
ನಮ್ಮ ಮೆಟ್ರೋ ರೈಲಿನಲ್ಲಿ ರಾರಾಜಿಸಿದ ರಾಕಿ ಭಾಯ್
ಯಶ್ ಹುಟ್ಟುಹಬ್ಬಕ್ಕೆ ಗಿಫ್ಟ್; ʼನಮ್ಮ ಮೆಟ್ರೋʼದಲ್ಲಿ 'ರಾಕಿಂಗ್ ಸ್ಟಾರ್' ಜಾಹೀರಾತು
ಕಳೆದ ವರ್ಷ ಕಟೌಟ್ ಕಟ್ಟುವಾಗ ನಡೆದ ದುರಂತದಲ್ಲಿ ಮೂವರು ಯಶ್ ಅಭಿಮಾನಿಗಳು ಮೃತಪಟ್ಟಿದ್ದರು. ಆ ನಂತರ ಕಟೌಟ್ ಸಂಸ್ಕೃತಿ ಕೈ ಬಿಡಲಾಗಿತ್ತು. ಈಗ ಮೆಟ್ರೋದಂತಹ ಸುರಕ್ಷಿತ ಮಾರ್ಗದಲ್ಲಿ ಜಾಹೀರಾತು ಹಾಕಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸ್ಯಾಂಡಲ್‌ವುಡ್ 'ರಾಕಿಂಗ್ ಸ್ಟಾರ್' ಯಶ್ 40ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಬೆಂಗಳೂರಿನ 'ನಮ್ಮ ಮೆಟ್ರೋ' ದಲ್ಲಿ ಜಾಹೀರಾತು ನೀಡುವ ಮೂಲಕ ಅಭಿಮಾನ ಮೆರೆದಿದ್ದಾರೆ. ಇಡೀ ಮೆಟ್ರೋ ರೈಲಿನಲ್ಲಿ ಯಶ್ ಚಿತ್ರವಿರುವ ಜಾಹೀರಾತು ರಾರಾಜಿಸುತ್ತಿದೆ.
ಬಿಎಂಆರ್‌ಸಿಎಲ್ ಇತ್ತೀಚೆಗಷ್ಟೇ ಮೆಟ್ರೋ ರೈಲುಗಳ ಮೇಲೆ ಜಾಹೀರಾತು ನೀಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ಅವಕಾಶ ಬಳಸಿಕೊಂಡು ಯಶ್ ಅವರ ಚಿತ್ರವನ್ನು ಜಾಹೀರಾತು ರೂಪದಲ್ಲಿ ಪ್ರಕಟಿಸಲಾಗಿದೆ. ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬರ ಫೋಟೋ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರದರ್ಶನವಾಗುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಜಾಹೀರಾತಿನ ಹಿಂದೆ 'ಟಾಕ್ಸಿಕ್' ಚಿತ್ರತಂಡವಿದೆಯೇ ಅಥವಾ ಅಭಿಮಾನಿಗಳಿದ್ದಾರೆಯೇ ಎಂಬ ಕುತೂಹಲ ಮೂಡಿತ್ತಾದರೂ ಯಶ್ ಅವರ ಸ್ನೇಹಿತರೇ ಈ ವಿನೂತನ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಗದಗದಲ್ಲಿ ಕಟೌಟ್ ಕಟ್ಟುವಾಗ ಸಂಭವಿಸಿದ ದುರಂತದಲ್ಲಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಆ ಘಟನೆಯಿಂದ ನೊಂದಿದ್ದ ಯಶ್ ಅವರು, ಅಭಿಮಾನಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ, ಪ್ರಾಣಾಪಾಯವಿರುವ ಕಟೌಟ್ ಸಂಸ್ಕೃತಿ ಬದಿಗಿಟ್ಟು ಮೆಟ್ರೋದಂತಹ ಸುರಕ್ಷಿತ ಮಾಧ್ಯಮದ ಮೂಲಕ ಹುಟ್ಟುಹಬ್ಬ ಆಚರಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಸ್ತುತ ಯಶ್ ಚಿತ್ರವಿರುವ ಮೆಟ್ರೋ ಸಂಚರಿಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಜ.8ರಂದು ಯಶ್ ಅವರ 40ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದು, 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಇದುವರೆಗೆ ಕಾಣಿಸಿಕೊಳ್ಳದ ವಿಭಿನ್ನ ಹಾಗೂ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭೂಗತಲೋಕದ ಮಾಫಿಯಾ ಮತ್ತು ಗ್ಯಾಂಗ್‌ಸ್ಟರ್ ಕಥಾಹಂದರ ಹೊಂದಿರುವ ಈ ಸಿನಿಮಾ ಜಾಗತಿಕ ಮಟ್ಟದ ಗುಣಮಟ್ಟದೊಂದಿಗೆ ಸಿದ್ಧವಾಗುತ್ತಿದೆ. ಮೂಲಗಳ ಪ್ರಕಾರ, ಈ ಟೀಸರ್ ಅತ್ಯಂತ ರಗಡ್ ಮತ್ತು ಕ್ಲಾಸಿಕ್ ಆಗಿರಲಿದೆ ಎಂದು ತಿಳಿದುಬಂದಿದೆ.
ಚಿತ್ರದಲ್ಲಿ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರಂತಹ ಘಟಾನುಘಟಿ ಕಲಾವಿದರು ನಟಿಸುತ್ತಿರುವುದು ವಿಶೇಷ. ಈಗಾಗಲೇ ಇವರ ಪಾತ್ರಗಳ ಫಸ್ಟ್ ಲುಕ್ ಪೋಸ್ಟರ್‌ಗಳು ಸಖತ್ ಗಮನ ಸೆಳೆದಿವೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಅದ್ಧೂರಿಯಾಗಿ ಮೂಡಿಬರುತ್ತಿದೆ. ಮಾರ್ಚ್ 19ರಂದು ಯುಗಾದಿ ಹಬ್ಬದ ವಿಶೇಷವಾಗಿ ಸಿನಿಮಾ ವಿಶ್ವದಾದ್ಯಂತ ತೆರೆಕಾಣಲಿದ್ದು, ಅದಕ್ಕೂ ಮುನ್ನ ಜನವರಿ 8ರಂದು ಬಿಡುಗಡೆಯಾಗಲಿರುವ ಟೀಸರ್ ಕಣ್ತುಂಬಿಕೊಳ್ಳಲು ಸಿನಿ ರಸಿಕರು ಸಜ್ಜಾಗಿದ್ದಾರೆ.

