
ಬೆಳ್ಳಿ ಪರದೆ ಮೇಲೆ ಮತ್ತೆ ಒಂದಾದ ರಶ್ಮಿಕಾ-ವಿಜಯ್ ಜೋಡಿ
'ಶ್ಯಾಮ್ ಸಿಂಗ ರಾಯ್' ಖ್ಯಾತಿಯ ನಿರ್ದೇಶಕ ರಾಹುಲ್ ಸಂಕೃತ್ಯಾನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, 'ಪುಷ್ಪ' ಚಿತ್ರದ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಚಿತ್ರರಂಗದ ಮೋಸ್ಟ್ ಫೇವರಿಟ್ ಜೋಡಿ ಎಂದೇ ಖ್ಯಾತಿ ಪಡೆದಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ಧಿ ನೀಡಿದ್ದಾರೆ.
ಸೂಪರ್ ಹಿಟ್ ಚಿತ್ರಗಳಾದ 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ನಂತರ ಈ ಜೋಡಿ 'VD14' ಚಿತ್ರದ ಮೂಲಕ ಮತ್ತೊಮ್ಮೆ ತೆರೆಯ ಮೇಲೆ ಒಂದಾಗುತ್ತಿದ್ದು, ಈ ಸುದ್ದಿ ಸಿನಿಮಾ ವಲಯದಲ್ಲಿ ಸಂಚಲನ ಮೂಡಿಸಿದೆ. ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಅಧಿಕೃತವಾಗಿ ಅನಾವರಣಗೊಳಿಸಿದೆ.
ಮದುವೆ ಸುದ್ದಿಯ ನಡುವೆ ಸಿನಿಮಾ ಘೋಷಣೆ
ಕಳೆದ ವರ್ಷವಷ್ಟೇ ಈ ಜೋಡಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಅಲ್ಲದೆ, ಫೆಬ್ರವರಿ 2026ರಲ್ಲಿ ಇವರಿಬ್ಬರು ವಿವಾಹವಾಗಲಿದ್ದಾರೆ ಎಂಬ ವರದಿ ಬೆನ್ನಲ್ಲೇ, ಮದುವೆಗೂ ಮುನ್ನ ಒಟ್ಟಾಗಿ ನಟಿಸುತ್ತಿರುವುದು ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಳಿಸಿದೆ.
ಆನ್-ಸ್ಕ್ರೀನ್ ಮಾತ್ರವಲ್ಲದೆ ಆಫ್-ಸ್ಕ್ರೀನ್ ಕೆಮಿಸ್ಟ್ರಿಯಿಂದಲೂ ಗುರುತಿಸಿಕೊಂಡಿರುವ ಇವರು, ಐತಿಹಾಸಿಕ ಹಿನ್ನೆಲೆಯ ಈ ಕಥೆಯಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.
ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ. ನಿರ್ಜನ ಪ್ರದೇಶದಲ್ಲಿ ಜನರು ಗುಂಪು ಗುಂಪಾಗಿ ಸಾಗುತ್ತಿರುವ ದೃಶ್ಯ ಮತ್ತು ಪೋಸ್ಟರ್‌ನಲ್ಲಿರುವ 'The LEGEND of the CURSED LAND gets a NAME ON 26.1.26' ಎಂಬ ಸಾಲುಗಳು ಚಿತ್ರದ ಗಾಂಭೀರ್ಯತೆ ಸಾರುತ್ತಿವೆ. ಈ ಚಿತ್ರವು 19ನೇ ಶತಮಾನದ ಬ್ರಿಟಿಷ್ ಕಾಲದ ಕಥೆ ಹೊಂದಿದ್ದು, ವಿಜಯ್ ದೇವರಕೊಂಡ ಹಿಂದೆಂದೂ ಕಾಣದ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
'ಶ್ಯಾಮ್ ಸಿಂಗ ರಾಯ್' ಖ್ಯಾತಿಯ ನಿರ್ದೇಶಕ ರಾಹುಲ್ ಸಂಕೃತ್ಯಾನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, 'ಪುಷ್ಪ' ಚಿತ್ರದ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಜೋಡಿಯು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದು, ಜನವರಿ 26ರಂದು ಹೊರಬೀಳಲಿರುವ ಶೀರ್ಷಿಕೆ ಮತ್ತು ಗ್ಲಿಂಪ್ಸ್ ವಿಡಿಯೋ ಬಗ್ಗೆ ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಕಾಯುತ್ತಿದೆ.

