
Special Report Part-1: ಭಾರತದ ಹಿಜಡಾಗಳಲ್ಲಿ ಶೀಲಭಂಗ: ದೇಹಕ್ಕಲ್ಲ, ಇದು ಮನಸ್ಸಿಗಾದ ಗಾಯ!
ಹಿಜ್ರಾ ಸಮುದಾಯಗಳ ವಿಷಯದಲ್ಲಿ ವೃಷಣಗಳ ಛೇದನ ಅಥವಾ ಶೀಲಭಂಗ ಕೊರತೆಯ ಸಂಕೇತವಲ್ಲ. ಬದಲಾಗಿ ಅದು ರೂಪಾಂತರ ಮತ್ತು ಪುನರ್ಜನ್ಮದ ಸಂಕೇತವಾಗಿದೆಯೇ?
ಅದು ನವದೆಹಲಿಯ ಪೂರ್ವ ಯಮುನಾ ಪ್ರದೇಶದ ಹೊರವಲಯದಲ್ಲಿರುವ ಗುಜ್ಜಾರ್ ಸಮುದಾಯದವರೇ ಅಧಿಕ ಸಂಖ್ಯೆಯಲ್ಲಿರುವ ದೇಧಾ ಎಂಬ ಗ್ರಾಮದ ಮುರುಕಲು ಕಟ್ಟಡದ ಪುಟ್ಟ ಕೋಣೆ. ಈ ಗುಜ್ಜಾರರು ಭಾರತದಲ್ಲಿ ಸಾಂಪ್ರದಾಯಿಕವಾಗಿ ಜಾನುವಾರು ಪೋಷಣೆ ಮಾಡುವ ಸಮುದಾಯ ಎಂದು ಗುರುತಿಸಿಕೊಂಡಿದ್ದಾರೆ. ಇವರಿಗೆ ಭಾರತದ ಸಂವಿಧಾನವು ಇತರ ಹಿಂದುಳಿದ ವರ್ಗ (ಒಬಿಸಿ) ಸ್ಥಾನಮಾನವನ್ನು ನೀಡಿದೆ.
ಆ ಕೊಠಡಿಯು ದಿವಾಳಿ ಎದ್ದಿರುವ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡದ ಒಳಗಿದೆ. ಈಗ ಅದನ್ನು ಸಂಪೂರ್ಣ ಗೂಂಡಾಗಳು ಆಕ್ರಮಿಸಿಕೊಂಡಿದ್ದಾರೆ. ಈ ಕಾಂಪ್ಲೆಕ್ಸ್ ಒಳಗಿರುವ ಮತ್ತು ಹೊರಭಾಗದಲ್ಲಿರುವ ಸಣ್ಣ ಪುಟ್ಟ ಪೆಟ್ಟಿ ಅಂಗಡಿ ಮತ್ತಿತರ ವ್ಯಾಪಾರ ಮಾಡಿಕೊಂಡಿರುವ ಜನರಿಂದ ಬಾಡಿಗೆ ವಸೂಲಿ ಮಾಡಿಕೊಂಡು ಈ ಗೂಂಡಾಗಳು ಜೀವನ ಸಾಗಿಸುತ್ತಾರೆ.
ಈ ಸಣ್ಣ ಜಾಗವನ್ನು ದಾಟಿ ಮುಂದೆ ಸಾಗಿದರೆ ಅಲ್ಲಿ ತೆರೆದ ಚರಂಡಿ ಇದೆ. ಅದರಲ್ಲಿ ಸದಾ ಮಲ-ಮೂತ್ರ, ಕೊಳೆತ ಆಹಾರ ಹರಿಯುತ್ತಿರುತ್ತದೆ. ಆ ಚರಂಡಿಯ ಆ ಕಡೆ ಇನ್ನೊಂದು ಚಿಕ್ಕ ಕೊಠಡಿ ಇದೆ. ನಾನು ಅದರೊಳಗೆ ಪ್ರವೇಶಿಸುತ್ತೇನೆ. ಆ ಕೋಣೆಯ ಗೋಡೆಗೇ ಅಂಟಿಕೊಂಡಂತೆ ಒಂದು ಕಪಾಟು ಇದೆ. ಅದರಲ್ಲಿ ಸ್ಟೀಲ್ ಪಾತ್ರೆಗಳನ್ನು ಒಂದರ ಮೇಲೆ ಇನ್ನೊಂದು ಒಪ್ಪವಾಗಿ ಜೋಡಿಸಿಡಲಾಗಿದೆ. ನೆಲದ ಮೇಲೊಂದು ಚಾಪೆ ಹಾಸಲಾಗಿದೆ ಅದನ್ನು ಕವರ್ ಮಾಡುವ ಹಾಗೆ ಒಂದು ಕಂಬಳಿಯಿದೆ. ಒದ್ದೆ ಮೇಲ್ಛಾವಣಿ ಮಳೆ ನೀರಿಗೆ ಸೋರುತ್ತಿರುವುದಕ್ಕೆ ಸಾಕ್ಷಿ ಹೇಳುತ್ತಿದೆ. ಕೋಣೆಯ ಎರಡೂ ಮೂಲೆಗಳಿಗೆ ದೃಷ್ಟಿ ಹಾಯಿಸಿದರೆ ಒಂದು ಕಡೆ ಪೀಕುದಾನಿ ಮತ್ತು ಇನ್ನೊಂದು ಕಡೆ ಗ್ಯಾಸ್ ಸ್ಟವ್ ಇದೆ.
ಇಂತಹ ಕೊಠಡಿಯಲ್ಲಿ ವಾಸವಿರುವವರು ಮೂರು ಮಂದಿ ತೃತೀಯ ಲಿಂಗಿಗಳು (ಹಿಜಡಾಗಳು). ಬೆಳಗಾಯಿತೆಂದರೆ ಪೂರ್ವ ದೆಹಲಿಯ ವಸತಿ ಕಾಲೋನಿಯಲ್ಲಿ ಸುತ್ತಾಡಿ ಕೆಲವರಿಗೆ ಆಶೀರ್ವಾದ ಮಾಡುತ್ತಾರೆ ಮತ್ತು ಇನ್ನು ಕೆಲವರಿಗೆ ಶಾಪವನ್ನು ಹಾಕುತ್ತಾರೆ. ರಾತ್ರಿಯಾಯಿತೆಂದರೆ ದೆಹಲಿ ಗಡಿಯ ಬಳಿಯಿರುವ ಅಂತರ್-ರಾಜ್ಯ ಬಸ್ ನಿಲ್ದಾಣ ಆನಂದ ವಿಹಾರಕ್ಕೆ ಬರುತ್ತಾರೆ ಮತ್ತು ಅಲ್ಲಿ ಅವರು ಲೈಂಗಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಾರೆ.
ಈ ಕೋಣೆಯಲ್ಲಿ ಮುಖ್ಯವಾಗಿ ವಾಸ್ತವ್ಯ ಹೂಡಿರುವವರ ಹೆಸರು ಫೂಲೊ. ಅವರು ಇತರ ಇಬ್ಬರು ಚೇಲಾಗಳಿಗೆ ಗುರು. ಅವರೂ ಈ ಕೊಣೆಯಲ್ಲಿಯೇ ವಾಸ ಮಾಡುತ್ತಾರೆ. ಈ ಫೂಲೊ ಅಪ್ಪ-ಅಮ್ಮ, ಸಹೋದರರು ಮತ್ತು ಅತ್ತಿಗೆ ಸೇರಿದಂತೆ ಕುಟುಂಬಸ್ಥರು ಈ ರೂಮಿನ ಹಿಂಭಾಗದಲ್ಲಿಯೇ ಇರುವ ಮೂರು ಅಂತಸ್ತಿನ ಭವ್ಯವಾದ ಬಂಗಲೆಯಲ್ಲಿ ವಾಸಿಸುತ್ತಾರೆ. ಹಿಜಡಾ ಮತ್ತು ಮತ್ತು ಅವರ ಸಮಾನ ಮಿತ್ರರಾದ ಲೈಲಾ ಜೊತೆ ಆ ಕೋಣೆಯನ್ನು ನಾನು ಪ್ರವೇಶಿಸುತ್ತೇನೆ.
ಹಾಗೆ ಒಳಗೆ ಪ್ರವೇಶಿಸುತ್ತಲೇ ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದ ಫೂಲೊ ನೀರನ್ನು ಕೊಡಲು ಮುಂದಾಗುತ್ತಾರೆ. (ಅದನ್ನು ನಿರಾಕರಿಸುವುದು ತೀರಾ ಅನಾಗರಿಕ ವರ್ತನೆ ಎಂದು ಪರಿಗಣಿಸಲಾಗುತ್ತದೆ). ನನಗೊಂದು ಕೋಲಾ ತರುವಂತೆ ಅಲ್ಲಿದ್ದ ಶಿಷ್ಯರಿಗೆ ಸೂಚನೆ ನೀಡುತ್ತಾರೆ. ಆದರೆ ಲೈಲಾ ಅದನ್ನು ನಿರಾಕರಿಸಿ ಅಂತಹ ಸೌಜನ್ಯದ ಅಗತ್ಯವೇನೂ ಇಲ್ಲ ಎಂದು ತಿಳಿಸುತ್ತಾರೆ.
ಪ್ರಯಾಗರಾಜ್ (ಅಲಹಾಬಾದ್) ನಲ್ಲಿ ನಡೆದ 2019ರ ಕುಂಭ ಮೇಳ ಸಂದರ್ಭದಲ್ಲಿ ಹಿಜಡಾಗಳ ಒಂದು ಗುಂಪು ಮೆರವಣಿಗೆಯಲ್ಲಿ ಸಾಗುತ್ತಿದೆ. ಖೋಜಾಗಳು, ಅಂತರ್-ಲಿಂಗಿಗಳು ಮತ್ತು ತೃತೀಯ ಲಿಂಗಿಗಳು ಎಂದು ಕರೆಯಲಾಗುವ ಹಿಜಡಾಗಳು, ಕಿನ್ನರ್ ಅಖಾಡದಲ್ಲಿ ಒಟ್ಟುಗೂಡಿದ್ದರು. ಇದೇ ಮೊದಲ ಬಾರಿಗೆ ಅವರಿಗೆ ಟೆಂಟ್ ಸಿಟಿಯಲ್ಲಿ ತಮ್ಮದೇ ಆದ ಶಿಬಿರವನ್ನು ಸ್ಥಾಪಿಸಲು ಅವಕಾಶ ನೀಡಲಾಗಿತ್ತು.
ಮೆ ಸಬ್ ಬತಾವೂಂಗಿ
ಸದಾ ;ಲವಲವಿಕೆಯ ಫುಲೊ 28 ವರ್ಷ ವಯಸ್ಸಿನ ತೃತೀಯ ಲಿಂಗಿ. ತನ್ನ ಸಲ್ವಾರ್ ಕಮೀಜ್-ನ್ನು ಸರಿಪಡಿಸಿಕೊಳ್ಳುತ್ತಾ ಮೌನ ಮುರಿಯುತ್ತಾರೆ, “ಬತಾವೋ ಕ್ಯಾ ಪೂಚನಾ ಹೆ. ಮೆ ಸಬ್ ಬತಾವೂಂಗಿ,” (ಏನು ಕೇಳಬೇಕೋ ಕೇಳಿ. ಎಲ್ಲವನ್ನೂ ಹೇಳಲು ನಾನು ಸಿದ್ಧ) ಎನ್ನುತ್ತಾರೆ. ಜೊತೆಗೆ ನಮ್ಮ ಜಗತ್ತಿನ ಬಗ್ಗೆ ತಿಳಿದುಕೊಂಡು ಏನು ಮಾಡುವ ಉದ್ದೇಶವಿದೆ ಎಂದೂ ವಿಚಾರಿಸಿದರು.
“ನನಗೆ ನಿಮ್ಮ ವೈಯಕ್ತಿಕ ಬದುಕಿನ ಮಾಹಿತಿ ಬೇಕು. ಅದನ್ನು ನಾನು ಬರೆಯಲು ಬಯಸುತ್ತೇನೆ” ಎಂದು ಹೇಳಿದೆ.
“ಸರಿ ನನ್ನ ಹೆಸರು ಫೂಲೊ”, ಎಂದು ಮಾತು ಮುಂದುವರಿಸಿದ ಅವರು, “ನೀವೀಗ ನೋಡುತ್ತಿರುವುದು ಅತ್ಯಂತ ಸುಂದರಿ ಹಿಜಡಾ. ಎಷ್ಟು ಸುಂದರಿ ಎಂದರೆ ಕರೀನಾ ಕಪೂರಳಷ್ಟು!” ಇದನ್ನು ಕೇಳಿದ ಆಕೆಯ ಚೇಲಾಗಳು ಪ್ರೀತಿಯಿಂದ ಛೇಡಿಸುತ್ತಾರೆ; “ಓಹೋ, ನಿರ್ವಾಣ ಮೂರತ್!” (ಶೀಲಭಂಗಗೊಂಡ ಹಿಜಡಾ).
ನಾನೇ ಅಸಲಿ ಹಿಜಡಾ, ಅಂದರೆ ಶೀಲಭಂಗಗೊಂಡ ಅಥವಾ ವೀರ್ಯಗುಂದಿಸಿದ ಹಿಜಡಾ ಎಂದು ಆಕೆ ಮಾತು ಮುಂದುವರಿಸುತ್ತಾರೆ. ‘ಎಲ್ಲಿ ಮಾಡುತ್ತಾರೆ ಅದನ್ನು?’ “ದೆಹಲಿಯಿಂದ ಹೊರಭಾಗದಲ್ಲಿ. ನಮ್ಮ ರಹಸ್ಯ ವೈದ್ಯರ ಜಾಲದಿಂದ” “ಯಾವಾಗ?” “ಸರಿಸುಮಾರು ಐದು ವರ್ಷಗಳ ಹಿಂದೆ” ಎಂದು ದೃಢಪಡಿಸುತ್ತಾರೆ.
“ಯಾಕೆ ಹಾಗೆ ಮಾಡಿಸಿಕೊಂಡಿದ್ದು?”
ನನ್ನ ಈ ನಿಷ್ಠುರ ಪ್ರಶ್ನೆಯಿಂದ ಅಚ್ಚರಿಗೆ ಒಳಗಾದವರಂತೆ ಆಕೆ ಹುಬ್ಬುಗಳನ್ನು ಮೇಲಕ್ಕೆ ಕುಣಿಸಿದರು. “ಹೌದು, ಬೇಕಂತಲೇ ಮಾಡಿಸಿಕೊಂಡೆ. ಈ ಜೀವನದಲ್ಲಿ ನನ್ನದು ಪುನರ್ಜನ್ಮವಾಗಿದೆ. ಶೀಲಭಂಗದ ಬಳಿಕ ಎಲ್ಲವೂ ಬದಲಾಗುತ್ತದೆ. ದುಡಿಮೆಯೂ ಚೆನ್ನಾಗಿ ಆಗುತ್ತದೆ ಮತ್ತು ನೋಡಲಿಕ್ಕೂ ಚೆನ್ನಾಗಿ ಕಾಣುತ್ತೇನೆ” ಎಂದು ಹೇಳುತ್ತಾರೆ. ಆಕೆಯ ಶೀಲಭಂಗದ ಪ್ರಕ್ರಿಯೆ ನಡೆದಿದ್ದು ಪಶ್ಚಿಮ ಉತ್ತರ ಪ್ರದೇಶದ ಒಂದು ಪುಟ್ಟ ಹಳ್ಳಿಯಲ್ಲಿ. ಪಶ್ಚಿಮ ಉತ್ತರ ಪ್ರದೇಶ ಹೇಳಿಕೇಳಿ ಕಡುಬಡತನ ಮತ್ತು ಅಧಿಕ ಅಪರಾಧ ಪ್ರಕರಣಗಳಿಗೆ ಕುಖ್ಯಾತಿ ಪಡೆದಿದೆ.
ಹಿಜಡಾ ಸಮುದಾಯದಲ್ಲಿ ಶೀಲಭಂಗ ಅಥವಾ ನಿರ್ವಾಣ ಪ್ರಕ್ರಿಯೆ ಹಿಂಸಾತ್ಮಕ ಹಾಗೂ ಪುರಾತನವಾದುದಾಗಿ ಹೊರಗಿನವರಿಗೆ ಕಾಣುತ್ತದೆ. ಆದರೆ ಹಿಜಡಾಗಳು ಹಾಗೆ ಭಾವಿಸುವುದಿಲ್ಲ. ಅವರಿಗೆ ಅದೊಂದು ಸಂಸ್ಕಾರದ ಭಾಗ, ಹೊಸ ರಕ್ತಸಂಬಂಧಕ್ಕೆ ಜನ್ಮ ನೀಡುವ ಕ್ರೌರ್ಯದ ಧಾರ್ಮಿಕ ವಿಧಿ, ಹೊಸ ವ್ಯಕ್ತಿತ್ವದ ಅನಾವರಣ ಮತ್ತು ಸಾಮೂಹಿಕ ಶುದ್ಧೀಕರಣ.
ಪೂಜ್ಯರಾದರೂ ನಿಂದಿತರು
ಭಾರತದಲ್ಲಿ ಹಿಜಡಾಗಳು ಸಮಾಜದ ಕೊನೆಯ ಅಂಚಿನಲ್ಲಿರುವವರು. ಕಣ್ಣಿಗೆ ಕಾಣುತ್ತಾರೆ, ಆದರೂ ಅಗೋಚರರು, ಗೇಲಿಗೆ ಒಳಗಾದವರು ಆದರೂ ಭಯಭೀತರು, ಪೂಜ್ಯರೆಂದು ಭಾವಿಸಿದರೂ ನಿಂದಿತರು. ಪ್ರಾಚೀನ ದೇಗುಲದ ಕೆತ್ತನೆಗಳಿಂದ ಆರಂಭಿಸಿ ಮೊಘಲರ ಅಂತಃಪುರದ ವರೆಗೆ ಅವರ ಅಸ್ತಿತ್ವವಿದೆ. ಆದರೆ ಅವರು ಗೋಚರಿಸುವುದು ಅಪರೂಪ. 2014ರಲ್ಲಿ ಅವರಿಗೆ ‘ತೃತೀಯ ಲಿಂಗಿಗಳು’ ಎನ್ನುವ ಮಾನ್ಯತೆ ಸಿಕ್ಕಿತು. ಅವರ ಅಸ್ತಿತ್ವಕ್ಕೆ ಕಾನೂನಿನ ಮುದ್ರೆ ಒತ್ತಲಾಯಿತು. ಆದರೆ ಅವರ ಜೀವನದ ಭಾವನಾತ್ಮಕತೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.
ಈ ಭಾವನಾತ್ಮಕ ಪರಿಧಿಯ ಹೃದಯ ಭಾಗದಲ್ಲಿ ಇರುವುದೇ ಗಾಯ. ನಿರ್ವಾಣದ ಸಂದರ್ಭದಲ್ಲಿ ಉಂಟಾದ ಅಕ್ಷರಶಃ ದೈಹಿಕ ಗಾಯ. ಹಿಜಡಾ ಸಮುದಾಯಗಳಿಗೆ ಘನೆಯ ಬದುಕನ್ನು ನಿರಾಕರಿಸುವ ಜಗತ್ತಿನಲ್ಲಿ, ಅವರ ದೇಹಕ್ಕೆ ಉಂಟಾದ ಗಾಯವು ಬೇರೆಯದೇ ಆದ ಪ್ರಪಂಚಕ್ಕೆ ಅವರನ್ನು ಕರೆದೊಯ್ಯುತ್ತದೆ-ಅದು ತಮ್ಮದೇ ಬಂಧುಬಳಗ ಎಂಬ ಪ್ರಪಂಚ. ಅವರಿಗೆ ಸಿಕ್ಕಿರುವ ಕಾನೂನು ಮಾನ್ಯತೆಗಳು ನೀತಿ ಚೌಕಟ್ಟುಗಳಲ್ಲಿ ಹಿಜಡಾ ಅಸ್ತಿತ್ವವನ್ನು ಕಾನೂನುಬದ್ಧಗೊಳಿಸಿರಬಹುದು. ಆದರೆ ಹಿಜಡಾಗಳು ಬದುಕುವ ಭಾವನಾತ್ಮಕ, ಮಾನಸಿಕ ಮತ್ತು ಮೂರ್ತರೂಪದ ಜಗತ್ತನಲ್ಲಿ ಬದಲಾವಣೆಯನ್ನು ತರಲು ಇದು ಕಿಂಚಿತ್ತೂ ನೆರವಾಗುವುದಿಲ್ಲ.
ಈ ಜಗತ್ತಿನಲ್ಲಿ ಅತ್ಯಂತ ವಿವಾದಾತ್ಮಕ ಆಚರಣೆಗಳಲ್ಲಿ ಒಂದೆಂದರೆ ನಿರ್ವಾಣ ವಿಧಿ. ಇದು ಸಮುದಾಯದಿಂದಲೇ ನಿರ್ವಹಿಸಲಾಗುವ ಯಾವುದೇ ನಿಯಂತ್ರಣಕ್ಕೆ ಒಳಪಡದ ಶೀಲಭಂಗ ಪ್ರಕ್ರಿಯೆ. ಕೆಲವೊಮ್ಮೆ ಸಮುದಾಯದ ದೇವತೆಯಾದ ಬಹುಚರಾ ಮಾತಾಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ನಡೆಸಲಾಗುತ್ತದೆ.
ದೇಹಕ್ಕಾಗುವ ಗಾಯಕ್ಕೆ ಸಂಸ್ಕಾರದ ರೂಪ
ಈ ಕ್ರಿಯೆಯನ್ನು ಕೇವಲ ಬಯೋಮೆಡಿಕಲ್ ದೃಷ್ಟಿಯಿಂದ ರೋಗಶಾಸ್ತ್ರೀಯ ಸ್ವರೂಪದಿಂದ ನೋಡದೆ ನಿರ್ವಾಣವನ್ನು ಒಂದು ಮಾನಸಿಕ-ಸಾಮಾಜಿಕ ಮತ್ತು ಪವಿತ್ರ ವಿದ್ಯಮಾನವೆಂದು ಪರಿಗಣಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಇಲ್ಲಿ ದೈಹಿಕವಾಗಿ ಮಾಡಲಾಗಿರುವ ಗಾಯವನ್ನು ಒಂದು ಆಕಸ್ಮಿಕ ಘಟನೆಯಾಗಿ ನೋಡಲಾಗಿಲ್ಲ ಅಥವಾ ಮರೆಮಾಚಲಾಗಿಲ್ಲ. ಬದಲಾಗಿ ಅದಕ್ಕೊಂದು ಸಂಸ್ಕಾರದ ರೂಪ ಕೊಡಲಾಗಿದೆ, ಸಾಕ್ಷೀಕರಿಸಲಾಗಿದೆ ಮತ್ತು ಪಾವಿತ್ರತೆಯ ಲೇಪನ ಹಚ್ಚಲಾಗಿದೆ.
ಕ್ಷೇತ್ರಕಾರ್ಯ, ಮೌಖಿಕ ನಿರೂಪಣೆಗಳು ಹಾಗೂ ಮನೋವೈಜ್ಞಾನಿಕ ಸಿದ್ಧಾಂತದ ಮೂಲಕ ಪಡೆದುಕೊಳ್ಳಲಾದ ಮಾಹಿತಿಯ ಆಧಾರದಲ್ಲಿ ಹಿಜಡಾ ಸಮುದಾಯವು ನೋವನ್ನು ಹೇಗೆ ಮುಕ್ತಿಯ ರೂಪವಾಗಿ ಪರಿವರ್ತಿಸುತ್ತದೆ ಎಂಬುದರ ಕಡೆಗೆ ಈ ಲೇಖನವು ಬೊಟ್ಟುಮಾಡಿದೆ.
ಆದರೆ ಈ ಆಚರಣೆಗಳ ಆಚೆಗೆ ಹೋಗಿ ನೋಡಿದಾಗ, ಒಂದು ಗಹನವಾದ ಮತ್ತು ಸಂಕೀರ್ಣವಾದ ಕಥೆಯಿರುವುದು ನಮ್ಮ ಗಮನಕ್ಕೆ ಬರುತ್ತದೆ. ಸಾಮೂಹಿಕ ಆಘಾತ, ಸಹಿಷ್ಣುತೆಯ ಪ್ರತಿರೋಧ, ಮತ್ತು ನೋವನ್ನು ಒಂದು ವ್ಯಕ್ತಿತ್ವವಾಗಿ ಪರಿವರ್ತಿಸುವ ಮಾನಸಿಕ ರಸವಿದ್ಯೆ (psychological alchemy) ಇದರ ಭಾಗವಾಗಿದೆ. ಭಾರತವು ಮಾನಸಿಕ ಆರೋಗ್ಯದ ಕುರಿತು ಹೆಚ್ಚು ಗಂಭೀರವಾಗಿ ತೊಡಗಿಸಿಕೊಂಡಿರುವ ಈ ಕಾಲಘಟ್ಟದಲ್ಲಿ, ನಾವು ಒಂದು ಪ್ರಶ್ನೆಯನ್ನಂತೂ ಕೇಳಿಕೊಳ್ಳಬೇಕು: ಗಾಯವೇ ಗುಣಪಡಿಸುವ ಮಾರ್ಗವಾದಾಗ ಏನಾಗುತ್ತದೆ?
ಸಿಗ್ಮಂಡ್ ಫ್ರಾಯ್ಡ್ ಮತ್ತು ಲಕಾನ್ ಸಿದ್ಧಾಂತಗಳು
ಆಸ್ಟ್ರಿಯಾದ ನರಶಾಸ್ತ್ರಜ್ಞ ಹಾಗೂ ಕೆಲವೊಮ್ಮೆ ಮನೋವಿಜ್ಞಾನದ ಸಂಸ್ಥಾಪಕ ಎಂದು ಪರಿಗಣಿಸಲಾಗುವ ಸಿಗ್ಮಂಡ್ ಫ್ರಾಯ್ಡ್ ಅವರ ಕೃತಿಗಳಲ್ಲಿ, ಲಿಂಗವನ್ನು ಹೆಚ್ಚಾಗಿ ಶಿಶ್ನ ಮತ್ತು ವೃಷಣಗಳ ಛೇದನ (castration)ದ ಭೀತಿಯೊಂದಿಗೆ ತಳುಕು ಹಾಕಲಾಗಿದೆ. ಇದು ಶಕ್ತಿ, ಅಸ್ತಿತ್ವ ಮತ್ತು ನಿರ್ವಾಣದ ಸಂಕೇತವಾಗಿದೆ. ವಿಶೇಷವಾಗಿ ಈಡಿಪಸ್ ಮನೋವಿಕಾರದ ಹಂತದಲ್ಲಿ (Oedipal stage), ಲಿಂಗವನ್ನು ತಂದೆಯಿಂದ ಪಡೆದಿರುವ ಒಂದು ಅಂಗ ಮತ್ತು ಅದನ್ನು ಕಳೆದುಕೊಳ್ಳಬಹುದಾದ ಒಂದು ವಸ್ತುವೆಂದು ಮಗು ಭಾವಿಸುತ್ತದೆ.
ಆದರೆ, ಫ್ರೆಂಚ್ ಮನೋವಿಶ್ಲೇಷಕ ಮತ್ತು ಮನೋವೈದ್ಯ ಜಾಕ್ವೆಸ್ ಲಕಾನ್ ಅವರು ಈ ವ್ಯಾಖ್ಯಾನವನ್ನು ಸೀಮಿತವೆಂದು ಪರಿಗಣಿಸಿದರು. ಬದಲಾಗಿ, ಅವರು ಲಿಂಗವನ್ನು ಶಿಶ್ನದಿಂದ ಪ್ರತ್ಯೇಕಿಸಿ, ಅದನ್ನು ಸಾಂಕೇತಿಕ ಕ್ರಮದಲ್ಲಿ (Symbolic Order) - ಅಂದರೆ ಭಾಷೆ, ಕಾನೂನು ಮತ್ತು ಸಾಮಾಜಿಕ ನಿಯಮಗಳ ವಲಯದಲ್ಲಿ - ಮರುಸ್ಥಾಪಿಸಿದರು.
ಜಾಕ್ವೆಸ್ ಲಕಾನ್ ತಮ್ಮ ಪ್ರಭಾವಶಾಲಿ ಪ್ರಬಂಧವಾದ "ದಿ ಸಿಗ್ನಿಫಿಕೇಶನ್ ಆಫ್ ದಿ ಫಾಲಸ್" (The Signification of the Phallus -1958) ನಲ್ಲಿ, ಲಿಂಗವು ಒಂದು 'ಕೊರತೆ'ಯ ಸಂಕೇತವಾಗಿದೆ ಎಂದು ಪ್ರತಿಪಾದಿಸಿದರು. ಇದನ್ನು ಸಂಪೂರ್ಣವಾಗಿ ಹೊಂದಲು ಅಥವಾ ಪ್ರತಿನಿಧಿಸಲು ಸಾಧ್ಯವಿಲ್ಲ. ಇದು ಒಬ್ಬ ವ್ಯಕ್ತಿಯು ಹೊಂದಿರುವ ಅಥವಾ ಹೊಂದಿರದ ವಸ್ತುವಲ್ಲ, ಬದಲಿಗೆ, ಇದು ಸುಪ್ತಾವಸ್ಥೆಯಲ್ಲಿ ಆಸೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಿರ್ಧರಿಸುವ ಒಂದು ಕಾರ್ಯ. ಹಾಗಾದರೆ, ಆತಂಕ ಮತ್ತು ಕಳೆದುಕೊಳ್ಳುವ ಭಾವನೆಯಿಂದ ತುಂಬಿರುವ ಫ್ರಾಯ್ಡಿಯನ್ ಮತ್ತು ಲಕಾನಿಯನ್ ಶೀಲಭಂಗದ ಪರಿಕಲ್ಪನೆಗಳು, ಭಯಪಡುವುದಕ್ಕೆ ಬದಲಾಗಿ ಸ್ವೀಕರಿಸಲ್ಪಡುವ ಹಿಜ್ರಾ ವೃಷಣ ಛೇದನದ ಆಚರಣೆಗೆ ಹೇಗೆ ಸಂಬಂಧಿಸಿವೆ?
ಹಿಜ್ರಾ ಸಮುದಾಯಗಳ ವಿಷಯದಲ್ಲಿ ವೃಷಣಗಳ ಛೇದನ ಅಥವಾ ಶೀಲಭಂಗ ಕೊರತೆಯ ಸಂಕೇತವಲ್ಲ. ಬದಲಾಗಿ ಅದು ರೂಪಾಂತರ ಮತ್ತು ಪುನರ್ಜನ್ಮದ ಸಂಕೇತವಾಗಿದೆಯೇ?
ಎರಡನೇ ಭಾಗ ಸದ್ಯದಲ್ಲೇ ಪ್ರಕಟವಾಗಲಿದ್ದು, ಇನ್ನಷ್ಟು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ.
(ಉತ್ತರ ಭಾರತದ ಹಿಜಡಾ ಸಮುದಾಯಗಳ ಕುರಿತು ನಡೆಸಿದ ವಿಸ್ತೃತ ಸಂಶೋಧನೆ, ದೀರ್ಘಾವಧಿಯ ಕ್ಷೇತ್ರಕಾರ್ಯ ಮತ್ತು ನಿಕಟ ಸಂಭಾಷಣೆಗಳನ್ನು ಆಧರಿಸಿದ ಲೇಖನ ಇದಾಗಿದೆ. ವ್ಯಕ್ತಿಗಳ ಗುರುತುಗಳನ್ನು ರಕ್ಷಿಸುವ ದೃಷ್ಟಿಯಿಂದ ಕೆಲವು ಹೆಸರುಗಳನ್ನು ಇಲ್ಲಿ ಬಹಿರಂಗಪಡಿಸಲಾಗಿಲ್ಲ.)