
ಸಾಂದರ್ಭಿಕ ಚಿತ್ರ
ಮಾರ್ಚ್ 11ರಿಂದ ರಾಜ್ಯಾದ್ಯಂತ ಆರೋಗ್ಯ ಸೇವೆಯಲ್ಲಿ ವ್ಯತ್ಯಯ? : ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸರ್ಕಾರಿ ವೈದ್ಯರು ಸಜ್ಜು
ಮಾರ್ಚ್ 11ರಿಂದ 15ರವರೆಗೆ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಹೊರರೋಗಿ ವಿಭಾಗದ (OPD) ಸೇವೆಗಳನ್ನು ಬಂದ್ ಮಾಡಲು ಸಂಘವು ನಿರ್ಧರಿಸಿದೆ.
ರಾಜ್ಯದ ಸರ್ಕಾರಿ ವೈದ್ಯಾಧಿಕಾರಿಗಳ ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮೀನಮೇಷ ಎಣಿಸುತ್ತಿರುವ ಎಂದು ಆರೋಪ ಮಾಡಿರುವ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು (KGMOA) ಮಾರ್ಚ್ 11ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ದಶಕಗಳಿಂದ ಬಾಕಿ ಉಳಿದಿರುವ 15ಕ್ಕೂ ಹೆಚ್ಚು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದಾಗಿ ಮಾರ್ಚ್ ಎರಡನೇ ವಾರದಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗದ (OPD) ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಮುನ್ಸೂಚನೆ ಲಭ್ಯವಾಗಿದೆ. ಮಾರ್ಚ್ 10ರ ಗಡುವಿನೊಳಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಸಂಘವು ಎಚ್ಚರಿಸಿದೆ.
ಸರ್ಕಾರದ ನಡೆಗೆ ವೈದ್ಯರ ತೀವ್ರ ಅಸಮಾಧಾನ
ಈ ಹೋರಾಟದ ದ ಫೆಡರಲ್ ಕರ್ನಾಟಕದ ಜತೆಗೆ ಮಾಹಿತಿ ಹಂಚಿಕೊಂಡಿರುವ ಸಂಘದ ರಾಜ್ಯಾಧ್ಯಕ್ಷ ಡಾ. ರವೀಂದ್ರನಾಥ ಎಂ. ಮೇಟಿ ಅವರು, ವೈದ್ಯರ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಮೌನ ಮತ್ತು ವಿಳಂಬ ಧೋರಣೆಯು ವೈದ್ಯಕೀಯ ವೃಂದದಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಕರ್ನಾಟಕ ರಾಜ್ಯ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ ಸೇರಿದಂತೆ ವಿವಿಧ ವೃಂದ ಸಂಘಗಳು ಒಗ್ಗೂಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಈಗಾಗಲೇ ಮುಷ್ಕರದ ಅಧಿಕೃತ ಲಿಖಿತ ನೋಟಿಸ್ ನೀಡಿವೆ.
ಹಂತ ಹಂತವಾಗಿ ಬಿಗಿಯಾಗಲಿರುವ ಹೋರಾಟದ ಸ್ವರೂಪ
ವೈದ್ಯಾಧಿಕಾರಿಗಳ ಸಂಘವು ತನ್ನ ಹೋರಾಟವನ್ನು ಎರಡು ಹಂತಗಳಲ್ಲಿ ರೂಪಿಸಿದೆ. ಮೊದಲ ಹಂತದಲ್ಲಿ ಅಂದರೆ ಮಾರ್ಚ್ 11ರಿಂದ ಮಾರ್ಚ್ 15ರವರೆಗೆ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಹೊರರೋಗಿ ವಿಭಾಗದ (OPD) ಸೇವೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ತುರ್ತು ಚಿಕಿತ್ಸೆಗಳು ಮತ್ತು ಅಗತ್ಯ ಸೇವೆಗಳು ಮಾತ್ರ ಲಭ್ಯವಿರಲಿವೆ. ಆದರೆ, ಒಂದು ವೇಳೆ ಮಾರ್ಚ್ 15ರ ಒಳಗೂ ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ, ಎರಡನೇ ಹಂತವಾಗಿ ಮಾರ್ಚ್ 16ರಿಂದ ಅನ್ವಯವಾಗುವಂತೆ ಎಲ್ಲ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣವಾಗಿ ಕರ್ತವ್ಯ ಬಹಿಷ್ಕಾರ ಮಾಡಲಿದ್ದಾರೆ. ಇದರಿಂದಾಗಿ ಆಸ್ಪತ್ರೆಗಳ ಒಳರೋಗಿ ವಿಭಾಗ ಮತ್ತು ಶಸ್ತ್ರಚಿಕಿತ್ಸೆ ಸೇರಿದಂತೆ ಪ್ರಮುಖ ಸೇವೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.
13 ವರ್ಷಗಳ ಸುದೀರ್ಘ ನಿರ್ಲಕ್ಷ್ಯ ಮತ್ತು ಪ್ರಮುಖ ಬೇಡಿಕೆಗಳು
ವೈದ್ಯರ ಈ ಪ್ರತಿಭಟನೆಗೆ ಕೇವಲ ಇತ್ತೀಚಿನ ಕಾರಣಗಳಷ್ಟೇ ಅಲ್ಲದೆ, ಕಳೆದ 13 ವರ್ಷಗಳಿಂದ ಪರಿಹಾರಗೊಳ್ಳದ ಗಂಭೀರ ಸಮಸ್ಯೆಗಳೂ ಮೂಲ ಕಾರಣವಾಗಿವೆ. ವೈದ್ಯಾಧಿಕಾರಿಗಳ ಜೇಷ್ಠತಾ ಪಟ್ಟಿಯು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪರಿಷ್ಕರಣೆಯಾಗದೆ ಇರುವುದು ವೈದ್ಯರ ವೃತ್ತಿಜೀವನದ ಬೆಳವಣಿಗೆಗೆ ಮಾರಕವಾಗಿದೆ. ಇದರೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಯಾವುದೇ ತಿದ್ದುಪಡಿ ತಂದಿಲ್ಲದಿರುವುದು ಕೂಡ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸಕ್ತ ಸಾಲಿನಿಂದ ವೈದ್ಯರಿಗೆ ನೀಡಲಾಗುತ್ತಿದ್ದ ಉನ್ನತ ಶಿಕ್ಷಣ ಶುಲ್ಕ ಮರುಪಾವತಿ ಸೌಲಭ್ಯವನ್ನು ರದ್ದುಗೊಳಿಸಿರುವುದು, ಸಮುದಾಯ ಆರೋಗ್ಯ ಕೇಂದ್ರಗಳಿಂದ ಪ್ರಸೂತಿ ತಜ್ಞರನ್ನು ತೆರವುಗೊಳಿಸುತ್ತಿರುವುದು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಸರಬರಾಜಿನಲ್ಲಾಗುತ್ತಿರುವ ಅಸ್ತವ್ಯಸ್ತತೆಗಳು ವೈದ್ಯಕೀಯ ವಲಯವನ್ನು ಹೈರಾಣಾಗಿಸಿವೆ ಎಂದು ವೈದ್ಯರು ಆರೋಪಿಸಿದ್ದಾರೆ.
ಫೆಬ್ರವರಿ 23ರಂದು ನಿರ್ಣಾಯಕ ಸಭೆ
ಮಾರ್ಚ್ 11ರ ಮುಷ್ಕರಕ್ಕೂ ಮುನ್ನ ಹೋರಾಟದ ರೂಪುರೇಷೆಗಳನ್ನು ಅಂತಿಮಗೊಳಿಸಲು ಫೆಬ್ರವರಿ 23ರಂದು ಒಂದು ಸಭೆ ಕರೆಯಲಾಗಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಹೋರಾಟದ ಸಂಪೂರ್ಣ ವಿವರಗಳನ್ನು ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ಚರ್ಚಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ರಾಜ್ಯ ಸರ್ಕಾರಿ ನೌಕರರ ಸಂಘವು ಕೂಡ ಈ ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿರುವುದು ವೈದ್ಯರ ಸಂಘಕ್ಕೆ ಆನೆಬಲ ಬಂದಂತಾಗಿದೆ. ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಮಾರ್ಚ್ 10ರೊಳಗೆ ಸಂಘದ ಬೇಡಿಕೆಗಳನ್ನು ಈಡೇರಿಸಿ, ಸಂಭವನೀಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ತಪ್ಪಿಸಬೇಕೆಂದು ಡಾ. ಮೇಟಿ ಅವರು ಆಗ್ರಹಿಸಿದ್ದಾರೆ.

