
Yash Birthday| ಸ್ಯಾಂಡಲ್‌ವುಡ್ ಟು ಪ್ಯಾನ್‌ಇಂಡಿಯಾ ಸ್ಟಾರ್ ಯಶ್‌ಗೆ 40ರ ಸಂಭ್ರಮ
ಮೈಸೂರಿನ ಸಾಮಾನ್ಯ ಬಸ್ ಚಾಲಕನ ಮಗನಾಗಿ ಜನಿಸಿದ ಯಶ್ ನಟನಾಗುವ ದೊಡ್ಡ ಕನಸಿನೊಂದಿಗೆ ಕೇವಲ 300 ರೂಪಾಯಿ ಹಿಡಿದುಕೊಂಡು ಬೆಂಗಳೂರಿಗೆ ಬಂದು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.
ಸ್ಯಾಂಡಲ್‌ವುಡ್ ನಟ ರಾಕಿಂಗ್ ಸ್ಟಾರ್ ನಟ, ಕೆಜಿಎಫ್ ಖಾತಿಯ ʻರಾಕಿ ಭಾಯ್ʼ ಎಂದೇ ಖ್ಯಾತಿಯಾಗಿರುವ ನಟ ಯಶ್ ಅವರಿಗೆ ಇಂದು 40ನೇ ಹುಟ್ಟುಹಬ್ಬದ ಸಂಭ್ರಮ. ಮೈಸೂರಿನ ಸಾಮಾನ್ಯ ಕುಟುಂಬದಿಂದ ಬಂದ ನವೀನ್ ಕುಮಾರ್ ಗೌಡ ಎಂಬ ಯುವಕ ಇಂದು ʻಕೆಜಿಎಫ್ʼ ಸಿನಿಮಾ ಖ್ಯಾತಿಯಿಂದಾಗಿ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ 'ರಾಕಿ ಭಾಯ್' ಆಗಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ಯಶ್ ಅವರ ಆರಂಭಿಕ ದಿನಗಳು ಅಷ್ಟು ಸುಲಭವಾಗಿರಲಿಲ್ಲ. ಅವರ ತಂದೆ ಅರುಣ್ ಕುಮಾರ್ ಅವರು ಬಿಎಂಟಿಸಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಯಶ್ ಅವರಿಗೆ ಬಾಲ್ಯದಿಂದಲೇ ನಟನೆಯತ್ತ ಒಲವಿತ್ತು. ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಅವರು ಕೇವಲ 300 ರೂಪಾಯಿಗಳನ್ನು ಕೈಯಲ್ಲಿ ಹಿಡಿದುಕೊಂಡು ಮೈಸೂರಿನಿಂದ ಬೆಂಗಳೂರಿಗೆ ಬಂದರು. ನಾಟಕ ರಂಗದ ಹಿನ್ನೆಲೆಯಿಂದ ಬಂದ ಅವರು, ಆರಂಭದಲ್ಲಿ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ಕಿರುತೆರೆಗೆ ಪಾದಾರ್ಪಣೆ ಮಾಡಿ 'ನಂದ ಗೋಕುಲ' ಮತ್ತು 'ಉತ್ತರಾಯಣ' ಅಂತಹ ಧಾರಾವಾಹಿಗಳ ಮೂಲಕ ಮನೆಮಾತಾದರು. ಈ ನಡುವೆ ಅವರಿಗೆ ಬೆಳ್ಳಿತೆರೆಯ ಬಾಗಿಲು ತೆರೆಯಿತು.
ಸಿನಿಮಾ ನಟನೆಗೂ ಮೊದಲು ಯಶ್ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.
ಚಿತ್ರರಂಗಕ್ಕೆ ಬಂದ ಹೊಸತರಲ್ಲಿ 'ಜಂಬದ ಹುಡುಗಿ' ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ಯಶ್, ನಂತರ 'ಮೊಗ್ಗಿನ ಮನಸು' ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡರು. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಪಡೆದರು. ಅಲ್ಲಿಂದ ಶುರುವಾದ ಅವರ ಗೆಲುವಿನ ಯಾತ್ರೆ 'ಕಿರಾತಕ', 'ಡ್ರಾಮಾ', 'ಗೂಗ್ಲಿ', 'ರಾಜಾಹುಲಿ', ಮತ್ತು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರಗಳ ಮೂಲಕ ಯಶಸ್ಸಿನ ಉತ್ತುಂಗಕ್ಕೇರಿತು. ಆದರೆ ಯಶ್ ಅವರು ನಟಿಸಿದ ಪ್ರಶಾಂತ್ ನೀಲ್ ನಿರ್ದೇಶನದ 'ಕೆ.ಜಿ.ಎಫ್' ಸಿನಿಮಾ ಯಶ್ ಅವರನ್ನು ರಾತ್ರೋರಾತ್ರಿ ಪ್ಯಾನ್ ಇಂಡಿಯಾ ಸ್ಟಾರ್ ಅನ್ನಾಗಿ ಮಾಡಿತು.
ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ನಟ ಯಶ್
'ಕೆ.ಜಿ.ಎಫ್' ಚಾಪ್ಟರ್ 1 ಮತ್ತು ಚಾಪ್ಟರ್ 2 ಚಿತ್ರಗಳು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆಗಳನ್ನು ಬರೆದವು. ಯಶ್ ಅವರ ಅಭಿನಯ, ಮ್ಯಾನರಿಸಂ ಮತ್ತು ಅವರ ಬದ್ಧತೆ ಇಡೀ ದೇಶವನ್ನೇ ತಿರುಗಿ ನೋಡುವಂತೆ ಮಾಡಿತು. ಕನ್ನಡ ಸಿನಿಮಾ ಎಂದರೆ ಕೇವಲ ಸೀಮಿತ ಮಾರುಕಟ್ಟೆ ಎಂಬ ಕಾಲವೊಂದಿತ್ತು, ಆದರೆ ಯಶ್ ಆ ಗಡಿಯನ್ನು ಮುರಿದು ಹಾಕಿದರು. ಕನ್ನಡದ ಚಿತ್ರವೊಂದು ಸಾವಿರ ಕೋಟಿಗೂ ಅಧಿಕ ಗಳಿಕೆ ಮಾಡಬಲ್ಲದು ಎಂದು ಅವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಈ ಸಾಧನೆಯಿಂದಾಗಿ ಇಂದು ಬಾಲಿವುಡ್ ಸೇರಿದಂತೆ ಇತರ ಭಾಷೆಯ ನಿರ್ದೇಶಕರು ಯಶ್ ಅವರ ಅಭಿಮಾನಿಯಾಗಿದ್ದಾರೆ.
ಕೆಜಿಎಫ್ ಸಿನಿಮಾದ ಮೂಲಕ ಪ್ಯಾನ್‌ಸ್ಟಾರ್ ಆಗಿ ಹೊರಹೊಮ್ಮಿದ ಯಶ್
ಕಿರುತೆರೆಯಲ್ಲಿ ಒಟ್ಟಾಗಿ ನಟಿಸಿ, ನಂತರ ಹಿರಿತೆರೆಗೆ ಬಂದ ಯಶ್ ಹಾಗೂ ರಾಧಿಕಾ ಪಂಡಿತ್ ಪರಸ್ಪರ ಪ್ರೀತಿಸಿ 2016ರ ಡಿಸೆಂಬರ್ 9ರಂದು ವಿವಾಹವಾಗಿದ್ದರು. ಇವರಿಗೆ ಐರಾ ಹಾಗೂ ಯಥರ್ವ್ ಎಂಬ ಎರಡು ಮಕ್ಕಳು ಇದ್ದಾರೆ.
ಯಶ್ - ರಾಧಿಕಾ
ಇಂದು ಯಶ್ ಹುಟ್ಟುಹಬ್ಬದ ಹಿನ್ನೆಲೆ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ʼ ಟಾಕ್ಸಿಕ್ʼ ಸಿನಿಮಾದ ಟೀಸರ್ ಇಂದು ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ ಟೀಸರ್ ರಿಲೀಸ್ ಮಾಡುವ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ. ಈಗಾಗಲೇ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ʼನಮ್ಮ ಮೆಟ್ರೋʼರೈಲಿನಲ್ಲಿ ಜಾಹಿರಾತುಗಳನ್ನು ನೀಡಿ ಶುಭಾಶಯ ಕೋರಿದ್ದಾರೆ. ಇಡೀ ಮೆಟ್ರೋ ರೈಲಿನಲ್ಲಿ ಯಶ್ ಭಾವಚಿತ್ರಗಳು ರಾರಾಜಿಸುತ್ತಿವೆ.
ಮೆಟ್ರೋ ರೈಲಿನಲ್ಲಿ ರಾರಾಜಿಸುತ್ತಿರುವ ನಟ ಯಶ್
ಯಶ್ ಹುಟ್ಟುಹಬ್ಬ ತಮ್ಮ ಅಭಿಮಾನಿಗಳೊಂದಿಗೆ ಆಚರಿಸುತ್ತಿಲ್ಲ ಎಂದು ಈಗಾಗಲೇ ಸಂದೇಶ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನೀವು ನನ್ನನ್ನು ಭೇಟಿಯಾಗಲು ಎಷ್ಟು ಕಾಯುತ್ತಿದ್ದೀರಿ ಎಂದು ನನಗೆ ತಿಳಿದಿದೆ. ನಿಮ್ಮೆಲ್ಲರನ್ನೂ ನೋಡಲು ನಾನು ಅಷ್ಟೇ ಹಾತೊರೆಯುತ್ತಿದ್ದೆ. ಈ ವರ್ಷ ನನ್ನ ಹುಟ್ಟುಹಬ್ಬದಂದು ನಿಮ್ಮನ್ನು ಭೇಟಿ ಮಾಡಲು ನಾನು ನಿಜವಾಗಿಯೂ ಬಯಸಿದ್ದೆ, ಆದರೆ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ನಿಮಗಾಗಿ ಸಿದ್ಧವಾಗುವಂತೆ ಚಿತ್ರವನ್ನು ಪೂರ್ಣಗೊಳಿಸುವಲ್ಲಿ ನಾನು ಸಂಪೂರ್ಣವಾಗಿ ಮಗ್ನನಾಗಿದ್ದೇನೆ. ಈ ಕಾರಣದಿಂದಾಗಿ, ನಾನು ಇನ್ನೂ ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳ ನಂತರ ಮತ್ತೆ ಯಶ್ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದು, ಈಗಾಗಲೇ ಟಾಕ್ಸಿಕ್ ಚಿತ್ರದ 5 ಪಾತ್ರಗಳ ಪರಿಚಯ ಮಾಡಲಾಗಿದೆ. ಮಾರ್ಚ್ 19ಕ್ಕೆ ಟಾಕ್ಸಿಕ್ ವಿಶ್ವದಾದ್ಯಂತ ರಿಲೀಸ್ ಆಗಲಿದೆ.

