
ರಶ್ಮಿಕಾ ಮಂದಣ್ಣ ಮೊದಲ ಆಡಿಷನ್ನಿಂದ 'ಪುಷ್ಪ' ಸ್ಟಾರ್ಡಮ್ವರೆಗಿನ ರೋಚಕ ಪಯಣ
ಆಡಿಷನ್ನಲ್ಲಿ ತಡಬಡಾಯಿಸುತ್ತಿದ್ದ ಹುಡುಗಿ ಇಂದು ಪ್ಯಾನ್ ಇಂಡಿಯಾ ಸ್ಟಾರ್ 100 ಕೋಟಿಯ ಒಡತಿ..
ರಶ್ಮಿಕಾ ಮಂದಣ್ಣ ಮೊದಲ ಆಡಿಷನ್ನಿಂದ 'ಪುಷ್ಪ' ಸ್ಟಾರ್ಡಮ್ವರೆಗಿನ ರೋಚಕ ಪಯಣ. ಕಿರಿಕ್ ಬೆಡಗಿಯ ಯಶಸ್ಸು, ನಿವ್ವಳ ಆಸ್ತಿ ಮತ್ತು ಸಿನಿಮಾ ಜರ್ನಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ಯಾಂಡಲ್ವುಡ್ 'ಕಿರಿಕ್ ಪಾರ್ಟಿ' ಮೂಲಕ ಸಿನಿಪಯಣ ಆರಂಭಿಸಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಇಂದು ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಪಾನ್-ಇಂಡಿಯನ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಅಂದು ಮೊದಲ ಆಡಿಷನ್ನಲ್ಲಿ ಕ್ಯಾಮರಾ ಮುಂದೆ ನಿಲ್ಲಲು ತಡಬಡಾಯಿಸುತ್ತಿದ್ದ ಹುಡುಗಿ, ಇಂದು 100 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿರುವ ಯಶಸ್ವಿ ನಟಿಯಾಗಿ ಬೆಳೆದು ನಿಂತಿರುವುದೇ ಒಂದು ರೋಚಕ.
ಆಡಿಷನ್ನಲ್ಲಿದ್ದ ಸಂಕೋಚ
ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದಾಗ ಅತೀವ ಭಯ ಮತ್ತು ಮುಗ್ಧತೆ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಕೆಂಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದ 19 ವರ್ಷದ ರಶ್ಮಿಕಾ, "ನಮಸ್ಕಾರ, ನಾನು ರಶ್ಮಿಕಾ. ನನಗೆ 19 ವರ್ಷ, ಎತ್ತರ 5'5. ಬಿಎ ಎರಡನೇ ವರ್ಷ ಓದುತ್ತಿದ್ದೇನೆ. ಆಡಿಷನ್ ನೀಡುತ್ತಿರುವುದು ಇದೇ ಮೊದಲು," ಎಂದು ಮೆಲುದನಿಯಲ್ಲಿ ಪರಿಚಯ ಮಾಡಿಕೊಂಡಿದ್ದರು. ಕನ್ನಡ ಸಂಭಾಷಣೆಗಳನ್ನು ಹೇಳಲು ಕಷ್ಟಪಡುತ್ತಿದ್ದ ಅವರು, ಒಂದು ಹಂತದಲ್ಲಿ "ನನಗೆ ಇದು ಸಾಧ್ಯವಾಗುತ್ತಿಲ್ಲ, ನನ್ನ ಕೈಲಿ ಆಗಲ್ಲ" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು.
ರಶ್ಮಿಕಾ ಮೊದಲ ಆಡಿಶನ್
ಆದರೆ ಅದೇ ಆಡಿಷನ್ನ ಎರಡನೇ ಭಾಗದಲ್ಲಿ ರಶ್ಮಿಕಾ ಅವರಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿತ್ತು. ಹೂವಿನ ವಿನ್ಯಾಸದ ಉಡುಪಿನಲ್ಲಿ ಕಾಣಿಸಿಕೊಂಡ ಅವರು ಹೆಚ್ಚು ಆತ್ಮವಿಶ್ವಾಸದಿಂದ ಡೈಲಾಗ್ಗಳನ್ನು ಹೇಳಲು ಯತ್ನಿಸಿದರು. ಇದೇ ವಿಡಿಯೋದಲ್ಲಿ ಅವರು ತಮ್ಮ ಪ್ರಸಿದ್ಧ 'ನಾಲಿಗೆ ಹೊರಚಾಚುವ' ಎಕ್ಸ್ಪ್ರೆಶನ್ ನೀಡಿದ್ದರು. ಅಷ್ಟೇ ಅಲ್ಲದೆ, ಮಾಧುರಿ ದೀಕ್ಷಿತ್ ಅವರ ಐಕಾನಿಕ್ ಹಾಡು 'ಆಜಾ ನಾಚಲೆ'ಗೆ ಲವಲವಿಕೆಯಿಂದ ಹೆಜ್ಜೆ ಹಾಕುವ ಮೂಲಕ ಸಂಕೋಚವನ್ನು ಕೊಡವಿ ಹಾಕಿದ್ದರು.
ರಶ್ಮಿಕಾ ಬದುಕಿನ ಮಹಾ ತಿರುವು ರಶ್ಮಿಕಾ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿದ್ದು 2016ರಲ್ಲಿ ತೆರೆಕಂಡ ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ. 2015ರಲ್ಲಿ ಬ್ಯೂಟಿ ಪೆಜೆಂಟ್ ಗೆದ್ದಿದ್ದ ರಶ್ಮಿಕಾ ಅವರ ಫ್ರೆಶ್ನೆಸ್ ಕಂಡ ರಿಷಬ್, ಅವರಿಗೆ 'ಸಾನ್ವಿ' ಪಾತ್ರದ ಆಫರ್ ನೀಡಿದರು. ರಕ್ಷಿತ್ ಶೆಟ್ಟಿ ಜೊತೆ ನಟಿಸಿದ ಈ ಚಿತ್ರ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಬ್ಲಾಕ್ಬ್ಲಾಸ್ಟರ್ ಎನಿಸಿಕೊಂಡಿತು. ವಿಮರ್ಶಕರು ಕೂಡ ರಶ್ಮಿಕಾ ಅವರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಇದಾದ ನಂತರ 'ಅಂಜನಿ ಪುತ್ರ', 'ಚಮಕ್' ನಂತಹ ಹಿಟ್ ಚಿತ್ರಗಳ ಮೂಲಕ ಕನ್ನಡದಲ್ಲಿ ಅವರು ಭದ್ರವಾದ ನೆಲೆ ಕಂಡುಕೊಂಡರು.
'ನ್ಯಾಷನಲ್ ಕ್ರಶ್' ಆಗಿ ಹೊರಹೊಮ್ಮಿದ ರಶ್ಮಿಕಾ
ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಅವರಿಗೆ 'ಗೀತಾ ಗೋವಿಂದಂ' ಚಿತ್ರ ಅಭೂತಪೂರ್ವ ಯಶಸ್ಸು ತಂದುಕೊಟ್ಟಿತು. ವಿಜಯ್ ದೇವರಕೊಂಡ ಅವರೊಂದಿಗಿನ ಇವರ ಕೆಮಿಸ್ಟ್ರಿ ಮತ್ತು 'ಇಂಕೇಮ್ ಇಂಕೇಮ್' ಹಾಡು ಇಡೀ ದೇಶಾದ್ಯಂತ ಸದ್ದು ಮಾಡಿತು. ನಂತರ 'ಡಿಯರ್ ಕಾಂಮ್ರೇಡ್', 'ಪುಷ್ಪ' ಮತ್ತು 'ಪುಷ್ಪ 2' ಚಿತ್ರಗಳ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಶ್ರೀವಲ್ಲಿ ಪಾತ್ರಕ್ಕೆ ಸಣ್ಣಪುಟ್ಟ ಟೀಕೆಗಳು ಬಂದರೂ, 'ಪುಷ್ಪ 2' ಮತ್ತು ಇತ್ತೀಚಿನ 'ದಿ ಗರ್ಲ್ಫ್ರೆಂಡ್' ಚಿತ್ರದ ಮೂಲಕ ರಶ್ಮಿಕಾ ತಾವು ಯಾವುದೇ ಪಾತ್ರಕ್ಕೂ ಸೈ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ನೆಟ್ ವರ್ತ್ ಎಷ್ಟು?
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿ ಈಗ ಬಾಲಿವುಡ್ನಲ್ಲಿಯೂ ತಮ್ಮ ಪಾರುಪತ್ಯ ಮೆರೆಯುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ಆಸ್ತಿ ಮೌಲ್ಯದ ಕುರಿತು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಫೋರ್ಬ್ಸ್ ವರದಿಯ ಪ್ರಕಾರ, ರಶ್ಮಿಕಾ ಅವರ ಒಟ್ಟು ಆಸ್ತಿ ಸರಿಸುಮಾರು 66 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಪ್ರಸ್ತುತ ಅವರು ಪ್ರತಿ ಸಿನಿಮಾಗೆ 4 ರಿಂದ 10 ಕೋಟಿ ರೂಪಾಯಿಗಳವರೆಗೆ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಸುಮಾರು 8 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯನ್ನು ಹೊಂದಿರುವ ಇವರು, ಇದರೊಂದಿಗೆ ಮುಂಬೈ, ಹೈದರಾಬಾದ್, ಗೋವಾ ಹಾಗೂ ತಮ್ಮ ಹುಟ್ಟೂರಾದ ಕೊಡಗಿನಲ್ಲಿಯೂ ಬೆಲೆಬಾಳುವ ಆಸ್ತಿಗಳನ್ನು ಹೊಂದಿದ್ದಾರೆ. ವಾಹನಗಳ ವಿಚಾರಕ್ಕೆ ಬಂದರೆ, ರಶ್ಮಿಕಾ ಬಳಿ ರೇಂಜ್ ರೋವರ್ ಸ್ಪೋರ್ಟ್, ಆಡಿ ಕ್ಯೂ3, ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್ ಸೇರಿದಂತೆ ಹಲವು ಐಷಾರಾಮಿ ಕಾರುಗಳ ಸಂಗ್ರಹವೇ ಇದೆ.
ಇನ್ನು ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ಮದುವೆಯ ಕುರಿತಾದ ಸುದ್ದಿಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ. ವರದಿಗಳ ಪ್ರಕಾರ, ಈ ಜೋಡಿಯು ಫೆಬ್ರವರಿ 26ರಂದು ಉದಯಪುರದ ರಾಜಭವನವೊಂದರಲ್ಲಿ ವಿವಾಹವಾಗಲಿದ್ದಾರೆ. ತದನಂತರ ಮಾರ್ಚ್ 4ರಂದು ಹೈದರಾಬಾದ್ನಲ್ಲಿ ಅದ್ಧೂರಿ ವಿವಾಹ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ.
ಅಂದು ಆಡಿಷನ್ನಲ್ಲಿ ತಡಬಡಾಯಿಸುತ್ತಿದ್ದ ಆ ಪುಟ್ಟ ಹುಡುಗಿ, ಇಂದು ತನ್ನ ಕಠಿಣ ಪರಿಶ್ರಮ ಮತ್ತು ಛಲದಿಂದ ಭಾರತದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿರುವುದು ಎಲ್ಲರಿಗೂ ಸ್ಪೂರ್ತಿ.

