
ಏರ್ ಇಂಡಿಯಾ ವಕ್ತಾರರು, ವಿಮಾನಯಾನ ಸಂಸ್ಥೆಯು ತನ್ನ ಎಲ್ಲಾ ಕಾರ್ಯಾಚರಣೆಯ ಬೋಯಿಂಗ್ 787 ವಿಮಾನಗಳಲ್ಲಿ ಇಂಧನ ನಿಯಂತ್ರಣ ಸ್ವಿಚ್ (FCS) ನ ಮುನ್ನೆಚ್ಚರಿಕೆ ಮರು-ತಪಾಸಣೆಗಳನ್ನು ಪೂರ್ಣಗೊಳಿಸಿದೆ ಮತ್ತು ಈ ತಪಾಸಣೆಗಳಲ್ಲಿ ಯಾವುದೇ ಸಮಸ್ಯೆಗಳು ಪತ್ತೆಯಾಗಿಲ್ಲ ಎಂದು ಹೇಳಿದರು.
ಏರ್ ಇಂಡಿಯಾ ಡ್ರೀಮ್‌ಲೈನರ್ ಇಂಧನ ಸ್ವಿಚ್ ಸಮಸ್ಯೆ: ವಿವರ ಕೇಳಿದ ಬ್ರಿಟನ್ ವಿಮಾನಯಾನ ಪ್ರಾಧಿಕಾರ
ಕಳೆದ ವರ್ಷ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 260ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ಅಪಘಾತದ ಪ್ರಾಥಮಿಕ ವರದಿಯಲ್ಲಿ, ಟೇಕಾಫ್ ಆದ ಕೂಡಲೇ ಇಂಧನ ಪೂರೈಕೆ ಕಡಿತಗೊಂಡಿದ್ದೇ ಕಾರಣವೆಂದು ಹೇಳಲಾಗಿತ್ತು.
ಫೆಬ್ರವರಿ 1 ರಂದು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದಲ್ಲಿ ಇಂಧನ ನಿಯಂತ್ರಣ ಸ್ವಿಚ್ ಸಮಸ್ಯೆ ಕಾಣಿಸಿಕೊಂಡ ಘಟನೆಯನ್ನು ಬ್ರಿಟನ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಸಂಪೂರ್ಣ ವಿವರ ನೀಡುವಂತೆ ಏರ್ ಇಂಡಿಯಾಕ್ಕೆ ಸೂಚನೆ ನೀಡಿದೆ.
ಫೆಬ್ರವರಿ 1 ರಂದು ಎಐ-132 (AI 132) ವಿಮಾನವು ಲಂಡನ್‌ನಿಂದ ಬೆಂಗಳೂರಿಗೆ ಹಾರಾಟ ನಡೆಸಲು ಸಜ್ಜಾಗಿತ್ತು. ಈ ವೇಳೆ ಇಂಧನ ಸ್ವಿಚ್‌ನಲ್ಲಿ ದೋಷ ಕಂಡುಬಂದಿದೆ ಎಂದು ಫೆಬ್ರವರಿ 2 ರಂದು ಪೈಲಟ್ ವರದಿ ಮಾಡಿದ್ದರು. ವಿಮಾನ ಬೆಂಗಳೂರಿಗೆ ಬಂದಿಳಿದ ತಕ್ಷಣ, ಮುಂಜಾಗ್ರತಾ ಕ್ರಮವಾಗಿ ಅದನ್ನು ತಪಾಸಣೆಗಾಗಿ ನೆಲದ ಮೇಲೆಯೇ ಉಳಿಸಲಾಯಿತು. ಭಾರತೀಯ ವಿಮಾನಯಾನ ನಿಯಂತ್ರಕ ಡಿಜಿಸಿಎ (DGCA), ಪ್ರಾಥಮಿಕ ತನಿಖೆಯಲ್ಲಿ ಸ್ವಿಚ್ ನಿರ್ವಹಣೆಯಲ್ಲಿ "ಸರಿಯಾದ ಪ್ರಕ್ರಿಯೆ ಅನುಸರಿಸಿಲ್ಲ" ಎಂದು ಅಭಿಪ್ರಾಯಪಟ್ಟಿದೆ.
ಆತಂಕವೇಕೆ?
ಕಳೆದ ಜೂನ್‌ನಲ್ಲಿ ನಡೆದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ದುರಂತದಲ್ಲಿ 260 ಮಂದಿ ಮೃತಪಟ್ಟಿದ್ದರು. ಆ ದುರಂತದ ಪ್ರಾಥಮಿಕ ವರದಿಯಲ್ಲಿ, ಟೇಕಾಫ್ ಆದ ಕೂಡಲೇ ಇಂಧನ ಪೂರೈಕೆ ಕಡಿತಗೊಂಡಿದ್ದೇ ಅಪಘಾತಕ್ಕೆ ಕಾರಣ ಎಂದು ಉಲ್ಲೇಖಿಸಲಾಗಿತ್ತು. ಹೀಗಾಗಿ, ಅದೇ ಮಾದರಿಯ ವಿಮಾನದಲ್ಲಿ ಈಗ ಇಂಧನ ಸ್ವಿಚ್ ಸಮಸ್ಯೆ ಕಂಡುಬಂದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಏರ್ ಇಂಡಿಯಾ ಸ್ಪಷ್ಟನೆ
ಘಟನೆ ಬಳಿಕ ತನ್ನ ಎಲ್ಲಾ ಬೋಯಿಂಗ್ 787 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಮರುಪರಿಶೀಲನೆ ನಡೆಸಲಾಗಿದ್ದು, ಯಾವುದೇ ದೋಷಗಳು ಕಂಡುಬಂದಿಲ್ಲ ಎಂದು ಏರ್ ಇಂಡಿಯಾ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಬ್ರಿಟನ್ ಪ್ರಾಧಿಕಾರ ಕೇಳಿರುವ ಮಾಹಿತಿಯನ್ನು ಒದಗಿಸುವುದಾಗಿ ಅವರು ತಿಳಿಸಿದ್ದಾರೆ.

