ಸಿಸಿಬಿ ತನಿಖೆಯ ವಿಳಂಬಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಕ್ರೋಶ: ಯಾಕೆ ಸಿಟ್ಟು?
x

ಅಶ್ಲೀಲ ಕಮೆಂಟ್‌ಗಳ ವಿರುದ್ಧ ದೂರು ನೀಡಿದರೂ ಕ್ರಮವಿಲ್ಲ; ವಿಜಯಲಕ್ಷ್ಮಿ ಬೇಸರ.

ಸಿಸಿಬಿ ತನಿಖೆಯ ವಿಳಂಬಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಕ್ರೋಶ: ಯಾಕೆ ಸಿಟ್ಟು?

ಇತರರ ದೂರುಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆ, ತಮ್ಮ ವಿಷಯದಲ್ಲಿ ವಿಳಂಬ ಮಾಡುತ್ತಿರುವುದು ವ್ಯವಸ್ಥೆಯ ಮೇಲಿರುವ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಬೇಸರ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಅಶ್ಲೀಲ ಕಾಮೆಂಟ್‌ಗಳು ಮತ್ತು ಸೈಬರ್ ಕಿರುಕುಳದ ವಿರುದ್ಧ ಪೊಲೀಸ್ ಇಲಾಖೆಯ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ದೂರಿಗೆ ಸ್ಪಂದಿಸದೆ ಇರುವಾಗ ಇನ್ನೊಬ್ಬ ಮಹಿಳೆಯ ದೂರಿಗೆ ಒಂದೇ ದಿನದಲ್ಲಿ ಕ್ರಮ ಕೈಗೊಂಡಿರುವುದನ್ನು ಪ್ರಶ್ನಿಸಿರುವ ಅವರು, ಬುಧವಾರ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರನ್ನು ಸ್ವತಃ ಭೇಟಿ ಮಾಡಿ ತನಿಖೆಯ ವಿಳಂಬದ ಬಗ್ಗೆ ಗಂಭೀರ ಆಕ್ಷೇಪಗಳನ್ನು ದಾಖಲಿಸಿದ್ದಾರೆ.

ವಿಜಯಲಕ್ಷ್ಮಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬಿಚ್ಚಿಟ್ಟಿದ್ದಾರೆ, "ನಮ್ಮ ದೇಶದ ವ್ಯವಸ್ಥೆ ಮತ್ತು ಕಾನೂನು ಎಲ್ಲರಿಗೂ ಸಮಾನ ಎಂದು ನಾವು ನಂಬಿದ್ದೆವು. ಆದರೆ ಪ್ರಸ್ತುತ ಅನುಭವ ಆ ನಂಬಿಕೆಯನ್ನು ಅಲುಗಾಡಿಸುವಂತೆ ಮಾಡಿದೆ. ಇನ್ನೊಬ್ಬ ಮಹಿಳೆ ನೀಡಿದ ದೂರಿಗೆ ಒಂದೇ ದಿನದಲ್ಲಿ ಸ್ಪಂದಿಸಿ ಕ್ರಮ ಕೈಗೊಂಡಿರುವುದು ಆಶ್ಚರ್ಯ ತಂದಿದೆ. ನಮ್ಮ ದೂರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೇ ಸಿಸಿಬಿಗೆ ದೂರು ನೀಡಿದ್ದ ಅವರು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಅವಾಚ್ಯ ಪದಗಳೊಂದಿಗೆ ಕಿರುಕುಳ ಮಾಡುತ್ತಿರುವ ಸುಮಾರು 150ಕ್ಕೂ ಹೆಚ್ಚು ಖಾತೆಗಳ ಸ್ಕ್ರೀನ್‌ಶಾಟ್‌ಗಳನ್ನು ಸಹ ಸಲ್ಲಿಸಿದ್ದರು. ಆದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂಬುದು ಅವರ ಮುಖ್ಯ ಆರೋಪ.

ಡೆವಿಲ್ ಸಕ್ಸಸ್ ಮೀಟ್: ಫ್ಯಾನ್ಸ್ ವಾರ್ ತೀವ್ರಗೊಂಡ ಕಾರಣ

ಘಟನೆಯ ಹಿನ್ನೆಲೆಯಲ್ಲಿ, ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ 'ಡೆವಿಲ್' ಚಿತ್ರದ ಸಕ್ಸಸ್ ಮೀಟ್‌ನಲ್ಲಿ ವಿಜಯಲಕ್ಷ್ಮಿ ಅವರು ಪಾಲ್ಗೊಂಡಿದ್ದರು. ಅಲ್ಲಿ ಪತಿ ದರ್ಶನ್ ಅವರ ನಟನೆ ಮತ್ತು ವ್ಯಕ್ತಿತ್ವವನ್ನು ಮೆಚ್ಚಿ, ಅಭಿಮಾನಿಗಳಿಗೆ "ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡಿ" ಎಂದು ಧೈರ್ಯ ತುಂಬಿದ್ದರು. ಆದರೆ ಈ ಭಾಷಣದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ 'ಫ್ಯಾನ್ಸ್ ವಾರ್' ಅತಿರೇಕಕ್ಕೆ ತೆರಳಿ, ವಿಜಯಲಕ್ಷ್ಮಿ ಅವರನ್ನು ವೈಯಕ್ತಿಕವಾಗಿ ಗುರಿಯಾಗಿಸಿ ಅಶ್ಲೀಲ ಕಾಮೆಂಟ್‌ಗಳು ಶುರುವಾದವು.

ಸಿಸಿಬಿ ತನಿಖೆ ಆರಂಭ

ಸಿಸಿಬಿ ಪೊಲೀಸರು ಈಗಾಗಲೇ ಮೂರು ವಿಶೇಷ ತಂಡಗಳನ್ನು ರಚಿಸಿ, 18 ಸಂಶಯಾಸ್ಪದ ಖಾತೆಗಳನ್ನು ಗುರುತಿಸಿದ್ದಾರೆ. ಮೆಟಾ (ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್) ಸಂಸ್ಥೆಗೆ ಬಳಕೆದಾರರ ಮಾಹಿತಿ ಕೋರಿ ಪತ್ರ ಬರೆದಿದ್ದು, IP ಅಡ್ರೆಸ್ ಮೂಲಕ ಕೆಲವರ ವಿಳಾಸಗಳನ್ನು ಪತ್ತೆ ಮಾಡಿವೆ. ಕಾರ್ಯಾಚರಣೆ ತೀವ್ರಗೊಂಡ ಕೂಡಲೇ ಹಲವು ಕಿಡಿಗೇಡಿಗಳು ತಮ್ಮ ಅಕೌಂಟ್‌ಗಳನ್ನು ಡಿಲೀಟ್ ಮಾಡಿ ತಲೆಮರೆಸಿಕೊಂಡಿದ್ದಾರೆ.

ಪ್ರಕರಣ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಭಾಗ 67 ಮತ್ತು 66(C) ಅಡಿಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಆಯುಕ್ತರ ಭೇಟಿ; ಭರವಸೆ

ಬುಧವಾರ ವಿಜಯಲಕ್ಷ್ಮಿ ಅವರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ, ತನಿಖೆಯ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ತಕ್ಷಣವೇ ತನಿಖಾಧಿಕಾರಿಗಳನ್ನು ಕರೆಸಿ ಪ್ರಗತಿ ವರದಿ ಪಡೆದು, "ಸೈಬರ್ ಕ್ರೈಮ್ ಪ್ರಕರಣಗಳಲ್ಲಿ ತಾಂತ್ರಿಕ ಮಾಹಿತಿ ಸಿಗಲು ಸಮಯ ಬೇಕು. ಡಿಸಿಪಿ ದರ್ಜೆಯ ಅಧಿಕಾರಿಗಳು ಉಸ್ತುವಾರಿ ವಹಿಸಿದ್ದಾರೆ. ಎಲ್ಲರಿಗೂ ಸಮಾನವಾಗಿ ಸ್ಪಂದಿಸುತ್ತೇವೆ. ಉದ್ದೇಶಪೂರ್ವಕ ವಿಳಂಬವಿದ್ದರೆ ಕ್ರಮ ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದ್ದಾರೆ.

Read More
Next Story