
Save Lalbagh| ವಿವಾದ ಸೃಷ್ಟಿಸಿದ ಲಾಲ್‌ಬಾಗ್ ಟನಲ್ ರಸ್ತೆ: ಬೆಂಗಳೂರಿಗೆ ಸುರಂಗ ಮಾರ್ಗ ಬೇಕೆ, ಬೇಡವೇ; ಜನ ಏನಂತಾರೆ?
ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗೆ ಸುಮಾರು16.7ಕಿ.ಮೀ.ಗಳಷ್ಟು ಸಾಗುವ ಹಾಗೂ ಅಂದಾಜು 18 ಸಾವಿರ ರೂ. ಕೋಟಿಗೂ ಹೆಚ್ಚು ವೆಚ್ಚದ ಟನಲ್ ರಸ್ತೆ ಯೋಜನೆಯು ನಗರದ ಸಂಚಾರ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸುವ ಕನಸು ಹೊಂದಿದೆ. ಆದರೆ, ಲಾಲ್‌ಬಾಗ್‌ನಲ್ಲಿ ಸುರಂಗ ರಸ್ತೆ ಹಾದು ಹೋಗುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಸಿಲಿಕಾನ್ ವ್ಯಾಲಿ, ಉದ್ಯಾನ ನಗರಿ ಖ್ಯಾತಿಯ ಬೆಂಗಳೂರಿಗೆ ವೇಗದ ಅಭಿವೃದ್ಧಿಯೇ ಕಂಟಕವಾಗಿ ಪರಿಣಮಿಸಿದೆ. ನಗರದ ವಿಸ್ತರಣೆ, ಉದ್ಯೋಗ ಅವಕಾಶ ಹೆಚ್ಚಳ ಮತ್ತು ವಲಸಿಗರ ಮಹಾಪೂರದಿಂದ ಬೆಂಗಳೂರಿನ ಮೇಲೆ ಒತ್ತಡ ಹೆಚ್ಚುತ್ತಿದೆ. ಅದರಲ್ಲಿ ಸಂಚಾರ ದಟ್ಟಣೆ ಕೂಡ ಒಂದು. ಈ ದಟ್ಟಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವಕಾಂಕ್ಷೆಯ, ಬಹುಕೋಟಿ ವೆಚ್ಚದ 'ಟನಲ್ ರಸ್ತೆ' ಯೋಜನೆ ಪ್ರಸ್ತಾಪಿಸಿದೆ.
ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಸುಮಾರು16.7ಕಿ.ಮೀ. ಉದ್ದದ ಅಂದಾಜು 18 ಸಾವಿರ ರೂ. ಕೋಟಿ ವೆಚ್ಚದ ಸುರಂಗ ರಸ್ತೆ ಯೋಜನೆಯು ನಗರದ ಸಂಚಾರ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸುವ ಕನಸು ಕಂಡಿದೆ. ಆದರೆ, ಈ ಯೋಜನೆಯು ನಗರದ ಪ್ರಮುಖ ಶ್ವಾಸತಾಣವಾಗಿರುವ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ಗೆ ಧಕ್ಕೆ ತರುವ ಆತಂಕ ಮೂಡಿಸಿದೆ. ಲಾಲ್‌ಬಾಗ್ ಬಂಡೆಕಲ್ಲಿನ ಕೆಳಭಾಗದಲ್ಲಿ ಸುರಂಗ ಮಾರ್ಗ ಹಾದು ಹೋಗಲಿದೆ ಎಂಬ ಮಾತುಗಳು ಟನಲ್ ರಸ್ತೆ ಯೋಜನೆಯನ್ನು ವಿವಾದಕ್ಕೆ ಎಳೆದು ತಂದಿವೆ. ಯೋಜನೆ ಕುರಿತ ಪರ-ವಿರೋಧದ ಚರ್ಚೆಯು ಪ್ರಗತಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಜನರ ಆದ್ಯತೆಗೆ ಹಿಡಿದ ಕನ್ನಡಿಯಾಗಿದೆ.
ಕೇವಲ ಉದ್ಯಾನವಲ್ಲ, ಇದು ಇತಿಹಾಸ
ಲಾಲ್‌ಬಾಗ್ ಕೇವಲ ಹೂದೋಟವಲ್ಲ. ಇದು ಬೆಂಗಳೂರಿನ ಇತಿಹಾಸ. ಸಂಸ್ಕೃತಿ ಮತ್ತು ಪರಿಸರ ಸಮತೋಲನದ ಸಂಕೇತವಾಗಿದೆ. ಇದರ ನೆಲದಡಿ 300 ಶತಕೋಟಿ ವರ್ಷಗಳಷ್ಟು ಹಳೆಯ ಪೆನಿನ್ಸುಲರ್ ನೀಸ್(Peninsular Gneiss) ಶಿಲೆಯು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವಿದೆ. ಟನಲ್ ರಸ್ತೆಯು ಈ ಶಿಲಾ ರಚನೆಯಡಿ ಹಾದು ಹೋಗುವುದರಿಂದ ಉದ್ಯಾನದ ಜೀವವೈವಿಧ್ಯತೆ ಹಾಗೂ ಜಲಮೂಲಗಳಿಗೆ ಹಾನಿ ಉಂಟು ಮಾಡಲಿದೆ ಎಂಬ ಪರಿಸರವಾದಿಗಳಲ್ಲಿ ಆತಂಕದ ಹಿನ್ನೆಲೆಯಲ್ಲಿ ʼ ದ ಫೆಡರಲ್ ಕರ್ನಾಟಕʼ ಲಾಲ್‌ಬಾಗ್‌ಗೆ ಬರುವ ನಡಿಗೆದಾರರ ಅಭಿಪ್ರಾಯ ಆಲಿಸಿತು. ಯೋಜನೆ ಕುರಿತು ಜನರು ವ್ಯಕ್ತಪಡಿಸಿದ ಪರ-ವಿರೋಧದ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಲಾಗಿದೆ.
ಇರುವುದನ್ನು ಉಳಿಸಿಕೊಳ್ಳಬೇಕು
ಸುರಂಗ ಮಾರ್ಗ ಯೋಜನೆ ಕುರಿತು `ದ ಫೆಡರಲ್ ಕರ್ನಾಟಕʼ ದೊಂದಿಗೆ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಎಂ.ಕೆ.ಶ್ರೀಧರ್ ಅವರು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ರಸ್ತೆ ಅಥವಾ ಮೆಟ್ರೋ ಯೋಜನೆಗಿಂತ ಪರ್ಯಾಯ ಮಾರ್ಗಗಳ ಅನ್ವೇಷಣೆ ಅಗತ್ಯವಾಗಿದೆ. ಯಾವುದೇ ಹೊಸ ಯೋಜನೆ ಅನುಷ್ಠಾನಗೊಳ್ಳುವ ಮೊದಲು ಇರುವುದನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಸುರಂಗ ಮಾರ್ಗದ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಹೊರಗಡೆ ಎಲ್ಲರಿಗೂ ಕಾಣುವಂತಿದ್ದರೆ ಮಾತ್ರ ಸುರಂಗ ಮಾರ್ಗ ಸುರಕ್ಷಿತ ಎಂಬುದು ಜನರ ಅಭಿಪ್ರಾಯ. ಟನಲ್ ರಸ್ತೆ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಆದರೆ, ಮೂಲಭೂತವಾಗಿ ಪರಿಸರ ರಕ್ಷಣೆಯತ್ತ ಗಮನ ಹರಿಸಬೇಕು. ಜನರು ಕಾರುಗಳನ್ನು ಬಳಸುವುದನ್ನು ನಿಲ್ಲಿಸಬೇಕು. ಪ್ಲಾಸ್ಟಿಕ್ ಬಳಕೆ ನಿಲ್ಲಬೇಕು. ಪರಿಸರ ಸುಧಾರಣೆ ಮತ್ತು ಬದಲಾವಣೆಯ ದೃಷ್ಟಿಕೋನವೇ ಸಮಸ್ಯೆಗೆ ನಿಜವಾದ ಪರಿಹಾರ ಎಂದು ಅಭಿಪ್ರಾಯಪಟ್ಟರು.
ಯೋಜನೆ ಜಾರಿಗೂ ಮುನ್ನ ಶಾಶ್ವತ ಪರಿಹಾರ ಕ್ರಮಗಳತ್ತ ಯೋಚಿಸಬೇಕು. ಸುರಂಗ ಮಾರ್ಗ ಯೋಜನೆಗಿಂತ ಮುಖ್ಯವಾಗಿ ಸಾರ್ವಜನಿಕರಿಗೆ ಆರೋಗ್ಯ ಮತ್ತು ಮನಃಶಾಂತಿ ನೀಡುವ ಹಾಗೂ ಪ್ರಾಣಿಗಳಿಗೆ ಆಶ್ರಯ ನೀಡಿರುವ ಲಾಲ್‌ಬಾಗ್ ಪ್ರದೇಶ, ಇಲ್ಲಿನ ಕೆರೆಯನ್ನು ಸಂರಕ್ಷಿಸುವುದು ಹೆಚ್ಚು ಮಹತ್ವದ್ದಾಗಿದೆ ಎಂದು ಹೇಳಿದರು.
'ಪರಿಸರಕ್ಕೆ ಹಾನಿಯಾಗದು'
ಬೆಂಗಳೂರಿನ ನಿರಂತರ ಟ್ರಾಫಿಕ್ ಸಮಸ್ಯೆಗೆ ಈ ಸುರಂಗ ಮಾರ್ಗವು ಅನಿವಾರ್ಯ. ತಾಂತ್ರಿಕವಾಗಿ ಅತ್ಯಾಧುನಿಕ ಪರಿಹಾರವಾಗಿದೆ ಎಂದು ಝೇಂಕರ್ ಮ್ಯೂಸಿಕ್ ಮುಖ್ಯಸ್ಥ ನಿರ್ಮಲ್ ಕುಮಾರ್ ಜೈನ್ ಅವರು ಪ್ರತಿಪಾದಿಸಿದ್ದಾರೆ. ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ಸುರಂಗ ಮಾರ್ಗವು ಭೂಮಿಯಿಂದ ಸುಮಾರು 70ರಿಂದ 80ಮೀಟರ್( ಸುಮಾರು 250 ಅಡಿ) ಆಳದಲ್ಲಿ ಸಾಗುವುದರಿಂದ, ಮೇಲ್ಮೈನಲ್ಲಿರುವ ಪರಿಸರ, ಮರಗಳು ಅಥವಾ ಲಾಲ್‌ಬಾಗ್‌ಗೆ ಯಾವುದೇ ಹಾನಿಯಾಗುವುದಿಲ್ಲ. ಆಧುನಿಕ ಸುರಂಗ ಕೊರೆಯುವ ಯಂತ್ರೋಪಕರಣಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸಬಲ್ಲವು. ವಾಹನ ಸಂಚಾರಕ್ಕೆ ಬೇಕಾಗುವ ಮಾರ್ಗವು ನಗರದ ಆರ್ಥಿಕ ಚಟುವಟಿಕೆ ಇನ್ನಷ್ಟು ಸುಗಮಗೊಳಿಸಲಿದೆ ಎಂದು ಅಭಿಪ್ರಾಯಪಟ್ಟರು.
ಮತ್ತೊಂದೆಡೆ, ದಂತ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ. ವಿಜಯ್ ಕುಮಾರ್ ಮಾತನಾಡಿ, ನಗರದಲ್ಲಿ ಸುರಂಗ ರಸ್ತೆಯು ವೈಜ್ಞಾನಿಕವಾಗಿ ಕಾರ್ಯಸಾಧುವಲ್ಲ ಎಂಬುದು ಈಗಾಗಲೇ ಅಧ್ಯಯನದಿಂದ ತಿಳಿದು ಬಂದಿದೆ. ಈ ಯೋಜನೆಯಿಂದ ಸುಮಾರು 40 ಎಕರೆಯಷ್ಟು ಮರಗಳು ನಾಶವಾಗುವ ಸಾಧ್ಯತೆ ಇದೆ. ಮೇಲಾಗಿ, ಟನಲ್ ನಿರ್ಮಾಣ ಕಾರ್ಯವು ಲಾಲ್‌ಬಾಗ್ ಕೆಳಗಿನ ಸೂಕ್ಷ್ಮ ಒಳಚರಂಡಿ ವ್ಯವಸ್ಥೆ ಮತ್ತು ಜಲಚರಗಳ ಮೇಲೆ ಗಂಭೀರ ಸಮಸ್ಯೆ ಉಂಟು ಮಾಡಬಹುದು ಎಂದು ಎಚ್ಚರಿಕೆ ನೀಡಿದರು.
ಲಾಲ್‌ಬಾಗ್‌ಗೆ ಕೈ ಹಾಕಬೇಡಿ
ಟನಲ್ ರಸ್ತೆ ಯೋಜನೆಗೆ ಅನೇಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಉದ್ಯಮಿ ಲಲಿತ್ ಕುಮಾರ್ ಅವರು, ಅಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಿ ಸುರಂಗ ಮಾರ್ಗ ಮಾಡುವ ಬದಲು ರಸ್ತೆಗಳನ್ನು ವಿಸ್ತರಣೆ ಮಾಡಿ ಜನರು ಕಾರುಗಳ ಬದಲು ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೇರೇಪಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಮೂಹ ಸಾರಿಗೆಯಿಂದ ನಿಜವಾಗಿಯೂ ಸಂಚಾರ ದಟ್ಟಣೆಗೆ ಪರಿಹಾರ ಸಿಗಲಿದೆ. ಹಾಗಾಗಿ ಭಾರೀ ವೆಚ್ಚದ ಸುರಂಗದ ಬದಲು ರಸ್ತೆಗಳನ್ನು ಸುಧಾರಣೆ ಮಾಡಿ ಎಂದು ಅಭಿಪ್ರಾಯಪಟ್ಟರು.
"ನಾನು ಕೊಡಗಿನಲ್ಲಿ ಹುಟ್ಟಿದ್ದು, ಮಂಗಳೂರಿನಲ್ಲಿ ಬೆಳೆದವಳು. ಎಲ್ಲಾ ಕಾಡು ಪ್ರದೇಶದಲ್ಲಿ ಬೆಳೆದವಳು. ನಾನು ಬೆಂಗಳೂರಿಗೆ ಬಂದಾಗ ಒಂದು ತರಹದ ಬರಡು ಕಾಂಕ್ರೀಟ್ ಅರಣ್ಯದಂತೆ ಕಾಡಿತ್ತು. ಆಗ ನನಗೆ ಶ್ವಾಸತಾಣವಾಗಿ ಕಂಡಿದ್ದು ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್. ಹಾಗಾಗಿ ಈ ಶ್ವಾಸತಾಣಗಳು ಉಳಿಯಬೇಕು ಎಂದು ನಡಿಗೆದಾರರಾದ ಆಶಿತ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ಅಭಿಪ್ರಾಯಪಟ್ಟರು.
ಡಿಆರ್‌ಡಿಒ (ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ) ನಿವೃತ್ತ ವಿಜ್ಞಾನಿ ಡಾ.ಎಂ. ರಾಮಮೂರ್ತಿ ಅವರು ʻದ ಫೆಡರಲ್ ಕರ್ನಾಟಕʼ ದೊಂದಿಗೆ ಮಾತನಾಡಿ "ಬಂಡೆ ಕಲ್ಲು ಕೊರೆದು ಸುರಂಗ ಮಾಡುವುದು ಅಪಾಯಕಾರಿ. ಇದು ಬೆಂಗಳೂರಿನ ಶ್ವಾಸಕೇಂದ್ರ. ಇದನ್ನು ಹಾಳು ಮಾಡಿದರೆ ತುಂಬಾ ದುಃಖವಾಗುತ್ತದೆ. ಟನಲ್ ರಸ್ತೆ ಮಾಡಿದರೆ ಯಾವ ಸಮಸ್ಯೆ ಎದುರಾಗುತ್ತದೆಯೇ ಎಂಬುದು ಊಹಿಸಲೂ ಸಾಧ್ಯವಿಲ್ಲ. ಇದು ದುಸ್ಸಾಹಸ" ಎಂದು ಎಚ್ಚರಿಕೆ ನೀಡಿದ್ದಾರೆ.
ಇದೊಂದು ದಂಧೆ
ನಿವೃತ್ತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಶಿವಲಿಂಗೇಗೌಡ ಅವರು ಸರ್ಕಾರದ ಈ ಯೋಜನೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ರಸ್ತೆಯ ಗುಂಡಿ ಮುಚ್ಚಲು ಸಾಧ್ಯವಿಲ್ಲದ ಸರ್ಕಾರವು ಕೋಟ್ಯಂತರ ರೂಪಾಯಿ ವೆಚ್ಚದ ಟನಲ್ ರಸ್ತೆ ಯೋಜನೆಯನ್ನು ಕೈಗೆತ್ತಿಕೊಂಡಿರುವುದು ದೊಡ್ಡ ದಂಧೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಡೀ ಕರ್ನಾಟಕದ ಜನರು ಯೋಜನೆ ವಿರೋಧಿಸಬೇಕು. ರಸ್ತೆಗಳ ಮೇಲೆ ಬಿದ್ದಿರುವ ಗುಂಡಿ ಮುಚ್ಚಿ ಟಾರ್ ಹಾಕಲಿ. ಟನಲ್ ರಸ್ತೆಯಿಂದ ಮರ ಗಿಡಗಳು ಕುಸಿದು ಹೋಗುತ್ತವೆ. ಬೆಂಗಳೂರಿಗೆ ಟನಲ್ ರಸ್ತೆಗಳು ಬೇಕಾಗಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸ್ತಮಾ ರೋಗಿಯಾದ ಆರ್.ಎಸ್. ಪದ್ಮರಾಜ್ ಅವರು, ತಾವು ನಿತ್ಯ ವಾಕಿಂಗ್‌ಗಾಗಿ ಲಾಲ್‌ಬಾಗ್‌ಗೆ ಬರುತ್ತೇನೆ. ಈ ಒಳ್ಳೆಯ ವಾತಾವರಣ ಹಾಳಾದರೆ ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಲಾಲ್‌ಬಾಗ್ ಉಳಿಸಿ
ಲಾಲ್‌ಬಾಗ್ ನಡಿಗೆದಾರರ ಸಂಘದ ಅಧ್ಯಕ್ಷ ಡಾ. ಉಮೇಶ್ ಅವರು ʼ ದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, ಲಾಲ್‌ಬಾಗ್‌ನಲ್ಲಿ ಹಲವು ಪ್ರಭೇದದ ಮರಗಳಿವೆ. ಪ್ರಾಣಿ ಪಕ್ಷಿಗಳಿವೆ. ಟನಲ್ ರಸ್ತೆಯಿಂದಾಗಿ ಜೀವ ವೈವಿಧ್ಯತೆಗೆ ಹಾನಿಯಾಗಲಿದೆ. ಈ ಯೋಜನೆಯನ್ನು ಸರ್ಕಾರ ಕೈಬಿಡಬೇಕು. ಇಂತಹ ಸುರಂಗ ಮಾರ್ಗಗಳು ಬೆಂಗಳೂರು ನಗರಕ್ಕೆ ಬೇಕಾಗಿಲ್ಲ. ಇಲ್ಲಿನ ಲಾಲ್‌ಬಾಗ್ ಬಂಡೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಾಗಾಗಿ ಇಂತಹ ಸುಂದರ ಪ್ರದೇಶವನ್ನು ಸುರಂಗ ರಸ್ತೆ ಯೋಜನೆಯಿಂದ ಹಾಳು ಮಾಡಬಾರದು ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ಟನಲ್ ರಸ್ತೆ ಯೋಜನೆಯು ನಗರದ ಟ್ರಾಫಿಕ್ ಸಮಸ್ಯೆಗೆ ಒಂದು ತ್ವರಿತ ಮತ್ತು ಆಕರ್ಷಕ ಉತ್ತರ ನೀಡುವ ಯತ್ನವಾಗಿದೆ. ಆದರೆ, ಇದು ನಗರದ ಹೃದಯ ಮತ್ತು ಆತ್ಮವಾದ ಲಾಲ್‌ಬಾಗ್ ಸೇರಿದಂತೆ ಪರಿಸರಕ್ಕೆ ಮತ್ತು ಭೂಗರ್ಭಕ್ಕೆ ಒಡ್ಡುವ ಅಪಾಯವು ಬಹುದೊಡ್ಡದಾಗಿದೆ. ಪ್ರಗತಿಯ ಹಾದಿಯಲ್ಲಿ, ನಾವು ನಮ್ಮ ಪರಿಸರ ಬಲಿಗೊಡಬೇಕೇ?, ಅಥವಾ ಸುಸ್ಥಿರ, ಪರಿಸರ ಸ್ನೇಹಿ ಮತ್ತು ಸಮಗ್ರವಾದ 'ಜನ-ಕೇಂದ್ರಿತ' ಸಾರಿಗೆ ಪರಿಹಾರಗಳ ಕಡೆಗೆ ಗಮನ ಹರಿಸಬೇಕೇ? ಎಂಬ ನಿರ್ಣಾಯಕ ಪ್ರಶ್ನೆಯೇ ಇಂದು ಬೆಂಗಳೂರಿನ ಭವಿಷ್ಯ ನಿರ್ಧರಿಸಲಿದೆ. ಟನಲ್ ರಸ್ತೆಯಂತಹ ತಾತ್ಕಾಲಿಕ ಪರಿಹಾರಗಳ ಬದಲಾಗಿ, ನಗರದ ಸಮಗ್ರ ಆರೋಗ್ಯ ಮತ್ತು ನಾಗರಿಕರ ದೀರ್ಘಕಾಲೀನ ನೆಮ್ಮದಿಗೆ ಒತ್ತು ನೀಡುವ ಕಾರ್ಯಸಾಧ್ಯವಾದ ಯೋಜನೆಗಳು ಇಂದಿನ ತುರ್ತು ಅಗತ್ಯವಾಗಿವೆ ಎಂದು ಹೇಳಿದರು.

