ಬಂಡಾಯವನ್ನು ಎದುರಿಸುತ್ತಿದೆ. ಈ ಗುಂಪುಗಳು ಹೆಚ್ಚಿನ ಸ್ವಾಯತ್ತತೆ ಮತ್ತು ಪ್ರಾಂತ್ಯದ ನೈಸರ್ಗಿಕ ಸಂಪನ್ಮೂಲಗಳಲ್ಲಿ ಹೆಚ್ಚಿನ ಪಾಲನ್ನು ಪಡೆಯಲು ಹೋರಾಡುತ್ತಿವೆ. ಇತ್ತೀಚಿನ ದಾಳಿಯಲ್ಲಿ ತಾವು ಪಾಕಿಸ್ತಾನದ ಭದ್ರತಾ ಪಡೆಗಳ 84 ಸದಸ್ಯರನ್ನು ಕೊಂದಿರುವುದಾಗಿ ಮತ್ತು 18 ಜನರನ್ನು ಸೆರೆಹಿಡಿದಿರುವುದಾಗಿ ಬಂಡಾಯ ಗುಂಪು ಹೇಳಿಕೊಂಡಿದೆ.

ಮಹಿಳಾ ಉಗ್ರರ ಬಳಕೆ ಮತ್ತು ನಾಗರಿಕರ ಗುರಿ

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ ಪ್ರಕಾರ, ನಡೆದ ದಾಳಿಗಳಲ್ಲಿ ಎರಡರಲ್ಲಿ ಮಹಿಳಾ ಉಗ್ರರು ಭಾಗಿಯಾಗಿದ್ದರು. ಉಗ್ರರು ಈಗ ಕೇವಲ ಸೇನೆಯನ್ನು ಮಾತ್ರವಲ್ಲದೆ, ಸಾಮಾನ್ಯ ನಾಗರಿಕರು, ಕಾರ್ಮಿಕರು ಮತ್ತು ಕಡಿಮೆ ಆದಾಯದ ಸಮುದಾಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂಬುದು ಕಳವಳಕಾರಿ ಸಂಗತಿಯಾಗಿದೆ.

Read More
Next Story