
ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಬಜೆಟ್ ಕುರಿತಾದ ಹಾಸ್ಯಭರಿತ ಮೀಮ್ಸ್‌ಗಳು ವೈರಲ್ ಆಗುತ್ತಿವೆ.
ಬಜೆಟ್ ಲೆಕ್ಕಾಚಾರಕ್ಕಿಂತ ಮೀಮ್ಸ್‌ಗಳದ್ದೇ ಅಬ್ಬರ; ಬಜೆಟ್ ದಿನದಂದು ವೈರಲ್ ಆದ ಮೀಮ್ಸ್
ಬಜೆಟ್ ಘೋಷಣೆಯಾದ ಬೆನ್ನಲ್ಲೇ ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಬಜೆಟ್ ಕುರಿತಾದ ಹಾಸ್ಯಭರಿತ ಮೀಮ್ಸ್‌ಗಳು ವೈರಲ್ ಆಗುತ್ತಿವೆ.
ಇಂದು ಕೇಂದ್ರ ಬಜೆಟ್ ಮಂಡನೆಯಾಗಿದೆ. ಕಳೆದ ಒಂದು ದಶಕದ ಸಂಪ್ರದಾಯದಂತೆ ಈ ವರ್ಷವೂ ಫೆಬ್ರವರಿ 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾರ್ಷಿಕ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಮಂಡನೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಧ್ಯಮ ವರ್ಗದವರ ಹಾಸ್ಯಭರಿತ ಮೀಮ್ಸ್‌ಗಳು ಮತ್ತು ಪ್ರತಿಕ್ರಿಯೆಗಳು ವೈರಲ್ ಆಗುತ್ತಿವೆ. ಪ್ರತಿ ವರ್ಷವೂ ಹಣಕಾಸು ಸಚಿವರು ಬಜೆಟ್ ಪ್ರತಿಯನ್ನು ಓದುತ್ತಿದ್ದಂತೆ, ಅತ್ತ ನೆಟ್ಟಿಗರು ಮೀಮ್ಸ್‌ಗಳ ರೂಪದಲ್ಲಿ ಬಜೆಟ್‌ಗೆ ಅನ್ವಯವಾಗುವಂತೆ ವೈರಲ್ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಘೋಷಣೆಗಳಿದ್ದರೆ ಸಚಿವರನ್ನು ಹೊಗಳುವ ಮೀಮ್ಸ್‌ಗಳು ಕಾಣಿಸಿಕೊಳ್ಳುತ್ತವೆ. ಆದರೆ ಪ್ರಸಕ್ತ ವರ್ಷದ ಬಜೆಟ್ ಘೋಷಣೆಗಳು ಹಲವರಿಗೆ ಗೊಂದಲ ಮೂಡಿಸಿವೆ. ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದವರು ಬಜೆಟ್‌ನ ಆಳ-ಅಗಲವನ್ನು ಅರ್ಥಮಾಡಿಕೊಳ್ಳಲು ಹರಸಾಹಸ ಪಡುತ್ತಿದ್ದು, ಈ ಗೊಂದಲವನ್ನೇ ವಸ್ತುವಾಗಿಟ್ಟುಕೊಂಡು ನೂರಾರು ಮೀಮ್ಸ್‌ಗಳನ್ನು ಹರಿಬಿಡಲಾಗಿದೆ. ನಮಗೆ ಬಜೆಟ್ ಅರ್ಥವಾಗುತ್ತಿಲ್ಲವಾದರೂ ಕೇಳಲು ಚೆನ್ನಾಗಿದೆ ಎನ್ನುವ ಧಾಟಿಯ ಹಾಸ್ಯಗಳು ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಸದ್ದು ಮಾಡುತ್ತಿವೆ.
ಈ ಬಾರಿಯ ಬಜೆಟ್‌ನಲ್ಲಿ ಧೂಮಪಾನಿಗಳಿಗೆ ದೊಡ್ಡ ಶಾಕ್ ಕಾದಿದೆ. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಸುಮಾರು 40% ನಷ್ಟು ಜಿಎಸ್‌ಟಿ ಹಾಗೂ ಹೆಚ್ಚುವರಿ ಸೆಸ್ ವಿಧಿಸಲಾಗಿದ್ದು, ಇದರಿಂದ ಸಿಗರೇಟ್ ಬೆಲೆ ಗಗನಕ್ಕೇರಲಿದೆ. ಇದು ಧೂಮಪಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದ್ದು, ಬಜೆಟ್ ನಮ್ಮ ಜೇಬಿಗೆ ಬೆಂಕಿ ಹಚ್ಚಿದೆ ಎನ್ನುವ ಅಸಮಾಧಾನದ ನಡುವೆಯೂ ಈ ಬಗ್ಗೆಯೂ ವ್ಯಂಗ್ಯಭರಿತ ಮೀಮ್ಸ್‌ಗಳು ಸೃಷ್ಟಿಯಾಗುತ್ತಿವೆ.
ನಿರ್ಮಲಾ ಸೀತಾರಾಮನ್ ಅವರ ಮಧ್ಯವರ್ತಿಗೆ ನೀಡಿದ ಉತ್ತರವನ್ನು ಸುನಿಲ್ ಗ್ರೋವರ್ ಅವರ 'ಡಾಕ್ಟರ್ ವೇಲ್' ಪಾತ್ರದ ಸಂಭಾಷಣೆಯೊಂದಿಗೆ ವಿವರಿಸಿದ್ದಾರೆ, ಅದು ಹೀಗಿದೆ
ಕೇಂದ್ರ ಸರ್ಕಾರದ 2026ರ ಹೊಸ ಬಜೆಟ್‌ನಲ್ಲಿ ತಂಬಾಕು ಉತ್ಪನ್ನಗಳ ಮೇಲೆ ಬರೋಬ್ಬರಿ ಶೇ. 40ರಷ್ಟು ತೆರಿಗೆಯನ್ನು ವಿಧಿಸಲಾಗಿದೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಈ ಕ್ರಮದಿಂದಾಗಿ ಸಿಗರೇಟ್ ಸೇರಿದಂತೆ ವಿವಿಧ ತಂಬಾಕು ಉತ್ಪನ್ನಗಳ ಬೆಲೆ ಗಗನಕ್ಕೇರಲಿದ್ದು, ಧೂಮಪಾನಿಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಪರಿಸ್ಥಿತಿಯನ್ನು ಹಾಸ್ಯಮಯವಾಗಿ ಬಿಂಬಿಸುತ್ತಿರುವ ಮೀಮರ್‌ಗಳು, ತೆರಿಗೆ ಏರಿಕೆಯಿಂದ ಕಣ್ಣೀರು ಹಾಕುತ್ತಿರುವ ಧೂಮಪಾನಿಗಳ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಬಾರಿ ಭಾರೀ ವೈರಲ್ ಆಗಿರುವ ಒಂದು ಹಿಂದಿ ಮೀಮ್ ಜನರ ಕುತೂಹಲವನ್ನು ಕೆರಳಿಸಿತ್ತು. ಆದರೆ, ಸಂಬಳದಾರರಿಗೆ ಈ ಬಾರಿಯೂ ಯಾವುದೇ ಪ್ರಮುಖ ತೆರಿಗೆ ವಿನಾಯಿತಿಗಳು ಸಿಗುವುದಿಲ್ಲ ಎಂಬ ತಜ್ಞರ ವಿಶ್ಲೇಷಣೆಯು ಮೀಮ್‌ಗಳಿಗೆ ಮತ್ತಷ್ಟು ಸಾಣೆ ಹಿಡಿದಂತಿದೆ. ಬಜೆಟ್ ಮುಗಿದ ನಂತರ ಮಧ್ಯಮ ವರ್ಗದ ಪರಿಸ್ಥಿತಿ ಎಂಬಂತಹ ಪೋಸ್ಟ್‌ಗಳು ಸಾರ್ವಜನಿಕರ ಹತಾಶೆಯನ್ನು ಹಾಸ್ಯದ ಮೂಲಕ ವ್ಯಕ್ತಪಡಿಸುತ್ತಿವೆ.
ಹೂಡಿಕೆದಾರರು ಮತ್ತು ವ್ಯಾಪಾರಿಗಳ ಮೋಜು ಕೇವಲ ಸಾಮಾನ್ಯ ತೆರಿಗೆದಾರರಷ್ಟೇ ಅಲ್ಲದೆ, ಹೂಡಿಕೆದಾರರು ಮತ್ತು ಷೇರು ಮಾರುಕಟ್ಟೆ ವ್ಯಾಪಾರಿಗಳು ಈ ಮೀಮ್‌ಗಳ ಅಲೆಯಲ್ಲಿ ಸಕ್ರಿಯರಾಗಿದ್ದಾರೆ. ಪ್ರತಿಯೊಬ್ಬ ಹೂಡಿಕೆದಾರ ಏನು ಬಯಸುತ್ತಾನೆ? ಎಂಬ ವಿಷಯದ ಕುರಿತಾದ ಪೋಸ್ಟ್‌ಗಳು, ಸ್ಟಾಕ್ ಮಾರ್ಕೆಟ್ ಚಾರ್ಟ್‌ಗಳು, ದೇವರ ಮುಂದಿನ ಪ್ರಾರ್ಥನೆಗಳು ಮತ್ತು ಮಾರುಕಟ್ಟೆಯ ಏರಿಳಿತದ ವ್ಯಂಗ್ಯ ಚಿತ್ರಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮುಖ್ಯವಾಗಿ ಮಧ್ಯಮ ವರ್ಗದ ಜನರ ನಿರೀಕ್ಷೆಗಳು ಮತ್ತು ಅವರಿಗೆ ಸಿಕ್ಕ ಪ್ರತಿಫಲವನ್ನು 'ಬಾಹುಬಲಿ' ಚಿತ್ರದ ಟೆಂಪ್ಲೇಟ್ ಬಳಸಿ ವ್ಯಂಗ್ಯವಾಡಲಾಗುತ್ತಿದೆ.
ಬಜೆಟ್‌ನಲ್ಲಿ ತಮಗೆ ದೊಡ್ಡ ಮಟ್ಟದ ರಿಲೀಫ್ ಸಿಗಬಹುದು ಎಂದು ಕಾದಿದ್ದ ಸಾಮಾನ್ಯ ಜನರಿಗೆ ನಿರಾಸೆಯಾಗಿದ್ದನ್ನು, 'ಹಂಗಾಮಾ' ಚಿತ್ರದ ಪ್ರಸಿದ್ಧ ಕೇಕ್ ತಿನ್ನಿಸುವ ದೃಶ್ಯಕ್ಕೆ ಹೋಲಿಸಿ ಮೀಮರ್‌ಗಳು ಕಿಚಾಯಿಸಿದ್ದಾರೆ. ವಿತ್ತ ಸಚಿವರು ಮಧ್ಯಮ ವರ್ಗದವರಿಗೆ ಈ ಬಾರಿಯೂ ಕೇಕ್ (ರಿಯಾಯಿತಿ) ನೀಡದೆ ಕೇವಲ ಆಸೆ ತೋರಿಸಿದ್ದಾರೆ ಎನ್ನುವ ಅರ್ಥದಲ್ಲಿ ಈ ಮೀಮ್ ವೈರಲ್ ಆಗುತ್ತಿದೆ.
ಇನ್ನುಳಿದಂತೆ, ಸಂಸತ್ತಿಗೆ ವಿತ್ತ ಸಚಿವರ ಭವ್ಯ ಎಂಟ್ರಿಯನ್ನು ಸಿನಿಮೀಯ ಶೈಲಿಯಲ್ಲಿ ಬಿಂಬಿಸಲಾಗಿದ್ದು, ಬಜೆಟ್ ದಿನದಂದು ಅವರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲಾಗಿದೆ.
ಅತ್ತ ಸಿಗರೇಟ್ ಬೆಲೆ ಏರಿಕೆಯ ಸುಳಿವು ಸಿಗುತ್ತಿದ್ದಂತೆ, ಧೂಮಪಾನಿಗಳು ಇನ್ಮುಂದೆ ಸಿಗರೇಟ್‌ನಿಂದ ದೂರ ಸರಿಯುವ ಅನಿವಾರ್ಯತೆಯನ್ನು ಹಾಸ್ಯಮಯವಾಗಿ ಚಿತ್ರಿಸಲಾಗಿದೆ. ಹಿರಿಯ ನಟ ಜಾನಿ ಲಿವರ್ ಅವರ ಭಾವುಕ ದೃಶ್ಯಗಳನ್ನು ಬಳಸಿ ಸರ್ಕಾರದ ನಿರ್ಧಾರಗಳ ಬಗ್ಗೆ ಜನಸಾಮಾನ್ಯರ ಅಸಮಾಧಾನವನ್ನು ವ್ಯಕ್ತಪಡಿಸಲಾಗಿದೆ.
ಷೇರು ಮಾರುಕಟ್ಟೆಯ ಹೂಡಿಕೆದಾರರ ಪಾಡಂತೂ ಹೇಳತೀರದಾಗಿದೆ. ಬಜೆಟ್ ಭಾಷಣಕ್ಕೆ ಮೊದಲು ಹಸಿರಾಗಿದ್ದ ಪೋರ್ಟ್‌ಫೋಲಿಯೋ, ಭಾಷಣ ಮುಗಿಯುವಷ್ಟರಲ್ಲಿ ಮೆಟ್ಟಿಲುಗಳಿಂದ ಕೆಳಗೆ ಉರುಳಿದಂತೆ ಕುಸಿದಿದೆ ಎಂದು ಮೀಮರ್‌ಗಳು ತಮ್ಮ ನೋವನ್ನು ನಗೆಯ ಮೂಲಕ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ, ಷೇರು ಮಾರುಕಟ್ಟೆ, ಬೆಳ್ಳಿ ಮತ್ತು ಬಂಗಾರ ಎಲ್ಲದರಲ್ಲೂ ನಷ್ಟ ಅನುಭವಿಸಿದ ವ್ಯಕ್ತಿಯೊಬ್ಬನ ಸ್ಥಿತಿಯನ್ನು ನೆಟ್ಟಿಗರು 'ಸಬ್ ಲಾಸ್ ಕರ್ನೆ ಕೆ ಬಾದ್' ಎಂಬ ಟ್ಯಾಗ್‌ನಡಿ ಟ್ರೋಲ್ ಮಾಡುತ್ತಿದ್ದಾರೆ.
ಭಾರತೀಯರಿಗೆ ಕಷ್ಟಕರವಾದ ಆರ್ಥಿಕ ಪರಿಭಾಷೆಗಳನ್ನು ಅರ್ಥಮಾಡಿಕೊಳ್ಳುವುದಕ್ಕಿಂತ, ತಮ್ಮ ನಿರಾಶೆ, ಭರವಸೆ ಮತ್ತು ಹತಾಶೆಯನ್ನು ವ್ಯಕ್ತಪಡಿಸಲು ಮೀಮ್ಸ್ ಒಂದು ಸುಲಭ ಮಾರ್ಗವಾಗಿದೆ. ಒಟ್ಟಾರೆಯಾಗಿ, ಬಜೆಟ್‌ನ ಗಂಭೀರ ಅಂಕಿಸಂಖ್ಯೆಗಳ ನಡುವೆ ಈ ಮೀಮ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಒಂದು ರೀತಿಯ ಹಾಸ್ಯದ ರಸದೌತಣ ಬಡಿಸುತ್ತಿವೆ.

