
ಸೆನ್ಸಾರ್ ಕಟ್ಸ್‌ನಿಂದ ಪರಾಶಕ್ತಿ ವಿಳಂಬ
ಶಿವಕಾರ್ತಿಕೇಯನ್ 'ಪರಾಶಕ್ತಿ' ಚಿತ್ರಕ್ಕೆ 23 ಸೆನ್ಸಾರ್ ಕಟ್ಸ್; ಜನವರಿ 10ಕ್ಕೆ ಪರಾಶಕ್ತಿ ರಿಲೀಸ್ ಆಗುತ್ತಾ?
1960ರ ದಶಕದ ಮದ್ರಾಸ್‌ನಲ್ಲಿ ನಡೆದ ಹಿಂದಿ ವಿರೋಧಿ ಹೋರಾಟದ ನೈಜ ಘಟನೆಗಳನ್ನು ಆಧರಿಸಿದ ಈ ಸಿನಿಮಾದಲ್ಲಿರುವ ರಾಜಕೀಯ ಸಂಭಾಷಣೆ ಹಾಗೂ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ.
ತಮಿಳು ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳು ದಳಪತಿ ವಿಜಯ್ ನಟನೆಯ 'ಜನ ನಾಯಕನ್' ಮತ್ತು ಶಿವಕಾರ್ತಿಕೇಯನ್ ಅಭಿನಯದ 'ಪರಾಶಕ್ತಿ' ಚಿತ್ರಗಳ ಬಿಡುಗಡೆಗೆ ಸೆನ್ಸಾರ್ ಮಂಡಳಿಯಿಂದ ಅಡೆತಡೆ ಉಂಟಾಗಿದೆ. ಈ ಬಾರಿ ಪೊಂಗಲ್ ಹಬ್ಬದ ಪ್ರಯುಕ್ತ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಹಣಾಹಣಿಗೆ ಸಜ್ಜಾಗಿದ್ದ ಈ ಎರಡೂ ಚಿತ್ರಗಳು, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಇನ್ನು ಕೂಡ ಪ್ರಮಾಣಪತ್ರ ಪಡೆಯದ ಕಾರಣ ಚಿತ್ರದ ಬಿಡುಗಡೆ ಅತಂತ್ರ ಸ್ಥಿತಿಯಲ್ಲಿದೆ.
ಸುಧಾ ಕೊಂಗರಾ ನಿರ್ದೇಶನದ 'ಪರಾಶಕ್ತಿ' ಚಿತ್ರದಲ್ಲಿ ಶಿವಕಾರ್ತಿಕೇಯನ್ ಜೊತೆಗೆ ಜಯಂ ರವಿ ಮತ್ತು ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 1960ರ ದಶಕದ ಮದ್ರಾಸ್‌ನಲ್ಲಿ ನಡೆದ ಹಿಂದಿ ವಿರೋಧಿ ಹೋರಾಟದ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಜನವರಿ 7 ರಂದು ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯು, ಸಿನಿಮಾದಲ್ಲಿರುವ ರಾಜಕೀಯ ಸಂಘರ್ಷ ಹಾಗೂ ಹಿಂದಿ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದ ಕೆಲವು ಪ್ರಮುಖ ದೃಶ್ಯಗಳು ಮತ್ತು ಸಂಭಾಷಣೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸುಮಾರು 23 ಕಟ್‌ಗಳನ್ನು ಮಾಡಿದ ನಂತರವಷ್ಟೇ ಚಿತ್ರಕ್ಕೆ ಪ್ರಮಾಣಪತ್ರ ನೀಡುವುದಾಗಿ ಮಂಡಳಿ ತಿಳಿಸಿತ್ತು.
ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿರುವ ನಿರ್ದೇಶಕಿ ಸುಧಾ ಕೊಂಗರಾ, ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿ ಮುಂಬೈನಲ್ಲಿರುವ ರಿವೈಸಿಂಗ್ ಕಮಿಟಿಯ ಮೊರೆ ಹೋಗಿದ್ದಾರೆ. ಈ ಕಟ್‌ಗಳಿಂದ ಸಿನಿಮಾದ ಕಥೆಯ ಹರಿವು ಮತ್ತು ಐತಿಹಾಸಿಕ ಸಂದರ್ಭಕ್ಕೆ ಧಕ್ಕೆಯಾಗಲಿದೆ ಎಂಬುದು ಅವರ ವಾದವಾಗಿದೆ. ಚಿತ್ರದಲ್ಲಿ ಶಿವಕಾರ್ತಿಕೇಯನ್ ಹೋರಾಟದಲ್ಲಿ ತೊಡಗಿರುವ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ 25ನೇ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಸಿನಿಮಾ ಜನವರಿ 10 ರಂದು ತೆರೆಗೆ ಬರಲು ಸಿದ್ಧವಾಗಿತ್ತು. ಆದರೆ, ಗುರುವಾರ ಸಂಜೆವರೆಗೂ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಕ್ಕಿಲ್ಲ. ಶುಕ್ರವಾರದ ಒಳಗಾಗಿ ಕ್ಲಿಯರೆನ್ಸ್ ಸಿಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಶ್ರೀಲೀಲಾಗೆ ಮೊದಲ ತಮಿಳ್ ಸಿನಿಮಾ
ಸುಮಾರು 150 ರಿಂದ 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ 'ಪರಾಶಕ್ತಿ' ಸಿನಿಮಾದಲ್ಲಿ ರವಿ ಮೋಹನ್, ಅಥರ್ವ ಮುರಳಿ ಮತ್ತು ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀಲೀಲಾಗೆ ಇದು ತಮಿಳು ಚಿತ್ರರಂಗದಲ್ಲಿ ಮೊದಲ ಸಿನಿಮಾವಾಗಿದೆ.
ಈ ಗೊಂದಲದ ನಡುವೆಯೇ ಚಿತ್ರದ ಯುರೋಪ್ ವಿತರಕರಾದ '4 ಸೀಸನ್ಸ್ ಕ್ರಿಯೇಷನ್ಸ್' ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಸಿನಿಮಾ ನಿಗದಿಯಂತೆ ಜನವರಿ 10 ರಂದೇ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ. ನೆದರ್ಲ್ಯಾಂಡ್ಸ್‌ನಲ್ಲಿ ರೊಟರ್‌ಡ್ಯಾಮ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಕಾರಣ ಅಲ್ಲಿನ ಪ್ರದರ್ಶನಗಳು ರದ್ದಾಗಿದ್ದರೂ, ಉಳಿದ ಕಡೆಗಳಲ್ಲಿ ಬಿಡುಗಡೆ ಖಚಿತ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದೆಡೆ, ಚಲನಚಿತ್ರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಅವರು ಚಿತ್ರದ ಪತ್ರಿಕಾ ಜಾಹೀರಾತನ್ನು ಹಂಚಿಕೊಂಡಿದ್ದು, ಅದರಲ್ಲಿ ಸಿನಿಮಾ ಶನಿವಾರವೇ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ. ಆದರೆ ಸೆನ್ಸಾರ್ ಪ್ರಮಾಣಪತ್ರ ಸಿಗುವವರೆಗೂ ಚಿತ್ರಮಂದಿರಗಳು ಬುಕ್ಕಿಂಗ್ ಆರಂಭಿಸಲು ಸಾಧ್ಯವಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಬುಕ್‌ಮೈ ಶೋನಲ್ಲಿ ಕೇವಲ ಚೆನ್ನೈನ ಹೊರವಲಯದ ಮೂರು ಚಿತ್ರಮಂದಿರಗಳಲ್ಲಿ ಮಾತ್ರ ಟಿಕೆಟ್ ಲಭ್ಯವಿದೆ.
ಪೋಸ್ಟರ್‌ಗಳು ಮತ್ತು ಪ್ರಚಾರದ ಮೂಲಕ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರುವ 'ಪರಾಶಕ್ತಿ' ಚಿತ್ರತಂಡ, ಚೆನ್ನೈನ ವಳ್ಳುವರ್ ಕೊಟ್ಟಂನಲ್ಲಿ ಸಿನಿಮಾ ಸೆಟ್‌ಗಳನ್ನು ಮರುಸೃಷ್ಟಿಸಿ ಪ್ರದರ್ಶನ ಆಯೋಜಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ. ಆದರೂ, ಸೆನ್ಸಾರ್ ಮಂಡಳಿಯ ಅಂತಿಮ ನಿರ್ಧಾರದ ಮೇಲೆ ಚಿತ್ರದ ಬಿಡುಗಡೆ ಯಾವಾಗ ಎಂದು ನಿರ್ಧಾರವಾಗಲಿದೆ.

