
Iran-Israel War: ನೆರೆಯ ರಾಷ್ಟ್ರಗಳ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷ: ಟ್ರಂಪ್ ಆಕ್ರೋಶ!
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ನೆರೆ ರಾಷ್ಟ್ರಗಳ ಕ್ಷಮೆಯಾಚಿಸಿದ್ದಾರೆ ಮತ್ತು ದಾಳಿ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ. ಆದರೆ ಅಮೆರಿಕ ಅಧ್ಯಕ್ಷ ಟ್ರಂಪ್ ಬೇಷರತ್ ಶರಣಾಗತಿಗೆ ಆಗ್ರಹಿಸಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷ ತಾರಕಕ್ಕೇರಿರುವ ನಡುವೆಯೇ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಶನಿವಾರ ನೆರೆಹೊರೆಯ ರಾಷ್ಟ್ರಗಳ ಕ್ಷಮೆಯಾಚಿಸಿದ್ದಾರೆ. ಇರಾನ್ ಇತರ ರಾಷ್ಟ್ರಗಳನ್ನು ಆಕ್ರಮಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ನೆರೆ ರಾಷ್ಟ್ರಗಳ ಮೇಲಿನ ದಾಳಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ.
ದಾಳಿ ಸ್ಥಗಿತಕ್ಕೆ ಇರಾನ್ ನಿರ್ಧಾರ
ದೂರದರ್ಶನದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪೆಜೆಶ್ಕಿಯಾನ್, "ಇರಾನ್‌ನ ತಾತ್ಕಾಲಿಕ ನಾಯಕತ್ವ ಮಂಡಳಿಯು ನೆರೆಹೊರೆಯ ರಾಷ್ಟ್ರಗಳ ಮೇಲೆ ಕ್ಷಿಪಣಿ ಉಡಾವಣೆ ಮತ್ತು ದಾಳಿಗಳನ್ನು ನಿಲ್ಲಿಸಲು ನಿರ್ಧರಿಸಿದೆ. ನಮ್ಮ ಮೇಲೆ ಮೊದಲು ದಾಳಿಯಾಗದ ಹೊರತು ನಾವು ಇತರ ರಾಷ್ಟ್ರಗಳ ಮೇಲೆ ದಾಳಿ ಮಾಡುವುದಿಲ್ಲ," ಎಂದು ತಿಳಿಸಿದ್ದಾರೆ. ಪ್ರಾದೇಶಿಕ ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಡೊನಾಲ್ಡ್ ಟ್ರಂಪ್ ಗುಡುಗು: "ಬೇಷರತ್ ಶರಣಾಗತಿಗೆ" ಆಗ್ರಹ
ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಒತ್ತಡ ಹೇರಿದ್ದು, ಬೇಷರತ್ ಶರಣಾಗತಿ ಹೊರತುಪಡಿಸಿ ಇರಾನ್ ಜೊತೆ ಯಾವುದೇ ಒಪ್ಪಂದ ಸಾಧ್ಯವಿಲ್ಲ ಎಂದು ಘೋಷಿಸಿದ್ದಾರೆ. "ಇರಾನ್‌ನಲ್ಲಿ ಹೊಸ ನಾಯಕತ್ವ ಉದಯಿಸಿದ ನಂತರವಷ್ಟೇ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಆ ದೇಶದ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಸಹಾಯ ಮಾಡುತ್ತವೆ," ಎಂದು ಟ್ರಂಪ್ ತಮ್ಮ 'ಟ್ರುತ್ ಸೋಷಿಯಲ್' ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.
ಆದರೆ ಟ್ರಂಪ್ ಅವರ ಈ ಬೇಡಿಕೆಯನ್ನು ತಿರಸ್ಕರಿಸಿದ ಪೆಜೆಶ್ಕಿಯಾನ್, "ಬೇಷರತ್ ಶರಣಾಗತಿಯ ಕನಸು ಕನಸಾಗಿಯೇ ಉಳಿಯಲಿದೆ" ಎಂದು ತಿರುಗೇಟು ನೀಡಿದ್ದಾರೆ.
ಯುದ್ಧದ ಭೀಕರತೆ ಮತ್ತು ಸಾವು-ನೋವು
ವಿಶ್ವಸಂಸ್ಥೆಯ ಇರಾನ್ ರಾಯಭಾರಿ ಅಮೀರ್ ಸಯೀದ್ ಇರವಾನಿ ಅವರ ಪ್ರಕಾರ, ಅಮೆರಿಕ-ಇಸ್ರೇಲ್ ದಾಳಿಯಿಂದ ಕನಿಷ್ಠ 1,332 ಇರಾನಿನ ನಾಗರಿಕರು ಸಾವನ್ನಪ್ಪಿದ್ದಾರೆ. ಇರಾನ್ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನಲ್ಲಿ 11 ಮಂದಿ ಮತ್ತು ಆರು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ ತನ್ನ ದಾಳಿಯನ್ನು ಲೆಬನಾನ್‌ವರೆಗೂ ವಿಸ್ತರಿಸಿದ್ದು, ಅಲ್ಲಿ ಸುಮಾರು 3 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ. ಲೆಬನಾನ್ ಆರೋಗ್ಯ ಸಚಿವಾಲಯದ ಪ್ರಕಾರ 123 ಜನರು ಬಲಿಯಾಗಿದ್ದಾರೆ.
ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ
ಯುದ್ಧದ ತೀವ್ರತೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆ ನಡುಗಿದೆ. ವಿಶ್ವದ ಶೇ. 20 ರಷ್ಟು ತೈಲ ಪೂರೈಕೆಯ ಮಾರ್ಗವಾಗಿರುವ 'ಹಾರ್ಮುಜ್ ಜಲಸಂಧಿ'ಯಲ್ಲಿ ಸಂಚಾರಕ್ಕೆ ಅಡ್ಡಿಯಾಗುವ ಭೀತಿ ಎದುರಾಗಿದ್ದು, ಕಚ್ಚಾ ತೈಲದ ಬೆಲೆ ಹಲವು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಯುರೋಪ್ ಮತ್ತು ಅಮೆರಿಕದ ಷೇರು ಮಾರುಕಟ್ಟೆಗಳು ಭಾರೀ ಕುಸಿತ ಕಂಡಿವೆ.

