
ಕೊಲಂಬಿಯಾದಲ್ಲೂ ಭೀಕರ ವಿಮಾನ ಪತನ, 15 ಜನರ ದುರ್ಮರಣ
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಬಲಿಯಾದ ಬೆನ್ನಲ್ಲೇ, ಕೊಲಂಬಿಯಾದಲ್ಲೂ ಸಂಸದರಿದ್ದ ವಿಮಾನ ಪತನಗೊಂಡು 15 ಮಂದಿ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬುಧವಾರ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಅಸುನೀಗಿದ್ದಾರೆ. ಈ ಘಟನೆಯಲ್ಲಿ ಅವರ ಜೊತೆಗಿದ್ದ ಐವರು ಸಹಾಯಕರು ಮತ್ತು ಸಿಬ್ಬಂದಿ ಕೂಡ ದುರ್ಮರಣಕ್ಕೀಡಾಗಿದ್ದಾರೆ. ಈ ಸುದ್ದಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯ ಮಾಸುವ ಮುನ್ನವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ವಿಮಾನ ಪತನ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಕೊಲಂಬಿಯಾ ವಿಮಾನ ದುರಂತ: 15 ಮಂದಿ ಬಲಿ
ದಕ್ಷಿಣ ಅಮೆರಿಕಾದ ದೇಶವಾದ ಕೊಲಂಬಿಯಾದಲ್ಲಿ ನಡೆದ ಸಣ್ಣ ಪ್ರಯಾಣಿಕ ವಿಮಾನ ಅಪಘಾತದಲ್ಲಿ ಸಂಸದರು ಸೇರಿದಂತೆ ಒಟ್ಟು 15 ಜನರು ಮೃತಪಟ್ಟಿದ್ದಾರೆ. ಈ ದುರಂತವು ಕೊಲಂಬಿಯಾ ಮತ್ತು ವೆನೆಜುವೆಲಾ ಗಡಿಯ ಸಮೀಪವಿರುವ ನಾರ್ಟೆ ಡಿ ಸ್ಯಾಂಟ್ಯಾಂಡರ್ ಎಂಬ ಪರ್ವತ ಪ್ರದೇಶದಲ್ಲಿ ಸಂಭವಿಸಿದೆ.
ಭೀಕರ ದುರಂತದ ವಿಡಿಯೊ ಇಲ್ಲಿದೆ
ಘಟನೆಯ ಹಿನ್ನೆಲೆ
ಅಪಘಾತಕ್ಕೀಡಾದ ವಿಮಾನವು ಬೀಚ್‌ಕ್ರಾಫ್ಟ್ 1900 (Beechcraft 1900) ಮಾದರಿಯ ಅವಳಿ-ಪ್ರೊಪೆಲ್ಲರ್ ವಿಮಾನವಾಗಿತ್ತು. ಈ ವಿಮಾನವು ಸರ್ಕಾರಿ ಸ್ವಾಮ್ಯದ 'ಸಟೇನಾ' (Satena) ವಿಮಾನಯಾನ ಸಂಸ್ಥೆಗೆ ಸೇರಿದ್ದಾಗಿದ್ದು, ಖಾಸಗಿ ಸಂಸ್ಥೆ SEARCA ನಿಂದ ಗುತ್ತಿಗೆ ಪಡೆಯಲಾಗಿತ್ತು. ವಿಮಾನವು ಕುಕುಟಾ ನಗರದಿಂದ ಹೊರಟು ಓಕಾನಾ ನಗರದತ್ತ ಸಾಗುತ್ತಿತ್ತು. ನಿಗದಿತ ಲ್ಯಾಂಡಿಂಗ್ ಸಮಯಕ್ಕೆ ಸರಿಯಾಗಿ 11 ನಿಮಿಷಗಳ ಮೊದಲು ವಾಯು ಸಂಚಾರ ನಿಯಂತ್ರಣದೊಂದಿಗೆ (ATC) ಸಂಪರ್ಕ ಕಳೆದುಕೊಂಡಿತ್ತು. ಕೇವಲ 12 ನಿಮಿಷಗಳ ಹಾರಾಟದ ನಂತರ ಸಂಪರ್ಕ ಕಡಿದುಹೋಗಿದ್ದು, ಬಳಿಕ ಪರ್ವತಕ್ಕೆ ಅಪ್ಪಳಿಸಿರುವುದು ದೃಢಪಟ್ಟಿದೆ.
ಗಣ್ಯರ ಸಾವು
ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 13 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಕೊಲಂಬಿಯಾದ ಚೇಂಬರ್ ಆಫ್ ಡೆಪ್ಯೂಟೀಸ್ ಸದಸ್ಯ ಡಿಯೋಜೆನೆಸ್ ಕ್ವಿಂಟೆರೊ (36) ದುರ್ಘಟನೆಯಲ್ಲಿ ಬಲಿಯಾಗಿದ್ದಾರೆ. ಇವರು ಕಟಟುಂಬೋ ಪ್ರದೇಶದ ಮಾನವ ಹಕ್ಕುಗಳ ಪರ ಹೋರಾಟಗಾರರಾಗಿ ಮತ್ತು ಗಡಿ ಸಮಸ್ಯೆಗಳ ಬಗ್ಗೆ ಸಕ್ರಿಯ ಧ್ವನಿಯಾಗಿದ್ದರು. ವಿಮಾನ ದುರಂತದಲ್ಲಿ ಮಡಿದ ಮತ್ತೊಬ್ಬ ರಾಜಕಾರಣಿ ಕಾರ್ಲೋಸ್ ಸಾಲ್ಸೆಡೊ ಮುಂಬರುವ ಚುನಾವಣೆಯ ಶಾಸಕಾಂಗ ಅಭ್ಯರ್ಥಿಯಾಗಿದ್ದರು.
ರಕ್ಷಣಾ ಕಾರ್ಯಾಚರಣೆ ಮತ್ತು ತನಿಖೆ
ನಾಗರಿಕ ವಿಮಾನಯಾನ ಪ್ರಾಧಿಕಾರವು ಘಟನೆಯ ಸ್ಥಳಕ್ಕೆ ತಕ್ಷಣವೇ ರಕ್ಷಣಾ ತಂಡಗಳನ್ನು ರವಾನಿಸಿದೆ. ಪರ್ವತ ಪ್ರದೇಶವಾದ್ದರಿಂದ ಕಾರ್ಯಾಚರಣೆಗೆ ಅಡೆತಡೆಗಳು ಉಂಟಾಗಿವೆ. ಸ್ಥಳೀಯ ಶಾಸಕ ವಿಲ್ಮರ್ ಕ್ಯಾರಿಲ್ಲೊ ಅವರು ತಮ್ಮ ಸಹೋದ್ಯೋಗಿಗಳ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಅಪಘಾತಕ್ಕೆ ಹವಾಮಾನ ವೈಪರೀತ್ಯ ಅಥವಾ ತಾಂತ್ರಿಕ ದೋಷ ಕಾರಣವೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

