ಮನೋಜ್ ಬಾಜಪೇಯಿ ನಟನೆಯ ವೆಬ್‌ ಸೀರಿಸ್‌ ವಿರುದ್ಧ FIR ದಾಖಲಿಸಲು ಯೋಗಿ ಆದೇಶ
x

ನೆಟ್‌ಫ್ಲಿಕ್ಸ್‌ನ 'ಘೂಸ್‌ಖೋರ್ ಪಂದತ್' ಶೀರ್ಷಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. 

ಮನೋಜ್ ಬಾಜಪೇಯಿ ನಟನೆಯ ವೆಬ್‌ ಸೀರಿಸ್‌ ವಿರುದ್ಧ FIR ದಾಖಲಿಸಲು ಯೋಗಿ ಆದೇಶ

ಮನೋಜ್ ಬಾಜಪೇಯಿ ನಟನೆಯ 'ಘೂಸ್‌ಖೋರ್ ಪಂಡತ್‌' ಬಿಡುಗಡೆಗೆ ತಡೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಜಾತಿ ನಿಂದನೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ಆರೋಪವನ್ನು ಈ ಸರಣಿ ಎದುರಿಸುತ್ತಿದೆ.


Click the Play button to hear this message in audio format

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ 'ಘೂಸ್‌ಖೋರ್ ಪಂಡತ್' ವೆಬ್ ಸೀರಿಸ್‌ ನಿರ್ದೇಶಕರು ಹಾಗೂ ನಿರ್ಮಾಣ ಸಂಸ್ಥೆಯ ವಿರುದ್ಧ ಲಕ್ನೋ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಸರಣಿಯು ನಿರ್ದಿಷ್ಟ ಜಾತಿಯ ಅಸ್ಮಿತೆಗೆ ಅವಮಾನ ಮಾಡಿದೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಭಂಗ ತಂದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಠಿಣ ಕಾನೂನು ಕ್ರಮಕ್ಕೆ ಸೂಚನೆ ನೀಡಿದ ಬೆನ್ನಲ್ಲೇ ಎಫ್‌ಐಆರ್‌ ದಾಖಲಾಗಿದೆ.

ಇತ್ತೀಚೆಗೆ ಸಾಮಾಜಿಕ ಜಾಲಣಗಳಲ್ಲಿ ವೈರಲ್ ಆಗಿದ್ದ ಈ ಸರಣಿಯ ಟ್ರೈಲರ್ ಬಗ್ಗೆ ವ್ಯಾಪಕ ಆಕ್ಷೇಪಗಳು ವ್ಯಕ್ತವಾಗಿದ್ದವು. 'ಪಂಡತ್' (ಪಂಡಿತ್ ಪದದ ಗ್ರಾಮ್ಯ ರೂಪ) ಎಂಬ ಪದದೊಂದಿಗೆ 'ಘೂಸ್‌ಖೋರ್' (ಲಂಚಕೋರ) ಎಂಬ ಪದವನ್ನು ಬಳಸಿರುವುದು ಬ್ರಾಹ್ಮಣ ಸಮುದಾಯವನ್ನು ಸಾಮೂಹಿಕವಾಗಿ ನಿಂದಿಸಿದಂತೆ ಮತ್ತು ಅವಹೇಳನಕಾರಿ ಎಂದು ಹಲವು ಸಂಘಟನೆಗಳು ದೂರಿದ್ದವು. ಈ ದೂರಿನ ಗಂಭೀರತೆಯನ್ನು ಪರಿಗಣಿಸಿದ ಹಜರತ್‌ಗಂಜ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇವಲ ಸಾಮಾಜಿಕ ಜಾಲತಾಣಗಳಲ್ಲದೆ, ಈ ವಿವಾದ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಸರಣಿಯ ಶೀರ್ಷಿಕೆ ಮತ್ತು ಚಿತ್ರಣವು ಸಂವಿಧಾನದ 14, 21 ಮತ್ತು 25ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ. ಅರ್ಜಿದಾರರಾದ ಮಹೇಂದ್ರ ಚತುರ್ವೇದಿ ಅವರು ಸರಣಿಯ ಬಿಡುಗಡೆಗೆ ತಕ್ಷಣದ ತಡೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಮಧ್ಯಪ್ರದೇಶದ ಭೋಪಾಲ್ ಸೇರಿದಂತೆ ವಿವಿಧ ನಗರಗಳಲ್ಲಿ ಸರಣಿಯ ವಿರುದ್ಧ ಪ್ರತಿಭಟನೆಗಳು ನಡೆದಿವೆ.

ಈ ಸರಣಿಯಲ್ಲಿ ಖ್ಯಾತ ನಟ ಮನೋಜ್ ಬಾಜಪೇಯಿ ಅವರು 'ಅಜಯ್ ದೀಕ್ಷಿತ್' ಎಂಬ ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಪಂಡತ್' ಎಂಬುದು ಕೇವಲ ಪಾತ್ರವೊಂದರ ಅಡ್ಡಹೆಸರಾಗಿದ್ದು , ಇದು ಯಾವುದೇ ಜಾತಿ ಅಥವಾ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಚಿತ್ರದ ನಿರ್ದೇಶಕ ರಿತೇಶ್ ಶಾ ಮತ್ತು ನಿರ್ಮಾಪಕ ನೀರಜ್ ಪಾಂಡೆ ಪರವಾಗಿ ವಾದಿಸಲಾಗಿದೆ. ವಿವಾದದ ತೀವ್ರತೆಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಎಲ್ಲಾ ಪ್ರಚಾರವನ್ನು ನೆಟ್‌ಫ್ಲಿಕ್ಸ್‌ ನಿಲ್ಲಿಸಿದೆ.

ಸಾಮಾಜಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಯಾವುದೇ ರೀತಿಯ ಪ್ರಚೋದನಾಕಾರಿ ದೃಶ್ಯ ಅಥವಾ ಶೀರ್ಷಿಕೆಗಳ ಬಗ್ಗೆ ಶೂನ್ಯ ಸಹನೆ ಹೊಂದಲಾಗುವುದು ಎಂದು ಯುಪಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Read More
Next Story