Loksabha Election 2024  | ಧಾರವಾಡ: ಜೋಶಿಗೆ ವಿರೋಧಿಗಳ ಕಾಟ; ಪರಿಸ್ಥಿತಿಯ ಲಾಭ ಪಡೆಯುವರೇ ಅಸೂಟಿ?
x

Loksabha Election 2024 | ಧಾರವಾಡ: ಜೋಶಿಗೆ ವಿರೋಧಿಗಳ ಕಾಟ; ಪರಿಸ್ಥಿತಿಯ ಲಾಭ ಪಡೆಯುವರೇ ಅಸೂಟಿ?


ಕರ್ನಾಟಕದ ಮೊದಲ ಮಹಿಳಾ ಸಂಸದರನ್ನು ನೀಡಿದ ಖ್ಯಾತಿಯ ಧಾರವಾಡ ಲೋಕಸಭಾ ಕ್ಷೇತ್ರ, ಕಲೆ, ಸಂಗೀತ, ಸಾಹಿತ್ಯದ ತವರು ಎಂಬಂತೆಯೇ ಉದ್ಯಮ ಮತ್ತು ವಹಿವಾಟಿನ ಕೇಂದ್ರವೂ ಹೌದು. ರಾಜಕೀಯವಾಗಿಯೂ ಹೋರಾಟ, ಚಳವಳಿಗಳ ನೆಲ ಧಾರವಾಡ.

ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಶಿಫಾರಸು ಮಾಡಿದ ವರದಿಗೆ ಹೆಸರುವಾಸಿಯಾಗಿರುವ ಸರೋಜಿನಿ ಮಹಿಷಿ ಅವರು ಧಾರವಾಡ ಉತ್ತರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 1967, 1971 ಮತ್ತು 1977 ರಲ್ಲಿ ಅವರು ಜಯ ಗಳಿಸಿದ್ದರು.

ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಧಾರವಾಡ ಕ್ಷೇತ್ರ ಹಲವು ಕಾರಣಗಳಿಗಾಗಿ ಪ್ರಮುಖ್ಯತೆ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಂಸದೀಯ ವ್ಯವಹಾರ ಖಾತೆಯಂತಹ ಆಯಕಟ್ಟಿನ ಹೊಣೆಗಾರಿಕೆ ಹೊಂದಿರುವ ಸಚಿವ ಪ್ರಲ್ಹಾದ್ ಜೋಶಿ ಈ ಬಾರಿ ಇಲ್ಲಿ ಐದನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್‌ನಿಂದ ವಿನೋದ ಅಸೂಟಿ ಎದುರಾಳಿ ಆಗಿದ್ದಾರೆ. ಪ್ರಲ್ಲಾದ ಜೋಶಿ ಅವರಿಗೆ ದೀರ್ಘಕಾಲದ ರಾಜಕೀಯ ಅನುಭವವಿದ್ದರೆ, ವಿನೋದ ಅಸೂಟಿ ಕೆಲ ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ಅವರು ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಆದರೆ, ಕ್ಷೇತ್ರದಲ್ಲಿ ಜೋಶಿ ವಿರೋಧಿ ಅಲೆ ಇರುವುದರಿಂದ ಅದರ ಲಾಭ ಪಡೆದು ಅಸೂಟಿ ವಿಜಯ ಸಾಧಿಸುತ್ತಾರಾ ಎನ್ನುವುದು ಪ್ರಶ್ನೆಯಾಗಿದೆ.

ಕ್ಷೇತ್ರದ ಬಲಾಬಲ

ಹಾವೇರಿ ಜಿಲ್ಲೆಯ ಶಿಗ್ಗಾವಿ ಸಹಿತ 8 ವಿಧಾನಸಭಾ ಕ್ಷೇತ್ರಗಳು ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇವೆ. ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ತಲಾ 4 ಕ್ಷೇತ್ರಗಳಲ್ಲಿ ಇದ್ದಾರೆ. ನವಲಗುಂದ (ಕಾಂಗ್ರೆಸ್), ಕುಂದಗೋಳ (ಬಿಜೆಪಿ), ಧಾರವಾಡ ಗ್ರಾಮೀಣ (ಕಾಂಗ್ರೆಸ್), ಹುಬ್ಬಳ್ಳಿ-ಧಾರವಾಡ ಪೂರ್ವ (ಕಾಂಗ್ರೆಸ್), ಹುಬ್ಬಳ್ಳಿ-ಧಾರವಾಡ ಪಶ್ಚಿಮ (ಬಿಜೆಪಿ), ಹುಬ್ಬಳ್ಳಿ-ಧಾರವಾಡ ಕೇಂದ್ರ (ಬಿಜೆಪಿ), ಕಲಘಟಗಿ (ಕಾಂಗ್ರೆಸ್), ಶಿಗ್ಗಾಂವಿ (ಬಿಜೆಪಿ).

ಪ್ರಲ್ಹಾದ್ ಜೋಶಿ ಅವರನ್ನು ಸೋಲಿಸುವ ಗುರಿಯೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗದಗ ಜಿಲ್ಲೆ ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಆದರೆ, ಜೋಶಿ ಮೇಲಿನ ಕೋಪ ಇನ್ನೂ ಶಮನಗೊಂಡಿಲ್ಲ. ಅವರನ್ನು ಸೋಲಿಸುವುದೊಂದೆ ನನ್ನ ಗುರಿ ಎಂದು ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ. ಇದು ಕಾಂಗ್ರೆಸ್ ಅಭ್ಯರ್ಥಿಗೆ ಎಷ್ಟರಮಟ್ಟಿಗೆ ಲಾಭವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಜೋಶಿ ಬ್ರಾಹ್ಮಣ ಸಮುದಾಯದವರು, ಅಸೂಟಿ ಕುರುಬ ಸಮುದಾಯದವರು. ಆದರೆ ಇಲ್ಲಿ ಲಿಂಗಾಯತ ಸಮುದಾಯದ ಮತದಾರರೇ ಹೆಚ್ಚಿದ್ದಾರೆ. ಈ ಕ್ಷೇತ್ರದ ಲೋಕಸಭಾ ಚುನಾವಣಾ ಚರಿತ್ರೆಯಲ್ಲಿ ಮತದಾರರು ಜಾತಿ ಮೀರಿ ಪ್ರೀತಿ ತೋರಿದ ನಿದರ್ಶನಗಳು ಇವೆ. ಪ್ರತಿ ಬಾರಿಯೂ ಕಾಂಗ್ರೆಸ್ ಪಕ್ಷ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡುತ್ತಿತ್ತು. ಆದರೆ, ಆ ಯಾವ ಅಭ್ಯರ್ಥಿಯೂ ಗೆಲುವು ಕಂಡಿಲ್ಲ, ಏಕೆಂದರೆ ಈ ಕ್ಷೇತ್ರದ ಜನರು ಜಾತಿಗಿಂತ ಹಿಂದುತ್ವಕ್ಕೆ ಮಾರುಹೋಗಿದ್ದೇ ಹೆಚ್ಚು. ಈ ಬಾರಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ವಿಚಾರದಲ್ಲಿ ಜಾತಿ ತಂತ್ರ ರಚಿಸಿದ್ದಾರೆ. ಒಬಿಸಿ ಸಮುದಾಯದ ಮತಗಳು ಹಂಚಿಹೋಗದಂತೆ ತಡೆಯಲು ಕುರುಬ ಸಮುದಾಯ ಯುವ ನಾಯಕನಿಗೆ ಅವಕಾಶ ಕೊಟ್ಟಿದೆ.

ಜಾತಿ ಲೆಕ್ಕಾಚಾರ

ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯವಿದೆ. ಸರಿಸುಮಾರು ವೀರಶೈವ ಲಿಂಗಾಯತರು 6 ಲಕ್ಷ, ಮುಸ್ಲಿಮ್ ಸಮುದಾಯ 4 ಲಕ್ಷ, ಕುರುಬ ಸಮುದಾಯ 2 ಲಕ್ಷ, ಮರಾಠಾ 1 ಲಕ್ಷ 60 ಸಾವಿರ, ಎಸ್‌ಸಿ, ಎಸ್‌ಟಿ 2.10 ಲಕ್ಷ, ಇತರೆ ಸಣ್ಣ-ಪುಟ್ಟ ಸಮುದಾಯದವರು 2 ಲಕ್ಷ.

ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ಸೇರಿ ಕೆಲವೇ ತಿಂಗಳಲ್ಲಿ ಪುನಃ ಬಿಜೆಪಿಗೆ ಮರಳಿದ್ದರು. ಈ ವೇಳೆ ಧಾರವಾಡ ಕ್ಷೇತ್ರದ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ಅದು ಸಾಧ್ಯವಾಗದ ಕಾರಣ ಲಿಂಗಾಯತ ಸಮುದಾಯದ ಶೆಟ್ಟರ್ ಅವರನ್ನು ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿಸಲಾಯಿತು. ಇದು ಕ್ಷೇತ್ರದಲ್ಲಿ ಬಿಜೆಪಿ ಪಾಳಯದಲ್ಲಿ 'ಏಕ ಚಕ್ರಾಧಿಪತ್ಯ'ದ ಚರ್ಚೆ ಹುಟ್ಟುಹಾಕಿದೆ.

ಪ್ರಲ್ಹಾದ್ ಜೋಶಿ ಅವರು ಜಗದೀಶ್ ಶೆಟ್ಟರ್ ಅವರ ರಾಜಕೀಯ ಜೀವನವನ್ನೇ ಬುಡಮೇಲು ಮಾಡುತ್ತಿದ್ದಾರೆ ಎನ್ನುವ ಆತಂಕದಲ್ಲಿ ಶೆಟ್ಟರ್ ಆಪ್ತವಲಯದ ಮುಖಂಡರು, ಬೆಂಬಲಿಗರು ಇದೀಗ ಜೋಶಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಲಿಂಗಾಯತರೇ ಹೆಚ್ಚಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಜೋಶಿ ಅವರಿಗೆ ಬೇರೆ ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದ್ದರು.

ಜೋಶಿ ಅವರು ಬಹುಸಂಖ್ಯಾತ ನಾಯಕರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಅವರಿಗೆ ಅಧಿಕಾರ ಹಾಗೂ ಹಣದ ಮದ ಏರಿದೆ. ಪಾಳೆಗಾರಿಕೆ ಪ್ರವೃತ್ತಿ ಸಾಧಿಸುತ್ತಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹರಿಹಾಯ್ದಿದ್ದರು. ಇದೀಗ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ಹಿಂದೆ ಸರಿದರೂ ಜೋಶಿ ವಿರುದ್ಧ ಪ್ರಚಾರ ಮುಂದುವರಿಸಿದ್ದಾರೆ. ಜೋಶಿ ಅವರಿಂದ ಅನ್ಯಾಯಕ್ಕೆ ಒಳಗಾದ ಬಿಜೆಪಿಯೊಳಗಿನ ಲಿಂಗಾಯತ ನಾಯಕರು ಸೇರಿದಂತೆ ಲಿಂಗಾಯತ ಸಮುದಾಯದ ಜನರನ್ನು ಒಟ್ಟುಗೂಡಿಸಲು ಸಮಾವೇಶ ನಡೆಸುತ್ತಿದ್ದಾರೆ.

ಮತ್ತೊಂದೆಡೆ, ಶಿಗ್ಗಾಂವಿ ಕ್ಷೇತ್ರದ ಸಾದರ ಲಿಂಗಾಯತ ಮತದಾರರು ಕಾಂಗ್ರೆಸ್ ನತ್ತ ವಾಲಿದ್ದಾರೆ. ಪ್ರತಿಬಾರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಿಂದ ಹೆಚ್ಚಿನ ಮತಗಳನ್ನ ಜೋಶಿ ಅವರ ಬುಟ್ಟಿಗೆ ಹಾಕಿಸುತ್ತಿದ್ದರು. ಆದರೆ ಈ ಭಾರಿ ಅವರೇ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವುದರಿಂದ ಜೋಶಿಗೆ ನೆರವಾಗಲು ಸಾಧ್ಯವಾಗಿಲ್ಲ. ಇನ್ನು ಅಲ್ಲಿಯ ಮತದಾರರು ಜೋಶಿ ಅವರನ್ನು ಸೋಲಿಸಿದರೆ ಬೊಮ್ಮಾಯಿ ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇರುತ್ತದೆ ಎನ್ನುವ ಲೆಕ್ಕಾಚಾರದಿಂದ ಅಲ್ಲಿಯ ಲಿಂಗಾಯತ ಸಮುದಾಯದ ಮತದಾರರು ಕಾಂಗ್ರೆಸ್ಗೆ ಮತ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಈ ಎಲ್ಲದರ ಮಧ್ಯೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವು ರಾಜಕೀಯ ಚದುರಂಗದ 'ದಾಳ' ವಾಗಿ ಬಳಸಿಕೊಳ್ಳಲು ಪ್ರಲ್ಹಾದ್ ಜೋಶಿ ಮುಂದಾಗಿದ್ದರು. ಈ ಕೊಲೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಕರಣಕ್ಕೆ ಜಿಹಾದ್ ಲೇಬಲ್ ಅಂಟಿಸಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಮುಂದಾಗಿದ್ದರೂ ಮತದಾನದ ಹೊತ್ತಿಗಾಗಲೇ ಅದು ತನ್ನ ಕಾವು ಕಳೆದುಕೊಳ್ಳುತ್ತಾ ಬಂದಿದೆ. ಹಾಗಾಗಿ ಬಿಜೆಪಿಯ ತಂತ್ರ ನಿರೀಕ್ಷಿತ ಫಲ ಕೊಡುವ ಸಾಧ್ಯತೆ ವಿರಳ.

ಇನ್ನು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿಯ ಕೆಲ ಶಾಸಕರು ಜೋಶಿ ಪರ ಪ್ರಚಾರ ನಡೆಸಲು ಉತ್ಸಾಹ ತೋರುತ್ತಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಮತ್ತೊಂದೆಡೆ ಜೋಶಿ ಅವರಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ನಿದ್ದೆಗೆಡೆಸಿದೆ. ಈ ಎಲ್ಲ ವಿಚಾರಗಳ ನಡುವೆಯೂ ಜೋಶಿ ಅವರು ಮೋದಿ ವರ್ಚಸ್ಸು, ತಾವು ಮಾಡಿದ ಅಭಿವೃದ್ಧಿ ಕೆಲಸಗಳು ಹಾಗೂ ಹಿಂದುತ್ವದ ಹೆಸರಿನಲ್ಲಿ ಕ್ಷೇತ್ರದ ಹಳ್ಳಿಹಳ್ಳಿಗೂ ಕಾಲಿಗೆ ಚಕ್ರಕಟ್ಟಿಕೊಂಡು ತಿರುಗುತ್ತಿದ್ದಾರೆ. ಈ ಬಾರಿಯ ಚುನಾವಣೆ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಗೆಲುವಿಗಾಗಿ ಹಾತೊರೆಯುತ್ತಿರುವ ಕೈ ಅಭ್ಯರ್ಥಿ ವಿನೋದ ಅಸೂಟಿ

ಈಗಾಗಲೇ ಧಾರವಾಡ ಲೋಕಸಮರದ ಅಖಾಡ ಕಾಂಗ್ರೆಸ್ಸಿಗೆ ಹದಗೊಂಡಂತಿದೆ. ಗೆಲುವಿನ ತುತ್ತು ʻಕೈʼಯಲ್ಲಿದೆ. ಅದನ್ನು ಬಾಯಿಗೆ ಬೀಳಿಸಿಕೊಳ್ಳುತ್ತಾರಾ ಅಥವಾ ನೆಲಕ್ಕೆ ಚೆಲ್ಲುತ್ತಾರಾ ಎನ್ನುವ ಪ್ರಶ್ನೆ ಮೂಡುವಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಉತ್ತರ ಕರ್ನಾಟಕ ಭಾಗದ ಮತದಾರರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿವೆ. ಈ ಗ್ಯಾರಂಟಿ ಯೋಜನೆಗಳಿಂದಾಗಿಯೇ ಧಾರವಾಡ ಮತದಾರರು ಅಭ್ಯರ್ಥಿ ಯಾರು ಎನ್ನುವುದನ್ನೂ ನೋಡದೆ ಕಾಂಗ್ರೆಸ್ಸಿಗೆ ಮತ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ವಿನೋದ್ ಅಸೂಟಿ ಅವರು ಮತದಾರರನ್ನು ತಲುಪುವಲ್ಲಿ ಹಿಂದೆಬಿದ್ದಿದ್ದಾರೆ.

ಅಸೂಟಿ ಬೆನ್ನಿಗೆ ನಿಂತಿರುವ ಶಾಸಕ ಸಂತೋಷ್ ಲಾಡ್ ಅವರು, ಅಭ್ಯರ್ಥಿಯನ್ನು ಮುನ್ನಲೆಗೆ ತಂದು ಮಾತನಾಡುವ ಬದಲಿಗೆ ತಮ್ಮ ವರ್ಚಸ್ಸು ಬೆಳೆಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಅಸೂಟಿ ಆಪ್ತರೊಬ್ಬರು ಹೇಳಿದ್ದಾರೆ.

ಇನ್ನು ಅಭ್ಯರ್ಥಿ ಅಸೂಟಿಯವರಾಗಲಿ, ಸಚಿವ ಸಂತೋಷ್ ಲಾಡ್ ಅವರಾಗಲಿ ಈವರೆಗೂ ಎದುರಾಳಿ ಜೋಶಿ ವಿರುದ್ಧ ಒಂದೇ ಒಂದು ಹೇಳಿಕೆ ನೀಡಿಲ್ಲ. ಲಾಡ್ ಅವರು ಮೋದಿ ಅವರ ವಿರುದ್ಧ ಮಾತನಾಡಿದ್ದು ಬಿಟ್ಟರೆ, ಬಿಜೆಪಿ ಅಭ್ಯರ್ಥಿಯನ್ನು ನೇರವಾಗಿ ಎದುರಿಸುವ ಪ್ರಯತ್ನ ಮಾಡುತ್ತಿಲ್ಲ. ಇದು ಚುನಾವಣಾ ರಾಜಕಾರಣದ ತಂತ್ರವೋ ಅಥವಾ ವೈಯಕ್ತಿಕ ಸಂಬಂಧ ಉಳಿಸಿಕೊಳ್ಳುವ ಪ್ರಯತ್ನವೋ ತಿಳಿದಿಲ್ಲ. ಇದರಿಂದ ಮತದಾರರ ಅಭಿಪ್ರಾಯ, ಒಲವು-ನಿಲುವುಗಳು ಬದಲಾಗಿ ಹದಗೊಂಡ ನೆಲದಲ್ಲಿ ಮತ್ತೆ ಕಮಲ ಅರಳಲು ಅವಕಾಶ ಮಾಡಿಕೊಟ್ಟರೂ ಅಚ್ಚರಿಪಡಬೇಕಿಲ್ಲ.

ಕೇಂದ್ರ ಸರ್ಕಾರದಲ್ಲಿ ಪ್ರಬಲ ಸಚಿವ ಸ್ಥಾನದಲ್ಲಿರುವ ಅಭ್ಯರ್ಥಿಯನ್ನು ಎದುರಿಸಲು ಬೇಕಾದ ಸಿದ್ಧತೆಯಾಗಲಿ, ಹೇಳಿಕೆಗಳಾಗಲಿ ವಿನೋದ್ ಅಸೂಟಿ ಅವರಿಂದ ಕಾಣಿಸುತ್ತಿಲ್ಲ. ಅವರ ಬೆನ್ನಿಗೆ ನಿಂತಿರುವ ಲಾಡ್ ಕೂಡ ಜೋಶಿ ವಿರುದ್ಧ ಒಂದೇ ಒಂದು ಹೇಳಿಕೆ ನೀಡುತ್ತಿಲ್ಲ. ಪ್ರಬಲ ಅಭ್ಯರ್ಥಿಯನ್ನು ಎದುರಿಸಲು ಬೇಕಾದ ತಂತ್ರಗಳು ಕಾಂಗ್ರೆಸ್‌ನಿಂದ ನಡೆಯುತ್ತಿಲ್ಲ. ಇದು ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕ್ಷೇತ್ರದಲ್ಲಿ ಅನುಭವಿ ನಾಯಕ ಪ್ರಲ್ಹಾದ್ ಜೋಶಿ ಹಾಗೂ ಯುವ ನಾಯಕ ವಿನೋದ್ ಅಸೂಟಿ ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಜೋಶಿ ಅವರು ತಮಗೆ ಈ ಬಾರಿ ಎದುರಾಗಿರುವ ವಿರೋಧಿ ಅಲೆಯನ್ನು ಮೆಟ್ಟಿನಿಂತು ಗೆಲುವು ಸಾಧಿಸುವ ಪ್ರಯತ್ನದಲ್ಲಿದ್ದಾರೆ. ವಿನೋದ್ ಅಸೂಟಿ ಅವರಿಗೆ ಗೆಲುವಿನ ದಾರಿ ಸುಗಮವಾಗಿದ್ದರೂ ಕೂಡ ಅನುಭವದ ಕೊರತೆಯಿಂದ ಹಿಂದೆ ಬಿದ್ದಿದ್ದಾರೆ. ಇದೆಲ್ಲೆದರ ಮಧ್ಯೆ ಧಾರವಾಡ ಪೇಡಾ ಯಾರಿಗೆ ಸಿಹಿಯಾಗತ್ತೆ ಯಾರಿಗೆ ಹುಳಿಯಾಗುತ್ತದೆ ಎನ್ನುವುದು ಜೂನ್ ನಾಲ್ಕರಂದೇ ತಿಳಿಯಲಿದೆ.

Read More
Next Story