ತಿಂಗಳಲ್ಲಿ ಖಾಲಿ ಇರುವ ವೈದ್ಯರು, ನರ್ಸ್, ಫಾರ್ಮಸಿಸ್ಟ್ ಹುದ್ದೆಗಳ ಭರ್ತಿ: ದಿನೇಶ್‌ ಗುಂಡೂರಾವ್
x

ತಿಂಗಳಲ್ಲಿ ಖಾಲಿ ಇರುವ ವೈದ್ಯರು, ನರ್ಸ್, ಫಾರ್ಮಸಿಸ್ಟ್ ಹುದ್ದೆಗಳ ಭರ್ತಿ: ದಿನೇಶ್‌ ಗುಂಡೂರಾವ್

ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳನ್ನು ಒಂದು ತಿಂಗಳ ಅವಧಿಯಲ್ಲಿ ಭರ್ತಿ ಮಾಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.


Click the Play button to hear this message in audio format

ರಾಜ್ಯದ ಆರೋಗ್ಯ ವ್ಯವಸ್ಥೆಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳನ್ನು ಕೇವಲ ಒಂದು ತಿಂಗಳ ಅವಧಿಯಲ್ಲಿ ಭರ್ತಿ ಮಾಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿರುವ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿನ ಸಿಬ್ಬಂದಿ ಕೊರತೆಯನ್ನು ನೀಗಿಸಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ತಕ್ಷಣದ ಅಗತ್ಯವನ್ನು ಪೂರೈಸಲು, ಇಲಾಖೆಯಲ್ಲಿ ಖಾಲಿ ಇರುವ 337 ತಜ್ಞ ವೈದ್ಯರು ಹಾಗೂ 250 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಈಗಾಗಲೇ ಅನುಮತಿ ನೀಡಲಾಗಿದ್ದು, ಪ್ರಕ್ರಿಯೆ ಚಾಲನೆಯಲ್ಲಿದೆ. ಸರ್ಕಾರಿ ಕೋಟಾದಡಿ ವೈದ್ಯಕೀಯ ಶಿಕ್ಷಣ ಪೂರೈಸಿದ ವೈದ್ಯರು ಒಂದು ವರ್ಷ ಕಡ್ಡಾಯವಾಗಿ ಸರ್ಕಾರಿ ಸೇವೆ ಸಲ್ಲಿಸಬೇಕು ಎಂಬ ನಿಯಮವಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಬರೋಬ್ಬರಿ 1500 ವೈದ್ಯರು ಮತ್ತು ತಜ್ಞ ವೈದ್ಯರನ್ನು ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ನೇಮಕ ಮಾಡಲು ಕ್ರಮ ವಹಿಸಲಾಗಿದೆ. ಇದು ಗ್ರಾಮೀಣ ಭಾಗದ ವೈದ್ಯರ ಕೊರತೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.

ಪಾರದರ್ಶಕ ಕೌನ್ಸೆಲಿಂಗ್​

ಖಾಯಂ ಹುದ್ದೆಗಳ ಭರ್ತಿಗೂ ಆರ್ಥಿಕ ಇಲಾಖೆ ಹಸಿರು ನಿಶಾನೆ ತೋರಿದೆ. ಮಂಜೂರಾಗಿ ಖಾಲಿ ಇರುವ 120 ತಜ್ಞ ವೈದ್ಯರು ಮತ್ತು 100 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ತಜ್ಞ ವೈದ್ಯರ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿದ್ದ ಪ್ರಕರಣವು ಅಂತಿಮ ಹಂತದಲ್ಲಿದ್ದು, ಶೀಘ್ರವೇ ಇತ್ಯರ್ಥಗೊಳ್ಳುವ ವಿಶ್ವಾಸವಿದೆ. ಕೇವಲ ವೈದ್ಯರಷ್ಟೇ ಅಲ್ಲದೆ, ಆಸ್ಪತ್ರೆಗಳ ಸುಗಮ ನಿರ್ವಹಣೆಗೆ ಅತ್ಯಗತ್ಯವಾಗಿರುವ ಅರೆವೈದ್ಯಕೀಯ ಸಿಬ್ಬಂದಿಯ ಕೊರತೆಯನ್ನೂ ನೀಗಿಸಲಾಗುತ್ತಿದೆ. ರಾಜ್ಯಾದ್ಯಂತ 600 ಶುಶ್ರೂಷಾಧಿಕಾರಿಗಳು, 400 ಕಿರಿಯ ಪ್ರಯೋಗಶಾಲಾ ತಂತ್ರಜ್ಞರು ಹಾಗೂ 400 ಫಾರ್ಮಸಿಸ್ಟ್ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೌನ್ಸೆಲಿಂಗ್ ಮೂಲಕ ನಡೆಸಿ, ಅಗತ್ಯವಿರುವ ಕಡೆಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲು ಒಂದು ತಿಂಗಳ ಗಡುವು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇಲಾಖೆಯ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ ಮತ್ತೊಂದು ಕಠಿಣ ನಿರ್ಧಾರವನ್ನು ಸಚಿವರು ಪ್ರಕಟಿಸಿದ್ದಾರೆ. ಆರೋಗ್ಯ ಇಲಾಖೆಯ ಮೂಲ ಹುದ್ದೆಯಲ್ಲಿದ್ದುಕೊಂಡು, ಬೇರೆ ವಿವಿಧ ಇಲಾಖೆಗಳಿಗೆ ನಿಯೋಜನೆ ಮೇಲೆ ತೆರಳಿದ್ದ ವೈದ್ಯರು ಮತ್ತು ಆಹಾರ ಗುಣಮಟ್ಟ ಸುರಕ್ಷತಾ ಅಧಿಕಾರಿಗಳ ನಿಯೋಜನೆಯನ್ನು ರದ್ದುಗೊಳಿಸಲಾಗಿದೆ. ಅವರನ್ನು ತಕ್ಷಣವೇ ಇಲಾಖೆಗೆ ವಾಪಸ್ ಕರೆಸಿಕೊಂಡು, ವೈದ್ಯರ ಮತ್ತು ಅಧಿಕಾರಿಗಳ ಅಗತ್ಯವಿರುವ ಸ್ಥಳಗಳಿಗೆ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

Read More
Next Story