
Save Lalbagh| ಬಾನಾಡಿಗಳಿಗೆ ಲಾಲ್‌ಬಾಗ್ ಸ್ವರ್ಗ; ಟನಲ್ ರಸ್ತೆಯಿಂದ ಪಕ್ಷಿಗಳ ಸಂತತಿಗೆ ಹಾನಿ ಆತಂಕ
"ಬೊಟಾನಿಕಲ್ ಗಾರ್ಡನ್ ಬಟಾಣಿ ಮಾರುವ ಪಾರ್ಕ್ ಅಲ್ಲ, ಅದು ಜೀವ ವೈವಿಧ್ಯತೆಯ ಪ್ರಪಂಚ. ಪಕ್ಷಿ ಪ್ರಬೇಧದಷ್ಟೇ ಕೀಟ ಪ್ರಪಂಚವೂ ಮುಖ್ಯವಾಗಿದೆ. ಹುಲ್ಲುಗಾವಲು ನಾಶದಿಂದ ಕೀಟ ಪ್ರಬೇಧಗಳಿಗೆ ಆಗುವ ಹಾನಿಗೆ ಹೊಣೆ ಯಾರು" ಎಂಬುದು ಪರಿಸರ ಪ್ರೇಮಿ ಜೆ.ಎನ್. ಪ್ರಸಾದ್ ಅವರ ಪ್ರಶ್ನೆ.
ಅಭಿವೃದ್ಧಿಯ ನಾಗಾಲೋಟಕ್ಕೆ ಸಾಕ್ಷಿಯಾಗಲಿರುವ ಸುರಂಗ ರಸ್ತೆ ಯೋಜನೆಯು ಬೆಂಗಳೂರಿನ ಶ್ವಾಸತಾಣವಾಗಿರುವ ಲಾಲ್‌ಬಾಗ್ ಉದ್ಯಾನದ ಜೀವವೈವಿಧ್ಯತೆಗೆ ಅಪಾಯದ ಭೀತಿ ತಂದೊಡ್ಡಿದೆ. ಲಾಲ್‌ಬಾಗ್ ಒಳಗಿನ ಪಕ್ಷಿಗಳು, ಕೀಟಗಳು, ಸರಿಸೃಪಗಳ ಅದ್ಭುತ ಲೋಕವು ಸರ್ಕಾರದ ಕಣ್ಣಿಗೆ ಕಾಣದಂತಾಗಿದೆ.
ಲಾಲ್‌ಬಾಗ್‌ನಲ್ಲಿ ಹಾದು ಹೋಗುವ ಹೆಬ್ಬಾಳ- ಸಿಲ್ಕ್‌ಬೋರ್ಡ್ ನಡುವಿನ ಉದ್ದೇಶಿತ ಸುರಂಗ ರಸ್ತೆಯು ಅಕ್ಷರಶಃ ಪರಿಸರಾಸಕ್ತರ ಮೊಗದಲ್ಲಿ ಆತಂಕದ ಗೆರೆಗಳನ್ನು ಮೂಡಿಸಿದೆ. ಸುರಂಗ ರಸ್ತೆ ಯೋಜನೆ ಜಾರಿ ಮಾಡುವ ಮುನ್ನ ಸಸ್ಯಕಾಶಿಯ ಸೂಕ್ಷ್ಮ ಹಾಗೂ ಜೀವ ವೈವಿಧ್ಯತೆಗೆ ಆಗಲಿರುವ ಹಾನಿಯ ಅವಲೋಕನ ನಡೆಸಬೇಕೆಂಬ ಒತ್ತಾಯಗಳು ಪ್ರಬಲವಾಗಿ ಕೇಳಿ ಬರುತ್ತಿವೆ.
"ಬಟಾನಿಕಲ್ ಗಾರ್ಡನ್ ಬಟಾಣಿ ಮಾರುವ ಪಾರ್ಕ್ ಅಲ್ಲ, ಅದು ಜೀವ ವೈವಿಧ್ಯತೆಯ ಪ್ರಪಂಚ. ಪಕ್ಷಿ ಪ್ರಬೇಧದಷ್ಟೇ ಕೀಟ ಪ್ರಪಂಚವೂ ಮುಖ್ಯವಾಗಿದೆ. ಪಕ್ಷಿ ಪ್ರಬೇಧದ ಸಂರಕ್ಷಣೆ ದೃಷ್ಟಿಯಿಂದ ಮರ ಕಡಿಯುವುದಿಲ್ಲ ಎಂದು ಸರ್ಕಾರವೇನೋ ಭರವಸೆ ನೀಡಿದೆ. ಆದರೆ, ಹುಲ್ಲುಗಾವಲು ನಾಶದಿಂದ ಕೀಟ ಪ್ರಬೇಧಗಳಿಗೆ ಆಗುವ ಹಾನಿಗೆ ಹೊಣೆ ಯಾರು" ಎಂಬುದು ಪರಿಸರ ಪ್ರೇಮಿ ಜೆ.ಎನ್. ಪ್ರಸಾದ್ ಅವರ ಪ್ರಶ್ನೆ.
"ಪಕ್ಷಿಗಳಷ್ಟೇ, ಕೀಟಗಳು ಕೂಡ ಸಮತೋಲಿತ ಪರಿಸರದಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಜೀವವೈವಿಧ್ಯತೆಯಲ್ಲಿ ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುವಾಗ ಕೀಟಗಳು ನಾಶವಾದರೂ ಅದು ಪರಿಸರ ನಾಶವೇ ಆಗಲಿದೆ" ಎಂಬ ಆತಂಕ ಅವರದ್ದು.
ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ಅವರು, "ಉದ್ಯಾನವು ಬರೀ ವಾಯು ವಿಹಾರಿಗಳಿಗೆ ಸೀಮಿತವಾಗಿಲ್ಲ. ʼವಸುದೈವ ಕುಟುಂಬಕಂʼ ಎಂಬಂತೆ ಜೀವವೈವಿಧ್ಯತೆ ತಾಣವಾಗಿದೆ. ಲಾಲ್‌ಬಾಗ್ ಉದ್ಯಾನಕ್ಕೆ ಉತ್ತರ ಭಾರತ, ಮಧ್ಯ ಏಷ್ಯಾ, ಯೂರೋಪ್ ರಾಷ್ಟ್ರಗಳಿಂದ ಸಂತಾನ ಅಭಿವೃದ್ಧಿಗಾಗಿ ಪಕ್ಷಿಗಳು ವಲಸೆ ಬರುತ್ತವೆ. ಸುಮಾರು 40-50 ಪಕ್ಷಿಗಳು ಚಳಿಗಾಲದಲ್ಲಿ ವಲಸೆ ಬರಲಿವೆ. ಇಂತಹ ಪರಿಸರದಲ್ಲಿ ಟನಲ್ ರಸ್ತೆ ಯೋಜನೆಯಿಂದ ಪಕ್ಷಿಗಳ ಆವಾಸ್ಥಾನ ಹಾಗೂ ಸಂತಿತಿಗೆ ಕುಂದು ಬರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
195 ಪ್ರಬೇಧದ ಪಕ್ಷಿಗಳ ಆವಾಸ ಸ್ಥಾನ
ಲಾಲ್‌ಬಾಗ್‌ನಲ್ಲಿ ಒಟ್ಟು 195 ಪ್ರಬೇಧದ ಪಕ್ಷಿಗಳನ್ನು ದಾಖಲಿಸಲಾಗಿದೆ. ಸಾರ್ವಜನಿಕರೇ ಒಟ್ಟು 2600ಕ್ಕೂ ಹೆಚ್ಚು ಬಾರಿ ಪಕ್ಷಿ ವೀಕ್ಷಣೆಗಳನ್ನು ದಾಖಲಿಸಿದ್ದಾರೆ. ವಲಸೆ ಪಕ್ಷಿಗಳು ಹಾಗೂ ಇಲ್ಲಿಯೇ ಇರುವ ಪಕ್ಷಿಗಳು ಸಂತಾನೋತ್ಪತ್ತಿಯಲ್ಲಿ ತೊಡಗಿಸಿಕೊಳ್ಳುತ್ತವೆ. ಸೂಕ್ತ ಆಹಾರ, ಸಂರಕ್ಷಿತ ಜಾಗ ಇರುವ ಕಾರಣ ಪಕ್ಷಿಗಳಿಗೆ ಲಾಲ್‌ಬಾಗ್ ಆಶ್ರಯ ತಾಣವಾಗಿದೆ. ಹೀಗಿರುವಾಗ ಪಕ್ಷಿಗಳಿಗೆ ಹಾನಿ ಮಾಡದಂರೆ ಪರಿಸರ ರಕ್ಷಣೆ ಮಾಡಿ, ಸಮತೋಲನ ಕಾಯ್ದುಕೊಳ್ಳಬೇಕು ಎಂದು ಜೆ.ಎನ್.ಪ್ರಸಾದ್ ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರಿಗೆ ಪಕ್ಷಿ ವೀಕ್ಷಣೆ ಹಾಗೂ ಪಕ್ಷಿಗಳ ಪ್ರಾಮುಖ್ಯತೆಯ ಅರಿವು ಮೂಡಿಸುವ ಸಲುವಾಗಿ ಕಾರ್ನಲ್ ಲ್ಯಾಬ್ ಆಫ್ ಆರ್ನಿಥಾಲಜಿ ಎಂಬ ಸಂಸ್ಥೆ ಇ-ಬರ್ಡ್ ಯೋಜನೆ ರೂಪಿಸಿದೆ. ಈ ಯೋಜನೆಯಲ್ಲಿ ಪಕ್ಷಿಗಳ ವೀಕ್ಷಣೆ, ಅವುಗಳ ಭಾವಚಿತ್ರ, ಧ್ವನಿ ಸಂಗ್ರಹ ನಿರ್ವಹಣೆ ಮಾಡುವುದರಿಂದ ಹಿಡಿದು ಯಾವ ಜಾತಿಗೆ ಸೇರಿದ ಪಕ್ಷಿ, ಅವುಗಳ ಮೂಲ ಸ್ಥಾನ, ವಲಸೆ ಹಾಗೂ ಪಕ್ಷಿಗಳ ನೈಜ ಸಮಯದ ನಕ್ಷೆ ದಾಖಲಿಸಲಾಗುತ್ತದೆ. ಇದು ಪಕ್ಷಿ ವೀಕ್ಷಕರ ಸಮುದಾಯಕ್ಕೆ ಅತ್ಯಂತ ಪ್ರಸ್ತುತ ಮತ್ತು ಉಪಯುಕ್ತ ಮಾಹಿತಿ ಒದಗಿಸುತ್ತಿದೆ. ಇ-ಬರ್ಡ್ ಯೋಜನೆಯಡಿ ವಾರ್ಷಿಕವಾಗಿ ವಿಶ್ವದಾದ್ಯಂತ 100 ಮಿಲಿಯನ್‌ಗಿಂತಲೂ ಹೆಚ್ಚು ಪಕ್ಷಿ ವೀಕ್ಷಣೆಗಳನ್ನು ದಾಖಲಿಸಲಾಗುತ್ತಿದೆ. ಈ ಯೋಜನೆಯಡಿ ನೂರಾರು ಪಾಲುದಾರ ಸಂಸ್ಥೆಗಳು, ಸಾವಿರಾರು ತಜ್ಞರು ಮತ್ತು ಬಳಕೆದಾರರು ಸಕ್ರಿಯವಾಗಿದ್ದಾರೆ. ಇದೇ ಸಂಸ್ಥೆ ಲಾಲ್‌ಬಾಗ್‌ನಲ್ಲಿ ನಡೆಸಿದ ಪಕ್ಷಿ ಪ್ರಬೇಧಗಳ ಅಧ್ಯಯನದಲ್ಲಿ ಒಟ್ಟು 195 ಜಾತಿಯ ಪಕ್ಷಿ ಸಂತತಿ ಇರುವುದು ಪತ್ತೆಯಾಗಿದೆ.
ಸಂತಾನ ಅಭಿವೃದ್ಧಿಗೆ ಸಮಸ್ಯೆ ಹೇಗೆ?
ಪಕ್ಷಿಗಳು ತಮ್ಮ ಧ್ವನಿಯಿಂದಲೇ ಸಂಗಾತಿಯನ್ನು ಆಕರ್ಷಿಸುತ್ತವೆ. ಶಬ್ದಮಾಲಿನ್ಯ ಕಡಿಮೆ ಇರುವ ಪ್ರದೇಶಗಳಲ್ಲಿ ಪಕ್ಷಿಗಳ ಕೂಗು ಉತ್ತಮವಾಗಿ ಕೇಳಿ ಬರುತ್ತದೆ. ವಾಹನಗಳ ಶಬ್ದ ಮಾಲಿನ್ಯ ಹೆಚ್ಚಾಗಿರುವ ಬೆಂಗಳೂರಿನಂತಹ ನಗರಗಳಲ್ಲಿ ಪಕ್ಷಿಗಳ ಪರಸ್ಪರ ಸಂವಹನ ಕಷ್ಟಸಾಧ್ಯವಾಗಿದೆ. ಆಹಾರ ಸಿಕ್ಕರೂ, ತನ್ನ ಶತ್ರುಗಳು ಹತ್ತಿರಕ್ಕೆ ಬರುತ್ತಿದ್ದಾರೆ ಎಂದು ಎಚ್ಚರಿಸಲು ಧ್ವನಿಯೇ ಪಕ್ಷಿಗಳ ಸಂವಹನ ವ್ಯವಸ್ಥೆಯಾಗಿದೆ.
ಇತ್ತೀಚೆಗೆ ವಾಹನಗಳ ಹಾರನ್‌ನಿಂದಾಗಿ ಪಕ್ಷಿಗಳ ಸಂತಾನೋತ್ಪತ್ತಿ ಕ್ಷೀಣಿಸುತ್ತಿದೆ. ಉದಾಹರಣೆಗೆ ಹಾಡು ಹಕ್ಕಿಗಳು (ಸಾಂಗ್ ಬರ್ಡ್) ಈ ಶಬ್ದಮಾಲಿನ್ಯದಿಂದ ಸಂಗಾತಿಗಳನ್ನು ಆಕರ್ಷಿಸಲು ಎತ್ತರಿಸಿದ ಧ್ವನಿಯಲ್ಲಿ ಶಬ್ಧ ಮಾಡಬೇಕಾಗುತ್ತದೆ. ಆಗ ಅವುಗಳ ವರ್ತನೆ ಬದಲಾಗಿ, ಆಯುಷ್ಯಕ್ಕೂ ಕುತ್ತು ಬರಲಿದೆ. ಲಾಲ್‌ಬಾಗ್ ಸುತ್ತಮುತ್ತ ಪೀಕ್ ಅವರ್‌ಗಳಲ್ಲಿ ಹೆಚ್ಚು ವಾಹನ ದಟ್ಟಣೆ ಇರುವುದರಿಂದ ವಿನಾಕಾರಣ ಹಾರನ್‌ಗಳ ಸದ್ದು ಕಿವಿಗಡಚಿಕ್ಕುವಂತೆ ಇರುತ್ತದೆ. ಇದರಿಂದ ಪಕ್ಷಿಗಳಲ್ಲಿ ಸಂವಹನ ಕೊರತೆ ಉಂಟಾಗಿ ಸಂತಾನ ಅಭಿವೃದ್ಧಿ ಕ್ಷೀಣಿಸಲಿದೆ.
ಮಡಿವಾಳ ಪಕ್ಷಿ(Oriental magpie-robin)ಯನ್ನು ಸಾಂಗ್ ಬರ್ಡ್ ಎಂದು ಕರೆಯಲಾಗುತ್ತದೆ. ಇದು ಬೇಸಿಗೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ತನ್ನ ಹಾಡಿನ ಮೂಲಕವೇ ಹೆಣ್ಣು ಪಕ್ಷಿಯನ್ನು ಆಕರ್ಷಿಸುತ್ತದೆ. ಬೇಸಿಗೆಯು ಇದರ ಸಂತಾನ ಕಾಲ. ಹೆಣ್ಣನ್ನು ಆಕರ್ಷಿಸುವ ಜತೆಗೆ ಗಂಡು ಪಕ್ಷಿ ಬಂದರೆ ಎಚ್ಚರಿಕೆ ಸಹ ನೀಡುತ್ತದೆ. ಶಬ್ದಮಾಲಿನ್ಯ ಹೆಚ್ಚಿರುವ ಸಂದರ್ಭಗಳಲ್ಲಿ ಇದರ ಧ್ವನಿಯು ಸಂಗಾತಿಗೆ ಕೇಳಿಸುವುದಿಲ್ಲ. ಆಗ ಪಕ್ಷಿಗಳು ಪರಸ್ಪರ ಸೇರದೇ ಸಂತಾನಾಭಿವೃದ್ಧಿ ಕ್ಷೀಣಿಸಲಿದೆ ಎಂದು ಜೆ.ಎನ್. ಪ್ರಸಾದ್ ವಿವರಿಸಿದರು.
ಲಾಲ್‌ಬಾಗ್‌ನಲ್ಲಿ ಯಾವ್ಯಾವ ಪಕ್ಷಿಗಳಿವೆ?
ಲಾಲ್‌ಬಾಗ್ ಉದ್ಯಾನವು ಪಕ್ಷಿಗಳಿಗೆ ಸ್ವರ್ಗದಂತಿದೆ. ಪಕ್ಷಿ ವೀಕ್ಷಕರಿಗೆ ಅದೊಂದು ವಿಶ್ವವಿದ್ಯಾಲಯ. ಇಲ್ಲಿ ಒಟ್ಟು ೧೯೫ ಪ್ರಬೇಧದ ಪಕ್ಷಿಗಳನ್ನು ಗುರುತಿಸಲಾಗಿದೆ. ಸುಮಾರು 40-50 ಪಕ್ಷಿಗಳು ವಲಸೆ ಪಕ್ಷಿಗಳಾಗಿವೆ. ಇಲ್ಲಿನ ಪಕ್ಷಿಗಳಲ್ಲಿ ಮೈನಾ, ಪಾರಿವಾಳ, ವರ್ಡಿಟರ್ ನೊಣಹಿಡುಕ, ಯುರೇಷಿಯನ್ ಗೋಲ್ಡನ್ ಓರಿಯೊಲ್, ಬೂದು ತಲೆಯ ಸ್ಟಾರ್ಲಿಂಗ್, ಕಪ್ಪು ಡ್ರೊಂಗೊ, ಆಶಿ ಡ್ರೊಂಗೊ, ಗುಲಾಬಿ ಉಂಗುರದ ಪ್ಯಾರಕೀಟ್, ಕಪ್ಪು ಗಿಡುಗ, ಬ್ರಾಹ್ಮಿನಿ ಕೈಟ್, ಪುಟ್ಟ ನೀರುಕಾಗೆ, ದೊಡ್ಡ ನೀರುಕಾಗೆ, ಡಾರ್ಟರ್, ಏಷ್ಯನ್ ಕೋಯಲ್ ಗಂಡು- ಹೆಣ್ಣು, ದೊಡ್ಡ ಪೈಡ್ ವ್ಯಾಗ್ಟೇಲ್, ಮನೆ ಕಾಗೆ, ನೇರಳೆ ನೀರಿನ ಕೋಳಿ (ನೇರಳೆ ಮೂರ್ಹೆನ್), ಗೋವು, ಬಿಳಿ ಕೆನ್ನೆಯ ಬಾರ್ಬೆಟ್, ಸಾಮಾನ್ಯ ಕೂಟ್‌ಗೆ ಆವಾಸಸ್ಥಾನವಾಗಿದೆ.
2ನೇ ಭಾನುವಾರ ಪಕ್ಷಿ ವೀಕ್ಷಣೆ
ಲಾಲ್‌ಬಾಗ್‌ನಲ್ಲಿ ಪ್ರತಿ ತಿಂಗಳ ಎರಡನೇ ಭಾನುವಾರ ಪಕ್ಷಿ ವೀಕ್ಷಣೆ ಇರಲಿದೆ. ಕಳೆದ 54 ವರ್ಷಗಳಿಂದ ಪಕ್ಷಿ ವೀಕ್ಷಣೆ ಜತೆಗೆ ಮರ ಗಿಡ, ಕೀಟಗಳು ಹಾಗೂ ಇನ್ನಿತರೆ ಜೀವವೈವಿಧ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಹೀಗಿರುವಾಗ ಟನಲ್ ರಸ್ತೆಯಿಂದ ಪಕ್ಷಿಗಳಿಗೆ ಆಗುವ ಹಾನಿಯನ್ನು ಪರಾಮರ್ಶಿಸಿ, ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಟನಲ್ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಂದ ಹಂತ ಹಂತವಾಗಿ ಕಾಡು ನಾಶವಾಗಿ ಮಾಲಿನ್ಯ ಹೆಚ್ಚಲಿದೆ. ಪಕ್ಷಿಗಳು ಪರಸರ ಸಂರಕ್ಷನೆಯಲ್ಲಿ ತೊಡಗಿದರೆ, ಮನುಷ್ಯ ಮಾತ್ರ ಪರಿಸರವನ್ನು ತನಗೆ ಹೇಗೆ ಬೇಕೋ ಹಾಗೆ ಬಳಸಿಕೊಂಡು ಹಾನಿ ಮಾಡುತ್ತಿದ್ದಾನೆ ಎಂದರು.
ನಮ್ಮ ಹಲವು ಧಾರ್ಮಿಕ ಆಚರಣೆಗಳು ಪರಿಸರ ರಕ್ಷಣೆಯೊಂದಿಗೆ ಥಳುಕು ಹಾಕಿಕೊಂಡಿವೆ. ಆದರೆ, ಇತ್ತೀಚೆಗೆ ಹಣದಾಸೆಗಾಗಿ ಪರಿಸರವನ್ನೂ ಹಾಳು ಮಾಡುತ್ತಿದ್ದೇವೆ. ನಾವು ಆಚರಿಸುವ ತುಳಸಿ ಹಬ್ಬದಂದು ತುಳಸಿ, ನೆಲ್ಲಿಕಾಯಿಗಳನ್ನು ದೈವಿಕ ರೂಪದಲ್ಲಿ ಪೂಜಿಸುತ್ತೇವೆ. ಅದಕ್ಕಾಗಿ ಬೆಳೆದಿರುವ ಗಿಡಗಳ ಕೊಂಬಗಳನ್ನು ಕಡಿದು ಹಣಕ್ಕಾಗಿ ಮಾರಾಟ ಮಾಡುತ್ತಿದ್ದೇವೆ. ಅದರ ಬದಲು ತುಳಸಿ ಪೂಜೆಯಲ್ಲಿ ಪ್ರತಿಯೊಬ್ಬರು ಒಂದು ಸಸಿ ನೆಟ್ಟರೆ ಪರಿಸರ ಪೋಷಿಸಿದಂತಾಗುತ್ತದೆ ಎಂದು ಪ್ರಸಾದ್ ಅಭಿಪ್ರಾಯಪಟ್ಟರು.
ಮನುಷ್ಯನಿಗೆ ಸಂವಹನ ಹಾಗೂ ತಿಳಿವಳಿಕೆ ಕೊರತೆ, ಪರಿಸರ ಮಹತ್ವದ ಅರಿವಿಲ್ಲದ ಕಾರಣ ಪರಿಸರ ನಾಶವಾಗುತ್ತಿದೆ. ಬೆಂಗಳೂರಿನಲ್ಲಿ ಕಾರ್ಯಸಾಧುವಲ್ಲದ ಟನಲ್ ರಸ್ತೆ ಯೋಜನೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದರ ಬದಲು ಪರ್ಯಾಯ ಮಾರ್ಗಗಳ ಅನ್ವೇಷಣೆ ಒತ್ತು ನೀಡಬೇಕು ಎಂದು ಹೇಳಿದರು.
ಸ್ವರ್ಗವನ್ನೇ ಧರೆಗಿಳಿಸುವ ಪುಷ್ಪಲೋಕ
ಲಾಲ್‌ಬಾಗ್‌ನಲ್ಲಿ ವರ್ಷಕ್ಕೆ ಎರಡು ಬಾರಿ ಪುಷ್ಪ ಪ್ರದರ್ಶನ ನಡೆಯುತ್ತದೆ. ಒಂದೊಂದು ಬಾರಿಯೂ ಉತ್ತಮ ಸಂದೇಶದೊಂದಿಗೆ ಪುಷ್ಪ ಪ್ರದರ್ಶನ ನಡೆಯಲಿದೆ. ಈ ಸಮಯದಲ್ಲಿ ಉದ್ಯಾನವು ಸಂಪೂರ್ಣ ಹೂಗಳಿಂದ ಅರಳಿ ಪರಿಸರಾಸಕ್ತರನ್ನು ಕೈ ಬೀಸಿ ಕರೆಯುತ್ತದೆ. ತರಹೇವಾರಿ ಹೂಗಳಿಂದಲೇ ಸ್ಮಾರಕ, ಪ್ರಾಣಿಗಳು ಅಥವಾ ಇತರ ಆಕಾರಗಳನ್ನು ಸೃಷ್ಟಿಸಲಾಗುತ್ತದೆ.
ದೇಶ ವಿದೇಶಗಳಿಂದ ಪುಷ್ಪ ಪ್ರದರ್ಶನಕ್ಕೆ ಹೂಗಳನ್ನು ತರಿಸಲಾಗುತ್ತದೆ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಇಲ್ಲಿ ಪುಷ್ಪ ಪ್ರದರ್ಶನ ನಡೆಯುತ್ತದೆ. ಇದಲ್ಲದೇ ಉದ್ಯಾನದಲ್ಲಿ ರಾಣಿ ವಿಕ್ಟೋರಿಯಾ, ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿ ಹಲವು ನಾಯಕರ ಪ್ರತಿಮೆಗಳಿವೆ. ಉದ್ಯಾನದ ಹೃದಯಭಾಗದಲ್ಲಿ ವಜ್ರದ ಆಕಾರದ ಗಾಜಿನ ಮನೆಯಿದೆ. ಇಂತಹ ಅದ್ಭುತ ಪರಿಸರದಲ್ಲಿ ಸುರಂಗ ಮಾರ್ಗ ನಿರ್ಮಿಸಿದರೆ ಅಪಾಯದ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಯೋಜನೆ ಮರು ಪರಿಶೀಲಿಸಬೇಕು ಎಂದು ಪ್ರಸಾದ್ ಒತ್ತಾಯಿಸಿದರು.

