Amazons biggest job cuts since 2022: 30,000 corporate employees laid off
x

ಟೆಕ್ ದೈತ್ಯ ಅಮೆಜಾನ್

ಅಮೆಜಾನ್‌ನಲ್ಲಿ 2022ರ ನಂತರದ ಅತಿದೊಡ್ಡ ಉದ್ಯೋಗ ಕಡಿತ: 30,000 ಕಾರ್ಪೊರೇಟ್ ಉದ್ಯೋಗಿಗಳು ವಜಾ

ಈ ಉದ್ಯೋಗ ಕಡಿತವು ಅಮೆಜಾನ್‌ನ 3,50,000 ಕಾರ್ಪೊರೇಟ್ ಉದ್ಯೋಗಿಗಳ ಪೈಕಿ ಶೇ.10ರಷ್ಟು ಭಾಗವಾಗಿದ್ದು, ಕಂಪನಿಯ ಒಟ್ಟಾರೆ 15.5 ಲಕ್ಷ ಉದ್ಯೋಗಿಗಳಿಗೆ ಹೋಲಿಸಿದರೆ ಸಣ್ಣ ಪ್ರಮಾಣದ್ದಾಗಿದೆ.


Click the Play button to hear this message in audio format

ಟೆಕ್ ದೈತ್ಯ ಅಮೆಜಾನ್, 2022ರ ನಂತರದ ತನ್ನ ಅತಿದೊಡ್ಡ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, ಸುಮಾರು 30,000 ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಈ ವಜಾ ಪ್ರಕ್ರಿಯೆಯು ಮಂಗಳವಾರದಿಂದ (ಅ.28) ಆರಂಭವಾಗಲಿದೆ.

ಈ ಉದ್ಯೋಗ ಕಡಿತವು ಅಮೆಜಾನ್‌ನ 3,50,000 ಕಾರ್ಪೊರೇಟ್ ಉದ್ಯೋಗಿಗಳ ಪೈಕಿ ಶೇ.10ರಷ್ಟು ಭಾಗವಾಗಿದ್ದು, ಕಂಪನಿಯ ಒಟ್ಟಾರೆ 15.5 ಲಕ್ಷ ಉದ್ಯೋಗಿಗಳಿಗೆ ಹೋಲಿಸಿದರೆ ಸಣ್ಣ ಪ್ರಮಾಣದ್ದಾಗಿದೆ. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಹೆಚ್ಚುವರಿಯಾಗಿ ನೇಮಕ ಮಾಡಿಕೊಂಡಿದ್ದರಿಂದ ಉಂಟಾದ ವೆಚ್ಚವನ್ನು ಕಡಿಮೆ ಮಾಡಲು ಮತ್ತು ದಕ್ಷತೆಯನ್ನು ಹೆಚ್ಚಿಸಲು ಸಿಇಒ ಆಂಡಿ ಜೆಸ್ಸಿ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ವಜಾಕ್ಕೆ ಕಾರಣಗಳೇನು?

ಕೋವಿಡ್ ಸಮಯದಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ಅಮೆಜಾನ್ ಭಾರಿ ಪ್ರಮಾಣದಲ್ಲಿ ನೇಮಕ ಮಾಡಿಕೊಂಡಿತ್ತು. ಇದೀಗ, ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಳವಡಿಕೆಯಿಂದಾಗಿ ದಕ್ಷತೆ ಹೆಚ್ಚಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಐ ತಂತ್ರಜ್ಞಾನದಿಂದಾಗಿ ಪುನರಾವರ್ತಿತ ಕೆಲಸಗಳನ್ನು ಸ್ವಯಂಚಾಲಿತಗೊಳಿಸಲು ಸಾಧ್ಯವಾಗಿದ್ದು, ಮಾನವ ಸಂಪನ್ಮೂಲದ ಅಗತ್ಯ ಕಡಿಮೆಯಾಗಿದೆ ಎಂದು ಸಿಇಒ ಆಂಡಿ ಜೆಸ್ಸಿ ಈ ಹಿಂದೆ ಹೇಳಿದ್ದರು. ಇದಲ್ಲದೆ, ಕಚೇರಿಗೆ ಮರಳುವ ಕಠಿಣ ನೀತಿ (ವಾರದಲ್ಲಿ 5 ದಿನ ಕಚೇರಿ) ಜಾರಿಗೊಳಿಸಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗಿಗಳು ತಾವಾಗಿಯೇ ಕೆಲಸ ಬಿಟ್ಟಿಲ್ಲ. ಇದು ಕೂಡ ದೊಡ್ಡ ಪ್ರಮಾಣದ ವಜಾಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಯಾವೆಲ್ಲ ವಿಭಾಗಗಳ ಮೇಲೆ ಪರಿಣಾಮ?

ಈ ಉದ್ಯೋಗ ಕಡಿತವು ಪ್ರಮುಖವಾಗಿ ಅಮೆಜಾನ್ ವೆಬ್ ಸರ್ವಿಸಸ್ (AWS), ಪೀಪಲ್ ಎಕ್ಸ್‌ಪೀರಿಯನ್ಸ್ ಆ್ಯಂಡ್ ಟೆಕ್ನಾಲಜಿ (PXT-ಮಾನವ ಸಂಪನ್ಮೂಲ), ಕಾರ್ಯಾಚರಣೆ, ಮತ್ತು ಡಿವೈಸಸ್ ವಿಭಾಗಗಳ ಮೇಲೆ ಪರಿಣಾಮ ಬೀರಲಿದೆ. ಮಾನವ ಸಂಪನ್ಮೂಲ ವಿಭಾಗದಲ್ಲಿ ಶೇ.15ರಷ್ಟು ಉದ್ಯೋಗ ಕಡಿತವಾಗುವ ಸಾಧ್ಯತೆಯಿದೆ. ಈಗಾಗಲೇ ಬಾಧಿತ ವಿಭಾಗಗಳ ವ್ಯವಸ್ಥಾಪಕರಿಗೆ ಸೋಮವಾರ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಮಂಗಳವಾರದಿಂದ ಇ-ಮೇಲ್ ಮೂಲಕ ಉದ್ಯೋಗಿಗಳಿಗೆ ವಜಾಗೊಳಿಸುವ ಸೂಚನೆ ನೀಡಲಾಗುವುದು.

2022ರಲ್ಲಿ ಅಮೆಜಾನ್ ಸುಮಾರು 27,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ 30,000 ಉದ್ಯೋಗಿಗಳ ವಜಾವು ಕಂಪನಿಯ ಇತಿಹಾಸದಲ್ಲಿಯೇ ಅತಿದೊಡ್ಡ ಉದ್ಯೋಗ ಕಡಿತವಾಗಲಿದೆ. ಒಂದೆಡೆ ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಅಮೆಜಾನ್, ಮತ್ತೊಂದೆಡೆ ಮುಂಬರುವ ಹಬ್ಬದ ಋತುವಿಗಾಗಿ ಸುಮಾರು 2,50,000 ತಾತ್ಕಾಲಿಕ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಯೋಜನೆ ರೂಪಿಸಿದೆ.

Read More
Next Story