
ಸಪ್ತಪದಿ ತುಳಿಯಲು ಸಜ್ಜಾದ 'ಗೀತಾ ಗೋವಿಂದಂ' ವಿಜಯ್-ರಶ್ಮಿಕಾ
ವಿಜಯ್-ರಶ್ಮಿಕಾ ವಿವಾಹ| ರಶ್ಮಿಕಾ ಹಣೆಯ ಮೇಲಿನ ತಿಲಕ ಸಾಕ್ಷಿಯೇ?
ಸಪ್ತಪದಿ ತುಳಿಯಲು ಸಜ್ಜಾದ 'ಗೀತಾ ಗೋವಿಂದಂ' ವಿಜಯ್-ರಶ್ಮಿಕಾ ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಜೋಡಿ ಕಾಣಿಸಿಕೊಂಡಿದೆ.
ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ತಮ್ಮ ಅದ್ಧೂರಿ ವಿವಾಹ ಸಂಭ್ರಮಕ್ಕೆ ಮುನ್ನ, ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಶನಿವಾರ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ 'ಗೀತಾ ಗೋವಿಂದಂ' ಜೋಡಿ
ಮುಖಕ್ಕೆ ಮಾಸ್ಕ್ ಧರಿಸಿ ಹಾಗೂ ಕಣ್ಣಿಗೆ ಸನ್‌ಗ್ಲಾಸ್ ಹಾಕಿದ್ದ ಈ ಜೋಡಿ, ವಿಮಾನ ನಿಲ್ದಾಣಕ್ಕೆ ಏಕಕಾಲದಲ್ಲಿ ಆಗಮಿಸಿದರೂ ಪರಸ್ಪರ ಮಾತನಾಡದೆ ನೇರವಾಗಿ ಒಳಗೆ ಪ್ರವೇಶಿಸಿದರು. ವಿಜಯ್ ಅವರು ಲೈಟ್ ಬ್ರೌನ್ ವೆಸ್ಟ್ ಮತ್ತು ಲೆದರ್ ಜಾಕೆಟ್ ಧರಿಸಿದ್ದರೆ, ರಶ್ಮಿಕಾ ಅವರು ಬೂದು ಬಣ್ಣದ ಟಾಪ್ ಮತ್ತು ಕಪ್ಪು ಬಟ್ಟೆಯಲ್ಲಿ ಮಿಂಚಿದರು. ವಿಶೇಷವಾಗಿ ರಶ್ಮಿಕಾ ಅವರ ಹಣೆಯ ಮೇಲಿದ್ದ ಮಂಗಳಕರ ತಿಲಕ ನೆರೆದಿದ್ದವರ ಗಮನ ಸೆಳೆಯಿತು.
ಮುಖಕ್ಕೆ ಮಾಸ್ಕ್ ಧರಿಸಿ ಹಾಗೂ ಕಣ್ಣಿಗೆ ಸನ್‌ಗ್ಲಾಸ್ ಹಾಕಿದ್ದ ಈ ಜೋಡಿ, ವಿಮಾನ ನಿಲ್ದಾಣಕ್ಕೆ ಏಕಕಾಲದಲ್ಲಿ ಆಗಮಿಸಿದರೂ ಪರಸ್ಪರ ಮಾತನಾಡದೆ ನೇರವಾಗಿ ಒಳಗೆ ಪ್ರವೇಶಿಸಿದರು.
ಉದಯಪುರದಲ್ಲಿ ವಿವಾಹ, ಹೈದರಾಬಾದ್‌ನಲ್ಲಿ ಔತಣ
ವರದಿಗಳ ಪ್ರಕಾರ, ಫೆಬ್ರವರಿ 26 ರಂದು ಉದಯಪುರದ ಐಷಾರಾಮಿ ಹೆರಿಟೇಜ್ ಹೋಟೆಲ್ನಲ್ಲಿ ಕೇವಲ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ. ಮದುವೆಯ ನಂತರ ಮಾರ್ಚ್ 4ರಂದು ಹೈದರಾಬಾದ್ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಭವ್ಯವಾದ ಆರತಕ್ಷತೆ ಸಮಾರಂಭ ಆಯೋಜಿಸಲಾಗಿದೆ ಎನ್ನಲಾಗಿದೆ.
ಕಟ್ಟುನಿಟ್ಟಿನ ಭದ್ರತೆ ಮತ್ತು 'ನೋ-ಫೋನ್' ಪಾಲಿಸಿ
ಮದುವೆಯ ಮಾಹಿತಿಗಳು ಸೋರಿಕೆಯಾಗದಂತೆ ತಡೆಯಲು ಈ ಜೋಡಿ ವಿದೇಶಿ ಭದ್ರತಾ ಸಂಸ್ಥೆಯೊಂದನ್ನು ನೇಮಿಸಿಕೊಂಡಿದೆ. ವಿವಾಹದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗಳು ಈಗಾಗಲೇ ಎಮ್‌ಡಿಎ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಮದುವೆಯ ದಿನದಂದು ಅತಿಥಿಗಳಿಗೆ 'ನೋ ಫೋನ್' ಪಾಲಿಸಿಯನ್ನು ಜಾರಿಗೆ ತರಲಾಗಿದ್ದು, ಖಾಸಗಿತನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮೂರು ದಿನಗಳ ಕಾರ್ಯಕ್ರಮ
ಮೂಲಗಳ ಪ್ರಕಾರ, ಈ ವಿವಾಹ ಮಹೋತ್ಸವವು ಫೆಬ್ರವರಿ 24 ರಿಂದಲೇ ಆರಂಭವಾಗಲಿದೆ. ಮೊದಲ ಎರಡು ದಿನ ಹಳದಿ, ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಫೆಬ್ರವರಿ 26 ರಂದು ಕುಟುಂಬಸ್ಥರು ಹಾಗೂ ಆಪ್ತೇಷ್ಟರ ಸಮ್ಮುಖದಲ್ಲಿ ವಿಜಯ್ ಮತ್ತು ರಶ್ಮಿಕಾ ಹಸೆಮಣೆ ಏರಲಿದ್ದಾರೆ. ಈ ಸಮಾರಂಭವು ಅತ್ಯಂತ ಆಪ್ತ ವಲಯಕ್ಕೆ ಮಾತ್ರ ಸೀಮಿತವಾಗಿದ್ದು, ಮದುವೆಯ ಸಕಲ ಸಿದ್ಧತೆಗಳನ್ನು ಅತ್ಯಂತ ಗೌಪ್ಯವಾಗಿ ಮಾಡಲಾಗಿದೆ. ಮದುವೆಯ ಕೆಲಸಗಾರರು ಮತ್ತು ವೆಂಡರ್ಗಳಿಗೆ ಯಾವುದೇ ಮಾಹಿತಿ ಲೀಕ್ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ವೈರಲ್ ಆದ ವೆಡ್ಡಿಂಗ್ ಕಾರ್ಡ್
ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಸಹಿ ಇರುವ ವಿವಾಹದ ಆಮಂತ್ರಣ ಪತ್ರಿಕೆಯೊಂದು ಭಾರಿ ಸದ್ದು ಮಾಡಿತ್ತು. "ನಮ್ಮ ಕುಟುಂಬದ ಪ್ರೀತಿ ಮತ್ತು ಹಾರೈಕೆಯೊಂದಿಗೆ ನಾನು ಮತ್ತು ರಶ್ಮಿಕಾ ಫೆಬ್ರವರಿ 26 ರಂದು ಸರಳ ವಿವಾಹವಾಗುತ್ತಿದ್ದೇವೆ" ಎಂದು ವಿಜಯ್ ಹೆಸರಿನಲ್ಲಿ ಬರೆಯಲಾಗಿದ್ದ ಪತ್ರವು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಉದಯಪುರದಲ್ಲಿ ಮದುವೆ ಮುಗಿದ ನಂತರ, ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಭರ್ಜರಿ ಆರತಕ್ಷತೆ ನಡೆಯಲಿದ್ದು, ಅಲ್ಲಿ ಚಲನಚಿತ್ರ ರಂಗದ ಗಣ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ.

