ಸಿನಿಮಾ ಚಿತ್ರೀಕರಣದಲ್ಲಿ  8-ಗಂಟೆಗಳ  ಶಿಫ್ಟ್‌ ಬೇಡಿಕೆಯಿಟ್ಟ ದೀಪಿಕಾ; ಕನ್ನಡ ನಟಿಯರು ಹೇಳುವುದೇನು?
x

ನಟಿಯರು 

ಸಿನಿಮಾ ಚಿತ್ರೀಕರಣದಲ್ಲಿ 8-ಗಂಟೆಗಳ ಶಿಫ್ಟ್‌ ಬೇಡಿಕೆಯಿಟ್ಟ ದೀಪಿಕಾ; ಕನ್ನಡ ನಟಿಯರು ಹೇಳುವುದೇನು?

ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ಕಲಾವಿದರು ಸಿದ್ಧರಾಗಲು ಕನಿಷ್ಠ 2-3 ಗಂಟೆಗಳು ಬೇಕಾಗುತ್ತವೆ. ಹೀಗಾಗಿ, ಕೇವಲ 8 ಗಂಟೆಗಳ ಶಿಫ್ಟ್ ಎಂದರೆ ನಿರ್ಮಾಪಕರಿಗೆ ನಷ್ಟವಾಗಬಹುದು. ನಮಗೂ ನಷ್ಟವಾಗಬಾರದು ಎಂದು ಅವರು ತಿಳಿಸಿದರು.


Click the Play button to hear this message in audio format

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಸಿನಿಮಾ ಚಿತ್ರೀಕರಣ ವೇಳೆ ಬಿಡುವಿಲ್ಲದ ಕೆಲಸದ ಅವಧಿಗಳ ಬಗ್ಗೆ ಧ್ವನಿ ಎತ್ತಿರುವುದು ದೇಶಾದ್ಯಂತ ಸಿನಿಮಾ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಅವರು ದಿನಕ್ಕೆ ಕೇವಲ 8-ಗಂಟೆಗಳ ಶಿಫ್ಟ್‌ಗೆ ಬೇಡಿಕೆ ಇಟ್ಟಿರುವುದು ಹಾಗೂ ಈ ಬೇಡಿಕೆಗೆ ಒಪ್ಪದ ನಿರ್ದೇಶಕರ ದೊಡ್ಡ ಪ್ರಾಜೆಕ್ಟ್‌ನಿಂದಲೇ ದೀಪಿಕಾ ಹೊರನಡೆದಿದ್ದು, ಭಾರೀ ಸುದ್ದಿಯಾಗಿದೆ. ಈ ಬೇಡಿಕೆ ನಿಜಕ್ಕೂ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದೆಯೇ? ಮತ್ತು ಇದು ಕೇವಲ ಬಾಲಿವುಡ್‌ಗೆ ಸೀಮಿತವೇ ಅಥವಾ ಕನ್ನಡ ಚಿತ್ರರಂಗದ ಮೇಲೆ ಪರಿಣಾಮ ಬೀರಲಿದೆಯೇ?

ದೀಪಿಕಾ ಅವರ ವಾದವು ಕೇವಲ ಅವರ ವೈಯಕ್ತಿಕ ಅನುಕೂಲಕ್ಕಾಗಿ ಅಲ್ಲ. ಅವರು ತಮ್ಮ ಬೇಡಿಕೆಯ ಹಿಂದಿನ ಪ್ರಬಲ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. ಹಲವಾರು ಪುರುಷ ಸೂಪರ್‌ಸ್ಟಾರ್‌ಗಳು ವರ್ಷಗಳಿಂದಲೂ ದಿನಕ್ಕೆ 8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡುತ್ತಿದ್ದಾರೆ ಮತ್ತು ಇದು ಎಂದಿಗೂ ಸುದ್ದಿಯಾಗಿಲ್ಲ. ಆದರೆ, ಒಬ್ಬ ಮಹಿಳೆಯಾಗಿ ಇದೇ ಬೇಡಿಕೆ ಇಟ್ಟಾಗ, ಅದನ್ನು ಟೀಕಿಸಲಾಗುತ್ತಿದೆ. ಈ ಹೇಳಿಕೆಯು ಉದ್ಯಮದಲ್ಲಿನ ಲಿಂಗ ಸಮಾನತೆಯ ಕೊರತೆ ಮತ್ತು ಮಹಿಳಾ ನಟಿಯರು ಎದುರಿಸುವ 'ಡಬಲ್ ಸ್ಟ್ಯಾಂಡರ್ಡ್' ಅನ್ನು ಎತ್ತಿ ತೋರಿಸುತ್ತದೆ. ಈ ದೈತ್ಯ ಬೇಡಿಕೆಯು ಇಡೀ ಚಿತ್ರತಂಡಕ್ಕೆ ನಿಗದಿತ ಕೆಲಸದ ಅವಧಿ, ಓವರ್‌ಟೈಮ್‌ಗೆ ನ್ಯಾಯಯುತ ಪಾವತಿ ಮತ್ತು ಮಾನಸಿಕ ಆರೋಗ್ಯ ಬೆಂಬಲದ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳುತ್ತದೆ.

ಈ ಬಗ್ಗೆ ಕನ್ನಡ ಕಲಾವಿದರು ಹೇಳುವುದೇನು?

ದೀಪಿಕಾ ಅವರ ಈ ನಡೆ ಕನ್ನಡ ಚಿತ್ರರಂಗದ ಸದಸ್ಯರನ್ನೂ ಮಾತನಾಡಿಸಿದಾಗ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾದವು. ಚಿತ್ರರಂಗದ 'ರುಟೀನ್‌ ಕೆಲಸ' ಮತ್ತು 'ವೃತ್ತಿಪರ ಬದ್ಧತೆ'ಯ ಬಗ್ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ʻದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿರುವ ಕಿರಗೂರಿನ ಗಯ್ಯಾಳಿಗಳು ಖ್ಯಾತಿಯ ನಟಿ ಸೋನು ಗೌಡ, ಈ ವಿಷಯದಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

"ಧಾರಾವಾಹಿಗಳಲ್ಲಿ ಕಡ್ಡಾಯವಾಗಿ 8 ಗಂಟೆಗಳ ಕೆಲಸದ ಸಮಯ ಇರಬೇಕು, ಏಕೆಂದರೆ ಅಲ್ಲಿ ಒಂದೇ ಸ್ಥಳದಲ್ಲಿ ಶೂಟಿಂಗ್ ನಡೆಯುತ್ತದೆ. ಆದರೆ, ಚಲನಚಿತ್ರಗಳ ವಿಷಯ ಬಂದಾಗ ಪರಿಸ್ಥಿತಿ ಭಿನ್ನ. ಚಲನಚಿತ್ರಗಳ ಶೂಟಿಂಗ್‌ನಲ್ಲಿ ಪ್ರತಿದಿನ ಬೇರೆ ಬೇರೆ ಸ್ಥಳಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ನೀವು ಎಲ್ಲವನ್ನೂ ಒಂದೇ ಸಮಯದಲ್ಲಿ ಬಯಸುವಂತಿಲ್ಲ. ಇದು ನಿಯಮ ಆಗಬಾರದು," ಎಂದು ಸೋನು ಗೌಡ ಅಭಿಪ್ರಾಯಪಡುತ್ತಾರೆ.

"8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಿದರೆ, ಮುಂದಿನ ಚಿತ್ರವನ್ನು ಯಾವ ನಿರ್ಮಾಪಕರು ಮಾಡುತ್ತಾರೆ? ವ್ಯವಹಾರದಲ್ಲಿ ದೊಡ್ಡ ಲಾಭ ಸಿಗುವಾಗ ಮಾತ್ರ ನಿರ್ಮಾಣ ಮಾಡಲು ಯಾರಾದರೂ ಬಯಸುತ್ತಾರೆ. ಹಿಂದೆ ನಾಯಕಿ ಪಾತ್ರಧಾರಿಗಳು ಕೆಲಸ ಮಾಡಿಲ್ಲವೇ?," ಎಂಬ ಪ್ರಶ್ನೆ ಮಾಡಿದ ಸೋನು ಗೌಡ, "ಇದು ನಮಗೆಲ್ಲಾ ಅಭ್ಯಾಸವಾಗಿದೆ, ನಾವು ಸೂಕ್ಷ್ಮವಾಗಿರಲು ಸಾಧ್ಯವಿಲ್ಲ," ಎಂಬ ನಿಲುವನ್ನು ವ್ಯಕ್ತಪಡಿಸಿದರು.

ಕೆಲಸದಲ್ಲಿ ಸಮತೋಲನ ಮುಖ್ಯ

ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, "ಕಲಾವಿದರು ಸಿದ್ಧರಾಗಲು (ಮೇಕಪ್ ಮತ್ತು ಕೇಶ ವಿನ್ಯಾಸ) ಕನಿಷ್ಠ 2-3 ಗಂಟೆಗಳು ಬೇಕಾಗುತ್ತವೆ. ಹೀಗಾಗಿ, ಕೇವಲ 8 ಗಂಟೆಗಳ ಶಿಫ್ಟ್ ಎಂದರೆ ನಿರ್ಮಾಪಕರಿಗೆ ನಷ್ಟವಾಗಬಹುದು. ನಮಗೂ ನಷ್ಟವಾಗಬಾರದು. ನಾವು ಕೆಲಸದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕು. ವೃತ್ತಿಪರ ಕರ್ತವ್ಯ ಮತ್ತು ವೈಯಕ್ತಿಕ ಆರೋಗ್ಯ ಎರಡನ್ನೂ ಸಮತೋಲನದಲ್ಲಿ ಇಡಬೇಕಾದರೆ ಸರಿಯಾದ ಕಮ್ಯೂನಿಕೇಶನ್‌ ಬಹಳ ಮುಖ್ಯ ಹಾಗೂ ನಾವು ಹೊಂದಿಕೊಂಡು ಹೋಗುವ ಮನೋಭಾವ ಬಹಳ ಮುಖ್ಯ," ಎಂದು 'ದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

"ನಾನೇ 24 ಗಂಟೆ, 36 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. ದಿನದಲ್ಲಿ ಮೂರು ಸಿನಿಮಾಗಳ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೇನೆ. ಕೆಲವೊಂದು ಸಿನಿಮಾಗಳನ್ನು ಇಂತಿಷ್ಟೆ ದಿನಗಳಲ್ಲಿ ಮುಗಿಸಿಕೊಡಬೇಕಾಗುತ್ತದೆ. ಆಗ ನಾವು ಕಲಾವಿದರು ಅದಕ್ಕೆ ಬೆಂಬಲ ನೀಡಬೇಕು. ಸಿನಿಮಾಗಳು ಆದಷ್ಟು ಬೇಗ ಮುಗಿದರೆ ಅದು ನಮಗೂ ಲಾಭವಾಗುತ್ತದೆ," ಎಂದು ಅವರು ಅಭಿಪ್ರಾಯಪಟ್ಟರು.

ಇಂತಿಷ್ಟೇ ಅವಧಿ ಇರಬೇಕು

"ದೊಡ್ಡಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಟಿ (ದೀಪಿಕಾ ಪಡುಕೋಣೆ) ಷರತ್ತು ವಿಧಿಸುವುದರಲ್ಲಿ ತಪ್ಪೇನಿಲ್ಲ. ಅವರಿಗೆ ಅವರದ್ದೇ ಆದ ಕುಟುಂಬವಿದೆ. ಮಗುವಿನ ಆರೈಕೆ ಮಾಡಬೇಕಿದೆ. ಹಾಗಾಗಿ, ಕೆಲವು ನಿಯಮ ಸಡಿಲಿಕೆ ಮಾಡುವಂತೆ ಕಲಾವಿದರು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯದಿಂದ ಇರಬೇಕಾದರೆ, ನಾವು ಕೂಡ ಇಂತಿಷ್ಟೇ ಅವಧಿ ಕೆಲಸ ಮಾಡಬೇಕು ಎಂಬುದು ನಿಯಮವಾಗಬೇಕಿದೆ' ಎಂಬು ನಟಿ ಶರ್ಮಿಳಾ ಮಾಂಡ್ರೆ ಅವರ ಅಭಿಪ್ರಾಯ.

ಮಾಳವಿಕ ಅವಿನಾಶ್‌ ಹೇಳುವುದು ಏನು?

ಹಿರಿಯ ನಟಿ ಮಾಳವಿಕ ಅವಿನಾಶ್‌, ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, ನಮ್ಮ ಕನ್ನಡ ಇಂಡಸ್ಟ್ರೀಯಲ್ಲಿ ನಾವು ಎಂಟು ಗಂಟೆಗಳ ಕಾಲ ಮಾತ್ರ ಕೆಲಸ ಮಾಡುತ್ತೇವೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

ಚಲನಚಿತ್ರ ಮಂಡಳಿ ನಿಲುವೇನು?

ಫಿಲ್ಮ್ ಚೇಂಬರ್ ಅಧ್ಯಕ್ಷ ಎಂ. ನರಸಿಂಹಲು ʻದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, "ಉದ್ಯಮದಲ್ಲಿ 8 ಗಂಟೆಗಳ ಕೆಲಸ ನಿಯಮವಿದೆ. ಆದರೆ ಹೆಚ್ಚು ಕೆಲಸದ ಸಮಯದ ಮಿತಿ ಸಂಬಂಧಪಟ್ಟವರ ಬದ್ಧತೆ ಮೇಲೆ ನಿಂತಿರುತ್ತದೆ. ಇದು ಉದ್ಯಮದಲ್ಲಿ ನಡೆಯುವ ಒಂದು ವ್ಯವಹಾರವಾಗಿದ್ದು, ಮೊದಲು ಅದರ ಬಗ್ಗೆ ಮಾತುಕತೆ ನಡೆದು ನಂತರ ಅದು ಮುಂದುವರಿಯುತ್ತದೆ," ಎಂದರು.

ಕನ್ನಡ ಚಿತ್ರರಂಗದ ಪ್ರಸ್ತುತ ಸ್ಥಿತಿಯ ಬಗ್ಗೆ ಮಾತನಾಡುತ್ತಾ, ಉದ್ಯಮವು 'ಕಾಂತಾರ'ದಂತಹ ಚಿತ್ರಗಳಿಂದ ರಾಷ್ಟ್ರಮಟ್ಟದಲ್ಲಿ ಮಿಂಚಿ ಉತ್ತಮವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ದೀಪಿಕಾ ಪಡುಕೋಣೆ ಅಭಿಪ್ರಾಯ ಬದಲಾವಣೆ ತರಬಲ್ಲುದೆ?

ದೀಪಿಕಾ ಪಡುಕೋಣೆ ಅವರ ಬೇಡಿಕೆಯು ಉದ್ಯಮದಲ್ಲಿ ದೊಡ್ಡ ಬದಲಾವಣೆಯನ್ನು ತರುವ ಸಾಧ್ಯತೆ ಇದೆ. ಇದು ಕೇವಲ ಅವರ ವೈಯಕ್ತಿಕ ಬೇಡಿಕೆಯಲ್ಲ, ಬದಲಿಗೆ ಇಡೀ ಉದ್ಯಮದ ಅಸ್ತವ್ಯಸ್ತತೆಯನ್ನು ಪ್ರಶ್ನಿಸುವ ಒಂದು ಹೆಜ್ಜೆಯಾಗಿದೆ. ಅವರಂತಹ ಎ-ಲಿಸ್ಟ್ ನಟಿಯರು ತಮ್ಮ ಪ್ರಭಾವವನ್ನು ಬಳಸಿಕೊಂಡು ಈ ವಿಷಯವನ್ನು ಮುನ್ನೆಲೆಗೆ ತರುವುದು, ತೆರೆಯ ಹಿಂದಿನ ನೂರಾರು ಸಿಬ್ಬಂದಿಗೆ ಅನುಕೂಲವಾಗುವಂತೆ ಕೆಲಸದ ವಾತಾವರಣ ಸುಧಾರಣೆಗೆ ನಾಂದಿ ಹಾಡಬಹುದು ಎಂಬುವುದು ಕೆಲ ವಿಶ್ಲೇಷಕರ ಅಭಿಪ್ರಾಯ.

ಸಿನಿಮಾ ಎಂದರೆ ಕೇವಲ ʼತಾರೆಯರ ಮಿಂಚುʼ ಮಾತ್ರವಲ್ಲ, ಅದು ಒಂದು ಸಂಕೀರ್ಣವಾದ ವ್ಯಾಪಾರ ಮತ್ತು ಕಲಾತ್ಮಕ ಸೃಷ್ಟಿಯ ಪ್ರಕ್ರಿಯೆ. ಅಲ್ಲಿ ನಟರ ವೈಯಕ್ತಿಕ ಅಗತ್ಯತೆ, ಸಿಬ್ಬಂದಿಯ ಮಾನವೀಯ ಹಕ್ಕು ಮತ್ತು ನಿರ್ಮಾಪಕರ ಹಣಕಾಸಿನ ಹಿತಾಸಕ್ತಿ, ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿವೆ. ದೀಪಿಕಾ ಅವರ ಈ ಧೈರ್ಯದ ನಡೆ ಒಂದು ಚರ್ಚೆಗೆ ಕಿಡಿ ಹೊತ್ತಿಸಿದ್ದು ನಿಜ. ಆರು ಗಂಟೆ ಮಾತ್ರ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತೇನೆ ಎಂಬ ಷರತ್ತು ವಿಧಿಸಿದ್ದರಿಂದಾಗಿ ದೀಪಿಕಾ ಪಡುಕೋಣೆ ಅವರನ್ನು 'ಸ್ಪಿರಿಟ್' ಎಂಬ ಸಿನಿಮಾದಿಂದ ಕೈಬಿಡಲಾಗಿತ್ತು.

Read More
Next Story