
Special Story Part-2 : ಹಿಜಡಾಗಳಲ್ಲಿ ನಿರ್ವಾಣ ಕ್ರಿಯೆ: ಯಾತನೆ-ಭಕ್ತಿಯ ಭೂಮಿಕೆಯಲ್ಲಿ ಆಧ್ಯಾತ್ಮಿಕ ಪುನರ್ಜನ್ಮ
ಮನೋವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ನೋಡಿದಾಗ, ತೃತೀಯ ಲಿಂಗಿ ವ್ಯಕ್ತಿಯ ಗಾಯವು ಕೇವಲ ದೇಹಕ್ಕಾದ ಗಾಯವಲ್ಲ. ಅದು ಇರುವ ಮತ್ತು ಇಲ್ಲದಿರುವ, ಅಳಿಸಿಹಾಕುವ ಮತ್ತು ಹೊರಹೊಮ್ಮುವಿಕೆಯ ಸಂಕೇತವಾಗಿದೆ. ಕತ್ತರಿಸುವ ಕ್ರಿಯೆಯು ಏಕಕಾಲದಲ್ಲಿ ಒಂದು ಸೃಷ್ಟಿಯ ಕ್ರಿಯೆಯೂ ಆಗಿದೆ. ಆ ಗಾಯವು ಕ್ರಮೇಣ ಒಂದು ದಾಖಲೆಯಾಗಿ ಮಾರ್ಪಟ್ಟು, ಹಿಂಸೆಯ ನೆನಪುಗಳನ್ನು ಮಾತ್ರವಲ್ಲದೆ ಶೌರ್ಯದ ನೆನಪುಗಳನ್ನೂ ಶಾಶ್ವತಗೊಳಿಸುತ್ತದೆ.
ಹಿಜಡಾ ಸಮುದಾಯಗಳ ವಿಷಯದಲ್ಲಿ ವೃಷಣಗಳ ಛೇದನ ಅಥವಾ ಶೀಲಭಂಗವನ್ನು ಕೊರತೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಬದಲಾಗಿ ಅದು ರೂಪಾಂತರ ಮತ್ತು ಪುನರ್ಜನ್ಮದ ಸಂಕೇತ ಎಂದು ಭಾವಿಸಲಾಗುತ್ತದೆ. ಫ್ರಾಯ್ಡ್ ಮನೋವಿಶ್ಲೇಷಣೆಯಲ್ಲಿ, ಶೀಲಭಂಗಕ್ಕೆ ಸಂಬಂಧಿಸಿದ ಆತಂಕವೇ ಸಾಂಪ್ರದಾಯಿಕ ವ್ಯಕ್ತಿಯನ್ನು ರೂಪಿಸುವ ಕಾರ್ಯದಲ್ಲಿ ಬಹುಮುಖ್ಯ ಅಂಶವಾಗಿದೆ. ಹಿಜಡಾಗಳಿಗೆ, ಷಂಡತ್ವ ಎನ್ನುವುದು ಭಯಪಡಬೇಕಾದ ವಿಷಯವಲ್ಲ,
ಅದನ್ನು ಅವರು ಬಯಸಿಯೇ ಪಡೆದುಕೊಂಡಿದ್ದು. ಈ ಹಿಮ್ಮುಖ ಚಲನೆಯು ಸಾಂಪ್ರದಾಯಿಕ ಮನೋವಿಶ್ಲೇಷಣಾ ಮಾದರಿಗಳನ್ನು ಅಸ್ಥಿರಗೊಳಿಸುತ್ತದೆ ಮತ್ತು ನಮ್ಮ ಮನಸ್ಸಿನಲ್ಲಿರುವ ಲಿಂಗದ ಭಾವನೆಯನ್ನು ಮರುರೂಪಿಸುತ್ತದೆ. ಹೀಗೆ ಒಂದು ಮಾನಸಿಕ ವಿರೋಧಾಭಾಸವು ಹೊರಹೊಮ್ಮುತ್ತದೆ: ದೇಹಕ್ಕಾಗುವ ಗಾಯವನ್ನೇ ಸಾಕ್ಷೀಕರಿಸಿದಾಗ ಮತ್ತು ವಿಧಿವತ್ತಾಗಿ ಮಾಡಿದಾಗ, ಅದು ಮಾನಸಿಕ ಪುನರ್ನಿರ್ಮಾಣದ ಮೂಲವಾಗುವುದು ಹೇಗೆ?
ವಿದ್ವಾಂಸ ಮತ್ತು ಹೋರಾಟಗಾರ ಅದ್ನಾನ್ ಹೊಸೈನ್, ತಮ್ಮ "Beyond Emasculation: Pleasure and Power in the Making of Hijra in Bangladesh" (2021) ಕೃತಿಯಲ್ಲಿ ಹಿಜಡಾಗಳ ಸ್ಥಿತಿಯನ್ನು ಹೀಗೆ ವಿವರಿಸುತ್ತಾರೆ: ಒಂದು ಕಡೆ, ಹಿಜಡಾಗಳು ಸುಖ, ಅಧಿಕಾರ, ಮತ್ತು ಪುರುಷತ್ವದ ಏಕೈಕ ಮತ್ತು ಪ್ರಮುಖ ಹೆಗ್ಗುರುತಾಗಿರುವ ಲಿಂಗತ್ವ (ಪುರುಷ ಪ್ರಧಾನತೆಯ ಅಭಿವ್ಯಕ್ತಿ - ಅದು ಪ್ರಾತಿನಿಧ್ಯ ಮತ್ತು ಆಚರಣೆಯ ಎರಡೂ ಹಂತಗಳಲ್ಲಿ)ವನ್ನು ನಿರಾಕರಿಸಿ, ಅದನ್ನು ಅಪ್ರಧಾನಗೊಳಿಸಿ ನಾಶಪಡಿಸುತ್ತಾರೆ. ಆದರೆ ಮತ್ತೊಂದೆಡೆ, ವಿರೋಧಾಭಾಸವೆಂಬಂತೆ, ಅದೇ ಪುರುಷತ್ವದ ಆದರ್ಶಗಳು ಮತ್ತು ರಾಜಕೀಯವನ್ನು ಬಲಪಡಿಸಿ, ಜಾರಿಗೊಳಿಸುತ್ತಾರೆ. ಇದೇ ಪುರುಷತ್ವದ ರಾಜಕೀಯವು ಅವರನ್ನು ಸಾಮಾಜಿಕ-ಸಾಂಸ್ಕೃತಿಕವಾಗಿ ಅಸಿಂಧುಗೊಳಿಸಲು ಬಳಸಲಾಗುತ್ತದೆ.”
ಚಾಪ್ಟಾ, ಸೀಪೋ ಪದಪುಂಜಗಳ ಬಳಕೆ
ಹಿಜಡಾಗಳಲ್ಲಿ ಯೋನಿ ಮತ್ತು ಶೀಲಭಂಗಕ್ಕೆ ಒಳಗಾದ ಭಾಗಕ್ಕೆ ಪ್ರತ್ಯೇಕ ಪದಗಳಿವೆ. ಗಮನಿಸಬೇಕಾದ ಸಂಗತಿಯೆಂದರೆ, ಈ ಭಾಗವು ಸಾಂಕೇತಿಕ ಯೋನಿಯಾಗಿ ಕಾರ್ಯನಿರ್ವಹಿಸಿದರೂ, ಅದನ್ನು ನೈಜ ಯೋನಿಗಿಂತ ಭಿನ್ನವೆಂದು ಪರಿಗಣಿಸಲಾಗುತ್ತದೆ. ಈ ವ್ಯತ್ಯಾಸವನ್ನು ಪ್ರತ್ಯೇಕ ಪದಗಳ ಮೂಲಕ ಕಾಯ್ದುಕೊಳ್ಳಲಾಗಿದೆ; ಹಿಜಡಾ ಫಾರ್ಸಿಯಲ್ಲಿ ಚಾಪ್ಟಾ ಎಂದರೆ ಸಾಂಕೇತಿಕ ಯೋನಿ ಮತ್ತು ಸೀಪೋ ಎಂದರೆ ನೈಜ ಯೋನಿ. ಆದರೆ, ನನ್ನ ಹಲವು ಹಿಜಡಾ ಸಂವಾದಿಗಳು, ತಮ್ಮ ಶಸ್ತ್ರಚಿಕಿತ್ಸೆ ಎಷ್ಟು ಸಮರ್ಪಕವಾಗಿ ಆಗಿದೆ ಎಂಬುದನ್ನು ವಿವರಿಸಲು ಈ ಪದಗಳನ್ನು ಅನೇಕ ಸಂದರ್ಭಗಳಲ್ಲಿ ಅದಲು-ಬದಲು ಮಾಡಿ ಬಳಸುವುದುಂಟು.
ನಿರ್ವಾಣ ಪ್ರಕ್ರಿಯೆ ನಂತರ, ಹಿಜಡಾಗಳಲ್ಲಿ ಶೀಲಭಂಗಕ್ಕೆ ಒಳಗಾದ ಭಾಗವು ಯೋನಿಯಂತಹ ರಚನೆಯಾಗಿ (vaginoplasty ರೀತಿಯಲ್ಲಿ) ಬೆಳವಣಿಗೆ ಕಂಡರೆ, ಆಗ ಹಿಜಡಾಗಳು ಆ ಭಾಗವನ್ನು 'ಸೀಪೋ' ಎಂದು ಉಲ್ಲೇಖಿಸುತ್ತಾರೆ. ಅಲೋಪಥಿ ಸರ್ಜನ್ ಗಳನ್ನು ಆಶ್ರಯಿಸಿದ ನನ್ನ ಕೆಲವು ವೃತ್ತಿಪರ ಮಾಹಿತಿದಾರರು ಹೀಗೆ ಉಲ್ಲೇಖ ಮಾಡುತ್ತಾರೆ. ಆದಾಗ್ಯೂ, ಈ ಎರಡೂ ಪದಗಳ ಅರ್ಥವು ಅಸ್ಪಷ್ಟವಾಗಿದೆ. ಶಸ್ತ್ರಚಿಕಿತ್ಸೆಯ ನಂತರವೂ ‘ಸೀಪೋ’ ಎಂಬ ಪದವು ‘ಚಾಪ್ಟಾ’ವನ್ನು ಸಂಪೂರ್ಣ ಬದಲಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಯಾಕೆಂದರೆ, ಅನೇಕ ಮಂದಿ ಬೇರೆ ಬೇರೆ ಶಸ್ತ್ರಚಿಕಿತ್ಸಕರು ಬಳಸುವ ತಂತ್ರಗಳನ್ನು ಆಧರಿಸಿ ಈ ಪದಗಳಿಗೆ ವಿಭಿನ್ನ ಅರ್ಥಗಳನ್ನು ನೀಡುತ್ತಾರೆ ಮತ್ತು ಶೀಲಭಂಗದ ನಂತರ ಒಂದೇ ರೀತಿಯ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಯಾವುದೇ ನಿರ್ದಿಷ್ಟ ಕಾರ್ಯವಿಧಾನಗಳ ಮಾನದಂಡವಿರುವುದಿಲ್ಲ.
ಸಮಾಜದ ಗಾಯಕ್ಕೆ ಹಿಡಿದ ಕನ್ನಡಿ
ಹಿಜಡಾಗಳು ಕೇವಲ ಲಿಂಗ ದೃಢೀಕರಣದ ಶಸ್ತ್ರಚಿಕಿತ್ಸೆಯಾಗಿ 'ನಿರ್ವಾಣ'ಕ್ಕೆ ಒಳಗಾಗುವುದಿಲ್ಲ. ಇದು ಆಧ್ಯಾತ್ಮ, ಅಧಿಕಾರ ಸಂಬಂಧಗಳು ಮತ್ತು ಸಾಮೂಹಿಕ ಸ್ಮರಣೆಯಿಂದ ಕೂಡಿದ ಒಂದು ಸಾಮಾಜಿಕ-ಧಾರ್ಮಿಕ ಕಾರ್ಯಕ್ರಮ. ಹಲವು ಬಾರಿ, ಹಿಜಡಾ ಗುರುಗಳು ಈ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಾರೆ. ಆಶೀರ್ವಾದ ಪಡೆಲಾಗುತ್ತದೆ, ಹಾಡುಗಳು ಮೇಳೈಸುತ್ತವೆ ಮತ್ತು ರಕ್ತ ಮತ್ತು ಭಕ್ತಿಯ ಆ ವಿಧ್ಯುಕ್ತ ಭೂಮಿಕೆಯಲ್ಲಿ ಹಿಜಡಾ ಅನುಯಾಯಿಯು ಆಧ್ಯಾತ್ಮಿಕವಾಗಿ ಪುನರ್ಜನ್ಮ ಪಡೆಯುತ್ತಾನೆ. ಹೀಗೆ ದೇಹಕ್ಕಾದ ಪವಿತ್ರ ಗಾಯವು ಸಮುದಾಯಕ್ಕೆ ಶರಣಾಗತಿಯ ಒಂದು ಭಾಗವಾಗಿಯೂ ಮತ್ತು ಸಾಂಪ್ರದಾಯಿಕ ಜಗತ್ತಿನ ವಿರುದ್ಧ ತಮ್ಮ ಸ್ವಾತಂತ್ರ್ಯವನ್ನು ಘೋಷಿಸುವ ಒಂದು ಘೋಷಣೆಯಾಗಿಯೂ ಮಾರ್ಪಡುತ್ತದೆ.
ಈ ರೀತಿ ಒಂದು ಗಾಯಗೊಳಿಸುವ ಕೃತ್ಯವನ್ನು ಜಾತಿ, ಬಹಿಷ್ಕಾರ ಮತ್ತು ಅಸ್ತಿತ್ವದ ವಿಶಾಲ ವಂಶಾವಳಿಗಳ ವ್ಯಾಪ್ತಿಯಲ್ಲಿ ಅರ್ಥಮಾಡಿಕೊಳ್ಳಬೇಕು. ಹಿಜಡಾ ಸಮುದಾಯಗಳು ಐತಿಹಾಸಿಕವಾಗಿ ಕೆಳ ಜಾತಿ ಮತ್ತು ವರ್ಗದ ವ್ಯಕ್ತಿಗಳಿಂದ ಕೂಡಿದ್ದವು, ಅವರಲ್ಲಿ ಅನೇಕರು ತಮ್ಮ ಸ್ವಂತ ಕುಟುಂಬಗಳಿಂದ ಪರಿತ್ಯಕ್ತರಾದವರು. ಹಿಜಡಾ ಘರಾನಾಗಳಿಗೆ ಅವರ ಪ್ರವೇಶವು ಹೆಚ್ಚಾಗಿ ಹಿಂಸೆ, ಪರಿತ್ಯಾಗ ಅಥವಾ ಆರ್ಥಿಕ ಅನಿಶ್ಚಿತತೆಯಿಂದ ಪ್ರೇರಿತವಾಗಿದೆ. ಈ ದೃಷ್ಟಿಕೋನದಿಂದ, 'ನಿರ್ವಾಣ' ಕೇವಲ ವೈಯಕ್ತಿಕ ಪರಿವರ್ತನೆಯಲ್ಲ, ಅದು ನೋವಿನ ಮೂಲಕ ಸದಸ್ಯತ್ವವನ್ನು ಔಪಚಾರಿಕಗೊಳಿಸುವ ಸಮುದಾಯದ ಒಂದು ವಿಧಾನವಾಗಿದೆ. ಈ ಗಾಯವು ಅವರ ನಡುವಿನ ರಕ್ತಸಂಬಂಧಕ್ಕೆ ಪಾಸ್ಪೋರ್ಟ್ ಆಗಿ ಕೆಲಸ ಮಾಡುತ್ತದೆ.
ಈ ಅವಧಿಯಲ್ಲಿ ಫೂಲೊ ಗುರುವಿನ ಡೇರೆಯಲ್ಲಿ (ಸಮುದಾಯ) ಉಳಿದುಕೊಂಡಿದ್ದರು. ಅಲ್ಲಿ ವಿಶೇಷವಾಗಿ ತಯಾರಿಸಿದ ಕಷಾಯ, ಖಾರ ಮತ್ತು ಮಸಾಲೆರಹಿತವಾದ ಪೌಷ್ಟಿಕ ಆಹಾರ, ಬಟ್ಟೆ ಮತ್ತು ಆರೈಕೆ ನೀಡಲಾಗುತ್ತಿತ್ತು. ಆ ಸಂದರ್ಭದಲ್ಲಿ ಆಕೆ ಯಾವುದೇ ಹಣ ಗಳಿಸಲು ಸಾಧ್ಯವಿರಲಿಲ್ಲ ಮತ್ತು ಮೊದಲ ತಿಂಗಳು ಪೂರ್ತಿ ಹಾಸಿಗೆ ಹಿಡಿದಿದ್ದಳು. ಆಕೆಯ ಗುರುವಿನ ಸಂಪರ್ಕದಲ್ಲಿದ್ದ ಕೆಲವು ಹಕೀಮರು ಮತ್ತು ವೈದ್ಯರು ನಿಯಮಿತವಾಗಿ ಆಕೆಯನ್ನು ಪರೀಕ್ಷಿಸುತ್ತಿದ್ದರು.
ಮೊದಲ ಮುಟ್ಟಿನ ಸಂಕೇತ
“ನಾನು ಸಂಪೂರ್ಣವಾಗಿ ಗುಣಮುಖಳಾಗಲು ಮೂರು ತಿಂಗಳು ಬೇಕಾಯಿತು” ಎಂದು ವಿವರಿಸುವ ಫೂಲೋ ತನಗೆ ಅಸಹನೀಯವಾದ ನೋವಿತ್ತು ಹಾಗೂ ಅನೇಕ ಶಸ್ತ್ರಚಿಕಿತ್ಸೆಯ ಬಳಿಕ ಮೂತ್ರ ಸಂಬಂಧಿ ಸಮಸ್ಯೆಗಳಿದ್ದವು ಎನ್ನುತ್ತಾರೆ. 'ಚಾಪ್ಟಾ'ದಿಂದ ರಕ್ತ ಸ್ರಾವವಾಗುವುದು, ನಿರ್ವಾಣಕ್ಕೆ ಒಳಗಾದ ಹಿಜಡಾದ ಮೊದಲ ಮುಟ್ಟಿನ ಸಂಕೇತ. ಇದು ಹಿಜಡಾ ಸಮುದಾಯಕ್ಕೆ ಅವರ ಸೇರ್ಪಡೆಯನ್ನು ಖಚಿತಗೊಳಿಸುತ್ತದೆ ಮತ್ತು ಈಗ ಆತ ಆಕೆಯಾಗಿ ಸಂಪೂರ್ಣ ಬದಲಾಗಿದ್ದಾಳೆ ಎಂದು ಸೂಚಿಸುವ ಅಂತಿಮ ಸಂಸ್ಕಾರದಂತಿದೆ.
ವೃಷಣ ಛೇದನ ಶಸ್ತ್ರಚಿಕಿತ್ಸೆಯಲ್ಲಿ ಮತ್ತು ನಂತರದ ಆರೈಕೆಯಲ್ಲಿ ಅನೇಕ ರೀತಿಯ ಅಪಾಯಗಳಿರುತ್ತವೆ. ಗಾಯ ವಾಸಿಯಾಗಲು ಇದು ನಿರ್ಣಾಯಕ. ಶಸ್ತ್ರಚಿಕಿತ್ಸೆಯ ನಂತರದ ಸಾಮಾನ್ಯ ಸಮಸ್ಯೆಗಳೆಂದರೆ: ಅತಿಯಾದ ರಕ್ತಸ್ರಾವ, ಹೆಮಟೋಮಾ (ಗಾಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ), ಸೆರೋಮಾ (ಗಾಯದಲ್ಲಿ ದ್ರವ ಸಂಗ್ರಹ), ಮೂತ್ರನಾಳದ ಸೋಂಕು ಮತ್ತು ಶೀಲಭಂಗದ ಬಳಿಕ ಗಾಯ ಸರಿಯಾಗಿ ವಾಸಿಯಾಗದಿರುವುದು ಎಂದು ನವದೆಹಲಿಯ ಹೊರವಲಯದ ಎನ್ಜಿಓನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಜಡಾ ಔಟ್ರೀಚ್ ಕಾರ್ಯಕರ್ತರು ತಿಳಿಸುತ್ತಾರೆ.
ಚಿಕಿತ್ಸೆಗಿಲ್ಲ ನಿರ್ದಿಷ್ಟ ವಿಧಾನ
ಭಾರತದಲ್ಲಿ ಶೀಲಭಂಗ ಪ್ರಕ್ರಿಯೆಯ ವಿಚಾರದಲ್ಲಿ ಕಾನೂನು ಅಸ್ಪಷ್ಟವಾಗಿದೆ. ಹಾಗಾಗಿ ಅದು ಗುಪ್ತ ವಿಧಾನದ ಮೂಲಕವೇ ನಡೆಯುತ್ತದೆ. ಆದ್ದರಿಂದ ಆ ಇಡೀ ಪ್ರಕ್ರಿಯೆಗಳ ಬಗ್ಗೆ ಇರಬಹುದಾಗ ತೊಡಕುಗಳ ಬಗ್ಗೆ ಲಭ್ಯವಿರುವ ಸಾಹಿತ್ಯ ಕಡಿಮೆ ಇದೆ. ಹಾಗಾಗಿ, ವೃಷಣ ಛೇದನದ ಗಾಯದ ಚಿಕಿತ್ಸೆ ಹೇಗೆ ಮಾಡಬೇಕು ಎಂಬ ಬಗ್ಗೆ ಹಿಜಡಾ ಜೀವನಶೈಲಿಯ ಹೊರಗೆ ಹೆಚ್ಚಿನ ಜ್ಞಾನವಿಲ್ಲ. ಹೀಗಾಗಿ, ಗಾಯದ ಆರೈಕೆಯು ಹಿಜಡಾ ಸಮುದಾಯದಲ್ಲಿ ಒಂದು ಸಾಂಪ್ರದಾಯಿಕ ಕಾರ್ಯಕ್ರಮವಾಗಿದೆ. ಇದಕ್ಕೆ ಸಂಬಂಧಿಸಿದ ಜ್ಞಾನವೇನಿದ್ದರೂ ಹಿಜಡಾ ತಲೆಮಾರುಗಳಿಂದ ಹರಿದುಬಂದಿರುವ ಸಂಗತಿಯಾಗಿದೆ. ಹೀಗಾಗಿ ಈ ಗಾಯವು ತನ್ನ ಎಲ್ಲಾ ಶ್ರೇಣೀಕೃತ ವ್ಯವಸ್ಥೆಯೊಂದಿಗೆ ಹಿಜಡಾ ಸಮುದಾಯವನ್ನು ಉಳಿಸಿಕೊಂಡು ಬಂದಿದೆ.
ಆದ್ದರಿಂದ ಗಾಯದ ಬಗ್ಗೆ ಇರುವ ಹಿಂದಿನ ಎಲ್ಲಾ ತಿಳುವಳಿಕೆಗಳನ್ನು ಕೈಬಿಟ್ಟು ಅದಕ್ಕೆ ಹೊಸ ಅರ್ಥವನ್ನು ಕಲ್ಪಿಸಲಾಗುತ್ತದೆ. ಹೊಸ ಹೊಳವಿನ ಪರಿಣಾಮವಾಗಿ ವರ್ಷಗಳಿಂದ ಬಂಧಿಯಾಗಿ ಇಟ್ಟುಕೊಂಡಿದ್ದ ಆಕೆಯ ಆತ್ಮವನ್ನು ದೇಹದಿಂದ ಬಿಡುಗಡೆಗೊಳಿಸುತ್ತದೆ. ಹಾಗಾಗಿ ಆ ದೇಹ ತನಗೆ ಸೇರಿಲ್ಲ ಎಂದು ಫೂಲೋ ವಿವರಿಸುತ್ತಾಳೆ.
ಹಿಜಡಾಗಳ ಮಾನಸಿಕ ಆರೋಗ್ಯವನ್ನು ವೈಯಕ್ತಿಕ ಮಾನದಂಡಗಳಿಂದ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪಾಶ್ಚಾತ್ಯ ಮನೋವೈಜ್ಞಾನಿಕ ಚೌಕಟ್ಟುಗಳು ಸಾಮಾನ್ಯವಾಗಿ ಮಾನಸಿಕ ಆಘಾತವನ್ನು ವ್ಯಕ್ತಿಗತವಾಗಿ ಬೇರೂರಿರುವ ಆಘಾತದ ನಂತರದ ಒತ್ತಡದ ಸಮಸ್ಯೆ (PTSD) ಅಥವಾ ಖಿನ್ನತೆಯ ಪರಿಭಾಷೆಯಲ್ಲಿ ನೋಡುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಹಿಜಡಾ ಅನುಭವವು ಸಮುದಾಯಕ್ಕೆ ಸಂಬಂಧಿಸಿದ್ದಾಗಿದೆ. ಅವರ ಆಘಾತದಂತೆ ಚಿಕಿತ್ಸೆಯೂ ಹೇಗೆ ಸಾಮುದಾಯಿಕವಾಗಿದೆ. ಅವರ ಆಚರಣೆಗಳು, ಹಾಡುಗಳು, ಹಂಚಿಕೆಯ ಊಟ ಮತ್ತು ಸಂಬಂಧಿಕರ ಜಾಲಗಳು ಸಾಮೂಹಿಕ ಮಾನಸಿಕ ಆರೋಗ್ಯ ನಿರ್ವಹಣೆಯ ತಂತ್ರಜ್ಞಾನಗಳಾಗಿವೆ.
2019ರಲ್ಲಿ ಪ್ರಯಾಗ್-ರಾಜ್ ನಲ್ಲಿ ನಡೆದ ಕುಂಬಮೇಳದ ಶಾಹಿ ಸ್ನಾನ ಯಾತ್ರೆಯಲ್ಲಿ ಭಾಗವಹಿಸಿದ ಲಕ್ಷ್ಮಿ ನಾರಾಯಣ ತ್ರಿಪಾಠಿ. ಮುಂಬಯಿಯವರಾದ ತ್ರಿಪಾಠಿ ತೃತೀಯ ಲಿಂಗಿ ಹಕ್ಕುಗಳ ಕಾರ್ಯಕರ್ತೆ ಮತ್ತು ನೃತ್ಯಗಾತಿಯೂ ಹೌದು.
ಈ ಗಾಯ ಅವರದ್ದಲ್ಲ, ಸಮಾಜದ್ದು
ಹಿಜಡಾಗಳ ಶೀಲಭಂಗದ ಆಚರಣೆಯು ಅವರ ಗಾಯವನ್ನು ಮಾತ್ರವಲ್ಲ, ನಮ್ಮ ಸಮಾಜದ ದೌರ್ಬಲ್ಯವನ್ನು ಕೂಡ ಬಹಿರಂಗಪಡಿಸುತ್ತದೆ. ನಮ್ಮ ಸಮಾಜವು ಬಹುರೂಪತೆಯನ್ನು ಕಾಯ್ದುಕೊಳ್ಳಲು, ಲಿಂಗ ಸಮಾನತೆ ಅವಕಾಶ ನೀಡಲು ಮತ್ತು ಭಿನ್ನತೆಗಳನ್ನು ಯಾವುದೇ ದಬ್ಬಾಳಿಕೆಯಿಲ್ಲದೆ ಸ್ವೀಕರಿಸುವಲ್ಲಿ ಹೇಗೆ ವಿಫಲವಾಗಿದೆ ಎಂಬುದಕ್ಕೆ ಇದು ಸಾಕ್ಷಿ. ಹಿಜಡಾಗಳು ಅನುಭವಿಸುವ ನೋವು ಆಕಸ್ಮಿಕವಾದುದಲ್ಲ, ಬದಲಾಗಿ ವ್ಯವಸ್ಥಿತವಾದುದು. ಆ ನೋವಿನ ಹೊರತಾಗಿಯೂ, ಅವರು ದೇವಾಲಯಗಳನ್ನು ನಿರ್ಮಿಸಿದ್ದಾರೆ, ಕುಟುಂಬಗಳನ್ನು ಕಟ್ಟಿಕೊಂಡಿದ್ದಾರೆ ಮತ್ತು ಜಾನಪದೀಯ ಕಥೆಗಳನ್ನು ನಿರೂಪಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ತಮ್ಮ ಬದುಕಿಗೆ ಅರ್ಥವನ್ನು ಕಂಡುಕೊಂಡಿದ್ದಾರೆ. ಅವರು ನೋವನ್ನೇ ಹಾಡುತ್ತಾರೆ.
ಆದರೆ ಈ ಪಾವಿತ್ರತೆಯು ಅವರಿಗಿರುವ ಅಪಾಯಗಳನ್ನು ಅಳಿಸಿಹಾಕುವುದಿಲ್ಲ. ಆಗ ಎದುರಾಗುವ ನೈತಿಕ ಪ್ರಶ್ನೆಯೆಂದರೆ: ದೈಹಿಕ ನೋವನ್ನು ಮೀರಲು ಧಾರ್ಮಿಕ ಆಚರಣೆಯು ಸಮರ್ಥನೀಯವೇ? ಇದಕ್ಕೆ ಉತ್ತರ ಜಟಿಲವಾಗಿದೆ.
'ಶಾಹಿ ಸ್ನಾನ' ಮಾಡಿದ ಹಿಜಡಾಗಳು
2019ರಲ್ಲಿ, ಜಗತ್ತಿನ ಅತಿದೊಡ್ಡ ಯಾತ್ರಾರ್ಥಿಗಳ ಸಮಾಗಮಗಳಲ್ಲಿ ಒಂದಾದ ಕುಂಭಮೇಳದಲ್ಲಿ ಕ್ಷೇತ್ರಕಾರ್ಯಕ್ಕಾಗಿ ಹೋಗಿದ್ದೆ. ಆ ವರ್ಷ ಅದು ದೆಹಲಿಯ ನೆರೆಯ ರಾಜ್ಯವಾದ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ (ಹಿಂದೆ ಇದನ್ನು ಅಲಹಾಬಾದ್ ಎಂದು ಕರೆಯಲಾಗುತ್ತಿತ್ತು) ನಡೆಯುತ್ತಿತ್ತು.
ಆ ವರ್ಷ, ಹಿಜಡಾಗಳ ಮೊದಲ ಹಿಂದೂ ಸನ್ಯಾಸಿಪಂಥವಾದ ಕಿನ್ನರ್ ಅಖಾಡಕ್ಕೆ 'ಶಾಹಿ ಸ್ನಾನ' ಮಾಡಲು ಮೊದಲ ಬಾರಿಗೆ ಪೂರ್ಣ ಪ್ರಮಾಣದ ಅವಕಾಶ ನೀಡಲಾಯಿತು. ನಾನು ಕಿನ್ನರ್ ಅಖಾಡದ ಪ್ರಧಾನ ಅರ್ಚಕಿ ಲಕ್ಷ್ಮಿ ನಾರಾಯಣ ತ್ರಿಪಾಠಿ ಮತ್ತು ಅವರ ಅನುಯಾಯಿಗಳನ್ನು ಭೇಟಿಯಾಗಿದ್ದೆ. ಅವರು ಗಂಗಾ, ಯಮುನಾ ಮತ್ತು (ಐತಿಹಾಸಿಕ) ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದರು. ಈ ವಿಧಿಯು ಸಾಂಪ್ರದಾಯಿಕವಾಗಿ ಹಿಂದೂ ಅರ್ಚಕರಿಗೆ ಮಾತ್ರ ಕಾಯ್ದಿರಿಸಲಾಗಿತ್ತು, ಅವರೆಲ್ಲರೂ ಸಾಮಾನ್ಯವಾಗಿ ಪುರುಷರು ಮತ್ತು ಬ್ರಾಹ್ಮಣರು ಅಥವಾ ಮೇಲ್ಜಾತಿಯವರಾಗಿದ್ದರು.
ಉತ್ಸವದ ಸಮಯದಲ್ಲಿಯೇ ಕಿನ್ನರ್ ಅಖಾಡದ ಸದಸ್ಯರನ್ನು, ಅದರಲ್ಲೂ ವಿಶೇಷವಾಗಿ ಅದರ ಪ್ರಧಾನ ಅರ್ಚಕಿ ತ್ರಿಪಾಠಿಯವರನ್ನು, ಅವರ ಗುರುತಿನ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಅಲಹಾಬಾದ್ ಹೈಕೋರ್ಟ್ ಸೂಚಿಸಿತು. ಅವರು ನಿರ್ವಾಣ ಪ್ರಕ್ರಿಯೆಗೆ ಒಳಗಾಗಿದ್ದಾರೆಯೇ ಎಂದು ಸಾಕ್ಷ್ಯ ನೀಡಬೇಕೆಂದು ಮಹಿಳಾ ಹಕ್ಕುಗಳ ಸಂಘಟನೆಯೊಂದು ಅಲಹಾಬಾದ್ ಹೈಕೋರ್ಟ್ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಒತ್ತಾಯಿಸಿತ್ತು. ಒಂದು ವೇಳೆ ಕಿನ್ನರ್ ಅಖಾಡದ ಹಿಜಡಾಗಳು ನಿರ್ವಾಣ ಪ್ರಕ್ರಿಯೆಗೆ ಒಳಗಾಗದೇ ಇದ್ದರೆ ತೃತೀಯ ಲಿಂಗಿಗಳಿಗೆ ಸುರಕ್ಷಿತವಲ್ಲ ಎಂದು ಆ PIL ನಲ್ಲಿ ವಾದಿಸಲಾಗಿತ್ತು.
ಇಂತಹ ಬೇಡಿಕೆಗಳು, ಸ್ಥಳೀಯ ಸ್ತ್ರೀವಾದಿ ಗುಂಪಿನ ತೃತೀಯ ಲಿಂಗಿ ದ್ವೇಷದ (transphobic) ಭಾವನೆಗಳಿಂದ ಹುಟ್ಟಿಕೊಂಡಿದ್ದಾಗಿತ್ತು. ಈ ಗುಂಪು ತೃತೀಯ ಲಿಂಗಿಗಳನ್ನೂ ಹೊರತುಪಡಿಸುವ ಮೂಲಭೂತ ಸ್ತ್ರೀವಾದಿ(TERFs)ಗಳ ಸಿದ್ಧಾಂತಗಳನ್ನು ಹಂಚಿಕೊಂಡಿತ್ತು. ಇದು ಕಿನ್ನರ್ ಅಖಾಡದ ಹಿಜಡಾಗಳ ವಿರುದ್ಧ ದೂರು ದಾಖಲಿಸಲು ಅವರನ್ನು ಪ್ರೇರೇಪಿಸಿತು. ಈ ಬಗ್ಗೆ ಲಕ್ಷ್ಮಿ ಅವರ ಜೊತೆ ನಾನು ಸಂದರ್ಶನ ನಡೆಸಿದಾಗ, ತಮ್ಮ ದೇಹದ ಸ್ಥಿತಿಯ ಬಗ್ಗೆ ಇಂತಹ ವಿವರಣೆಗಳನ್ನು ಕೇಳುವುದು ಕಾನೂನುಬಾಹಿರ ಎಂದು ಅವರು ಹೇಳಿದರು. ಯಾಕೆಂದರೆ 2014ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಹಿಜಡಾಗಳನ್ನು ಅಧಿಕೃತವಾಗಿ ತೃತೀಯ ಲಿಂಗಿಗಳು ಎಂದು ಗುರುತಿಸಲಾಯಿತು ಮತ್ತು ಅವರಿಗೆ ತಮ್ಮ ಲಿಂಗವನ್ನು ಸ್ವಯಂ-ನಿರ್ಧರಿಸುವ ಹಕ್ಕು ದೊರೆತಿದೆ.
ಆಧ್ಯಾತ್ಮಿಕ ಸಂತೃಪ್ತಿಯ ಪರಮೋಚ್ಛ ಕ್ಷಣ
ತೃತೀಯ ಲಿಂಗಿ ಸಮುದಾಯಗಳು ತಮ್ಮ ಅನುಭವಗಳಲ್ಲಿ ಅಖಂಡವಾಗಿಲ್ಲ. ಕೆಲವು ಸದಸ್ಯರು ನಿರ್ವಾಣವನ್ನು ತಮ್ಮ ಜೀವನದ ಆಧ್ಯಾತ್ಮಿಕ ಸಂತೃಪ್ತಿಯ ಪರಮೋಚ್ಛ ಕ್ಷಣವೆಂದು ವಿವರಿಸುತ್ತಾರೆ. ಆದರೆ ಇನ್ನೂ ಕೆಲವರು, ವಿಶೇಷವಾಗಿ ಸಾಮಾಜಿಕ ಒತ್ತಡದಲ್ಲಿ ನಿರ್ಧಾರ ತೆಗೆದುಕೊಂಡವರು, ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತಾರೆ. ಸಮುದಾಯದ ಏಕರೂಪತೆಯ ಬೇಡಿಕೆಯು ಕೆಲವೊಮ್ಮೆ ಒತ್ತಾಯವಾಗಿ ಪ್ರಕಟಗೊಳ್ಳುವುದು ಸಹಜ. ವಿಶೇಷವಾಗಿ ಕಿರಿಯ ಅಥವಾ ಹೆಚ್ಚು ದುರ್ಬಲ ಮನಸ್ಸಿನವರಿಗೆ. ಈ ದ್ವಂದ್ವವು, ಈ ಸಮುದಾಯವು ವಿಮೋಚನೆಯ ಸಂಕೇತವೂ ಹೌದು ಮತ್ತು ಶಿಸ್ತಿನ ವ್ಯವಸ್ಥೆಯೂ ಹೌದು.
ತೃತೀಯ ಲಿಂಗಿಗಳನ್ನು ರಾಜಕೀಯ ದೃಷ್ಟಿಯಿಂದಲೂ ಪರಿಗಣಿಸಬೇಕು. ತೃತೀಯ ಲಿಂಗಿಗಳ ದೇಹವನ್ನು ಹಿಂದಿನಿಂದಲೂ ವಸಾಹತುಶಾಹಿ ಆಡಳಿತಗಾರರು, ಮಾನವಶಾಸ್ತ್ರಜ್ಞರು ಮತ್ತು ಈಗ ಎನ್ಜಿಒಗಳು ಹಾಗೂ ಪತ್ರಕರ್ತರು ವಿಚಿತ್ರ ದೃಷ್ಟಿಯಿಂದ ನೋಡುತ್ತ ಬಂದಿದ್ದಾರೆ. ಅವರ ಶೀಲಭಂಗ ವಿಧಿಗಳ ವಿವರಣೆಗಳು ಹೆಚ್ಚಾಗಿ ಸಂವೇದನಾಶೀಲವಾಗಿವೆ. ಆದ್ದರಿಂದ, ತೃತೀಯ ಲಿಂಗಿಗಳ ಬೇಡಿಕೆಗಳಿಗೆ ಆದ್ಯತೆ ನೀಡುವುದು ನಿರ್ಣಾಯಕವಾಗಿದೆ. ಅವರು ನೀಡುವ ಹೇಳಿಕೆಗಳನ್ನು ಕೇವಲ ವಿಲಕ್ಷಣ ಕಥೆಗಳೆಂದು ನೋಡದೆ, ಅವುಗಳನ್ನು ಒಂದು ಜ್ಞಾನ ವ್ಯವಸ್ಥೆಯೆಂದು ಪರಿಗಣಿಸುವ ಅಗತ್ಯವಿದೆ.
ಮನೋವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ನೋಡಿದಾಗ, ತೃತೀಯ ಲಿಂಗಿ ವ್ಯಕ್ತಿಯ ಗಾಯವು ಕೇವಲ ದೇಹಕ್ಕಾದ ಗಾಯವಲ್ಲ. ಅದು ಇರುವ ಮತ್ತು ಇಲ್ಲದಿರುವ, ಅಳಿಸಿಹಾಕುವ ಮತ್ತು ಹೊರಹೊಮ್ಮುವಿಕೆಯ ಸಂಕೇತವಾಗಿದೆ. ಕತ್ತರಿಸುವ ಕ್ರಿಯೆಯು ಏಕಕಾಲದಲ್ಲಿ ಒಂದು ಸೃಷ್ಟಿಯ ಕ್ರಿಯೆಯೂ ಆಗಿದೆ. ಆ ಗಾಯವು ಕ್ರಮೇಣ ಒಂದು ದಾಖಲೆಯಾಗಿ ಮಾರ್ಪಟ್ಟು, ಹಿಂಸೆಯ ನೆನಪುಗಳನ್ನು ಮಾತ್ರವಲ್ಲದೆ ಶೌರ್ಯದ ನೆನಪುಗಳನ್ನೂ ಶಾಶ್ವತಗೊಳಿಸುತ್ತದೆ.
ಇಲ್ಲಿನ ಮಾನಸಿಕ ಆರೋಗ್ಯವೆಂದರೆ ಸಹಜ ಸ್ಥಿತಿಗೆ ಮರಳುವುದಲ್ಲ, ಬದಲಾಗಿ ತಿರಸ್ಕಾರ ಮತ್ತು ಕಳಂಕದ ಪರಿಸ್ಥಿತಿಗಳಲ್ಲಿ ಬದುಕಲು ಯೋಗ್ಯವಾದ ವಾಸ್ತವ ಸ್ಥಿತಿಯನ್ನು ರೂಪಿಸುವುದಾಗಿದೆ. ಆದ್ದರಿಂದ, ತೃತೀಯ ಲಿಂಗಿಗಳ ಮಾನಸಿಕ ಮತ್ತು ಇತರ ಆರೋಗ್ಯವನ್ನು ಕೇವಲ ಹಸ್ತಕ್ಷೇಪದ ಭಾಗವಾಗಿ ನೋಡದೆ, ಅದನ್ನು ಜ್ಞಾನ, ಪ್ರತಿರೋಧ ಮತ್ತು ಹೊಸ ಲೋಕವನ್ನು ಸೃಷ್ಟಿಸುವ ಒಂದು ಸ್ಥಳವಾಗಿ ಮರುರೂಪಿಸುವುದು ಅತ್ಯಗತ್ಯ.
ಹಾಗಾಗಿ “ತೃತೀಯ ಲಿಂಗಿಗಳು ಗುಣಮುಖರಾಗಲು ನಾವು ಹೇಗೆ ಸಹಾಯ ಮಾಡಬಹುದು?” ಎಂದು ಕೇಳುವ ಬದಲು, ನಾವು ಕೇಳಬೇಕಾದ ಪ್ರಶ್ನೆ ಏನೆಂದರೆ;
“ಗುಣಮುಖರಾಗಲು ತೃತೀಯ ಲಿಂಗಿಗಳು ಹೇಗೆ ನಮಗೆ ಕಲಿಸಬಲ್ಲರು?”
ಇದು ಮರಚಿಂತನೆಯ ಕಾಲ
ಭಾರತವು ಮಾನಸಿಕ ಆರೋಗ್ಯದ ಮೂಲಸೌಕರ್ಯವನ್ನು ಇನ್ನಷ್ಟು ವಿಸ್ತರಿಸಲು ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ, ತೃತೀಯ ಲಿಂಗಿಗಳ ಸಮುದಾಯವು ದೊಡ್ಡ ಪಾಠವನ್ನು ನಮಗೆ ಕಲಿಸುತ್ತದೆ: ಗುಣಮುಖರಾಗುವುದು ಎಂದರೆ ಯಾವತ್ತೂ ಪರಿಶುದ್ಧವಾಗಿರುವುದು ಅಂತಲ್ಲ, ಕೆಲವೊಮ್ಮೆ ಅದು ಯಾತನಾಮಯ, ಅಸ್ತವ್ಯಸ್ತ ಮತ್ತು ಪವಿತ್ರವೂ ಆಗಿರುತ್ತದೆ. ಈಗ ಇವೆಲ್ಲವನ್ನೂ ನಾವು ಆಲಿಸುವ ಸಮಯ ಬಂದಿದೆ. ತೃತೀಯ ಲಿಂಗಿ ಸಮುದಾಯವು ಮಾನಸಿಕ ಆರೋಗ್ಯ ಮೂಲಸೌಕರ್ಯದ ಬಗ್ಗೆ ಮರುಚಿಂತನೆ ಮತ್ತು ಮರುವಿನ್ಯಾಸಗೊಳಿಸುವಂತೆ ನಮ್ಮನ್ನು ಒತ್ತಾಯಿಸುತ್ತದೆ. ಅದನ್ನು ಕೇವಲ ಮೆದುಳಿನ ಸಂಯೋಜನೆಯಲ್ಲಿರುವ ವೈಯಕ್ತಿಕ ದೋಷವೆಂದು ಪರಿಗಣಿಸದೆ, ಅಸ್ತಿತ್ವ, ಹಾನಿ ಮತ್ತು ಭರವಸೆಯ ಬಗ್ಗೆ ಒಂದು ಸಾಮೂಹಿಕ ನಿರೂಪಣೆಯಾಗಿ ನೋಡಬೇಕಾದ ಜರೂರತ್ತಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಶೀಲಭಂಗ ಪ್ರಕ್ರಿಯೆಯು ಕೇವಲ ಒಂದು ಶಸ್ತ್ರಕ್ರಿಯೆಯ ಬದಲಾಗಿ ಮನೋ-ಸಾಮಾಜಿಕ ಸಂಗತಿ. ಅದು ವಿನಾಶಕ್ಕೆ ಮುಖಾಮುಖಿಯಾಗಿ ಸ್ವಯಂ ರೂಪಿಸಿಕೊಳ್ಳುವ ಪ್ರಕ್ರಿಯೆ. ನಮಗೆ ಅರ್ಥವಾಗದೇ ಇರುವುದನ್ನು ಸರಿಪಡಿಸುವ ಗೀಳು ಹೊಂದಿರುವ ಸಮಾಜದಲ್ಲಿ, ಇದು ಗಾಯವೂ ಹೌದು ಮತ್ತು ಗರ್ಭವೂ ಹೌದು, ನಷ್ಟವೂ ಹೌದು ಮತ್ತು ಹೊಸ ಅಸ್ತಿತ್ವವೂ ಹೌದು. ಒಟ್ಟಾರೆ, ತೃತೀಯ ಲಿಂಗಿ ಸಮುದಾಯ ನಮಗೆ ಇನ್ನಷ್ಟು ಗಹನ ಪಾಠವನ್ನು ಕಲಿಸಿಕೊಡಬಹುದು: ಗುಣಮುಖರಾಗುವುದು ಎಂದರೆ ಯಾವಾಗಲೂ ಗಾಯದ ಗುರುತನ್ನು ಅಳಿಸುವುದಲ್ಲ, ಬದಲಾಗಿ ಅದನ್ನು ಗುರುತಿಸಿ, ಗೌರವಿಸಿ, ಮತ್ತು ಅದರೊಂದಿಗೇ ಬದುಕಲು ಕಲಿಯುವುದು.
(ಉತ್ತರ ಭಾರತದ ಹಿಜಡಾ ಸಮುದಾಯಗಳ ಕುರಿತು ನಡೆಸಿದ ವಿಸ್ತೃತ ಸಂಶೋಧನೆ, ದೀರ್ಘಾವಧಿಯ ಕ್ಷೇತ್ರಕಾರ್ಯ ಮತ್ತು ನಿಕಟ ಮಾತುಕತೆ, ಸಂವಾದವನ್ನು ಆಧರಿಸಿದ ವಿಸ್ತೃತ ಲೇಖನ ಇದಾಗಿದೆ. ವ್ಯಕ್ತಿಗಳ ಗುರುತುಗಳನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಕೆಲವು ಹೆಸರುಗಳನ್ನು ಇಲ್ಲಿ ಬಹಿರಂಗ ಮಾಡಲಾಗಿಲ್ಲ.)
ಈ ಲೇಖನದ ಮೊದಲ ಭಾಗ ʼ Special Report Part-1: ಭಾರತದ ಹಿಜಡಾಗಳಲ್ಲಿ ಶೀಲಭಂಗ: ದೇಹಕ್ಕಲ್ಲ, ಇದು ಮನಸ್ಸಿಗಾದ ಗಾಯ!ʼ ಭಾನುವಾರ ಪ್ರಕಟವಾಗಿತ್ತು.