
ವದಂತಿಗೆ ತೆರೆ ಎಳೆದ ಜೋಡಿ| ವಿರೋಶ್ ಹೆಸರಿನಲ್ಲಿ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ವಿಜಯ್-ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಈಗ ಅಧಿಕೃತವಾಗಿದೆ. ಅಭಿಮಾನಿಗಳು ಪ್ರೀತಿಯಿಂದ ನೀಡಿದ 'ವಿರೋಶ್' ಹೆಸರಿನಲ್ಲೇ ಈ ಜೋಡಿ ದಾಂಪತ್ಯಕ್ಕೆ ಕಾಲಿಡಲಿದ್ದಾರೆ.
ನಟ ವಿಜಯ್ ದೇವರಕೊಂಡ ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ತಮ್ಮ ಮದುವೆಗೆ ಅಭಿಮಾನಿಗಳು ಪ್ರೀತಿಯಿಂದ ನೀಡಿದ ಹೆಸರನ್ನೇ ಇರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪತ್ರ ಹಂಚಿಕೊಂಡಿರುವ ಈ ಜೋಡಿ, `ದಿ ವೆಡ್ಡಿಂಗ್ ಆಫ್ ವಿರೋಶ್' ಎಂಬ ಹೆಸರಿನಲ್ಲಿ ವಿವಾಹವಾಗುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಅಭಿಮಾನಿಗಳು ವರ್ಷಗಳ ಹಿಂದೆಯೇ ವಿಜಯ್ ಮತ್ತು ರಶ್ಮಿಕಾ ಹೆಸರನ್ನು ಸೇರಿಸಿ 'ವಿರೋಶ್' ಎಂದು ಕರೆಯುತ್ತಿದ್ದರು. "ನಮಗಿಂತ ಮುಂಚಿತವಾಗಿಯೇ ನೀವು ನಮಗೊಂದು ಹೆಸರಿಟ್ಟಿದ್ದೀರಿ, ನಿಮ್ಮ ಗೌರವಾರ್ಥವಾಗಿ ನಮ್ಮ ಮದುವೆಗೆ ಇದೇ ಹೆಸರನ್ನು ನಾಮಕರಣ ಮಾಡುತ್ತಿದ್ದೇವೆ" ಎಂದು ದಂಪತಿಗಳು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮೂಲಗಳ ಪ್ರಕಾರ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಉದಯಪುರದ ಹೊರವಲಯದಲ್ಲಿರುವ ಅತ್ಯಾಧುನಿಕ ಐಷಾರಾಮಿ ಹೋಟೆಲ್ 'ದಿ ಮೆಮೆಂಟೋಸ್ ಬೈ ಐಟಿಸಿ ಹೋಟೆಲ್ಸ್' ಅಥವಾ 'ರಾಫೆಲ್ಸ್ ಉದಯಪುರ'ದಲ್ಲಿ ಈ ಮದುವೆ ನಡೆಯುವ ಸಾಧ್ಯತೆಯಿದೆ. ಇದು ಅತ್ಯಂತ ಆಪ್ತರ ಸಮ್ಮುಖದಲ್ಲಿ ನಡೆಯುವ ಖಾಸಗಿ ಸಮಾರಂಭವಾಗಿದ್ದು, ಚಿತ್ರರಂಗದ ಸಹೋದ್ಯೋಗಿಗಳಿಗೆ ಆಮಂತ್ರಣ ನೀಡಿಲ್ಲ ಎನ್ನಲಾಗಿದೆ. ಮದುವೆಯ ನಂತರ ಹೈದರಾಬಾದ್ ಮತ್ತು ಮುಂಬೈನಲ್ಲಿ ಎರಡು ಪ್ರತ್ಯೇಕ ಅದ್ಧೂರಿ ಔತಣ ಕೂಟಗಳನ್ನು ಆಯೋಜಿಸಲು ಈ ತಾರಾ ಜೋಡಿ ಯೋಜಿಸಿದೆ.
ವಿಮಾನ ನಿಲ್ದಾಣದಲ್ಲಿ ಮಿಂಚಿದ ತಾರಾ ಜೋಡಿ
ಸೋಮವಾರ ಬೆಳಿಗ್ಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಮತ್ತು ವಿಜಯ್ ಕಾಣಿಸಿಕೊಂಡಿದ್ದು, ಮದುವೆಯ ಸಂಭ್ರಮಕ್ಕಾಗಿ ರಾಜಸ್ಥಾನದ ಉದಯಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ರಶ್ಮಿಕಾ ಮಂದಣ್ಣ ಬಿಳಿ ಶರ್ಟ್ ಮತ್ತು ಗ್ರೇ ಬಣ್ಣದ ಬ್ಲೇಜರ್ ಧರಿಸಿ ಫಾರ್ಮಲ್ ಲುಕ್‌ನಲ್ಲಿ ಮಿಂಚುತ್ತಿದ್ದರು. ಮುಖದಲ್ಲಿ ಮದುವೆಯ ಸಂಭ್ರಮದ ನಗು ಎದ್ದು ಕಾಣುತ್ತಿತ್ತು. ಇತ್ತ ವಿಜಯ್ ದೇವರಕೊಂಡ ಅವರು ಕಣ್ಸೆಳೆಯುವ ಹೊಸ ಹೇರ್‌ಸ್ಟೈಲ್, ಬಿಳಿ ಬಣ್ಣದ ಶರ್ಟ್, ಕಪ್ಪು ಪ್ಯಾಂಟ್ ಹಾಗೂ ಸ್ಟೈಲಿಶ್ ಲೆದರ್ ಜಾಕೆಟ್ ಧರಿಸಿದ್ದರು. ಅವರ ಜೊತೆಗೆ ಸಹೋದರ ಆನಂದ್ ದೇವರಕೊಂಡ ಹಾಗೂ ಆಪ್ತ ಗೆಳೆಯರ ತಂಡವೂ ಸಾಥ್ ನೀಡಿದೆ.
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಮತ್ತು ವಿಜಯ್
ಪೂರ್ವಭಾವಿ ಕಾರ್ಯಕ್ರಮಗಳ ಸಂಭ್ರಮ
ಮದುವೆಯ ಸಂಭ್ರಮವು ಫೆಬ್ರವರಿ 24 ರಿಂದಲೇ ಆರಂಭವಾಗಲಿದೆ. ಮೊದಲ ದಿನ ಸಂಗೀತ ಮತ್ತು ಮೆಹೆಂದಿ ಕಾರ್ಯಕ್ರಮಗಳು ನಡೆಯಲಿದ್ದು, ಫೆಬ್ರವರಿ 25 ರಂದು ಅರಿಶಿನ ಶಾಸ್ತ್ರ ನೆರವೇರಲಿದೆ. ಫೆಬ್ರವರಿ 26 ರ ಶುಭ ದಿನದಂದು ವಿರೋಶ್ ಜೋಡಿ ಸಪ್ತಪದಿ ತುಳಿಯಲಿದ್ದಾರೆ.

