
ದಳಪತಿ ವಿಜಯ್ ದಾಖಲೆ ಮುರಿದ ಶಿವಕಾರ್ತಿಕೇಯನ್ ಅವರ 'ಪರಾಶಕ್ತಿ' ಟ್ರೈಲರ್
1960ರ ದಶಕದ ತಮಿಳುನಾಡಿನ ಹಿಂದಿ ಹೇರಿಕೆ ವಿರೋಧಿ ಚಳವಳಿಯನ್ನು ಆಧರಿಸಿದ ಐತಿಹಾಸಿಕ ಮತ್ತು ರಾಜಕೀಯ ಕಥಾಹಂದರ ಈ ಚಿತ್ರದಲ್ಲಿದೆ.
ತಮಿಳು ಚಿತ್ರರಂಗದ ಇತಿಹಾಸದಲ್ಲಿ ಇಂದು ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಬಹುನಿರೀಕ್ಷಿತ ನಟ ಶಿವಕಾರ್ತಿಕೇಯನ್ ಅವರ 25ನೇ ಸಿನಿಮಾ 'ಪರಾಶಕ್ತಿ' ಚಿತ್ರದ ಟ್ರೈಲರ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 42 ಮಿಲಿಯನ್ ವೀಕ್ಷಣೆಗಳನ್ನು ಪಡೆಯುವ ಮೂಲಕ ಇಂಟರ್ನೆಟ್ ಲೋಕದಲ್ಲಿ ಹೊಸ `ಡಿಜಿಟಲ್ ಸುನಾಮಿ' ಸೃಷ್ಟಿಸಿದೆ. ಈ ಮೂಲಕ ಈ ಚಿತ್ರವು ತಮಿಳು ಚಿತ್ರರಂಗದ ದಿಗ್ಗಜ ನಟ ದಳಪತಿ ವಿಜಯ್ ಅವರ 'ಜನನಾಯಕನ್' ಚಿತ್ರದ ದಾಖಲೆಯನ್ನೇ (34 ಮಿಲಿಯನ್ ವೀಕ್ಷಣೆ) ಹಿಂದಿಕ್ಕಿರುವುದು ವಿಶೇಷ.
'ಪರಾಶಕ್ತಿ' ಚಿತ್ರದ ಟ್ರೈಲರ್ ಇಲ್ಲಿದೆ..
ಚಿತ್ರಕ್ಕೆ ರವಿ ಕೆ. ಚಂದ್ರನ್ ಅವರ ಛಾಯಾಗ್ರಹಣ ಹಾಗೂ ಜಿ.ವಿ. ಪ್ರಕಾಶ್ ಕುಮಾರ್ ಅವರ ಅದ್ಭುತ ಹಿನ್ನೆಲೆ ಸಂಗೀತವಿದ್ದು, 60ರ ದಶಕದ ಕಾಲಘಟ್ಟವನ್ನು ಅತ್ಯಂತ ನೈಜವಾಗಿ ತೆರೆಯ ಮೇಲೆ ತರಲಾಗಿದೆ. ಇದರಲ್ಲಿ ರಾಜಕಾರಣಿ ಅಣ್ಣಾದೊರೈ ಅವರ ಉಲ್ಲೇಖಗಳು ಮತ್ತು ದ್ರಾವಿಡ ಚಳವಳಿಯ ಪ್ರಭಾವ ಪ್ರೇಕ್ಷಕರಿಗೆ ರೋಮಾಂಚನ ನೀಡುತ್ತಿದೆ. ಡಾನ್ ಪಿಕ್ಚರ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಈ ಬೃಹತ್ ಚಿತ್ರವನ್ನು ನಿರ್ಮಿಸಿವೆ.
ಪೊಂಗಲ್ ಬಾಕ್ಸ್ ಆಫೀಸ್ ಹಣಾಹಣಿ
ಜನವರಿ 10ರಂದು ಸಂಕ್ರಾಂತಿ (ಪೊಂಗಲ್) ಹಬ್ಬದ ಪ್ರಯುಕ್ತ ಈ ಸಿನಿಮಾ ವಿಶ್ವದಾದ್ಯಂತ ತೆರೆಕಾಣಲಿದೆ. ಇದು ದಳಪತಿ ವಿಜಯ್ ಅವರ 'ಜನನಾಯಕನ್' ಚಿತ್ರದೊಂದಿಗೆ ನೇರ ಪೈಪೋಟಿ ನಡೆಸುತ್ತಿದ್ದು, ಈಗಾಗಲೇ ಡಿಜಿಟಲ್ ಲೋಕದಲ್ಲಿ ಶಿವಕಾರ್ತಿಕೇಯನ್ ಅವರ 'ಪರಾಶಕ್ತಿ' ಮೇಲುಗೈ ಸಾಧಿಸಿದೆ.

