14 Years of Namma Metro: The City’s Most Trusted Urban Transport
x
ಮೆಟ್ರೋ ರೈಲು

Namma Metro Fare Hike | ಕಾರ್ಪೊರೇಟ್‌ ಲಾಬಿಗೆ ಮಣಿದು ದರ ಹೆಚ್ಚಳ; ನಾಳೆ ನಾಗರಿಕರ ಸಮಾವೇಶ

ಸಮೂಹ ಸಾರಿಗೆ ಎನಿಸಿರುವ ಮೆಟ್ರೋವನ್ನು ಕಾರ್ಪೊರೇಟ್ ಲಾಬಿಗೆ ದೂಡುತ್ತಿರುವ ಬಿಎಂಆರ್‌ಸಿಎಲ್‌ ವಿರುದ್ಧ ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.


ಮೆಟ್ರೋ ಪ್ರಯಾಣ ದರ ಏರಿಕೆ ವಿರುದ್ಧ ಪ್ರಯಾಣಿಕರ ಆಕ್ರೋಶ ಇನ್ನೂ ತಣಿದಿಲ್ಲ. ಅವೈಜ್ಞಾನಿಕ ದರ ಏರಿಕೆಯಿಂದ ಕಂಗಾಲಾಗಿರುವ ಜನರು ಮೆಟ್ರೋ ಮೇಲಿನ ಅವಲಂಬನೆಯನ್ನು ಕ್ರಮೇಣ ತಗ್ಗಿಸುತ್ತಿದ್ದಾರೆ. ಈ ಮಧ್ಯೆ, ಮೆಟ್ರೋ ಪ್ರಯಾಣ ದರ ಏರಿಕೆ ವಿರುದ್ಧ ಹೋರಾಟ ತೀವ್ರಗೊಳಿಸಿರುವ ʼಬೆಂಗಳೂರು ಉಳಿಸಿʼ ಸಹಭಾಗಿತ್ವದ ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆಯು ದರ ಇಳಿಕೆಗೆ ಫೆ.23 ರ (ಭಾನುವಾರ) ಗಡುವು ನೀಡಿದೆ.

ಗಡುವಿನೊಳಗೆ ಸೂಕ್ತ ನಿರ್ಧಾರ ಪ್ರಕಟಿಸದಿದ್ದರೆ ʼಮೆಟ್ರೋ ಪ್ರಯಾಣ ಬಹಿಷ್ಕಾರ ಅಭಿಯಾನʼ ನಡೆಸಲು ಯೋಜಿಸಿ, ಭಾನುವಾರ ನಾಗರಿಕರ ಸಮಾವೇಶ ಹಮ್ಮಿಕೊಂಡಿದೆ. ಸಮೂಹ ಸಾರಿಗೆ ಎನಿಸಿರುವ ಮೆಟ್ರೋವನ್ನು ಕಾರ್ಪೊರೇಟ್ ಲಾಬಿಗೆ ದೂಡುತ್ತಿರುವ ಬಿಎಂಆರ್‌ಸಿಎಲ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಮೆಟ್ರೋ ಯೋಜನೆ, ಹೂಡಿಕೆ- ಲಾಭ, ಸರ್ಕಾರದ ನಿಲುವು, ಬಿಎಂಆರ್‌ಸಿಎಲ್‌ ತಂತ್ರಗಳ ಕುರಿತು ಈ ವೇದಿಕೆ ಹಲವು ಪ್ರಶ್ನೆಗಳನ್ನು ಎತ್ತಿದ್ದು, ಜನಸಾಮಾನ್ಯರಿಗೆ ಅರಿವು ಮೂಡಿಸಲು ಮುಂದಾಗಿದೆ. ಫೆ.23ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜು ಸಮೀಪದ ಸ್ಕೌಟ್ಸ್ ಮತ್ತು ಗೈಡ್ಸ್ ಹಾಲ್ ನಲ್ಲಿ ನಾಗರಿಕರ ಸಮಾವೇಶ ಹಮ್ಮಿಕೊಂಡಿದೆ.

ಲಾಭವಿರುವಾಗ ದರ ಹೆಚ್ಚಳ ಏಕೆ?

ʼನಮ್ಮ ಮೆಟ್ರೋ ʼ ಕಳೆದ ವರ್ಷ 120 ಕೋಟಿ ರೂ. ಲಾಭ ತೋರಿಸಿದ್ದರೂ ದರ ಹೆಚ್ಚಳ ಮಾಡಿರುವುದು ಏಕೆ ಎಂದು ವೇದಿಕೆ ಪ್ರಶ್ನಿಸಿದೆ. ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಹಲವಾರು ವಿದೇಶಿ ಬ್ಯಾಂಕುಗಳಿಂದ ಸಾಲ ಪಡೆದಿದೆ. ಸಾಲದ ಅಸಲು ಮತ್ತು ಬಡ್ಡಿ ಸೇರಿ ಮುಂದಿನ ಐದು ವರ್ಷಗಳಲ್ಲಿ 10,422.2 ಕೋಟಿ ರೂ. ಮರುಪಾವತಿ ಮಾಡಬೇಕು ನಿಜ. 2024-25 ನೇ ಸಾಲಿನಲ್ಲಿ ಬ್ಯಾಂಕುಗಳಿಗೆ ಒಟ್ಟು 770 ಕೋಟಿ ರೂ. ಪಾವತಿಸಬೇಕು. ಅಂದರೆ ದಿನಕ್ಕೆ 2 ಕೋಟಿ ರೂ. ಪಾವತಿಸಬೇಕು. ಇನ್ನು ಇದೇ ಮೊತ್ತ ಪ್ರತಿ ವರ್ಷವೂ ಹೆಚ್ಚಲಿದೆ. 2029-30 ರ ವೇಳೆಗೆ ರಾಜ್ಯ ಸರ್ಕಾರ ವಿವಿಧ ಬ್ಯಾಂಕುಗಳಿಗೆ 2,776.58 ಕೋಟಿ ರೂ. ಪಾವತಿಸಬೇಕು. ಆಗ ದಿನಕ್ಕೆ 7.6 ಕೋಟಿ ಸಂಗ್ರಹಿಸಬೇಕಾಗಿದೆ. ಆಗ ದರ ಹೆಚ್ಚಳ ಇನ್ನಷ್ಟು ಹೆಚ್ಚಿಸಬೇಕು. ಸಾಲದ ಹಣವನ್ನು ಜನರಿಂದಲೇ ಹಣ ಸಂಗ್ರಹಿಸಿ ಮರುಪಾವತಿ ಮಾಡುವುದಾದರೆ ಸರ್ಕಾರಗಳ ಜನ ಹಿತ ಕಾರ್ಯಕ್ರಮಗಳಿಗೆ ಅರ್ಥವೇನು? ಕಲ್ಯಾಣ ರಾಜ್ಯ(ವೆಲ್‌ಫೇರ್‌ ಸ್ಟೇಟ್)‌ ಎಂಬ ನಮ್ಮ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಏನು ಅರ್ಥ? ಎಂಬ ಮೂಲಭೂತ ಪ್ರಶ್ನೆಯನ್ನು ವೇದಿಕೆ ಎತ್ತಿದೆ.

ಯಾರಿಗಾಗಿ ಜನರನ್ನು ದೋಚುತ್ತಿದೆ?

ಬಿಎಂಆರ್ಸಿಎಲ್ ಸಂಪೂರ್ಣ ಸಾಲದ ಹಣ, ಕಾರ್ಯಾಚರಣೆ ವಿಸ್ತರಣೆ ಮತ್ತು ನಿರ್ವಹಣೆ ವೆಚ್ಚವನ್ನು ಪ್ರಯಾಣಿಕರಿಂದ ಸಂಗ್ರಹಿಸುವ ಗುರಿ ಹೊಂದಿದೆ. ಪ್ರಯಾಣ ದರ ಹೆಚ್ಚಳದಿಂದ ದಿನಕ್ಕೆ 3 ಕೋಟಿ ರೂ. ಸಂಗ್ರಹಿಸಲು ಉದ್ದೇಶಿಸಿದೆ. ಅಂದರೆ ವರ್ಷಕ್ಕೆ 1,080 ಕೋಟಿ ಸಂಗ್ರಹವಾಗಲಿದೆ. ಇದರ ಪ್ರಕಾರ ನೋಡುವುದಾದರೆ, 5 ವರ್ಷಗಳ ನಂತರ ಅಂದರೆ 2029-30 ರಲ್ಲಿ ಬಿಎಂಆರ್‌ಸಿಎಲ್‌ ದಿನಕ್ಕೆ 7.6 ಕೋಟಿ ಸಂಗ್ರಹಿಸಬೇಕು. ಹಾಗಾದರೆ 2029 ರಲ್ಲಿ ಮೆಟ್ರೋ ದರಗಳು ಎಷ್ಟಾಗಲಿವೆ?, ಪ್ರಸ್ತುತ ನಾವು ಪಾವತಿಸುತ್ತಿರುವುದಕ್ಕಿಂತ 4 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗ ಪ್ರತಿ ಕಿ.ಮೀ.ಗೆ 5 ರೂ. ಇರುವುದು 2029 ರ ವೇಳೆಗೆ 20 ರೂ. ಆಗಲಿದೆ. ಇಂದಿನ ಗರಿಷ್ಠ ದರ 90 ರೂ. 2029ಕ್ಕೆ 400 ರೂ. ಮುಟ್ಟಲಿದೆ. ಇಂತಹ ಪರಿಸ್ಥಿತಿಯಲ್ಲಿ ಮೆಟ್ರೋ ಯಾರಿಗಾಗಿ ಎಂಬ ಪ್ರಶ್ನೆ ಎದುರಾಗಲಿದೆ ಎಂದು ವೇದಿಕೆ ಕಳವಳ ವ್ಯಕ್ತಪಡಿಸಿದೆ.

ದರ ಹೆಚ್ಚಳದ ಹಿಂದಿನ ಕಾರ್ಯಸೂಚಿ ಏನು?

ಬಿಎಂಆರ್‌ಸಿಎಲ್‌ 'ಮೆಟ್ರೋ ದರ ಸಿದ್ಧಾಂತ'ವು 'ಕಾರ್ಪೊರೇಟ್ ದರ ನೀತಿ'ಗೆ ಅನುಗುಣವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಿಎಂಆರ್‌ಸಿಎಲ್‌ನ ದರ ಸಿದ್ಧಾಂತದಿಂದ ಜನಸಾಮಾನ್ಯರು ಪರಿತಪಿಸುವುದು ಗ್ಯಾರೆಂಟಿ. ವಿಶ್ವದ ಯಾವುದೇ ದೇಶಗಳಲ್ಲಿ ಇಲ್ಲದ ಅಸಂಬದ್ಧ ಸಿದ್ಧಾಂತವನ್ನು ಬಿಎಂಆರ್‌ಸಿಎಲ್‌ ಅನುಸರಿಸುತ್ತಿದೆ. ಜನಸಾಮಾನ್ಯರ ಮೆಟ್ರೋವನ್ನು ಶ್ರೀಮಂತರ ಮೆಟ್ರೋ ಆಗಿ ಬದಲಿಸಿ, ಕಾರ್ಪೊರೇಟ್ ಸಂಸ್ಥೆಗಳಿಗೆ ಹಸ್ತಾಂತರಿಸುವ ಆಡಳಿತಗಾರರ ಪಿತೂರಿಯ ಭಾಗ ಇದು ಎಂದು ಮೆಟ್ರೋ ಪ್ರಯಾಣಿಕರ ವೇದಿಕೆ ಆರೋಪಿಸಿದೆ.

ಮೆಟ್ರೋ ದರ ನಿರ್ಧಾರದ ಮಾನದಂಡ ಹೇಗಿರಬೇಕು?

ಮೆಟ್ರೋ ಒಂದು ಸಮೂಹ ಸಾರಿಗೆಯಾಗಿದ್ದು, ಸೇವಾ ಕ್ಷೇತ್ರವಾಗಿದೆ. ಎಲ್ಲಾ ದೇಶಗಳು ಇದನ್ನು ಜನರ ಅನುಕೂಲಕ್ಕಾಗಿ ಜಾರಿ ಮಾಡಿವೆ. ಜನಹಿತದ ಯೋಜನೆಗಳಲ್ಲಿ ಲಾಭದ ಉದ್ದೇಶ ಸ್ವೀಕಾರಾರ್ಹವಲ್ಲ. ಅದಕ್ಕಾಗಿಯೇ ಆರಂಭಿಕ ಹೂಡಿಕೆ ಮತ್ತು ಲಾಭಗಳು ಎಂದಿಗೂ ವೇತನ ಲೆಕ್ಕಾಚಾರದ ಭಾಗವಾಗುವುದಿಲ್ಲ. ಇಲ್ಲಿ ಒಬ್ಬ ಸಾಮಾನ್ಯ ಗಾರ್ಮೆಂಟ್ ಕೆಲಸಗಾರ ಅಥವಾ ದಿನಗೂಲಿಯ ಪಾವತಿ ಶಕ್ತಿಯನ್ನು ಆಧರಿಸಿ ದರಗಳನ್ನು ನಿಗದಿಪಡಿಸುವ ಮಾನದಂಡಗಳನ್ನು ಜಾರಿಗೆ ತರಬೇಕಾಗಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ದರ ಏರಿಕೆಯ ಬಗ್ಗೆ ಸರ್ಕಾರಕ್ಕೆ ತಿಳಿದಿಲ್ಲವೇ?

ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಬ್ಬ ಪ್ರತಿನಿಧಿ ನೇತೃತ್ವದ ಮೂವರು ಸದಸ್ಯರ ಸಮಿತಿಯು ಮೆಟ್ರೋ ಪ್ರಯಾಣ ದರಗಳನ್ನು ಏರಿಕೆ ಮಾಡಿದೆ. ಕೇಂದ್ರ ಬಿಜೆಪಿ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರಗಳು ಪ್ರಜಾಪ್ರಭುತ್ವ ವಿರೋಧಿ ದರ ಪರಿಷ್ಕರಣೆಯ ಭಾಗವಾಗಿವೆ. ಆದರೂ, ಎರಡೂ ಸರ್ಕಾರಗಳು ಜನರನ್ನು ವಂಚಿಸುತ್ತಾ ನಾಟಕವಾಡುತ್ತಿವೆ. ಜನರನ್ನು ಮರುಳು ಮಾಡುವ ಸಲುವಾಗಿ ಪರಸ್ಪರ ದೂಷಣೆಯಲ್ಲಿ ತೊಡಗಿವೆ ಎಂದು ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆಯ ಸದಸ್ಯ ರಾಜೇಶ್ ಭಟ್ ದೂರಿದ್ದಾರೆ.

ಜನ ಕೇಳುತ್ತಿರುವ ಪ್ರಶ್ನೆಗಳು ಏನು?

  1. ಪೆಟ್ರೋಲ್ ಮತ್ತು ಡೀಸೆಲ್, ಆಸ್ತಿ ನೋಂದಣಿ ಇತ್ಯಾದಿಗಳ ಮೇಲಿನ 'ಮೆಟ್ರೋ ಸೆಸ್' ಮೂಲಕ ಇಷ್ಟು ವರ್ಷಗಳಲ್ಲಿ ಎಷ್ಟು ಹಣ ಸಂಗ್ರಹವಾಗಿದೆ?
  2. ಸರ್ಕಾರಗಳು ಸಾಲ ಪಡೆಯುವಾಗ ಒಪ್ಪಿಕೊಂಡಿರುವ ಷರತ್ತುಗಳು ಯಾವುವು?
  3. ವಿದೇಶಿ ಹೂಡಿಕೆ ಕಂಪನಿಗಳೊಂದಿಗೆ ಅವರು ಸಹಿ ಮಾಡಿರುವ ಒಪ್ಪಂದಗಳು ಯಾವುವು?
  4. ಮೆಟ್ರೋ ನಡೆಸುವ ವೆಚ್ಚ ಮತ್ತು ಲಾಭ ಗಳಿಸುವ ವೆಚ್ಚವನ್ನು ತಿಳಿಯಲು ಸಿಎಜಿ ಲೆಕ್ಕಪರಿಶೋಧನೆ ಏಕಿಲ್ಲ?.

ಮೆಟ್ರೋ ಲಾಭದಾಯಕವಾಗಬಹುದೇ?

ಕೋಲ್ಕತ್ತಾದಲ್ಲಿ ಈಗಲೂ 30 ಕಿ.ಮೀ ಪ್ರಯಾಣಕ್ಕೆ ಗರಿಷ್ಠ ದರ 25 ರೂ. ಇದೆ. ಚೆನ್ನೈ ಮೆಟ್ರೋ ಹೆಚ್ಚಿಸಿದ್ದ ದರಗಳನ್ನು ಹಿಂದಕ್ಕೆ ಪಡೆದಿದೆ. ಹಲವಾರು ನಗರಗಳು ಮೆಟ್ರೋವನ್ನು ಅಗ್ಗದ ದರದಲ್ಲಿ ನಡೆಸಲಾಗುತ್ತಿದೆ. ಇದನ್ನು ಬಿಎಂಆರ್ಸಿಎಲ್ ಏಕೆ ಅನುಸರಿಸಬಾರದು ಎಂದು ಪ್ರಯಾಣಿಕರ ವೇದಿಕೆ ಪ್ರಶ್ನಿಸಿದೆ.

ಕನಿಷ್ಟ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳ ಆಧಾರದ ಮೇಲೆ ಪ್ರಯಾಣ ದರ ನಿಗದಿಪಡಿಸಿದರೆ ದರಗಳು ಬಡವರಿಗೂ ಕೈಗೆಟುಕುವಂತಿರುತ್ತವೆ. ಪ್ರಯಾಣಿಕರಿಗೆ ಪ್ರತಿ ಕಿಲೋಮೀಟರ್‌ಗೆ 1 ರೂ. ರಂತೆ ಶುಲ್ಕ ವಿಧಿಸುವ ಮೂಲಕ ಮೆಟ್ರೋವನ್ನು ಲಾಭದಾಯಕವಾಗಿ ನಿರ್ವಹಿಸಬಹುದು. ಆಗ ಒಬ್ಬ ಸಾಮಾನ್ಯ ವ್ಯಕ್ತಿ ಪ್ರಯಾಣಕ್ಕಾಗಿ ದಿನಕ್ಕೆ ಸರಾಸರಿ 10 ರಿಂದ 20 ರೂ. ಮಾತ್ರ ಖರ್ಚು ಮಾಡಬಹುದಾಗಿದೆ ಎಂದು ವೇದಿಕೆ ತಿಳಿಸಿದೆ.

Read More
Next Story