ಇರಾನ್ ಈಗ ಮಧ್ಯಪ್ರಾಚ್ಯದ ಸೋತ ರಾಷ್ಟ್ರ: ಡೊನಾಲ್ಡ್ ಟ್ರಂಪ್ ಲೇವಡಿ
x
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಇರಾನ್ ಈಗ ಮಧ್ಯಪ್ರಾಚ್ಯದ 'ಸೋತ ರಾಷ್ಟ್ರ': ಡೊನಾಲ್ಡ್ ಟ್ರಂಪ್ ಲೇವಡಿ

Iran War| ಯುದ್ಧದ ನಡುವೆ ನೆರೆರಾಷ್ಟ್ರಗಳ ಕ್ಷಮೆಯಾಚಿಸಿದ ಇರಾನ್ ವಿರುದ್ಧ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ಇರಾನ್ ಈಗ ಮಧ್ಯಪ್ರಾಚ್ಯದ 'ಸೋತ ರಾಷ್ಟ್ರ' ಎಂದು ಟ್ರಂಪ್ ಟ್ರುತ್ ಸೋಷಿಯಲ್‌ನಲ್ಲಿ ಲೇವಡಿ ಮಾಡಿದ್ದಾರೆ.


ಸದ್ಯ ನಡೆಯುತ್ತಿರುವ ಯುದ್ಧದಲ್ಲಿ ಸತತ ದಾಳಿಗಳನ್ನು ನಡೆಸಿದ್ದಕ್ಕಾಗಿ ಇರಾನ್ ತನ್ನ ಕೊಲ್ಲಿ ರಾಷ್ಟ್ರಗಳ ನೆರೆಹೊರೆಯ ರಾಷ್ಟ್ರಗಳಲ್ಲಿ ಕ್ಷಮೆಯಾಚಿಸಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇರಾನ್ ಇನ್ನು ಮುಂದೆ ಮಧ್ಯಪ್ರಾಚ್ಯದ ಬೆದರಿಸುವ ರಾಷ್ಟ್ರ ಅಲ್ಲ, ಅದೊಂದು ಸೋತ ರಾಷ್ಟ್ರ ಎಂದು ಲೇವಡಿ ಮಾಡಿದ್ದಾರೆ.

ಅಮೆರಿಕ-ಇಸ್ರೇಲ್ ದಾಳಿಗೆ ಇರಾನ್ ತಲೆಬಾಗಿದೆ: ಟ್ರಂಪ್

ತಮ್ಮ 'ಟ್ರುತ್ ಸೋಷಿಯಲ್' ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ 79 ವರ್ಷದ ಟ್ರಂಪ್, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರ ಇಸ್ರೇಲ್ ನಡೆಸಿದ ನಿರಂತರ ದಾಳಿಗಳ ಕಾರಣದಿಂದಲೇ ಇರಾನ್ ಇಂದು ಕ್ಷಮೆಯಾಚಿಸುವ ಪರಿಸ್ಥಿತಿಗೆ ಬಂದಿದೆ ಎಂದು ಪ್ರತಿಪಾದಿಸಿದ್ದಾರೆ. "ಸತತ ದಾಳಿಗಳಿಂದ ನಲುಗಿರುವ ಇರಾನ್, ತನ್ನ ಮಧ್ಯಪ್ರಾಚ್ಯ ನೆರೆಹೊರೆಯವರ ಬಳಿ ಕ್ಷಮೆಯಾಚಿಸಿ ಶರಣಾಗಿದೆ. ಇನ್ನು ಮುಂದೆ ಅವರ ಮೇಲೆ ಗುಂಡು ಹಾರಿಸುವುದಿಲ್ಲ ಎಂದು ಭರವಸೆ ನೀಡಿದೆ. ಈ ಭರವಸೆ ಬಂದಿರುವುದು ಕೇವಲ ಅಮೆರಿಕ ಮತ್ತು ಇಸ್ರೇಲ್‌ನ ಭೀಕರ ದಾಳಿಗಳಿಂದಾಗಿ ಮಾತ್ರ," ಎಂದು ಟ್ರಂಪ್ ಹೇಳಿದ್ದಾರೆ.

'ಸಾವಿರಾರು ವರ್ಷಗಳಲ್ಲಿ ಇರಾನ್ ಮೊದಲ ಸೋಲು'

ಇರಾನ್ ದೇಶವು ಮಧ್ಯಪ್ರಾಚ್ಯವನ್ನು ಆಕ್ರಮಿಸಿಕೊಳ್ಳಲು ಮತ್ತು ಆಳಲು ಸಂಚು ರೂಪಿಸಿತ್ತು ಎಂದು ಆರೋಪಿಸಿರುವ ಟ್ರಂಪ್, "ಸಾವಿರಾರು ವರ್ಷಗಳ ಇತಿಹಾಸದಲ್ಲಿ ಇರಾನ್ ತನ್ನ ಸುತ್ತಮುತ್ತಲಿನ ಮಧ್ಯಪ್ರಾಚ್ಯ ರಾಷ್ಟ್ರಗಳ ಮುಂದೆ ಸೋತಿರುವುದು ಇದೇ ಮೊದಲು. ಈ ಬದಲಾವಣೆಗಾಗಿ ನೆರೆ ರಾಷ್ಟ್ರಗಳು ನನಗೆ ಧನ್ಯವಾದ ಅರ್ಪಿಸಿವೆ, ನಾನು ಅವರಿಗೆ 'ಯು ಆರ್ ವೆಲ್‌ಕಮ್' ಎಂದು ಹೇಳಿದ್ದೇನೆ," ಎಂದು ಬರೆದುಕೊಂಡಿದ್ದಾರೆ.

ಸಂಪೂರ್ಣ ವಿನಾಶದ ಎಚ್ಚರಿಕೆ

ಇರಾನ್‌ನ ನಡವಳಿಕೆಯನ್ನು ಟೀಕಿಸಿರುವ ಅಮೆರಿಕ ಅಧ್ಯಕ್ಷರು ಮತ್ತಷ್ಟು ಎಚ್ಚರಿಕೆಗಳನ್ನು ನೀಡಿದ್ದಾರೆ. "ಇರಾನ್ ಈಗ ಮಧ್ಯಪ್ರಾಚ್ಯದ ರೌಡಿಯಲ್ಲ, ಬದಲಿಗೆ ಅದು 'ದಿ ಲೂಸರ್ ಆಫ್ ದಿ ಮಿಡಲ್ ಈಸ್ಟ್' (ಮಧ್ಯಪ್ರಾಚ್ಯದ ಸೋತ ರಾಷ್ಟ್ರ). ಅವರು ಶರಣಾಗುವವರೆಗೆ ಅಥವಾ ಸಂಪೂರ್ಣವಾಗಿ ಕುಸಿಯುವವರೆಗೆ ದಶಕಗಳ ಕಾಲ ಇದೇ ಸ್ಥಿತಿ ಇರಲಿದೆ. ಇಂದು ಇರಾನ್‌ಗೆ ಭೀಕರ ಏಟು ಬೀಳಲಿದೆ. ಇರಾನ್‌ನ ದುರ್ನಡತೆಯಿಂದಾಗಿ, ಇದುವರೆಗೆ ಗುರಿ ಮಾಡದಿದ್ದ ಪ್ರದೇಶಗಳು ಮತ್ತು ಗುಂಪುಗಳನ್ನು ಈಗ ಸಂಪೂರ್ಣ ವಿನಾಶದ ವ್ಯಾಪ್ತಿಗೆ ತರಲು ಗಂಭೀರವಾಗಿ ಪರಿಗಣಿಸಲಾಗುತ್ತಿದೆ," ಎಂದು ಟ್ರಂಪ್ ಎಚ್ಚರಿಸಿದ್ದಾರೆ.

Read More
Next Story