
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೊಡಗಿನ ನಂಬರ್ 1 ಟ್ಯಾಕ್ಸ್ ಪೇಯರ್
ಸದ್ಯ ಭಾರತದ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ, ಪ್ರತಿ ಸಿನಿಮಾಗೆ ಸುಮಾರು 9 ರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ ಅಂದಾಜು 66 ಕೋಟಿ ರೂಪಾಯಿ.
ಸಿನಿಮಾ ರಂಗದಲ್ಲಿ ಸತತ ಯಶಸ್ಸಿನ ಅಲೆಗಳಲ್ಲಿ ತೇಲುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ತಮ್ಮ ಹುಟ್ಟೂರಿನ ಮೇಲಿರುವ ಅಭಿಮಾನವನ್ನು ತೆರಿಗೆ ಪಾವತಿಯ ಮೂಲಕವೂ ಮೆರೆದಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಇವರು, ತಮ್ಮ ಆದಾಯ ತೆರಿಗೆಯನ್ನು ಕರ್ನಾಟಕದ ಕೊಡಗಿನ ಮೂಲಕವೇ ಪಾವತಿಸುತ್ತಿದ್ದಾರೆ
ಕೋಟಿ ಕೋಟಿ ತೆರಿಗೆ
ರಶ್ಮಿಕಾ ಮಂದಣ್ಣ ಅವರು ‘ಎಲ್ಎಲ್ಪಿ’ (ಲಿಮಿಟೆಡ್ ಲಯಬಿಲಿಟಿ ಪಾರ್ಟನರ್‌ಶಿಪ್) ಹೆಸರಿನಲ್ಲಿ ಈವರೆಗೆ ಸುಮಾರು 4.69 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ನಟಿಯರ ಪಟ್ಟಿಯಲ್ಲಿ ಅವರು ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಮಾರ್ಚ್ ತಿಂಗಳೊಳಗೆ 4ನೇ ತ್ರೈಮಾಸಿಕದ ತೆರಿಗೆಯನ್ನು ಪಾವತಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಶ್ಮಿಕಾ ಅವರ ವೃತ್ತಿಜೀವನದ ಜೊತೆಗೆ ವೈಯಕ್ತಿಕ ಜೀವನದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಕಳೆದ ಕೆಲವು ಸಮಯದಿಂದ ಕೇಳಿಬರುತ್ತಿರುವ ಗಾಸಿಪ್‌ಗಳ ಪ್ರಕಾರ, ರಶ್ಮಿಕಾ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ನಡುವಿನ ಸಂಬಂಧ ಈಗ ಮದುವೆಯ ಹಂತಕ್ಕೆ ತಲುಪಿದೆ ಎನ್ನಲಾಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, 2025ರ ಅಕ್ಟೋಬರ್‌ನಲ್ಲಿ ಈ ಜೋಡಿಯ ನಿಶ್ಚಿತಾರ್ಥ ಗುಟ್ಟಾಗಿ ನಡೆದಿದ್ದು, 2026ರ ಫೆಬ್ರವರಿಯಲ್ಲಿ ಉದಯಪುರದ ಐಷಾರಾಮಿ ಅರಮನೆಯಲ್ಲಿ ವಿವಾಹ ಮಹೋತ್ಸವ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ನಟ ಅಥವಾ ನಟಿಯ ಕಡೆಯಿಂದ ಇನ್ನೂ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.
ಸದ್ಯ ಭಾರತದ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ, ಪ್ರತಿ ಸಿನಿಮಾಗೆ ಸುಮಾರು 9 ರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ ಅಂದಾಜು 66 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ 8 ಕೋಟಿ ಮೌಲ್ಯದ ಮನೆ, ಕೊಡಗಿನ ವಿರಾಜಪೇಟೆಯಲ್ಲಿ ಬೃಹತ್ ಬಂಗಲೆ ಸೇರಿದಂತೆ ಮುಂಬೈ, ಹೈದರಾಬಾದ್ ಮತ್ತು ಗೋವಾದಲ್ಲೂ ಇವರು ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಮುಂಬೈನ ವರ್ಲಿ ಪ್ರದೇಶದ ಪ್ರತಿಷ್ಠಿತ 'ಅಹುಜಾ ಟವರ್ಸ್'ನಲ್ಲಿಯೂ ಇವರು ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ.
ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಸರಿಸಾಟಿಯಿಲ್ಲದ ಬೇಡಿಕೆ ಸೃಷ್ಟಿಸಿಕೊಂಡಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ 2026ನೇ ವರ್ಷ ಅತ್ಯಂತ ಪ್ರಮುಖವಾಗಲಿದೆ. ವಿವಿಧ ಭಾಷೆಗಳಲ್ಲಿ ಅವರು ನಟಿಸಿರುವ ಭಾರಿ ಬಜೆಟ್ ಸಿನಿಮಾಗಳು ಈ ವರ್ಷ ತೆರೆಗೆ ಬರಲು ಸಜ್ಜಾಗಿವೆ.
ಬಾಲಿವುಡ್‌ನ ಸ್ಟಾರ್ ನಟ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಜೊತೆ ರಶ್ಮಿಕಾ ಮಂದಣ್ಣ 'ಕಾಕ್‌ಟೇಲ್ 2' ಚಿತ್ರದಲ್ಲಿ ಮಿಂಚಲಿದ್ದಾರೆ. ಹೊಮಿ ಅದಾಜಾನಿಯಾ ನಿರ್ದೇಶನದ ಈ ಚಿತ್ರವು 2012ರ ಸೂಪರ್ ಹಿಟ್ 'ಕಾಕ್‌ಟೇಲ್' ಚಿತ್ರದ ಸೀಕ್ವೆಲ್ ಆಗಿದ್ದು, ಸೆಪ್ಟೆಂಬರ್ 2026ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಚಿತ್ರದಲ್ಲಿ ರಶ್ಮಿಕಾ ಅವರ ಪಾತ್ರ ವಿಭಿನ್ನವಾಗಿರಲಿದೆ ಎಂದು ಹೇಳಲಾಗುತ್ತಿದೆ.
ತೆಲುಗಿನ 'ಮೈಸಾ' (Mysaa) ಚಿತ್ರವು ರಶ್ಮಿಕಾ ಅವರ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲಾಗುವ ನಿರೀಕ್ಷೆಯಿದೆ. ರವೀಂದ್ರ ಪುಲ್ಲೆ ನಿರ್ದೇಶನದ ಈ ಸಿನಿಮಾದಲ್ಲಿ ರಶ್ಮಿಕಾ ಅವರು ಗೊಂಡ ಬುಡಕಟ್ಟು ಜನಾಂಗದ ಮಹಿಳಾ ಯೋಧೆಯಾಗಿ ಅಬ್ಬರಿಸಲಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಫಸ್ಟ್ ಗ್ಲಿಂಪ್ಸ್‌ನಲ್ಲಿ ಅವರ ರಗಡ್ ಮತ್ತು ಮಾಸ್ ಲುಕ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಚಿತ್ರವು 2026ರ ಮಾರ್ಚ್ 20ರಂದು ತೆರೆಗೆ ಬರುವ ಸಾಧ್ಯತೆಯಿದೆ.
ಸಿನಿರಸಿಕರು ಚಾತಕ ಪಕ್ಷಿಯಂತೆ ಕಾಯುತ್ತಿರುವ 'ಪುಷ್ಪ 3: ದಿ ರಾಂಪೇಜ್' ಚಿತ್ರದ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಸುಕುಮಾರ್ ಅವರು ಮೂರನೇ ಭಾಗದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದು, ಈ ಬಹುನಿರೀಕ್ಷಿತ ಚಿತ್ರದ ಚಿತ್ರೀಕರಣವು 2026ರ ದ್ವಿತೀಯಾರ್ಧದಲ್ಲಿ ಅಥವಾ ವರ್ಷಾಂತ್ಯದ ವೇಳೆಗೆ ವೇಗ ಪಡೆದುಕೊಳ್ಳುವ ಸಾಧ್ಯತೆಯಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಶ್ರೀವಲ್ಲಿ'ಯ ಕ್ರೇಜ್ ಈ ಚಿತ್ರದ ಮೂಲಕ ಮತ್ತಷ್ಟು ಹೆಚ್ಚಾಗಲಿದೆ.

