Loksabha Election 2024 | ಜಗದೀಶ್ ಶೆಟ್ಟರ್ ರಾಜಕೀಯ ಭವಿಷ್ಯಕ್ಕೇ ಅಂತ್ಯ ಹಾಡಿತೆ ಬಿಜೆಪಿ?
x

Loksabha Election 2024 | ಜಗದೀಶ್ ಶೆಟ್ಟರ್ ರಾಜಕೀಯ ಭವಿಷ್ಯಕ್ಕೇ ಅಂತ್ಯ ಹಾಡಿತೆ ಬಿಜೆಪಿ?

ಹಾವೇರಿ ಮತ್ತು ಧಾರವಾಡ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಇದೀಗ ಎರಡೂ ಕಡೆಗಳಲ್ಲಿ ಟಿಕೆಟ್ ಕೈ ತಪ್ಪಿದೆ. ಇದರೊಂದಿಗೆ ಅವರ ರಾಜಕೀಯ ಭವಿಷ್ಯವೇ ಅಂತ್ಯವಾಗತ್ತಾ ಎನ್ನುವ ಮಾತುಗಳು ರಾಜಕೀಯ ವಲಯದಿಂದ ಕೇಳಿಬರುತ್ತಿವೆ.


ಬಿಜೆಪಿ ಬುಧವಾರ 20 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಹಾವೇರಿ ಮತ್ತು ಧಾರವಾಡ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಇದೀಗ ಎರಡೂ ಕಡೆಗಳಲ್ಲಿ ಟಿಕೆಟ್ ಕೈ ತಪ್ಪಿದೆ. ಇದರೊಂದಿಗೆ ಅವರ ರಾಜಕೀಯ ಭವಿಷ್ಯವೇ ಅಂತ್ಯವಾಗತ್ತಾ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

2023ರ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಶೆಟ್ಟರ್, ಹುಬ್ಬಳ್ಳಿ- ಧಾರವಾಡ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಆನಂತರ ಅವರನ್ನು ಕಾಂಗ್ರೆಸ್‌, ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಶೆಟ್ಟರ್, ಸದ್ದಿಲ್ಲದೆ ಕಾಂಗ್ರೆಸ್‌ ಗೆ ಗುಡ್‌ ಬೈ ಹೇಳಿ, ಮತ್ತೆ ಬಿಜೆಪಿ ಸೇರಿದ್ದರು. ಈ ಮೂಲಕ ಅವರು ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿ ಘರ್ ವಾಪ್ಸಿ ಆಗಿದ್ದರು.

ಮೂಲಗಳ ಪ್ರಕಾರ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಘರ್ ವಾಪ್ಸಿ ಆಗುವ ವೇಳೆ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಬೇಕು ಎನ್ನುವ ಬೇಡಿಕೆ ಇಟ್ಟಿದ್ದರು. ಅದರಲ್ಲೂ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿಯವರ ಧಾರವಾಡ ಲೋಕಸಭಾ ಕ್ಷೇತ್ರದ ಮೇಲೆ ಶೆಟ್ಟರ್ ಕಣ್ಣಿಟ್ಟಿದ್ದರು. ಅದಾಗದಿದ್ದರೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟನ್ನಾದರೂ ನೀಡಬೇಕು ಎಂದು ಷರತ್ತು ಒಡ್ಡಿದ್ದರು. ಆರಂಭದಲ್ಲಿ ಶೆಟ್ಟರ್ ಮಾತಿಗೆ ಒಪ್ಪಿದ್ದ ಬಿಜೆಪಿ ನಾಯಕರು, ಇದೀಗ ಶೆಟ್ಟರ್‌ಗೆ ಟಿಕೆಟ್ ನೀಡದೆ ನಿರಾಸೆಗೊಳಿಸಿದ್ದಾರೆ.

ಬುಧವಾರ ಸಾಯಂಕಾಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವವರೆಗೂ ತಮಗೆ ಲೋಕಸಭಾ ಟಿಕೆಟ್ ಸಿಕ್ಕೇಸಿಗತ್ತದೆ ಎನ್ನುವ ಭರವಸೆಯಲ್ಲಿಯೇ ಜಗದೀಶ್ ಶೆಟ್ಟರ್ ಇದ್ದರು. ಆ ಕ್ಷಣದವರೆಗೂ ಅವರಿಗೆ ಟಿಕೆಟ್ ಬಗ್ಗೆ ಯಾವುದೇ ಸಂಶಯವೂ ಇರಲಿಲ್ಲ. ಹಾಗಾಗಿಯೇ ಅವರು ಹಾಯಾಗಿ ಕ್ಷೇತ್ರ ಪರ್ಯಟನೆ ಮಾಡಿದ್ದರು. ಆದರೆ ನಿನ್ನೆ ಲೋಕಸಭಾ ಟಿಕೆಟ್ ಪ್ರಕಟವಾಗುತ್ತಿದ್ದಂತೆ ಜಗದೀಶ್ ಶೆಟ್ಟರ್ ಗೆ ಬರಸಿಡಿಲು ಬಡಿದಂತಾಗಿದೆ.

ಧಾರವಾಡ ಅಥವಾ ಹಾವೇರಿ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದ ಶೆಟ್ಟರ್ ಲೆಕ್ಕಾಚಾರ ಉಲ್ಟಾಪಲ್ಟಾವಾಗಿದ್ದು, ಹೀಗಾಗಿ ರಾಯಚೂರು ಪ್ರವಾಸದಲ್ಲಿದ್ದ ಶೆಟ್ಟರ್ ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮನೆಗೆ ವಾಪಸ್ ಆಗಿದ್ದಾರೆ.

ಶೆಟ್ಟರ್ ಅಂತಿಮ ಭರವಸೆ ಬೆಳಗಾವಿ

ಸಧ್ಯದ ಪರಿಸ್ಥಿಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಈಗ ಇರುವ ಏಕೈಕ ಭರವಸೆ ಅಂದ್ರೆ ಅದು ಬೆಳಗಾವಿ ಲೋಕಸಭಾ ಕ್ಷೇತ್ರ ಮಾತ್ರ. ಅದು ಕೂಡ ದಕ್ಕುವ ಗ್ಯಾರಂಟಿ ಇಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮೂಲಗಳ ಪ್ರಕಾರ, ಅವರಿಗೆ ಬೆಳಗಾವಿ ಕ್ಷೇತ್ರದಿಂದ ಟಿಕೆಟ್ ಕೊಡುವುದಾಗಿದ್ದರೆ ನಿನ್ನೆಯೇ (ಬುಧವಾರ) ಅವರ ಹೆಸರನ್ನು ಘೋಷಿಸಬಹುದಿತ್ತು, ಆದರೆ ಚಿಕ್ಕೋಡಿಯಿಂದ ಲಿಂಗಾಯತ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಕಣಕ್ಕಿಳಿಸಿದೆ. ಇದೀಗ ಬೆಳಗಾವಿಯಲ್ಲಿ ಒಬಿಸಿ ಅಥವಾ ಕುರುಬ ಸಮುದಾಯದ ಜನರೊಂದಿಗೆ ಸಂಪರ್ಕ ಹೊಂದಿರುವ ಪ್ರಬಲ ಅಭ್ಯರ್ಥಿಯನ್ನು ಬಿಜೆಪಿ ವರಿಷ್ಠರು ಹುಡುಕುತ್ತಿದ್ದಾರೆ ಎನ್ನಲಾಗುತ್ತಿದೆ.

ಇವತ್ತಿನ ವರದಿಗಳ ಪ್ರಕಾರ ಅಮಿತ್ ಶಾ ಅವರು ಶೆಟ್ಟರ್ ಗೆ ಬೆಳಗಾವಿಯ ಆಫರ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಶೆಟ್ಟರ್ ಅವರು ಆ ಬಗ್ಗೆ ಯೋಚಿಸಲು ಕಾಲಾವಕಾಶ ಕೇಳಿದ್ದಾರೆ. ಬೆಳಗಾವಿಯಿಂದ ಸ್ಪರ್ಧಿಸಿದರೆ ಶೆಟ್ಟರ್‌ಗೆ ಸೋಲುವ ಭೀತಿ ಇದೆ ಎನ್ನಲಾಗಿದೆ. ಹೀಗಾಗಿ ಅವರು ಕಾಲಾವಕಾಶ ಕೇಳಿರುವ ಸಾಧ್ಯತೆ ಇದೆ. ಆದರೆ ಖುದ್ದು ಅಮಿತ್ ಶಾ ಸೂಚನೆ ನೀಡಿರುವುದರಿಂದ ಶೆಟ್ಟರ್ ಗೆ ಇದೀಗ ಬಾಯಲ್ಲಿ ಬಿಸಿ ತುಪ್ಪ ಸಿಕ್ಕಿಕೊಂಡಂತಾಗಿದೆ.

ಬೆಳಗಾವಿಯಲ್ಲಿ 'ಗೋ ಬ್ಯಾಕ್ ಶೆಟ್ಟರ್' ಅಭಿಯಾನ

ಲಿಂಗಾಯತ ಪ್ರಾಬಲ್ಯವಿರುವ ಬೆಳಗಾವಿ ಕ್ಷೇತ್ರದಲ್ಲಿ ತಮಗೆ ಜನ ಬೆಂಬಲ ಇದೆ ಎಂದು ಹೇಳುವ ಮೂಲಕ ಈ ಹಿಂದೆ ಬೆಳಗಾವಿ ಮೇಲೆಯೂ ಶೆಟ್ಟರ್ ಒಂದು ಕಣ್ಣು ನೆಟ್ಟಿದ್ದರು. ಆದರೆ, ಕಳೆದ 15 ದಿನಗಳಿಂದ ಬೆಳಗಾವಿಯಲ್ಲಿ 'ಗೋ ಬ್ಯಾಕ್ ಶೆಟ್ಟರ್' ಅಭಿಯಾನ ಶುರುವಾಗಿತ್ತು. ಈ ಮೂಲಕ ಅವರ ನಿರೀಕ್ಷೆ ಹುಸಿಯಾಗಿತ್ತು. ಹಾಗಾಗಿಯೇ ಅವರು ಧಾರವಾಡ ಇಲ್ಲವೇ ಹಾವೇರಿಯಿಂದ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.

ಈ ಮೊದಲೇ ಶೆಟ್ಟರ್ ಅವರ ರಾಜಕೀಯ ಸ್ಥಿತಿ ಅತಂತ್ರವಾಗಿತ್ತು. ಅವರು ರಾಜಕೀಯವಾಗಿ ಮತ್ತೆ ಮೇಲೇಳಲು ಹಾವೇರಿ ಸುರಕ್ಷಿತ ಸ್ಥಾನವಾಗುತ್ತಿತ್ತು. ಅವಿಭಜಿತ ಧಾರವಾಡ ಜಿಲ್ಲೆಗೆ ಹೋಲಿಸಿದರೆ ಬೆಳಗಾವಿಯ ರಾಜಕೀಯ ಸಂಪೂರ್ಣ ಭಿನ್ನವಾಗಿದೆ. ಅಲ್ಲಿ ಈಗಾಗಲೇ ಮೂರ್ನಾಲ್ಕು ಮನೆತನಗಳ ಪಾರುಪತ್ಯ ಇದೆ. ಇದೀಗ ಶೆಟ್ಟರ್ ಅಲ್ಲಿ ಸ್ಪರ್ಧಿಸಿ ಗೆಲುವು ಕಾಣುತ್ತಾರೆ ಎನ್ನುವುದು ಕನಸಿನ ಮಾತು ಎನ್ನುತ್ತಾರೆ ಬೆಳಗಾವಿ ರಾಜಕೀಯ ಬಲ್ಲವರು..

ಹೆಸರು ಹೇಳಲಿಚ್ಚಿಸದ ಬಿಜೆಪಿ ನಾಯಕರೊಬ್ಬರು ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿ, "ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್‌ಗೆ ಹೆಚ್ಚಿನ ಬೆಂಬಲ ಇಲ್ಲದಿರುವುದರಿಂದ ಮತ ಪಡೆಯುವುದು ಕಷ್ಟ. ಮಾಜಿ ಸಿಎಂಗೆ ಟಿಕೆಟ್ ಸಿಕ್ಕರೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ತರುವ ಮತಗಳ ಮೇಲೆ ಇಲ್ಲಿ ಜಗದೀಶ್ ಶೆಟ್ಟರ್ ಭವಿಷ್ಯ ನಿಂತಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಂದುವೇಳೆ ಬೆಳಗಾವಿಯಿಂದ ಶೆಟ್ಟರ್ ಅವರು ಸ್ಪರ್ಧೆ ಮಾಡಿದರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವುದು ಬಿಜೆಪಿಯೊಳಗಿನವರಿಗೆ ತುಂಬಾ ಚೆನ್ನಾಗಿ ಗೊತ್ತಿರುವ ಸತ್ಯ. ಇದು ಶೆಟ್ಟರ್ ಗೆ ತಿಳಿಯದ ವಿಚಾರವೇನಲ್ಲ, ಹಾಗಾಗಿಯೇ ಬಿಜೆಪಿಯವರು ಶೆಟ್ಟರ್ ಅವರ ರಾಜಕೀಯ ಜೀವನವನ್ನೇ ಮುಗಿಸಲು ಹೊರಟಿದ್ದಾರಾ ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ.

ಜಗದೀಶ್ ಶೆಟ್ಟರ್ ಅವರು ಧಾರವಾಡಕ್ಕೆ ಸಮೀಪವಿರುವ ಗದಗ ಮತ್ತು ಹಾವೇರಿಯಲ್ಲಿ ಜನಪ್ರಿಯ ಲಿಂಗಾಯತ ನಾಯಕರಾಗಿದ್ದಾರೆ. ಹಾಗಾಗಿ ಅಲ್ಲಿ ಅವರು ಉತ್ತಮ ಪೈಪೋಟಿ ನೀಡಬಹುದಿತ್ತು. ಆದರೆ ಎರಡೂ ಕ್ಷೇತ್ರಗಳಿಂದ ಅವರಿಗೆ ಟಿಕೆಟ್ ಘೋಷಣೆ ಮಾಡದೇ ಅವರ ರಾಜಕೀಯ ಜೀವನವನ್ನು ಅಂತ್ಯ ಮಾಡಲು ಬಿಜೆಪಿ ಹೊರಟಿದೆ ಎನ್ನುವ ಮಾತುಗಳು ಅವರ ಬೆಂಬಲಿಗರಿಂದ ಕೇಳಿಬರುತ್ತಿವೆ.

ಟಿಕೆಟ್ ಕೈ ತಪ್ಪಿದ ಬಳಿಕ ಮಾಧ್ಯಮಗಳ ಎದುರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವ ಶೆಟ್ಟರ್, "ಧಾರವಾಡ ಹಾಗೂ ಹಾವೇರಿ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆಗಳಾಗಿದ್ದವು. ಈಗ ಟಿಕೆಟ್ ಘೋಷಣೆ ಆಗಿದೆ. ಈಗ ಬೆಳಗಾವಿ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇವತ್ತೆ ತೀರ್ಮಾನ ಆಗಲಿದೆ. ಈಗಲೇ ಯಾವ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಹೈಕಮಾಂಡ್ ನಿರ್ಧಾರದ ನಂತರ ನನ್ನ ನಿರ್ಣಯ ಪ್ರಕಟಿಸುತ್ತೇನೆ" ಎಂದು ಹೇಳಿದ್ದಾರೆ.

"ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಎಲ್ಲದ್ದಕ್ಕು ಜನರೇ ಉತ್ತರ‌ ಕೊಡುತ್ತಾರೆ" ಎನ್ನುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಅವರು ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಶೆಟ್ಟರ್ ಅವರ ಈ ಪ್ರತಿಕ್ರಿಯೆ ನೋಡಿದರೆ, ಕಳೆದ ವಿಧಾನಸಭಾ ಚುನಾವಣೆ ಮುಂಚಿನ ಘಟನಾವಳಿಗಳು ಮತ್ತೆ ಮರುಕಳಿಸುವ ಸಾಧ್ಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ ಎಂಬುದು ಶೆಟ್ಟರ್‌ ಅವರನ್ನು ಬಲ್ಲವರ ಅಂದಾಜು!

Read More
Next Story