ಪಳಾರ್ ಎಂದ ಮಂಡ್ಯದ ಹೈದ : ಇದು ಗಿಲ್ಲಿ ನಟನ ಐತಿಹಾಸಿಕ ಬಿಗ್​ಬಾಸ್​ ಗೆಲುವು
x

'ಪಳಾರ್' ಎಂದ ಮಂಡ್ಯದ ಹೈದ : ಇದು 'ಗಿಲ್ಲಿ' ನಟನ ಐತಿಹಾಸಿಕ 'ಬಿಗ್​ಬಾಸ್'​ ಗೆಲುವು

ಬರೋಬ್ಬರಿ 37 ಕೋಟಿಗೂ ಅಧಿಕ ಮತಗಳನ್ನು ಪಡೆಯುವ ಮೂಲಕ ಗಿಲ್ಲಿ ನಟ ಅವರು ಸದ್ಯಕ್ಕೆ ಯಾರೂ ಮುರಿಯಲಾಗದ ದಾಖಲೆ ಬರೆದಿದ್ದಾರೆ. ಇದು ಬಿಗ್​ಬಾಸ್​ ಇತಿಹಾಸದಲ್ಲಿಯೇ ದೊಡ್ಡ ಸಾಧನೆ.


Click the Play button to hear this message in audio format

ಕೈಯಲ್ಲಿ ಒಂದು ಸ್ಮಾರ್ಟ್ ಫೋನ್, ಬಾಯಲ್ಲಿ ಅಪ್ಪಟ ಮಂಡ್ಯದ ಕನ್ನಡ, ಮನದಲ್ಲಿ ನಗಿಸುವ ಛಲ... ಇಷ್ಟೇ ಬಂಡವಾಳವಿದ್ದ ಪ್ರತಿಬೆ ಇಂದು ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್'ನ ಚಕ್ರವರ್ತಿಯಾಗಿ ಹೊರಹೊಮ್ಮಿದ್ದಾರೆ. ಇದು ಮಂಡ್ಯದ ಮಳವಳ್ಳಿಯ ಮಣ್ಣಿನ ಮಗ, ಯೂಟ್ಯೂಬರ್ 'ಗಿಲ್ಲಿ ನಟ' (ಶ್ರೀ ನಟರಾಜ್) ಅವರ ರೋಚಕ ಗೆಲುವಿನ ಕಥೆ.

ಸಾಮಾನ್ಯವಾಗಿ ಬಿಗ್ ಬಾಸ್ ಎಂದರೆ ಸ್ಟಾರ್ ನಟರು, ಕಿರುತೆರೆ ಕಲಾವಿದರು ಅಥವಾ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಲಕ್ಷಾಂತರ ಫಾಲೋವರ್ಸ್ ಹೊಂದಿರುವವರ ಆಟ ಎಂಬ ಭಾವನೆಯಿತ್ತು. ಆದರೆ, ಈ ಬಾರಿ ಆ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ್ದು ಈ 'ಕಾಮನ್ ಮ್ಯಾನ್'.

ಮಂಡ್ಯದ ಮಳವಳ್ಳಿಯ ಮಣ್ಣಿನ ಮಗ, ಯೂಟ್ಯೂಬರ್ 'ಗಿಲ್ಲಿ ನಟ' ಅವರ ಬಿಗ್‌ಬಾಸ್‌ ವಿನ್ನರ್‌ ಆಗಿ ರೋಚಕ ಗೆಲುವು ಸಾಧಿಸಿದ್ದಾರೆ.

ಮಾಮೂಲಿ ಯೂಟ್ಯೂಬರ್ ಟು ಬಿಗ್ ಬಾಸ್ ವಿನ್ನರ್

ಗಿಲ್ಲಿ ನಟ ಅವರಿಗೆ ಸಿನಿಮಾ ಹಿನ್ನೆಲೆಯಿರಲಿಲ್ಲ, ಗಾಡ್‌ಫಾದರ್ ಇರಲಿಲ್ಲ. ಅವರು ಜನರಿಗೆ ಪರಿಚಯವಾಗಿದ್ದು ತಮ್ಮ ಕಾಮಿಡಿ ರೀಲ್ಸ್ ಮತ್ತು ಯೂಟ್ಯೂಬ್ ವಿಡಿಯೋಗಳ ಮೂಲಕ. ಹಳ್ಳಿಯ ಸೊಗಡಿನಲ್ಲಿ, ತಮ್ಮದೇ ಶೈಲಿಯಲ್ಲಿ ವಿಡಿಯೋ ಮಾಡುತ್ತಿದ್ದ ಇವರನ್ನು ಆರಂಭದಲ್ಲಿ ಜನ "ಇವರೊಬ್ಬ ಸಾಧಾರಣ ಯೂಟ್ಯೂಬರ್" ಎಂದೇ ಭಾವಿಸಿದ್ದರು. ಆದರೆ, ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೇಲೆ ಅವರು ತೋರಿದ ವ್ಯಕ್ತಿತ್ವ, ಕೃತಕತೆಯಿಲ್ಲದ ಮಾತು ಮತ್ತು ಎಲ್ಲವನ್ನೂ ಹಾಸ್ಯವಾಗಿ ಸ್ವೀಕರಿಸುವ ಗುಣ ಇಡೀ ಕರ್ನಾಟಕವನ್ನೇ ಫಿದಾ ಮಾಡಿತು

ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೇಲೆ ಗಿಲ್ಲಿ ತೋರಿದ ವ್ಯಕ್ತಿತ್ವ, ಕೃತಕತೆಯಿಲ್ಲದ ಮಾತು ಮತ್ತು ಎಲ್ಲವನ್ನೂ ಹಾಸ್ಯವಾಗಿ ಸ್ವೀಕರಿಸುವ ಗುಣ ಇಡೀ ಕರ್ನಾಟಕವನ್ನೇ ಫಿದಾ ಮಾಡಿತು

40 ಕೋಟಿ ಮತಗಳ 'ಗಿಲ್ಲಿ' ದಾಖಲೆ!

ಗಿಲ್ಲಿಯದ್ದು ಕೇವಲ ಗೆಲುವಲ್ಲ, ಇದೊಂದು ಚರಿತ್ರೆ . ಬಿಗ್ ಬಾಸ್ ಕನ್ನಡದ ಹಿಂದಿನ ಸೀಸನ್‌ಗಳಲ್ಲಿ ಘಟಾನುಘಟಿ ಸೆಲೆಬ್ರಿಟಿಗಳಿಗೇ ಸಿಗದಷ್ಟು ಬೆಂಬಲ ಈ ಬಾರಿ ಈ ಗ್ರಾಮೀಣ ಪ್ರತಿಭೆಗೆ ಸಿಕ್ಕಿದೆ. ಬರೋಬ್ಬರಿ 37 ಕೋಟಿಗೂ ಅಧಿಕ ಮತಗಳನ್ನು ಪಡೆಯುವ ಮೂಲಕ ಗಿಲ್ಲಿ ನಟ ಅವರು ಸದ್ಯಕ್ಕೆ ಯಾರೂ ಮುರಿಯಲಾಗದ ದಾಖಲೆ ಬರೆದಿದ್ದಾರೆ. ಒಬ್ಬ ಸಾಮಾನ್ಯ ಯೂಟ್ಯೂಬರ್‌ಗೆ ಇಷ್ಟೊಂದು ಜನಬೆಂಬಲ ಸಿಕ್ಕಿರುವುದು ಡಿಜಿಟಲ್ ಯುಗದ ಹೊಸ ಕ್ರಾಂತಿ ಎಂದೇ ಹೇಳಬಹುದು.

ಮಂಡ್ಯದ ಗತ್ತು, ಮಳವಳ್ಳಿಯ ತಾಕತ್ತು

"ನನ್ ಮಗಂದ್... ಆಡ್ಸಿ ನೋಡ್ ಬೇಕಿದ್ರೆ" ಎನ್ನುವ ಮಂಡ್ಯದ ಆ ನೇರ ಮತ್ತು ದಿಟ್ಟ ಸ್ವಭಾವವೇ ಗಿಲ್ಲಿಯ ಟ್ರಂಪ್ ಕಾರ್ಡ್ ಆಗಿತ್ತು. ಮನೆಯಲ್ಲಿ ಎಷ್ಟೇ ಜಗಳಗಳಾದರೂ, ಮನಸ್ತಾಪಗಳು ಬಂದರೂ, ಅದನ್ನು ತಮ್ಮ ಹಾಸ್ಯದ ಮೂಲಕ ತೇಲಿಸಿಬಿಡುತ್ತಿದ್ದ ರೀತಿ ಅದ್ಭುತವಾಗಿತ್ತು. ಅವರ ಈ ಗುಣಕ್ಕೆ ಮರುಳಾದ ಜನ, "ಇವನು ನಮ್ಮ ಹುಡುಗ" ಎಂದು ಅಪ್ಪಿಕೊಂಡರು.

ಮಂಡ್ಯದ 'ಪಳಾರ್' ಹುಡುಗನ ರೋಚಕ ಹಿನ್ನೆಲೆ

ಬಿಗ್ ಬಾಸ್ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಗಿಲ್ಲಿ ನಟ ಅವರ ಮೂಲ ಹೆಸರು ಶ್ರೀ ನಟರಾಜ್. ಮಂಡ್ಯ ಜಿಲ್ಲೆಯ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಇವರು. ಯಾವುದೇ ಸಿನಿಮಾ ಅಥವಾ ಧಾರಾವಾಹಿಗಳ ಹಿನ್ನೆಲೆಯಿಲ್ಲದೆ, ಕೇವಲ ಮೊಬೈಲ್ ಮತ್ತು ತಮ್ಮದೇ ಆದ ವಿಶಿಷ್ಟ ಹಾಸ್ಯಪ್ರಜ್ಞೆಯನ್ನೇ ಬಂಡವಾಳವನ್ನಾಗಿಸಿಕೊಂಡು ಈ ಎತ್ತರಕ್ಕೆ ಬೆಳೆದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇವರು ತಮ್ಮ ಕಾಮಿಡಿ ರೀಲ್ಸ್ ಮೂಲಕವೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಇವರು ಆಗಾಗ ಬಳಸುತ್ತಿದ್ದ "ಪಳಾರ್" ಎಂಬ ಪದವೀಗ ಟ್ರೆಂಡ್ ಆಗಿದೆ. ಎಂತಹ ಗಂಭೀರ ಸನ್ನಿವೇಶವನ್ನೂ ತಮ್ಮ ಮಂಡ್ಯ ಶೈಲಿಯ ಕನ್ನಡ ಮತ್ತು ಹಾಸ್ಯದ ಮೂಲಕ ತಿಳಿಯಾಗಿಸುವ ಅವರ ಗುಣವೇ ಅವರಿಗೆ ಕೋಟ್ಯಾಂತರ ಅಭಿಮಾನಿಗಳನ್ನು ಸೃಷ್ಟಿಸಿಕೊಟ್ಟಿದೆ.

ಅಭಿಮಾನಿಗಳು ಪ್ರೀತಿಯಿಂದ "ಮಂಡ್ಯದ ಮಾಣಿಕ್ಯ" ಎಂದು ಕರೆಯುವ ಗಿಲ್ಲಿ, ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದವರು. ಬಿಗ್ ಬಾಸ್ ಮನೆಯಲ್ಲಿಯೂ ಅವರು ತಮ್ಮ ಹಳ್ಳಿಯ ಬದುಕು ಮತ್ತು ಸರಳತೆಯನ್ನು ಬಿಟ್ಟುಕೊಡಲಿಲ್ಲ. ಇದೇ ಕಾರಣಕ್ಕೆ ವೀಕ್ಷಕರು ಅವರನ್ನು ತಮ್ಮ ಮನೆಯ ಮಗನಂತೆ ಭಾವಿಸಿ, ದಾಖಲೆಯ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ.

ಸಾಮಾನ್ಯರ ಕನಸಿಗೆ ರೆಕ್ಕೆ

ಗಿಲ್ಲಿ ನಟ ಅವರ ಈ ಗೆಲುವು ಕೇವಲ ಅವರಿಗೆ ಸೀಮಿತವಲ್ಲ. ಇದು ಮೂಲೆ ಮೂಲೆಗಳಲ್ಲಿ ಕುಳಿತು, ಮೊಬೈಲ್ ಹಿಡಿದು ಕಂಟೆಂಟ್ ಕ್ರಿಯೇಟ್ ಮಾಡುತ್ತಿರುವ ಲಕ್ಷಾಂತರ ಪ್ರತಿಭಾವಂತ ಯುವಕರಿಗೆ ಸಿಕ್ಕ ಜಯ. "ದೊಡ್ಡ ಬ್ಯಾಕ್‌ಗ್ರೌಂಡ್ ಬೇಕಿಲ್ಲ, ಪ್ರತಿಭೆ ಇದ್ದರೆ ಜನ ತಲೆ ಮೇಲೆ ಹೊತ್ತು ಮೆರೆಸುತ್ತಾರೆ" ಎಂಬುದನ್ನು ಮಂಡ್ಯದ ಈ ಹೈದ ಸಾಬೀತುಪಡಿಸಿದ್ದಾರೆ. 50 ಲಕ್ಷ ರೂಪಾಯಿ ನಗದು ಮತ್ತು ಟ್ರೋಫಿಯೊಂದಿಗೆ ಗಿಲ್ಲಿ ನಟ ಮನೆಯಿಂದ ಹೊರಬರುತ್ತಿದ್ದಂತೆ, ಮಂಡ್ಯದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದ್ದಾರೆ. ನಿಜಕ್ಕೂ, ಇದು 'ಸಾಮಾನ್ಯ'ನ ಅಸಾಮಾನ್ಯ ಗೆಲುವು!

Read More
Next Story