
'ಕಾಕ್ಟೇಲ್ 2' ಸಿನಿಮಾದಲ್ಲಿ ಕೃತಿ ಸನನ್ ಮತ್ತು ಸೌತ್ ಸುಂದರಿ ರಶ್ಮಿಕಾ ಮಂದಣ್ಣ ಸಲಿಂಗಕಾಮಿಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
Cocktail 2| ರಶ್ಮಿಕಾ ಮಂದಣ್ಣ- ಕೃತಿ ಸನೊನ್ ಲೆಸ್ಬಿಯನ್ ಜೋಡಿ?
'ಕಾಕ್ಟೇಲ್ 2' ಚಿತ್ರೀಕರಣ ಮುಕ್ತಾಯಗೊಂಡಿದೆ. ಈ ಚಿತ್ರದಲ್ಲಿ ರಶ್ಮಿಕಾ ಮತ್ತು ಕೃತಿ ಲೆಸ್ಬಿಯನ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಕಾಕ್ಟೇಲ್ 2' ಈಗ ತನ್ನ ವಿಭಿನ್ನ ಕಥಾಹಂದರದಿಂದಾಗಿ ಸುದ್ದಿಯಲ್ಲಿದೆ. 2012ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಅಭಿನಯದ ಕಾಕ್ಟೇಲ್ ಸಿನಿಮಾದ ಮುಂದುವರಿದ ಭಾಗವಾಗಿ ಇದು ತೆರೆಗೆ ಬರಲು ಸಜ್ಜಾಗಿದೆ. ಆದರೆ ಈ ಬಾರಿ ಕಥೆಯಲ್ಲಿ ಭಾರಿ ಬದಲಾವಣೆಗಳಿದ್ದು, ಚಿತ್ರಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಶಾಹಿದ್ ಕಪೂರ್, ಕೃತಿ ಸನೊನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ 'ಕಾಕ್ಟೇಲ್ 2' ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿದ್ದು, ಇದೀಗ ಚಿತ್ರದ ಕಥೆಯ ಬಗ್ಗೆ ಒಂದು ಅಚ್ಚರಿಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರಶ್ಮಿಕಾ ಮತ್ತು ಕೃತಿ ಲೆಸ್ಬಿಯನ್ ಜೋಡಿ?
ಹೌದು, ಕೇಳಲು ಅಚ್ಚರಿ ಎನಿಸಿದರೂ ವರದಿಗಳ ಪ್ರಕಾರ ಈ ಬಾರಿ 'ಕಾಕ್ಟೇಲ್ 2' ನಲ್ಲಿ ಸಿನಿಮಾ ವಲಯದಲ್ಲಿ ಹರಿದಾಡುತ್ತಿರುವ ಇತ್ತೀಚಿನ ವರದಿಗಳ ಪ್ರಕಾರ, ಈ ಚಿತ್ರದಲ್ಲಿ ನಟಿ ಕೃತಿ ಸನೊನ್ ಮತ್ತು ಸೌತ್ ಸುಂದರಿ ರಶ್ಮಿಕಾ ಮಂದಣ್ಣ ಲೆಸ್ಬಿಯನ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮೊದಲ ಭಾಗದಲ್ಲಿ ಒಂದು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳ ನಡುವಿನ ತ್ರಿಕೋನ ಪ್ರೇಮಕಥೆ ಇತ್ತು. ಆದರೆ ಈ ಬಾರಿ ಇಬ್ಬರು ನಾಯಕಿಯರ ನಡುವೆ ಪ್ರೀತಿ ಇರಲಿದ್ದು, ಶಾಹಿದ್ ಕಪೂರ್ ಪಾತ್ರವು ಇವರ ನಡುವಿನ ಮೂರನೇ ಕೊಂಡಿಯಾಗಿರಲಿದೆ ಎಂದು ಹೇಳಲಾಗುತ್ತಿದೆ. ಆಧುನಿಕ ಸಂಬಂಧಗಳ ಸಂಕೀರ್ಣತೆಯನ್ನು ಈ ಸಿನಿಮಾ ಅನಾವರಣಗೊಳಿಸಲಿದೆ ಎಂದು ಹೇಳಲಾಗಿದ್ದರೂ, ಚಿತ್ರತಂಡದ ಕಡೆಯಿಂದ ಈ ಬಗ್ಗೆ ಇನ್ನೂ ಅಧಿಕೃತ ಮುದ್ರೆ ಬಿದ್ದಿಲ್ಲ.
ಚಿತ್ರೀಕರಣ ಪೂರ್ಣ
ನಿರ್ದೇಶಕ ಹೋಮಿ ಅದಜಾನಿಯಾ ಅವರು ಜನವರಿ 31ರಂದು ಚಿತ್ರದ ಚಿತ್ರೀಕರಣ ಪೂರ್ಣಗೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ತಾರಾಗಣದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಫೋಟೋಗಳನ್ನು ಅಪ್ಲೋಡ್ ಮಾಡಿರುವ ಅವರು, "ಕಾಕ್ಟೇಲ್ 2 ಚಿತ್ರೀಕರಣ ಮುಕ್ತಾಯವಾಗಿದೆ. ಈ ಸಿನಿಮಾ ನನಗೆ ಬಹಳ ವಿಶೇಷ" ಎಂದು ಬರೆದುಕೊಂಡಿದ್ದಾರೆ. ಚಿತ್ರೀಕರಣ ಮುಗಿದಿರುವುದರಿಂದ ಅಭಿಮಾನಿಗಳು ಈಗ ಟ್ರೈಲರ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಕೇಕ್ ಕತ್ತರಿಸಿ ಸಂಭ್ರಮಿಸಿದ ಸಿನಿತಂಡ
ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಸಾಧ್ಯತೆ
ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಸ್ಪಷ್ಟನೆ ಇಲ್ಲದಿದ್ದರೂ, ಮೂಲಗಳ ಪ್ರಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಶಾಹಿದ್ ಕಪೂರ್ ಅವರ ಹಿಂದಿನ ಚಿತ್ರ 'ಓ ರೋಮಿಯೋ' ಬಿಡುಗಡೆಯಾದ ಆರು ತಿಂಗಳ ನಂತರ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಈ ಸಿನಿಮಾದ ಬಗ್ಗೆ ಹರಿದಾಡುತ್ತಿರುವ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದರೂ, ಈ ಬಗ್ಗೆ ಚಿತ್ರತಂಡವಾಗಲಿ ಅಥವಾ ಕಲಾವಿದರಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹಾಗಾಗಿ ಇದು ಕೇವಲ ವದಂತಿಯೇ ಅಥವಾ ಚಿತ್ರದ ಅಸಲಿ ಕಥೆಯೇ ಎಂಬುದು ಟ್ರೈಲರ್ ಬಿಡುಗಡೆಯಾದ ಬಳಿಕ ತಿಳಿಯಲಿದೆ.

