ಅನುಭವಗಳೇ ಕಾದಂಬರಿಗಳಾದವುʼ ; ಪಿ.ಶೇಷಾದ್ರಿ ನಿರ್ಮಿಸಿದ ಸಾಕ್ಷ್ಯಚಿತ್ರದಲ್ಲಿ ಭೈರಪ್ಪರ ಮನದಾಳದ ಮಾತು
x

ಎಸ್‌.ಎಲ್‌ ಭೈರಪ್ಪ

"ಅನುಭವಗಳೇ ಕಾದಂಬರಿಗಳಾದವುʼ ; ಪಿ.ಶೇಷಾದ್ರಿ ನಿರ್ಮಿಸಿದ ಸಾಕ್ಷ್ಯಚಿತ್ರದಲ್ಲಿ ಭೈರಪ್ಪರ ಮನದಾಳದ ಮಾತು

ಶೆಟ್ಟಿಕೆರೆ ಕಾಲಭೈರವ ದೇವರ ಒಕ್ಕಲಿಗರಲ್ಲಿ ಒಬ್ಬ ಮಗನಿಗೆ “ಭೈರಪ್ಪ” ಎಂದು ಹೆಸರಿಡುವ ಪದ್ಧತಿ ಇತ್ತು. ಅದೇ ಕಾರಣಕ್ಕೆ ನನಗೂ ಆ ಹೆಸರು ಬಂತು ಎಂದು ಎಸ್‌.ಎಲ್‌.ಭೈರಪ್ಪ ತಮ್ಮ ಹೆಸರಿನ ಬಗ್ಗೆ ಹೇಳಿಕೊಂಡಿದ್ದರು.


"ಯಾವ ಅನುಭವಗಳು ನಮಗೆ ಆಳವಾಗಿ ತಟ್ಟುತ್ತವೆಯೋ ಅದನ್ನು ಮರೆಯಲು ಸಾಧ್ಯವಿಲ್ಲ. ನಾನು ಕಥೆಯನ್ನು ಮನರಂಜನೆಗಾಗಿ ಅಥವಾ ಕಥೆ ಬರೆಯಬೇಕೆಂದು ಕಾರಣಕ್ಕಾಗಿ ಬರೆಯುತ್ತಿರಲಿಲ್ಲ. ಸಮಸ್ಯೆಯ ಆಳಕ್ಕೆ ಹೋಗಿ, ಆ ಅನುಭವವನ್ನು ಓದುಗರಿಗೆ ತಂದುಕೊಡುವುದೇ ನನ್ನ ಉದ್ದೇಶವಾಗಿದೆ"...!

ಹೀಗೆಂದು, ಚಿತ್ರ ನಿರ್ದೇಶಕ ಪಿ. ಶೇಶಾದ್ರಿ ಅವರ ತಯಾರಿಸಿರುವ ಸಾಕ್ಷ್ಯಚಿತ್ರದಲ್ಲಿ ಸ್ವತಃ ಭೈರಪ್ಪ ಅವರೇ ಮನದಾಳ ಹಂಚಿಕೊಂಡಿದ್ದಾರೆ. ಭೈರಪ್ಪ ಅವರ ಅಗಲಿಕೆ ಹಿನ್ನೆಲೆಯಲ್ಲಿ ಅವರ ಅಂದಿನ ಮನದಾಳದ ಮಾತುಗಳು ಹೀಗಿವೆ.

"ನಾನು ಹುಟ್ಟಿದ್ದು ಹಾಸನ ಜಿಲ್ಲೆ ಸಂತೇಶಿವರ ಎಂಬ ಹಳ್ಳಿಯಲ್ಲಿ.ಆ ಸಮಯದಲ್ಲಿ ಬಡತನದಲ್ಲಿತ್ತು. ಅಜ್ಜ ಸಂಪಾದಿಸಿದ್ದ ಜಮೀನು, ನೆಮ್ಮದಿಯ ಜೀವನವಿತ್ತು. ಆದರೆ, ಅಜ್ಜಿ ಮತ್ತು ಅಪ್ಪನ ಅವಿವೇಕದಿಂದ ಎಲ್ಲವೂ ಕಳೆದುಹೋಯಿತು. ತಾಯಿಯ ವಿವೇಕವೇ ನಮ್ಮ ಬದುಕಿನ ಆಧಾರವಾಯಿತು.

ಭೈರಪ್ಪ ಹೆಸರು ಏಕೆ ಬಂತು?

ಶೆಟ್ಟಿಕೆರೆ ಕಾಲಭೈರವ ದೇವರ ಒಕ್ಕಲಿಗರಲ್ಲಿ ಒಬ್ಬ ಮಗನಿಗೆ “ಭೈರಪ್ಪ” ಎಂದು ಹೆಸರಿಡುವ ಪದ್ಧತಿ ಇತ್ತು. ಅದೇ ಕಾರಣಕ್ಕೆ ನನಗೂ ಆ ಹೆಸರು ಬಂತು. ಆ ದೇವಸ್ಥಾನದಲ್ಲಿ ಮಾದೇವ ಎನ್ನುವ ಸನ್ಯಾಸಿ ಇದ್ದರು. ನನ್ನನ್ನು ಕಂಡರೆ ಅವರಿಗೆ ತುಂಬ ಪ್ರೀತಿ. ನಮ್ಮ ಊರಲ್ಲಿ ಆಗಾಗ ಪ್ಲೇಗ್ ಬರುತ್ತಿತ್ತು. ಒಂದೇ ದಿನ ನನ್ನ ಅಕ್ಕ ಮತ್ತು ಅಣ್ಣ ಇಬ್ಬರು ಎರಡು ಗಂಟೆಗಳ ಅಂತರದಲ್ಲಿ ಮೃತಪಟ್ಟಿದ್ದರು. ನನಗೂ ಪ್ಲೇಗ್ ಬಂತು. ಆಗ ಅಮ್ಮ ನನ್ನನ್ನು ಎತ್ತಿಕೊಂಡು, ಆ ಸನ್ಯಾಸಿಯ ಮಡಿಲಿಗೆ ಹಾಕಿ, “ಅಯ್ಯಾ, ಇಬ್ಬರು ಮಕ್ಕಳು ಈಗಷ್ಟೇ ಸುಡುತ್ತಿದ್ದಾರೆ. ಇವನು ಉಳಿಯುತ್ತಾನೋ ಗೊತ್ತಿಲ್ಲ. ನನ್ನ ಅದೃಷ್ಟ ಸರಿ ಇಲ್ಲ. ಇವನನ್ನು ನಿಮಗೆ ಮಡಿಲಿಗೆ ಹಾಕಿದ್ದೇನೆ. ಇವನು ಸಂಸಾರಗ್ರಸ್ತವಾಗುವುದು ಬೇಡ. ಬದುಕಿದರೆ ನಿಮ್ಮಂತೆ ಸನ್ಯಾಸಿಯಾಗಿ ಬೆಳೆಸಿ ಎಂದು ಹೇಳಿದ್ದರು.

ಅದೃಷ್ಟಕ್ಕೆ ನಾನು ಬದುಕಿಬಿಟ್ಟೆ. ಹಾಗಾಗಿ ಆ ದೇವಸ್ಥಾನಕ್ಕೂ, ಅನುಭವಕ್ಕೂ ನನಗೂ ವಿಶೇಷ ನಂಟು ಇದೆ. ಬಾಲ್ಯದಲ್ಲಿ ಕೆರೆಯಲ್ಲಿ ಈಜುವುದು, ಹಾವು ಹೊಡೆಯುವುದು, ಮರ ಹತ್ತುವ ಹವ್ಯಾಸವಿತ್ತು. ನನಗೆ ನಾಟಕ ನೋಡುವ ಆಸೆ. ಅಪ್ಪನಿಗೆ ನನ್ನನ್ನು ನಿಯಂತ್ರಿಸಲು ಸಾಧ್ಯ ಆಗುತ್ತಿರಲಿಲ್ಲ. ನನಗೆ ಉತ್ತಮ ವಿದ್ಯಾಭ್ಯಾಸ ಕೊಡಬೇಕು ಎಂದು ಅಮ್ಮ ನನ್ನನ್ನು ಮಾವನ ಮನೆ ಬಾಗೂರಿಗೆ ಬಿಟ್ಟರು. ಆದರೆ, ಮಾವ ಯಾವಾಗಲೂ ಹೊಡೆಯುತ್ತಿದ್ದ. ಅದರಿಂದ ಭಯ ಹುಟ್ಟಿಬಿಟ್ಟಿತು. ಪಾಠ ಓದಲು ಮನಸ್ಸಾಗುತ್ತಿರಲಿಲ್ಲ.

ಅಲ್ಲಿ ಊರಿನ ಕೆರೆಯ ಹಿಂದೆ ನಾಗೇಶ್ವರ ಎಂಬ ದೇವಸ್ಥಾನವಿತ್ತು. ಆ ದೇವಸ್ಥಾನದ ಪೂಜಾರಿ ನನ್ನ ಮಾವನಾಗಿದ್ದ. ಮೈಲಿಯಲ್ಲಿ ಹೋದರೆ ಅಲ್ಲಿ ಏಳು ಹೆಡೆಯ ಹಾವು ಕಚ್ಚುತ್ತದೆ ಎಂಬ ನಂಬಿಕೆ ಗ್ರಾಮದಲ್ಲಿತ್ತು. ಒಮ್ಮೆ ನಾನು ಊಟ ಮಾಡಿ, ಮಡಿಯಿಲ್ಲದೆ ದೇವಸ್ಥಾನಕ್ಕೆ ಹೋದೆ. ಅಲ್ಲಿ ನಾನು ಕಂಡದ್ದು ಅಚ್ಚರಿಯ ದೃಶ್ಯ. ನನ್ನ ಮಾವ ಒಬ್ಬ ಕೂಲಿ ಮಹಿಳೆಯೊಂದಿಗೆ ಇದ್ದ. ಮೈಲಿಗೆಯಲ್ಲಿ ದೇವಸ್ಥಾನಕ್ಕೆ ಹೋದರೆ ಸರ್ಪ ಕಚ್ಚುತ್ತದೆ ಎಂದು ಹೇಳುತ್ತಿದ್ದವರು ಆ ದೇವಸ್ಥಾನದಲ್ಲೇ ಇಂತಹ ಕೆಲಸ ನಡೆಸುತ್ತಿದುದನ್ನು ನೋಡಿ ನನಗೆ ದೇವರ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡವು.

ಸತ್ಯದ ಹುಡುಕಾಟ, ಸಾಹಿತ್ಯದ ಹಾದಿ

ಒಂದು ದಿನ ನನ್ನ ಅಮ್ಮ ತೀರಿಕೊಂಡರು. ನಾನು ಊರಿಗೆ ಬಂದು ತಿಥಿ ಮಾಡಿ, ಮತ್ತೆ ಬಾಗೂರಿಗೆ ಹೋದೆ. ಹೋದ ಮರುದಿನ ಅಮ್ಮನ ನೆನಪು ತಲೆದೋರಿತು. ಆಗ ಮಾವ ಕೈ ಎತ್ತಿದರು. ನಾನೂ ಕೈ ಎತ್ತಿದೆ. ಅದಾದ ಮೇಲೆ ಊರನ್ನೇ ಬಿಟ್ಟುಬಿಟ್ಟೆ. ನಾನು ನುಗ್ಗೆಹಳ್ಳಿಗೆ ಬಂದು ಅಲ್ಲಿ ಸರ್ಕಾರಿ ಶಾಲೆಗೆ ಸೇರಿಕೊಂಡೆ. ಬಾಗೂರಿನಲ್ಲಿ ಮಂಕಾಗಿದ್ದ ನನಗೆ ಇಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಮೂರು ತಿಂಗಳೊಳಗೆ ತರಗತಿಯಲ್ಲಿ ಮೊದಲ ಸ್ಥಾನ ಪಡೆದೆ. ಆ ಮೇಲೆ ಶಾಲೆಯತ್ತ ಒಲವು ಬೆಳೆಯಿತು.

ವಾರಪೂರ್ತಿ ಒಂದೊಂದು ಮನೆಯಲ್ಲಿ ಒಂದೊಂದು ದಿನ ಊಟ ಮಾಡುತ್ತಿದ್ದೆ. ಕೆಲವು ದಿನ ದೇವಸ್ಥಾನದಲ್ಲೇ ಮಲಗುತ್ತಿದ್ದೆ. ಕಲ್ಯಾಣಿಯಲ್ಲಿ ಸ್ನಾನ ಮಾಡುತ್ತಿದ್ದೆ. ನನ್ನ ಅದೃಷ್ಟಕ್ಕೆ ಶ್ರೀನಿವಾಸ ಅಯ್ಯರ್ ಮತ್ತು ಸ್ವಾಮಿ ಮೇಷ್ಟ್ರು ಎಂಬ ಇಬ್ಬರು ಒಳ್ಳೆಯ ಶಿಕ್ಷಕರು ಸಿಕ್ಕರು. ಶ್ರೀನಿವಾಸ ಅಯ್ಯರ್ ನನಗೆ ಇಂಗ್ಲಿಷ್ ಮಾತನಾಡುವುದನ್ನೇ ಕಲಿಸುತ್ತಿದ್ದರು.

ಹೈಸ್ಕೂಲ್ ಮೊದಲನೇ ವರ್ಷವನ್ನು ಚನ್ನರಾಯಪಟ್ಟಣದಲ್ಲಿ ಓದಿದ್ದೆ. ಅಲ್ಲಿ ನಾನು ಭಿಕ್ಷೆ ಬೇಡಿ ಊಟ ಮಾಡುತ್ತಿದ್ದೆ. ಸಿನಿಮಾ ಥಿಯೇಟರಿನಲ್ಲಿ ಗೇಟ್ ಕೀಪರ್ ಆಗಿ ತಿಂಗಳಿಗೆ ಐದು ರೂಪಾಯಿ ಸಂಪಾದಿಸುತ್ತಿದ್ದೆ.ಆ ಹಣದಿಂದ ಓದನ್ನು ಮುಂದುವರಿಸಿದೆ. ಅಲ್ಲಿಂದ ಮೈಸೂರಿಗೆ ಬಂದೆ. ಅಲ್ಲಿ ಉಪನ್ಯಾಸಕರ ಮಾರ್ಗದರ್ಶನ ಸಿಕ್ಕಿತು. ಓದುತ್ತಿದ್ದಾಗ ಸ್ನೇಹಿತರು ಮನೆಗೆ ಆಹ್ವಾನಿಸುತ್ತಿದ್ದರು. ನಾನು ಹೋದೆ. ಅಲ್ಲಿ ಕಥೆ ಹೇಳುತ್ತಿದ್ದೆ. ಕಥೆ ಮುಗಿದ ನಂತರ “ಈ ಹುಡುಗನಿಗೆ ಏನಾದರೂ ಕೊಡಿ” ಎಂದು ಹೇಳುತ್ತಿದ್ದರು. ಹೀಗಾಗಿ ನನಗೆ ಎರಡು ಎರಡು ತೆಂಗಿನಕಾಯಿ ಸಿಕ್ಕಿತು. ಅವನ್ನು ರೂಪಾಯಿಗೆ ಎಂಟು ಕಾಯಿಯಂತೆ ಮಾರಾಟ ಮಾಡಿ ಶಾಲಾ ಶುಲ್ಕ ಪಾವತಿಸುತ್ತಿದ್ದೆ.

ಒಂದು ದಿನ ನಾನು ಸ್ನೇಹಿತನ ಜೊತೆ ಸೇರಿಕೊಂಡು ಮಿಲಿಟರಿಗೆ ಸೇರಬೇಕು ಎಂದು ಒಂದು ವರ್ಷದಲ್ಲಿ ಬೆಂಗಳೂರಿಗೆ ಬಂದೆ. ಆದರೆ ಊಟ, ಕೆಲಸಕ್ಕಾಗಿ ಬೀದಿ ಬೀದಿ ಅಲೆದಾಡುತ್ತಿದ್ದೆ. ಯಾರೂ ಕೆಲಸ ಕೊಡಲಿಲ್ಲ. ಯಾರೋ ಒಬ್ಬರು ಇಲ್ಲಿ ಏನು ಮಾಡ್ತೀಯಾ?, ಮುಂಬೈಗೆ ಹೋಗು. ಅಲ್ಲಿ ಹೋದರೆ ಕೋಟ್ಯಾಧಿಪತಿ ಆಗುತ್ತೀಯಾ ಎಂದು ಹೇಳಿದರು.

ನಾನು ರೈಲು ಹತ್ತಿದೆ. ಟಿಕೆಟ್ ಇಲ್ಲದ ಕಾರಣ ನನ್ನನ್ನು ಇಳಿಸಿ ಸ್ಟೇಷನ್ ಮಾಸ್ಟರ್‌ ಬಳಿಗೆ ಒಪ್ಪಿಸಿದರು. ಅದರಿಂದ ನನಗೆ ನಾಚಿಕೆಯಿಂದ ನಡೆದುಕೊಂಡೆ ಹೋಗಬೇಕು ಎಂಬ ಛಲ ಬಂತು. ನಾನು ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋದೆ. ಹೀಗೆ ಹೋದಾಗ ಒಬ್ಬರ ಪರಿಚಯವಾಯಿತು. ಅವರು ನನ್ನನ್ನು ರಾಣೆಬೆನ್ನೂರಿನ ಹೊಟೇಲಿಗೆ ಕೆಲಸಕ್ಕೆ ಸೇರಿಸಿದರು. ಅಲ್ಲಿ ತುಂಬಾ ಕಷ್ಟದ ಕೆಲಸ ಇತ್ತು. ನಂತರ ಬ್ಯಾಡಗಿಗೆ ಬಂದು ನಾಟಕ ಕಂಪನಿಯಲ್ಲಿ ಲೆಕ್ಕಪತ್ರ ಬರೆಯುವ ಕೆಲಸಕ್ಕೆ ನೇಮಕವಾದೆ. ಆದರೆ ಕಂಪನಿ ಮುಚ್ಚಿಬಿಟ್ಟಿತು. ಅಲ್ಲಿಂದ ಮುಂಬೈಗೆ ಹೊರಟೆ. ಅಲ್ಲಿ ಬೆಂಗಳೂರಿನವರೇ ಆಗಿದ್ದ ಕುದುರೆಗಾಡಿ ಓಡಿಸುವವರ ಪರಿಚಯವಾಯಿತು. ಅವರಿಗೆ ಅಡುಗೆ ಮಾಡುವ ಕೆಲಸ ಮಾಡುತ್ತಿದ್ದೆ. ಅಲ್ಲಿ ಬೈಕಲಾ ಎಂಬ ಒಂದು ಲೈಬ್ರರಿ ಇತ್ತು. ಅಲ್ಲಿ ಪುಸ್ತಕಗಳನ್ನು ಓದುತ್ತಿದ್ದೆ. ಆಗ ಕರ್ನಾಟಕದ ಸಾಧು ಸಂತರೊಬ್ಬರು ಬಂದರು. ಅವರ ಪರಿಚಯದಿಂದ ಗದಗಕ್ಕೆ ಬಂದೆ. ಅಲ್ಲಿ ಓದಲು ಮನಸ್ಸು ಬಂತು. ಅವರು ಟಿಕೆಟ್‌ಗೆ ಹಣ ಕೊಟ್ಟರು. ಅಲ್ಲಿಂದ ಮೈಸೂರಿಗೆ ಬಂದು ಓದನ್ನು ಮುಂದುವರಿಸಿದೆ.

ಹೈಸ್ಕೂಲ್ ಕೊನೆಯ ವರ್ಷದಲ್ಲಿ ಗತಜನ್ಮ ಎಂಬ ಕಥೆಯನ್ನು ಬರೆದೆ. ನನಗೆ ಸಾಹಿತ್ಯಾಸಕ್ತಿ ತಾಯಿಯಿಂದ ಬಂತು. ಆಕೆ ಹಾಡುಗಳನ್ನು ಬರೆಯುತ್ತಿದ್ದಳು. ತಾಯಿ ತೀರಿಕೊಂಡಾಗ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಸಾವು ಏಕೆ ಬರುತ್ತದೆ?, ಸತ್ತ ಮೇಲೆ ಏನಾಗುತ್ತದೆ? ಎಂಬ ಹಂಬಲ ತತ್ವಶಾಸ್ತ್ರದತ್ತ ಕರೆದೊಯ್ದಿತು.

ಮೈಸೂರಿನಲ್ಲಿ ಫಿಲೋಸಫರ್ ಯಾಮುಚಾರ್ಯ ಎಂಬ ಪ್ರೊಫೆಸರ್ ಇದ್ದರು. ಅವರಿಗೆ ಈ ಬಗ್ಗೆ ಕೇಳಿದೆ. ಅವರು ನನಗೆ ಕಠೋಪನಿಷತ್ತು ಕೊಟ್ಟರು. ಬಳಿಕ ಬಿಎ ಫಿಲಾಸಫಿಗೆ ಸೇರಿದೆ. ಪ್ಲೇಟೋ ಹಾಗೂ ಇತರರ ಕೃತಿಗಳನ್ನು ಓದಿದೆ. ನನಗೆ ಸಾಕಷ್ಟು ಓದುವ ಆಸಕ್ತಿ ಬೆಳೆದಿತು. ಹೈಸ್ಕೂಲ್‌ನಲ್ಲಿ ಇದ್ದಾಗ ಎ.ಎನ್. ಕೃಷ್ಣರಾವ್ ಅವರ ಪುಸ್ತಕಗಳನ್ನು ಓದುತ್ತಿದ್ದೆ. ದೇವಡು ಅವರ ಮಹಾಬ್ರಾಹ್ಮಣ ಮತ್ತು ಮಹಾಕ್ಷತ್ರೀಯ ನನ್ನ ನೆಚ್ಚಿನ ಪುಸ್ತಕಗಳಾಗಿದ್ದವು. ಶರತ್‌ಚಂದ್ರ, ಕಾರಂತ ಇವರ ಕೃತಿಗಳು ನನ್ನ ಮೇಲೆ ಪ್ರಭಾವ ಬೀರಿದವು. ಇವರಿಂದ ಸ್ವಲ್ಪ ಪ್ರೇರಣೆ ಪಡೆದರೂ, ನನ್ನ ದಾರಿಯನ್ನು ನಾನು ಸ್ವತಃ ಹುಡುಕಿಕೊಂಡೆ.

'ವಂಶವೃಕ್ಷ'ದ ಮೂಲಕ ಸಾಹಿತಿ ಪಟ್ಟ

ನಾನು ಮೊದಲ ಬರೆದ ಕಾದಂಬರಿಯೇ ವಂಶವೃಕ್ಷ. ಅದೇ ಕಾದಂಬರಿಯು ನನ್ನನ್ನು ಲೇಖಕನಾಗಿ ರೂಪಿಸಿತು. ಸುಮಾರು ಎರಡೂವರೆ ವರ್ಷ ಅದರೊಳಗೆ ತಲ್ಲೀನನಾಗಿದ್ದಾಗ, ಸಾಹಿತ್ಯ ಭಂಡಾರದ ಗೋವಿಂದರಾಯರು ಅದನ್ನು ಕಳುಹಿಸಬೇಕೆಂದು ಸಲಹೆ ನೀಡುತ್ತಿದ್ದರು. ಸಂಪೂರ್ಣವಾಗಿ ಸಾಹಿತ್ಯದತ್ತ ನನ್ನನ್ನು ತಿರುಗಿಸಿದ ಕೃತಿ ವಂಶವೃಕ್ಷವೇ ಆಗಿತ್ತು ಎಂದು ಸಾಕ್ಷ್ಯಚಿತ್ರಕ್ಕೆ ನೀಡಿರುವ ಸಂದರ್ಶನದಲ್ಲಿ ಭೈರಪ್ಪ ಅವರು ಹೇಳಿಕೊಂಡಿದ್ದಾರೆ.

Read More
Next Story