
Toxic Movie| ಯಶ್ 'ಟಾಕ್ಸಿಕ್'ನಲ್ಲಿ ರುಕ್ಮಿಣಿ ವಸಂತ್; ಫಸ್ಟ್ ಲುಕ್ ರಿವೀಲ್
ರುಕ್ಮಿಣಿ ವಸಂತ್ ಅವರು 'ಮೆಲಿಸ್ಸಾ' ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದು ಕಥೆಗೆ ದೊಡ್ಡ ಟ್ವಿಸ್ಟ್ ನೀಡುವಂತಹ ಆಕ್ಷನ್ ಹಾಗೂ ಡ್ರಾಮಾ ಒಳಗೊಂಡ ಪಾತ್ರ ಎಂದು ಹೇಳಲಾಗುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರತಂಡದಿಂದ ಇಂದು ಮತ್ತೊಂದು ಭರ್ಜರಿ ಅಪ್‌ಡೇಟ್ ಹೊರಬಿದ್ದಿದೆ. ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್ ಅವರು 'ಮೆಲಿಸ್ಸಾ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರತಂಡ ಬಿಡುಗಡೆ ಮಾಡಿರುವ ರುಕ್ಮಿಣಿ ಅವರ ಫಸ್ಟ್ ಲುಕ್ ಪೋಸ್ಟರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ. 1960ರ ದಶಕದ ರೆಟ್ರೋ ಹಿನ್ನೆಲೆಯಲ್ಲಿ, ಮಬ್ಬಾದ ಬೆಳಕಿನ ಪಾರ್ಟಿ ವಾತಾವರಣದಲ್ಲಿ ರುಕ್ಮಿಣಿ ಅವರು ಅತ್ಯಂತ ಆತ್ಮವಿಶ್ವಾಸದಿಂದ ಕಣ್ಣುಗಳಲ್ಲಿ ತೀಕ್ಷ್ಣತೆ ತುಂಬಿ ನಡೆದು ಬರುತ್ತಿರುವ ನೋಟ ಎಲ್ಲರ ಗಮನ ಸೆಳೆಯುತ್ತಿದೆ. 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿದ್ದ ರುಕ್ಮಿಣಿ, ಈಗ 'ಟಾಕ್ಸಿಕ್' ಮೂಲಕ ಅಂತರಾಷ್ಟ್ರೀಯ ಮಟ್ಟದ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಯಶ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ರುಕ್ಮಿಣಿ ಅವರ ನಟನಾ ಕೌಶಲ್ಯವನ್ನು ಶ್ಲಾಘಿಸಿದ್ದು, "ರುಕ್ಮಿಣಿ ಕೇವಲ ನಟಿಯಲ್ಲ, ಅವರು ಪಾತ್ರವನ್ನು ಆಳವಾಗಿ ಅರ್ಥೈಸಿಕೊಳ್ಳುವ ಬುದ್ಧಿವಂತ ಕಲಾವಿದೆ. ಅವರ ಕಣ್ಣುಗಳು ಮತ್ತು ಮೌನ ಕೂಡ ತೆರೆಯ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕಿಯಾರಾ ಅಡ್ವಾಣಿ (ನಾದಿಯಾ), ನಯನತಾರಾ (ಗಂಗಾ), ಹುಮಾ ಖುರೇಶಿ (ಎಲಿಜಬೆತ್) ಮತ್ತು ತಾರಾ ಸುತಾರಿಯಾ (ರೆಬೆಕಾ) ಅವರ ಪಾತ್ರಗಳನ್ನು ಪರಿಚಯಿಸಲಾಗಿತ್ತು, ಈಗ ಮೆಲಿಸ್ಸಾ ಪಾತ್ರದ ಸೇರ್ಪಡೆಯೊಂದಿಗೆ ಚಿತ್ರದ ತಾರಾಗಣ ಮತ್ತಷ್ಟು ಬಲಿಷ್ಠವಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಮಾರ್ಚ್ 19ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಫಸ್ಟ್ ಲುಕ್ ಪೋಸ್ಟರ್ ಇಲ್ಲಿದೆ
ಮಹಿಳಾ ಪ್ರಧಾನವೇ 'ಟಾಕ್ಸಿಕ್' ಅಸ್ತ್ರ?
ಚಿತ್ರದ ಟೈಟಲ್ ಪೋಸ್ಟರ್‌ನಿಂದ ಹಿಡಿದು ಇಲ್ಲಿಯವರೆಗೆ ಬಿಡುಗಡೆಯಾಗಿರುವ ನಟಿಯರ ಲುಕ್ ಗಮನಿಸಿದರೆ, ಇದು ಮಹಿಳಾ ಪಾತ್ರಗಳ ಸುತ್ತ ಹೆಣೆಯಲಾದ ಕಥೆ ಎನಿಸುತ್ತಿದೆ.
• ನಯನತಾರಾ: ಅತ್ಯಂತ ಶಕ್ತಿಶಾಲಿ ಮತ್ತು ಗಂಭೀರ ಪಾತ್ರ.
• ಕಿಯಾರಾ ಅಡ್ವಾಣಿ: ಚಿತ್ರದ ಪ್ರಮುಖ ಆಕರ್ಷಣೆ.
• ಹುಮಾ ಖುರೇಷಿ: ಖಳನಾಯಕಿ ಪಾತ್ರದಲ್ಲಿ, ರಗಡ್ ಲುಕ್‌ನಲ್ಲಿ ಅಬ್ಬರಿಸಲು ಸಜ್ಜು.
• ತಾರಾ ಸುತಾರಿಯಾ: ಸೀಕ್ರೆಟ್ ಮಿಷನ್‌ನಲ್ಲಿರುವ ಏಜೆಂಟ್. ಈ ನಾಲ್ವರು ನಟಿಯರು ಚಿತ್ರದ ಯಾವುದೋ ಒಂದು 'ಸೀಕ್ರೆಟ್ ಆಪರೇಷನ್' ಅಥವಾ 'ಕ್ರೈಮ್ ಸಿಂಡಿಕೇಟ್'ನ ಭಾಗವಾಗಿರುವುದು ಪಕ್ಕಾ ಎನ್ನಲಾಗುತ್ತಿದೆ.

